ಸೀಟುಗಳು ಬಿಚ್ಚಿಡದ ವೋಟುಗಳ ಸತ್ಯಗಳು

Update: 2019-04-26 18:33 GMT

ಶೇ.50ಕ್ಕಿಂತ ಅಂದರೆ 272ಕ್ಕಿಂತ ಹೆಚ್ಚು ಸೀಟುಗಳನ್ನು ಪಡೆದುಕೊಂಡ ಮಾತ್ರಕ್ಕೆ ಒಂದು ಪಕ್ಷ ಅಥವಾ ಒಂದು ಮೈತ್ರಿಕೂಟವು ಶೇ.50ಕ್ಕಿಂತ ಹೆಚ್ಚು ಮತದಾರರ ಬೆಂಬಲವನ್ನು ಕೂಡಾ ಪಡೆದುಕೊಂಡಿದೆ ಎಂದು ಅರ್ಥಮಾಡಿಕೊಳ್ಳಬಹುದೇ? ಹಾಗೊಂದು ವೇಳೆ ಶೇ.50ಕ್ಕಿಂತ ಹೆಚ್ಚು ಮತದಾರರ ಬೆಂಬಲವಿಲ್ಲದಿದ್ದರೂ ಅಧಿಕಾರ ಪಡೆದುಕೊಳ್ಳಬಹುದಾದ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ವ್ಯವಸ್ಥೆಯೆಂದು ಕರೆಯಬಹುದೇ?


ಒಂದು ಪ್ರಜಾತಂತ್ರದಲ್ಲಿ ಬಹುಸಂಖ್ಯಾತರ ಬೆಂಬಲವನ್ನು ಪಡೆದವರೇ ಅಧಿಕಾರವನ್ನು ಪಡೆಯಬೇಕು ಎನ್ನುವುದು ಮೂಲಸೂತ್ರ. ಅದರಂತೆ ಭಾರತದ ಲೋಕಸಭೆಯ 543 ಕ್ಷೇತ್ರಗಳಲ್ಲಿ ಯಾವ ಪಕ್ಷ ಅಥವಾ ಪಕ್ಷಗಳ ಒಕ್ಕೂಟವು 272ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುತ್ತವೋ ಅವು ಅಧಿಕಾರವನ್ನು ಪಡೆದುಕೊಳ್ಳುತ್ತವೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 282 ಸೀಟುಗಳು ಮತ್ತು ಅದರ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ 336 ಸೀಟುಗಳು ಬಂದಿದ್ದವು.

ಆದರೆ ಶೇ.50ಕ್ಕಿಂತ ಅಂದರೆ 272ಕ್ಕಿಂತ ಹೆಚ್ಚು ಸೀಟುಗಳನ್ನು ಪಡೆದುಕೊಂಡ ಮಾತ್ರಕ್ಕೆ ಒಂದು ಪಕ್ಷ ಅಥವಾ ಒಂದು ಮೈತ್ರಿಕೂಟವು ಶೇ.50ಕ್ಕಿಂತ ಹೆಚ್ಚು ಮತದಾರರ ಬೆಂಬಲವನ್ನು ಕೂಡಾ ಪಡೆದುಕೊಂಡಿದೆ ಎಂದು ಅರ್ಥಮಾಡಿಕೊಳ್ಳಬಹುದೇ? ಹಾಗೊಂದು ವೇಳೆ ಶೇ.50ಕ್ಕಿಂತ ಹೆಚ್ಚು ಮತದಾರರ ಬೆಂಬಲವಿಲ್ಲದಿದ್ದರೂ ಅಧಿಕಾರ ಪಡೆದುಕೊಳ್ಳಬಹುದಾದ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ವ್ಯವಸ್ಥೆಯೆಂದು ಕರೆಯಬಹುದೇ? ಉದಾಹರಣೆಗೆ ಕಳೆದ ಬಾರಿ 1991ರ ನಂತರದ 25 ವರ್ಷಗಳಲ್ಲೇ ಮೊತ್ತ ಮೊದಲಿಗೆ ಒಂದು ಪಕ್ಷವು (ಬಿಜೆಪಿ) 272ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿತ್ತು. ಅದರೆ ಅದು ಪಡೆದುಕೊಂಡ ಮತಗಳ ಪ್ರಮಾಣ ಮಾತ್ರ ಶೇ.31 ಮಾತ್ರ. ಅಂದರೆ ಶೇ.69ರಷ್ಟು-ಬಹುಸಂಖ್ಯಾತ- ಮತದಾರರು ಮೋದಿಯನ್ನು, ಮತ್ತವರ ಪಕ್ಷವನ್ನು ಬೇಡವೆಂದೇ ತಿರಸ್ಕರಿಸಿದ್ದರು. ಆದರೂ ನಮ್ಮ ದೇಶದ ವಿಚಿತ್ರ ಚುನಾವಣಾ ವ್ಯವಸ್ಥೆಯಲ್ಲಿ ಶೇ.31ರಷ್ಟು ಮಾತ್ರ ವೋಟು ಪಡೆದ ಬಿಜೆಪಿಗೆ ಶೇ.50ಕ್ಕಿಂತ ಜಾಸ್ತಿ ಸೀಟುಗಳು ದಕ್ಕಿಬಿಟ್ಟಿತು. ಆದ್ದರಿಂದಲೇ ಮೋದಿಯವರ ಸರಕಾರ ಅಲ್ಪಸಂಖ್ಯಾತ ಮತಗಳನ್ನು ಪಡೆದ ಸರಕಾರವೇ ವಿನಃ ಬಹುಸಂಖ್ಯಾತರ ಬೆಂಬಲ ಪಡೆದ ಸರಕಾರವಾಗಿರಲಿಲ್ಲ.

ಆದರೆ ಇದು ಕೇವಲ ಮೋದಿ ಸರಕಾರಕ್ಕೆ ಮಾತ್ರ ಅನ್ವಯವಾಗುವ ಸತ್ಯವಲ್ಲ. ಹಾಗೆ ನೋಡಿದರೆ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ನಡೆದ ಯಾವ ಚುನಾವಣೆಗಳಲ್ಲೂ ಸರಕಾರ ರಚಿಸಿದ ಯಾವ ಪಕ್ಷಕ್ಕೂ ಶೇ.50ಕ್ಕಿಂತ ಜಾಸ್ತಿ ಇರಲಿ ಶೇ.50ರಷ್ಟು ಮತಗಳೂ ದಕ್ಕಿರಲಿಲ್ಲ. 1977ರಲ್ಲಿ ಬಿಟ್ಟು ಮಿಕ್ಕಂತೆ ಏಕಪಕ್ಷವಾಗಿ 1989ರ ವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೂ ಸಹ ಯಾವ ಚುನಾವಣೆಯಲ್ಲೂ ಶೇ.50ರಷ್ಟು ಮತಗಳನ್ನು ಪಡೆದೇ ಇರಲಿಲ್ಲ. ನೆಹರೂ ಕಾಂಗ್ರೆಸ್ ಕಾಲದಲ್ಲೂ ಪಡೆದಿರಲಿಲ್ಲ. ಇಂದಿರಾ ಕಾಂಗ್ರೆಸ್ ಕಾಲದಲ್ಲೂ ಇಲ್ಲ. 1984ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಉಕ್ಕಿಹರಿದ ಅನುಕಂಪದಲೆಯ ಕಾರಣಕ್ಕಾಗಿ ಆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ಗೆ ಶೇ.49.1ರಷ್ಟು ಮತಗಳು ದಕ್ಕಿದ್ದವು. ಕಳೆದ 17 ಲೋಕಸಭಾ ಚುನಾವಣೆಗಳಲ್ಲಿ ಯಾವುದಾದರೊಂದು ಪಕ್ಷ ಶೇ.50ರಷ್ಟು ಮತದಾನದ ಸಮೀಪವಾದರೂ ಬಂದಿದ್ದು ಆ ಚುನಾವಣೆಯಲ್ಲಿ ಮಾತ್ರ. ಹೀಗಾಗಿ ನಮ್ಮ ದೇಶ ಒಂದು ಪ್ರಜಾತಂತ್ರವಾದರೂ ನಮ್ಮನ್ನು ಮೊದಲಿಂದಲೂ ಆಳುತ್ತಿರುವುದು ಅಲ್ಪಸಂಖ್ಯಾತ ಮತಗಳನ್ನು ಪಡೆದ ಸರಕಾರಗಳೇ ಹೊರತು ಬಹುಸಂಖ್ಯಾತರ ಬೆಂಬಲವನ್ನು ಪಡೆದ ರಾಜಕೀಯ ಪಕ್ಷಗಳಲ್ಲ. ಮೋದಿ ಸರಕಾರವನ್ನೂ ಒಳಗೊಂಡಂತೆ. 1984ರ ನಂತರ ಚುನಾವಣೆಗಳಲ್ಲಂತೂ ಅದು ಇನ್ನಷ್ಟು ವಿಚಿತ್ರ ರೂಪವನ್ನು ಪಡೆಯಿತು.

1989, 96, 98, 99ರ ಚುನಾವಣೆಗಳ ನಂತರ ಸರಕಾರ ರಚಿಸಿದ ಪಕ್ಷ ಅಥವಾ ಒಕ್ಕೂಟವು ಪಡೆದ ಮತಗಳ ಪ್ರಮಾಣವು ಆಗೆಲ್ಲಾ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷಕ್ಕಿಂತಲೂ ಕಡಿಮೆಯೇ ಇದ್ದಿತ್ತು. ಉದಾಹರಣೆಗೆ 1998ರಲ್ಲಿ ಸರಕಾರ ರಚಿಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಶೇ. 25.6ರಷ್ಟು ವೋಟುಗಳನ್ನು ಪಡೆದುಕೊಂಡಿದ್ದರೆ ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್‌ಗೆ ಶೇ.25.8ರಷ್ಟು ವೋಟುಗಳು ದಕ್ಕಿದ್ದವು. ಅದೇ ರೀತಿ 1999ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚಿಸಿದ ಎನ್‌ಡಿಎ ಒಕ್ಕೂಟದ ನೇತೃತ್ವ ವಹಿಸಿದ್ದ ಬಿಜೆಪಿಗೆ ದಕ್ಕಿದ್ದು ಶೇ. 23.75ರಷ್ಟು ಮತಗಳಾಗಿದ್ದರೆ ವಿರೋಧಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದಕ್ಕಿಂತ ಶೇ.5ರಷ್ಟು ಹೆಚ್ಚಿಗೆ ಅಂದರೆ ಶೇ. 28.3ರಷ್ಟು ಮತಗಳು ದಕ್ಕಿದ್ದವು. ಹೀಗೆ ನಾವು ಅನುಸರಿಸುತ್ತಿರುವ ಚುನಾವಣಾ ಪದ್ಧತಿ ಬಹುಸಂಖ್ಯಾತರ ರಾಜಕೀಯ ಅಭಿಮತದ ಆಳ್ವಿಕೆಯೆಂಬ ಪ್ರಜಾತಂತ್ರದ ಮೂಲಭೂತ ಆಶಯಗಳನ್ನೇ ಸೋಲಿಸುತ್ತಿದೆ. ಏಕೆಂದರೆ ನಾವು ಅನುಸರಿಸುತ್ತಿರುವುದು ‘ಫಸ್ಟ್ ಪಾಸ್ಟ್ ದಿ ಪೋಸ್ಟ್’ ಮಾದರಿಯ ಚುನಾವಣೆ. ಅಂದರೆ ನೂರು ಮತಗಳಿರುವ ಒಂದು ಕ್ಷೇತ್ರದಲ್ಲಿ 5 ಜನ ಚುನಾವಣೆಗೆ ನಿಂತಿದ್ದು ಅದರಲ್ಲಿ ನಾಲ್ಕು ಜನರಿಗೆ ತಲಾ 19 ವೋಟು ಬಂದು ಐದನೆಯವರಿಗೆ 24 ವೋಟುಗಳು ಬಂದರೆ ಐವರಲ್ಲಿ ಹೆಚ್ಚು ಮತ ಪಡೆದ ಐದನೆಯವರು ಗೆದ್ದಂತೆ. ಗೆದ್ದವರು ಪ್ರತಿನಿಧಿಸುವುದು ತಮಗೆ ವೋಟು ಹಾಕಿದ 26 ಜನರನ್ನೇ ಆದರೂ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಅವರ ರಾಜಕೀಯವನ್ನು ಒಪ್ಪದ ಉಳಿದ 74 ಜನರಿಗೂ ಅವರೇ ಪ್ರತಿನಿಧಿಯಾಗಿಬಿಡುತ್ತಾರೆ.

ಆಗ ಗೆದ್ದವರನ್ನು ತಿರಸ್ಕರಿಸಿದ 74 ಮತಗಳಿಗಿಂತ ಗೆಲ್ಲಿಸಿದ 24 ಮತಗಳಿಗೆ ಮಾತ್ರ ಮೌಲ್ಯ ಸಿಕ್ಕಂತಾಗುತ್ತದೆ. ಪ್ರಜಾತಂತ್ರ ಸೋಲುತ್ತಿರುವುದು ಈ ಕಾರಣಕ್ಕಾಗಿ. ಜನರನ್ನು ಪ್ರತಿನಿಧಿಸುವ ಸಂಸತ್ತಿನಲ್ಲಿ ಉಳಿದ 74 ಮತಗಳೂ ಪ್ರಾತಿನಿಧ್ಯ ಪಡೆದುಕೊಳ್ಳುವಂತೆ ಮಾಡದಿದ್ದರೆ ಪ್ರಜಾತಂತ್ರ ನಿರಂತರವಾಗಿ ಸೋಲುತ್ತಲೇ ಇರುತ್ತದೆ.

ಆ ಕಾರಣಗಳಿಗಾಗಿಯೇ ಮುಂದುವರಿದ ಪ್ರಜಾತಂತ್ರಗಳಲ್ಲಿ ‘ಫಸ್ಟ್ ಪಾಸ್ಟ್ ದಿ ಪೋಸ್ಟ್’ ಮಾದರಿಯ ಬದಲಿಗೆ ಅಥವಾ ಅದರ ಜೊತೆಗೆ ಪ್ರೊಪೋರ್ಷನೇಟ್ ರೆಪ್ರೆಸೆಂಟೇಶನ್ (ಪಾಲುವಾರು ಪ್ರಾತಿನಿಧ್ಯ)ದ ಪ್ರಜಾತಂತ್ರದ ಮಾದರಿಯನ್ನು ಬಳಸುತ್ತಾರೆ. ಇದರ ಪ್ರಕಾರ ಇಡೀ ದೇಶವನ್ನೇ ಒಂದು ಮತಕ್ಷೇತ್ರವಾಗಿ ಪರಿಗಣಿಸಲಾಗುತ್ತದೆ ಮತ್ತು ಆ ದೇಶದಲ್ಲಿ ಒಟ್ಟು ಒಂದು ಕೋಟಿ ಮತದಾರರಿದ್ದಾರೆ ಎಂದುಕೊಳ್ಳೋಣ. ಆಗ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ದೇಶದೆಲ್ಲೆಡೆ ಪಡೆಯುವ ಪ್ರತಿ ಹತ್ತು ಲಕ್ಷ ಮತಗಳಿಗೆ ಒಬ್ಬರು ಪ್ರತಿನಿಧಿ ಆಯ್ಕೆಯಾಗುತ್ತಾರೆ. ಆಗ 30 ಲಕ್ಷ ವೋಟು ಪಡೆದವರಿಗೆ ಮೂರು ಪ್ರತಿನಿಧಿಗಳು ಮತ್ತು 10 ಲಕ್ಷ ವೋಟು ಪಡೆದವರಿಗೆ ಒಬ್ಬ ಪ್ರತಿನಿಧಿ ಆಯ್ಕೆಯಾಗುತ್ತಾರೆ. ಹೀಗಾಗಿ ಮತದಾರರು ಹಾಕುವ ಯಾವ ಮತಗಳೂ ಇಲ್ಲಿ ಸೋಲುವುದಿಲ್ಲ. ಆ ಪದ್ಧತಿ ನಮ್ಮ ದೇಶದಲ್ಲಿ ಅನುಸರಿಸಿದ್ದರೆ 2014ರ ಚುನಾವಣೆಯಲ್ಲಿ ಶೇ.31ರಷ್ಟು ವೋಟು ಪಡೆದ ಬಿಜೆಪಿಗೆ 168 ಸೀಟುಗಳೂ, ಶೇ.19 ಮತಗಳನ್ನು ಪಡೆದ ಕಾಂಗ್ರೆಸ್ಸಿಗೆ 103 ಸೀಟುಗಳು ಮತ್ತು ರಾಷ್ಟ್ರ ಮಟ್ಟದಲ್ಲಿ ಶೇ.4.1ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೂ ಒಂದು ಸೀಟನ್ನೂ ಪಡೆಯದ ಬಿಎಸ್ಪಿಗೆ 22 ಸೀಟುಗಳೂ ದಕ್ಕುತ್ತಿತ್ತು. ಆಗಲೂ ಸರಕಾರ ರಚಿಸಲು 272 ಸೀಟುಗಳ ಅಗತ್ಯ ಬೀಳುತ್ತಿತ್ತು. ಮತ್ತು ಆಗಲೂ ರಾಜಕೀಯ ಹೊಂದಾಣಿಕೆಗಳಾಗಬೇಕಾದ ಅಗತ್ಯವಿರುತ್ತಿತ್ತು. ಆದರೆ ಆ ಹೊಂದಾಣಿಕೆ ಕನಿಷ್ಠ ಪಕ್ಷ ದೇಶದ ನಿಜ ಬೆಂಬಲದ ಪರಿಸ್ಥಿತಿಗಳನ್ನು ಪ್ರತಿನಿಧಿಸುವಂತಿರುತ್ತಿತ್ತು. ಹಾಗೂ ಬಿಜೆಪಿಯ ಮತ್ತು ಸಂಘಪರಿವಾರದ ನಿರಂಕುಶತೆಯ ಮೇಲೆ ಸ್ವಲ್ಪವಾದರೂ ಸಂಸದೀಯ ಅಂಕೆ ಇರುವಂತಾಗುತ್ತಿತ್ತು. ಆದ್ದರಿಂದಲೇ ಈಗಿನ ಪದ್ಧತಿಯನ್ನು ಬದಲಿಸಬೇಕೆಂಬ ಯಾವ ಕೂಗಿಗೂ ಬಿಜೆಪಿ ಕಿವಿಗೊಡುತ್ತಿಲ್ಲ. ವೋಟು ಪ್ರಮಾಣದ ಅಧ್ಯಯನವು ಇನ್ನೊಂದು ಕಾರಣಕ್ಕೂ ಅತಿಮುಖ್ಯವಾಗಿದೆ. ಏಕೆಂದರೆ ಭಾರತದ ಪ್ರಜಾತಂತ್ರವನ್ನೇ ಬುಡಮೇಲು ಮಾಡಬಯಸುವ ಬಿಜೆಪಿಗೆ ಹೆಚ್ಚುತ್ತಿರುವ ಜನಬೆಂಬಲದ ವಾಸ್ತವ ಚಿತ್ರಣವನ್ನು ಅದು ನಮ್ಮ ಮುಂದಿರಿಸುತ್ತದೆ. ಈ ತಿಳುವಳಿಕೆ ಅತ್ಯಗತ್ಯ.

ಏಕೆಂದರೆ ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ದೈತ್ಯ ಸೀಟು ಪ್ರಮಾಣವನ್ನು ಕಂಡು ದಿಗ್ಭ್ರಾಂತರಾಗಿದ್ದವರಿಗೆ ಬಿಜೆಪಿ ಪಡೆದದ್ದು ಶೇ.31ರಷ್ಟು ವೋಟು ಮಾತ್ರ ಉಳಿದ ಶೇ.69ಜನ ಅವರನ್ನು ತಿರಸ್ಕರಿಸಿದ್ದಾರೆ ಎಂಬ ವಾದ ಅತ್ಯಂತ ಹಿತವಾಗಿ ಕೇಳಿಸಿತ್ತು. ವಾಸ್ತವದಲ್ಲಿ ಈ ಶೇ.31ರ ತರ್ಕವು ಅರ್ಧಸತ್ಯವನ್ನು ಮಾತ್ರ ಹೇಳುತ್ತದೆ. ಏಕೆಂದರೆ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ದಕ್ಕಿದ್ದು ಶೇ.31ರಷ್ಟು ವೋಟು ಎನ್ನುವುದು ನಿಜವೇ ಆದರೂ ಹಿಂದಿ ನಾಡಿನಲ್ಲಿ ಅದಕ್ಕೆ ಶೇ.45ರಿಂದ ಶೇ.60ರಷ್ಟು ಮತಗಳು ದಕ್ಕಿದ್ದು ಕೂಡಾ ಅಷ್ಟೇ ನಿಜ. ಗುಜರಾತ್, ರಾಜಸ್ಥಾನ, ಛತ್ತೀಸ್‌ಗಡ, ಉತ್ತರಾಖಂಡ ಮತ್ತು ಉತ್ತರಪ್ರದೇಶಗಳಲ್ಲಿ ಅದು ಗೆದ್ದ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಹಾಗೆಯೇ ಬಿಜೆಪಿಯು ಬಲವಾಗಿಲ್ಲದ ದಕ್ಷಿಣದ ಪ್ರತಿಯೊಂದು ರಾಜ್ಯಗಲ್ಲೂ ಅದು ತನ್ನ ಮತಪ್ರಮಾಣವನ್ನು ಶೇ.3ರಿಂದ ಶೇ.15ರಷ್ಟು ಹೆಚ್ಚಿಸಿಕೊಂಡಿತ್ತು. ಕೇರಳದಂತಹ ಕಮ್ಯುನಿಸ್ಟ್ ಕೋಟೆಯಲ್ಲಿ ಬಿಜೆಪಿ ಇದುವರೆಗೆ ಒಂದು ಸೀಟನ್ನೂ ಪಡೆಯದಿದ್ದರೂ 2000ದವರೆಗೂ ಅಲ್ಲಿ ಕೇವಲ ಶೇ.2-5ರಷ್ಟು ಮತಗಳನ್ನು ಪಡೆದುಕೊಳ್ಳುತ್ತಿದ್ದ ಬಿಜೆಪಿ ಆನಂತರದಲ್ಲಿ ಶೇ.10ರಷ್ಟು ವೋಟುಗಳನ್ನು ಮತ್ತು ಕೆಲವು ಕ್ಷೇತ್ರಗಳಲ್ಲಿ ಶೇ.20ರಷ್ಟು ವೋಟುಗಳನ್ನು ಪಡೆದುಕೊಂಡಿತ್ತು. ಇನ್ನು ಕರ್ನಾಟಕದಲ್ಲಂತೂ ಶೇ.45 ಮತಗಳನ್ನು ಪಡೆದು ಬಿಜೆಪಿಯೇ ಪ್ರಥಮ ಸ್ಥಾನದಲ್ಲಿತ್ತು.

 ಅದೇ ರೀತಿ ಬಿಜೆಪಿಯ ಸೀಟುಗಳಿಕೆಯ ಇತಿಹಾಸವನ್ನು ಬದಿಗಿಟ್ಟು ಅದರ ಮತಗಳಿಕೆಯ ಇತಿಹಾಸವನ್ನು ಇತರ ರಾಜಕೀಯ ಪಕ್ಷಗಳ ಮತಗಳಿಕೆಯ ಇತಿಹಾಸಕ್ಕೆ ಹೋಲಿಕೆ ಮಾಡಿ ನೋಡಿದಲ್ಲಿ ನಮ್ಮೆದುರಿಗಿರುವ ಸವಾಲಿನ ನೈಜ ಚಿತ್ರಣ ಸಿಗುತ್ತದೆ. ಉದಾಹರಣೆಗೆ 1984ರ ಚುನಾವಣೆಯ ನಂತರದಲ್ಲಿನ ರಾಜಕೀಯ ಪಕ್ಷಗಳ ವೋಟು ಗಳಿಕೆಯ ಇತಿಹಾಸವನ್ನೊಮ್ಮೆ ಗಮನಿಸೋಣ.

1984ರಲ್ಲಿ ಕಾಂಗ್ರೆಸ್ ಪಕ್ಷವು ಶೇ.49.1 ರಷ್ಟು ಅಂದರೆ 11 ಕೋಟಿ ವೋಟುಗಳನ್ನು ಪಡೆದುಕೊಂಡಿತ್ತು. ಆಗ ಬಿಜೆಪಿ ಶೇ.7.5ರಷ್ಟು ವೋಟುಗಳನ್ನು ಮಾತ್ರ ಅಂದರೆ 1.5 ಕೋಟಿ ವೋಟುಗಳನ್ನು ಮಾತ್ರ ಪಡೆದುಕೊಂಡಿತ್ತು. ಎಡಪಕ್ಷಗಳೂ ಸಹ ಶೇ.8ರಷ್ಟು ಮತಗಳನ್ನು ಪಡೆದುಕೊಂಡಿದ್ದವು. ನಂತರದಲ್ಲಿ 1989,91,98,99,2004ರಲ್ಲಿ ನಡೆದ ಪ್ರತಿಯೊಂದು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮತ ಬೆಂಬಲವನ್ನು ಕಳೆದುಕೊಳ್ಳುತ್ತಲೇ ಹೋಯಿತು ಹಾಗೂ 2014ರಲ್ಲಿ ತನ್ನ ಇತಿಹಾಸದಲ್ಲೇ ಅತ್ಯಂತ ಕಡಿಮೆ ಶೆ.19ರಷ್ಟು ಮತಗಳನ್ನು ಮತ್ತು 44 ಸೀಟುಗಳನ್ನೂ ಪಡೆಯಿತು. ಅಂದರೆ ಅದಕ್ಕೆ ವೋಟು ಹಾಕುತ್ತಿದ್ದ ಮತದಾರರ ಸಂಖ್ಯೆ 10-11 ಕೋಟಿಯನ್ನು ದಾಟಲೇ ಇಲ್ಲ. 2009ರ ಚುನಾವಣೆಯಲ್ಲಿ ಮಾತ್ರ 2004ಕ್ಕಿಂತ ಶೇ.5ರಷ್ಟು ಹೆಚ್ಚು ವೋಟುಗಳನ್ನು ಪಡೆದುಕೊಂಡಿದ್ದನ್ನು ಬಿಟ್ಟರೆ ಕಾಂಗ್ರೆಸ್ ಜನಬೆಂಬಲವನ್ನು ಕಳೆದುಕೊಳ್ಳುತ್ತಲೇ ಬಂದಿರುವುದನ್ನು ಅದರ ವೋಟು ಶೇರಿನ ಇತಿಹಾಸ ಸ್ಪಷ್ಟಪಡಿಸುತ್ತದೆ. ಹಾಗೆಯೇ ಎಡಪಕ್ಷಗಳ ವೋಟು ಶೇರು ಕೂಡಾ 1984ರಲ್ಲಿ ಶೇ.8ರಷ್ಟಿದ್ದದ್ದು ನಂತರದ ಚುನಾವಣೆಯಲ್ಲಿ ಕುಸಿಯುತ್ತಲೇ ಬಂದು ಕಳೆದ ನಾಲ್ಕೈದು ಚುನಾವಣೆಗಳಿಂದ ಶೇ.2.5 ಅನ್ನು ಕೂಡಾ ದಾಟುತ್ತಿಲ್ಲ.

ಬಿಎಸ್ಪಿಯ ಒಟ್ಟು ಶೇಕಡಾವಾರು ವೋಟು ಶೇರು ಸಹ ಶೇ.5 ಅನ್ನು ದಾಟುತ್ತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ 1984ರಲ್ಲಿ ಕೇವ ಶೇ.7.5ರಷ್ಟು ಅಂದರೆ 1.5 ಕೋಟಿ ವೋಟುಗಳನ್ನು ಮಾತ್ರ ಪಡೆದುಕೊಂಡಿದ್ದರೆ 2009ರ ಚುನಾವಣೆಯೊಂದನ್ನು ಹೊರತುಪಡಿಸಿದರೆ ನಂತರದ ಪ್ರತಿ ಚುನಾವಣೆಯಲ್ಲೂ ತನ್ನ ವೋಟು ಶೇರನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದು ಈಗ ಶೇ.31ರಷ್ಟು ವೋಟು ಶೇರನ್ನು ಅಂದರೆ 17.5 ಕೋಟಿ ಮತದಾರರ ಬೆಂಬಲವನ್ನು ಪಡೆದುಕೊಂಡಿದೆ. ಅದು ಹಿಂದಿ ಬೆಲ್ಟಿನಲ್ಲಿ ಮಾತ್ರ ಜಾಸ್ತಿ ಇರುವುದು ನಿಜವಾದರೂ ಪ. ಬಂಗಾಳ, ಒಡಿಶಾ, ಕೇರಳ ಹಾಗೂ ಕರ್ನಾಟಕಗಳಲ್ಲೂ ತೀವ್ರಗತಿಯಲ್ಲಿ ತನ್ನ ಮತ ಬೆಂಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಂದು ಅಧ್ಯಯನದ ಪ್ರಕಾರ 2014ರ ಚುನಾವಣೆಯಲ್ಲಿ ಪಂಜಾಬ್ ಬಿಟ್ಟರೆ ದೇಶದ ಬೇರೆಲ್ಲಾ ಕಡೆ ಬಿಜೆಪಿಯ ಮತಗಳಿಕೆ ಜಾಸ್ತಿಯಾಗಿತ್ತು.

ಕೇವಲ ಸೀಟುಗಳಿಕೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೋಡಿದರೆ ಬಿಜೆಪಿಯ ಈ ಅಂತರ್ಗಾಮಿನಿ ಬೆಳವಣಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಸಮಸ್ಯೆಯ ಗಂಭೀರತೆಯು ಅರ್ಥವಾಗುವುದಿಲ್ಲ. 1984ರಲ್ಲಿ 1.5 ಕೋಟಿ ಇದ್ದ ಮತಗಳು 2014ರಲ್ಲಿ ಅದರ ಹತ್ತು ಪಟ್ಟಿಗಿಂತಲೂ ಹೆಚ್ಚಾಗಿದ್ದು ಮತ್ತು ಉಳಿದ ರಾಜಕೀಯ ಪಕ್ಷಗಳ ಮತ ಬೆಂಬಲ ಸ್ಥಗಿತಗೊಂಡಿರುವುದು ಅಥವಾ ಕಡಿಮೆಯಾಗಿರುವುದು ಏಕಕಾಲದಲ್ಲಿ ನಡೆದಿದೆ. ಮತ್ತವುಗಳ ನಡುವೆ ಕಾರಣ -ಪರಿಣಾಮಗಳ ಸಂಬಂಧವಿದೆ. ಅಂಕಿಅಂಶಗಳ ತಾತ್ಪರ್ಯವಿಷ್ಟೆ. ಕಳೆದ ಮೂರು ದಶಕಗಳಿಂದ ಸಮಾಜದಲ್ಲಿ ಜನವಿರೋಧಿ ಮೌಲ್ಯಗಳಿಗೆ ಮನ್ನಣೆ ಸಿಗುತ್ತಾ ಜನಪರ ಮೌಲ್ಯಗಳು ಕುಸಿಯುತ್ತಿವೆ. ಅದರ ಪರಿಣಾಮವಾಗಿಯೇ ಬಿಜೆಪಿಯಂತಹ ಜನವಿರೋಧಿ ಪಕ್ಷಗಳಿಗೆ ಮತ ಬೆಂಬಲ ಹೆಚ್ಚುತ್ತಿದೆ. ಸಮಾಜದಲ್ಲಿ ಜನಪರತೆ ಮತ್ತು ನ್ಯಾಯಪ್ರಜ್ಞೆ ಮರೆಯಾಗುತ್ತಿದ್ದಾಗ ಬಿಜೆಪಿಯ ಮತಪ್ರಮಾಣ ಹೆಚ್ಚಾಗುತ್ತದೆ, ಅದು ಇಂದು ಸೀಟಾಗದಿದ್ದರೂ ನಾಳೆ ಸೀಟಾಗುತ್ತದೆ. ಅಧಿಕಾರವಾಗುತ್ತದೆ. ಹೀಗಾಗಿ ಬೀದಿಯಲ್ಲಿ ಈ ಆಕ್ರಮಣವನ್ನು ನಿಲ್ಲಿಸದೆ ಸಂಸತ್‌ನ ಕಡೆ ಹೊರಟಿರುವ ಫ್ಯಾಶಿಸ್ಟರ ಮೆರವಣಿಗೆಯನ್ನು ತಡೆಯಲು ಸಾಧ್ಯವಿಲ್ಲ.

ಈ ವರೆಗೆ ನಡೆದಿರುವ ಮೂರು ಹಂತಗಳ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನಗಳ ಪ್ರಮಾಣ ಈ ಹಿಂದಿನ ದಾಖಲೆಗಳನ್ನು ಮೀರುತ್ತಿರುವುದನ್ನು ಸೂಚಿಸುತ್ತಿದೆ. ಕರ್ನಾಟಕದಲ್ಲಿ 244 ಅಸೆಂಬ್ಲಿ ಕ್ಷೇತ್ರಗಳಲ್ಲಿ 50 ಕ್ಷೇತ್ರಗಳನ್ನು ಬಿಟ್ಟರೆ ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮತದಾನದ ಪ್ರಮಾಣ ಶೇ.1.5ರಿಂದ ಶೇ.10ರಷ್ಟು ಹೆಚ್ಚಾಗಿದೆ. ಮತದಾನದಲ್ಲಿ ಯುವಕರು ತೋರುತ್ತಿರುವ ‘ರಣೋತ್ಸಾಹ’ಗಳನ್ನು ನೋಡಿದರೆ ಈ ಚುನಾವಣೆಯಲ್ಲಿ ಭಾರತೀಯ ಪ್ರಜಾತಂತ್ರವು ಬಾಲಕೋಟ್ ದಾಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಬಾರಿ ಫಲಿತಾಂಶಗಳು ಬರುವಾಗ ಪಕ್ಷಗಳ ಸೀಟು ಗಳಿಕೆಯೆಷ್ಟು ಎಂಬ ಕೂತೂಹಲದಷ್ಟೆ ಮತಗಳಿಕೆಯೆಷ್ಟು ಎಂಬ ಬಗ್ಗೆಯೂ ಗಂಭೀರವಾದ ಗಮನವಿರಲಿ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ