ಬಹುಮತ ಬಂದರೆ 370ನೇ ವಿಧಿ ರದ್ದು: ಅಮಿತ್ ಶಾ

Update: 2019-04-20 15:33 GMT

ಹೊಸದಿಲ್ಲಿ, ಎ.20: ಸಂಸತ್ತಿನ ಉಭಯ ಸದನಗಳಲ್ಲೂ ಬಿಜೆಪಿಗೆ ಬಹುಮತ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಅಧಿಕಾರ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್‌ನ ವಲ್ಸಾದ್ ಜಿಲ್ಲೆಯ ಧರಮ್‌ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಈಗಾಗಲೇ ಹೇಳಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಧಾನ ವಿಷಯ ರಾಷ್ಟ್ರೀಯ ಭದ್ರತೆಯಾಗಿದೆ ಎಂದರು.

 ಈ ಬಾರಿಯ ಹೋರಾಟ ಅಭಿವೃದ್ಧಿಯ ವಿಷಯಕ್ಕಾಗಿ ಮಾತ್ರ ನಡೆಯುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ಈ ಬಾರಿ ರಾಷ್ಟ್ರೀಯ ಭದ್ರತೆ ಪ್ರಧಾನ ವಿಷಯವಾಗಿದ್ದು, ಕೇವಲ ಮೋದಿ ಮತ್ತು ಬಿಜೆಪಿ ಮಾತ್ರ ಇದನ್ನು ಒದಗಿಸಬಲ್ಲದು. ಮೋದಿ ಮಾತ್ರ ಭಾರತವನ್ನು ಸೂಪರ್‌ಪವರ್ ದೇಶವನ್ನಾಗಿ ಮಾಡಬಲ್ಲರು ಎಂದವರು ಹೇಳಿದರು.

ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತ ದ ವಾಯುಸೇನೆ ದಾಳಿ ನಡೆಸಿದಾಗ ಇಡೀ ರಾಷ್ಟ್ರವೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಕಾಂಗ್ರೆಸ್ ಮಾತ್ರ ಅಳುತ್ತಿತ್ತು. ಪಾಕಿಸ್ತಾನ ಯಾಕೆ ಅಸಮಾಧಾನಗೊಂಡಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಭಯೋತ್ಪಾದಕರು ಸತ್ತಾಗ ರಾಹುಲ್ ಗಾಂಧಿಯ ಪಕ್ಷ ಯಾಕೆ ದುಃಖಪಟ್ಟಿದೆ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News