ರಾಜ್ಯಗಳಲ್ಲಿ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯ, ಡಿಎನ್‌ಎ ಪರೀಕ್ಷಾ ಕೇಂದ್ರ ಶೀಘ್ರ ಸ್ಥಾಪನೆ
ಹೊಸದಿಲ್ಲಿ,ಎ.20: ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಲು ರಾಜ್ಯಗಳಲ್ಲಿ ಶೀಘ್ರವೇ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಡಿಎನ್‌ಎ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು.
131.09 ಕೋ.ರೂ. ವೆಚ್ಚದಲ್ಲಿ ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ,ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಮಿರೆರಾಂ, ಮಣಿಪುರ, ತ್ರಿಪುರಾ ಮತ್ತು ದಿಲ್ಲಿಗಳಲ್ಲಿಯ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಡಿಎನ್‌ಎ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆ ಯೋಜನೆಯಡಿ ಈ ರಾಜ್ಯಗಳಲ್ಲಿ 223.19 ಕೋ.ರೂ. ವೆಚ್ಚದ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಸೈಬರ್ ವಿಧಿವಿಜ್ಞಾನ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ ಅಧಿಕಾರಿ,ಅರುಣಾಚಲ ಪ್ರದೇಶ,ಹಿಮಾಚಲ ಪ್ರದೇಶ,ಮಧ್ಯಪ್ರದೇಶ,ತೆಲಂಗಾಣ ಮತ್ತು ಉತ್ತರಾಖಂಡ್‌ಗಳಲ್ಲಿ ಈಗಾಗಲೇ ಸೈಬರ್ ವಿಧಿವಿಜ್ಞಾನ ತರಬೇತಿ ಪ್ರಯೋಗಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದರು.
ನಿರ್ಭಯಾ ನಿಧಿಯಡಿ ಜಾರಿಗೊಳಿಸುತ್ತಿರುವ ಯೋಜನೆಯ ಅಂಗವಾಗಿ ೪೧೦ ಸಾರ್ವಜನಿಕ ಅಭಿಯೋಜಕರು ಮತ್ತು ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ಒಟ್ಟು 3,664 ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ ಎಂದರು.