ಯೋಧರ ಬಲಿದಾನದ ಹೆಸರಿನಲ್ಲಿ ಮತ ಯಾಚಿಸುವುದು ಖೇದಕರ: ಅಣ್ಣಾ ಹಝಾರೆ
ಥಾಣೆ, ಎ.20: ಚುನಾವಣೆಗೆ ಸಂಬಂಧಿಸಿದ ಭ್ರಷ್ಟಾಚಾರ ತೊಲಗಿಸಲು ಹಾಗೂ ಚುನಾವಣಾ ವ್ಯವಸ್ಥೆಯ ಶುದ್ಧೀಕರಣಕ್ಕೆ ಬೃಹತ್ ಪ್ರಮಾಣದ ಚುನಾವಣಾ ಸುಧಾರಣೆ ಕ್ರಮ ಅತ್ಯಗತ್ಯವಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆ ಹೇಳಿದ್ದಾರೆ.
ಮತದಾರರಲ್ಲಿ ಜಾಗೃತಿಯ ಕೊರತೆ ಹಾಗೂ ಯಾವ ರೀತಿಯಾದರೂ ಸರಿ, ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ರಾಜಕೀಯ ಪಕ್ಷಗಳ ಉದ್ದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಭವಿಷ್ಯ ಉಜ್ವಲವಾಗದು ಎಂದರು.
ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಲೇಗಣ್‌ಸಿದ್ದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹಝಾರೆ, ಮತದಾರರ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಸ್ಥಂಭವಾಗಿದ್ದಾರೆ. ಆದರೆ ಚುನಾವಣೆ ಸಂದರ್ಭ ಹಲವೆಡೆ ಅಕ್ರಮ ನಗದು ಪತ್ತೆಯಾಗಿರುವ ಕುರಿತ ವರದಿ ಗಮನಿಸಿದರೆ, ಮತದಾರರು ಮತ ಚಲಾಯಿಸಲು ಹಣ ಯಾಕೆ ಪಡೆಯುತ್ತಾರೆ ಎಂದು ಅಚ್ಚರಿಯಾಗುತ್ತದೆ. ಯಾವುದೇ ರೀತಿಯಿಂದಾದರೂ ಅಧಿಕಾರ ಪಡೆಯಬೇಕು ಎಂಬ ಮನೋಭಾವ ರಾಜಕೀಯದ ಅಪರಾಧೀಕರಣಕ್ಕೆ ಕಾರಣವಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳ ಪಾವಿತ್ರತೆಗೆ ಬೆದರಿಕೆ ಎದುರಾಗಿದೆ. ತನಗೆ ದೇಶದ ಸಂವಿಧಾನದ ಮೇಲೆ ವಿಶ್ವಾಸವಿದೆ. 25 ವರ್ಷ ಮೀರಿದ ಯಾವುದೇ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಚುನಾವಣೆಯ ಚಿಹ್ನೆಯನ್ನು ತೆಗೆದುಹಾಕಬೇಕು ಎಂದು ಕಳೆದ 6 ವರ್ಷದಿಂದ ಚುನಾವಣಾ ಆಯೋಗದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದೇನೆ. ಭಾರತದ ಸಂವಿಧಾನದಲ್ಲಿ ಚುನಾವಣಾ ಚಿಹ್ನೆ ಅಥವಾ ರಾಜಕೀಯ ಪಕ್ಷಗಳ ಬಗ್ಗೆ ಉಲ್ಲೇಖವಿಲ್ಲ. ಕೇವಲ ವ್ಯಕ್ತಿಗಳ ಬಗ್ಗೆ ಮಾತ್ರ ಉಲ್ಲೇಖವಿದೆ ಎಂದು ಹಝಾರೆ ಹೇಳಿದರು.
ಹುತಾತ್ಮ ಯೋಧರ ಬಲಿದಾನದ ಹೆಸರಿನಲ್ಲಿ ಮತ ಯಾಚಿಸುವುದನ್ನು ಕಂಡಾಗ ದುಃಖವಾಗುತ್ತದೆ. ಯಾವುದೇ ರೀತಿಯಲ್ಲಿ ಅಧಿಕಾರ ಪಡೆಯಬೇಕು ಎಂಬ ಮನೋಭಾವ ಬೆಳೆದಾಗ ಈ ರೀತಿ ಆಗುತ್ತದೆ ಎಂದ ಹಝಾರೆ, ಹಲವು ವಿಷಯಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿಗೆ ಬರೆದಿರುವ 32 ಪತ್ರಗಳಿಗೆ ಅವರಿಂದ ಪ್ರತಿಕ್ರಿಯೆ ಬಾರದಿರುವುದು ವಿಷಾದನೀಯವಾಗಿದೆ ಎಂದರು.