ದಿಲ್ಲಿ ದರ್ಬಾರ್

Update: 2019-04-27 18:31 GMT

ಶಕೀಲ್ ಅಹಮದ್ ಸ್ವತಂತ್ರನಾದರೂ ಹೃದಯ ಮಾತ್ರ ಕಾಂಗ್ರೆಸ್‌ನದ್ದು

ಟಾಮ್ ವಡಕ್ಕನ್ ಮತ್ತು ಪ್ರಿಯಾಂಕಾ ಚತುರ್ವೇದಿ ಮಾತ್ರವಲ್ಲ ಸದ್ಯ ಇನ್ನೋರ್ವ ಪ್ರಮುಖ ಕಾಂಗ್ರೆಸ್ ವಕ್ತಾರ ಬಂಡಾಯದ ಬಾವುಟ ಹಾರಿಸಿದ್ದಾರೆ. ಆದರೆ ಮೊದಲ ಇಬ್ಬರಂತೆ ಇವರು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ. ಹಿರಿಯ ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ತನ್ನ ಸಾಂಪ್ರದಾಯಿಕ ಕ್ಷೇತ್ರ ಬಿಹಾರದ ಮಧುಬನಿಯಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ನಿರ್ಧಾರದ ವಿರುದ್ಧ ಹೆಜ್ಜೆಯಿಟ್ಟಿರುವ ಅಹಮದ್ ತನ್ನ ಪ್ರತಿ ಸಾರ್ವಜನಿಕ ಸಭೆಯಲ್ಲೂ ತಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಅವರೇ ನನ್ನ ನಾಯಕರು ಮತ್ತು ನಾನೆಂದೂ ಹೃದಯದಿಂದ ಕಾಂಗ್ರೆಸಿಗನೇ ಎಂದು ಅಹಮದ್ ಹೇಳುತ್ತಿರುವುದರಿಂದ ಕಾಂಗ್ರೆಸ್‌ನ ಮತದಾರರು ಮತ್ತು ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಆಮೂಲಕ ಪಕ್ಷಕ್ಕೆ ಮರಳುವ ಎಲ್ಲ ಸಾಧ್ಯತೆಗಳನ್ನೂ ತೆರೆದಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ವಕ್ತಾರನಾಗಿ ಕಾಂಗ್ರೆಸ್ ತನ್ನ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಭಾವಿಸಿರುವ ಅಹಮದ್, ಪಕ್ಷದ ಸಂಧಾನಕಾರರು ಕಾಂಗ್ರೆಸ್ ಮಿತ್ರಪಕ್ಷ ರಾಷ್ಟ್ರೀಯ ಜನತಾದಳದಿಂದ ಮಧುಬನಿ ಕ್ಷೇತ್ರ ನೀಡುವಂತೆ ಬೇಡಿಕೆಯಿಟ್ಟಿಲ್ಲ ಎಂದು ಬೇಸರಗೊಂಡಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು ಈ ಅಭ್ಯರ್ಥಿ ಸಮರ್ಥನಾಗಿಲ್ಲ ಎನ್ನುವುದು ಅಹಮದ್ ವಾದ. ಈ ಕ್ಷೇತ್ರವನ್ನು ರಕ್ಷಿಸುವ ಉದ್ದೇಶದಿಂದ ತಾನು ಬಂಡಾಯ ಎದ್ದಿರುವುದಾಗಿ ತಿಳಿಸಿರುವ ಅವರು ಚುನಾವಣೆಯ ನಂತರ ಆ ಕ್ಷೇತ್ರವನ್ನು ಅದನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಮೊದಲನೆಯದಾಗಿ, ಅವರು ಈ ಕ್ಷೇತ್ರವನ್ನು ಜಯಿಸಬೇಕಿದೆ ಮತ್ತು ಅದು ತಜ್ಞರ ಪ್ರಕಾರ ಅಸಾಧ್ಯವಾದ ಮಾತು. ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧ ಮಾತನಾಡದ ಕಾರಣ ಕನಿಷ್ಠಪಕ್ಷ ಚುನಾವಣೆಯ ನಂತರ ಅಹಮದ್ ಕಾಂಗ್ರೆಸ್‌ಗೆ ಮರಳಬಹುದಾಗಿದೆ. ಸದ್ಯ ಅವರು ಯಾವುದೇ ಪಕ್ಷಕ್ಕೆ ಸೇರಿಲ್ಲವಾದ್ದರಿಂದ ಅವರು ವಾಪಸ್ ಬಂದರೂ ಕಾಂಗ್ರೆಸ್ ಸಂತೋಷದಿಂದ ಸ್ವಾಗತಿಸಬಹುದು. ಶಕೀಲ್ ಅಹಮದ್ ಓರ್ವ ಕಾಂಗ್ರೆಸಿಗನಾಗಿದ್ದು ಕೇವಲ ಚುನಾವಣೆಗಾಗಿ ಬಂಡಾಯ ಎದ್ದಿದ್ದಾರೆ ಅಷ್ಟೇ.


ಗೆದ್ದೂ ಸೋತ ನಿತೀಶ್ ಕುಮಾರ್

ತನ್ನ ಪಕ್ಷದ ಪ್ರಣಾಳಿಕೆಯಿಂದ ಪ್ರಮುಖ ಆಶ್ವಾಸನೆಗಳನ್ನು ಕೈಬಿಟ್ಟು ಅದನ್ನು ಬಿಜೆಪಿಯ ಪ್ರಣಾಳಿಕೆಗೆ ಸರಿಹೊಂದುವಂತೆ ಪುನರ್‌ರಚಿಸುವ ಒತ್ತಡ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಮೇಲೆ ಬಿಜೆಪಿ ಹೇರಿದೆ. ಅದರರ್ಥ, ಜೆಡಿಯು ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಬೆಂಬಲಿಸುವಂತಿಲ್ಲ, ಏಕರೂಪ ನಾಗರಿಕ ಸಂಹಿತೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವಂತಿಲ್ಲ. ಬಿಜೆಪಿಯ ಆಗ್ರಹಗಳಿಂದ ಜೆಡಿಯುನ ಕೆಲವು ನಾಯಕರು ಅಸಮಾಧಾನಗೊಂಡಿದ್ದರೆ ನಿತೀಶ್ ಮಾತ್ರ ಗೆಲುವು ನಮ್ಮದೇ ಎಂಬ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ ಬಿಹಾರದಲ್ಲಿ ಗೆಲುವು ಸಾಧಿಸಬಹುದು. ಆದರೆ ಪದೇಪದೇ ತನ್ನ ರಾಜಕೀಯ ನಿಲುವನ್ನು ಬದಲಿಸುತ್ತಿರುವುದು ಮತ್ತು ಅಭಿವೃದ್ಧಿ ಕೊರತೆಯ ಕಾರಣ ಈಗಾಗಲೇ ಜನಪ್ರಿಯತೆ ಕಳೆದುಕೊಂಡಿರುವ ನಿತೀಶ್ ಮಾತ್ರ ಸೋತಿದ್ದಾರೆ. ಸ್ಥಾನ ಹಂಚಿಕೆಯ ಸಮಯದಲ್ಲಿ ನಿತೀಶ್ ಬಿಜೆಪಿ ಜೊತೆ ಜೋರಾಗಿಯೇ ವಾದ ಮಾಡಿದ್ದರೂ ಸದ್ಯಕ್ಕಂತೂ ಬಿಜೆಪಿಯೇ ನಿತೀಶ್ ಅವರಿಗೆ ನಿರ್ದೇಶನ ನೀಡುತ್ತಿದೆ. ಬಿಜೆಪಿ ತನಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಜೆಡಿಯುಗೆ ಅವಕಾಶ ನೀಡುವುದಿಲ್ಲ ಎಂಬ ಭಯವೂ ನಿತೀಶ್‌ಗಿದೆ. ಸಾರ್ವಜನಿಕ ಸಭೆಗಳಲ್ಲಿ ನಿತೀಶ್ ತಾಳ್ಮೆ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರೆ ಅವರ ಮೇಲೆ ಒತ್ತಡ ಇರುವುದು ಸ್ಪಷ್ಟ. ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಉತ್ತಮ ನಿರ್ವಹಣೆ ತೋರದಿದ್ದರೆ ನಿತೀಶ್ ತನ್ನದೇ ಪಕ್ಷದ ಶಾಸಕರಿಂದ ಟೀಕೆಗೊಳಗಾಗುವುದು ನಿಶ್ಚಿತ ಮತ್ತು ಒಂದು ವೇಳೆ ಬಿಜೆಪಿ ಈ ಚುನಾವಣೆಯಲ್ಲಿ ನಿರೀಕ್ಷೆಗಿಂತ ಉತ್ತಮ ನಿರ್ವಹಣೆ ನೀಡಿದರೆ ನಿತೀಶ್‌ರನ್ನು ಕೈಬಿಡಲೂ ಬಹುದು. ಎರಡೂ ಸಂದರ್ಭಗಳಲ್ಲಿ ಈ ಚುನಾವಣೆಯಲ್ಲಿ ಸೋಲನುಭವಿಸುವವರು ಮಾತ್ರ ನಿತೀಶ್ ಕುಮಾರ್.


ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿಲ್ಲ, ಹಾಗಾಗಿ ಸದ್ಯ ಹೊಸ ಲೆಕ್ಕಾಚಾರ!

ಪ್ರಿಯಾಂಕಾ ಗಾಂಧಿ ವಾದ್ರಾ ವಾರಣಾಸಿಯಿಂದ ಸ್ಪರ್ಧಿಸದಿರುವುದರಿಂದ ಪಕ್ಷದ ಕಾರ್ಯಕರ್ತರಿಗಿಂತ ಹೆಚ್ಚು ರಾಜಕೀಯ ಸಂಭಾಷಣಕಾರರು ಮತ್ತು ಕಾಂಗ್ರೆಸ್ ಪರ ವಿಶ್ಲೇಷಕರು ಅಸಮಾಧಾನಗೊಂಡಂತೆ ಕಾಣುತ್ತದೆ. ಸದ್ಯ ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿಲ್ಲ ಎನ್ನುವುದು ಸ್ಪಷ್ಟವಾದ ನಂತರ ಹೊಸ ಬಗೆಯ ಊಹಾಪೋಹ ಹುಟ್ಟಲಾರಂಭಿಸಿವೆ. ಇದೀಗ ಆಕೆಯ ಹಿತೈಷಿಗಳು ಮತ್ತು ಅಭಿಮಾನಿಗಳು ಪ್ರಿಯಾಂಕಾ ಅಮೇಠಿಯಿಂದ ಕಣಕ್ಕಿಳಿಯಬಹುದು ಎಂದು ನಂಬಿದ್ದಾರೆ. ರಾಹುಲ್ ಗಾಂಧಿ ಅಮೇಠಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಹಾಗಾಗಿ ಅವರು ಅಮೇಠಿಯನ್ನು ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟು ಆಕೆಯ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎನ್ನುವುದು ಆಕೆಯ ಅಭಿಮಾನಿಗಳ ವಾದ. ಅಮೇಠಿ ಕಾಂಗ್ರೆಸ್‌ಗೆ ಸುರಕ್ಷಿತ ಸ್ಥಾನ ಎಂದು ಪರಿಗಣಿಸಲಾಗಿದ್ದು ಗಾಂಧಿಗಳ ಸಾಂಪ್ರದಾಯಿಕ ಕ್ಷೇತ್ರವಾಗಿದೆ. ಖಂಡಿತವಾಗಿಯೂ ಇದು, ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿಲ್ಲ ಎಂದು ತಿಳಿದಿದ್ದ ಕಾರ್ಯಕರ್ತರು ಸೃಷ್ಟಿಸಿರುವ ಊಹಾಪೋಹ. ಇನ್ನು ರಾಜಕೀಯ ವಿಶ್ಲೇಷಕರ ವಿಷಯಕ್ಕೆ ಬಂದರೆ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಹೇಳುತ್ತಿದ್ದವರು ಸದ್ಯ ಮುಖ ಸಿಂಡರಿಸಿ ಕುಳಿತಿದ್ದಾರೆ. ಅಷ್ಟಕ್ಕೂ ಗಾಂಧಿಗಳ ಮನಸ್ಸಿನಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿದಿಲ್ಲ.


ಚೌಹಾಣ್ ಮರ್ಯಾದೆ ಉಳಿಸಿದ ಆರೆಸ್ಸೆಸ್

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದನ್ನು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರೋಧಿಸಿದ್ದರು. ಮಧ್ಯ ಪ್ರದೇಶದಲ್ಲಿ ಯುವ ನಾಯಕರನ್ನು ಬೆಳೆಸುವ ಉದ್ದೇಶ ಹೊಂದಿದ್ದ ಅಮಿತ್ ಶಾ, ಚೌಹಾಣ್ ಅವರನ್ನು ದಿಲ್ಲಿಗೆ ಕರೆತರಲು ಬಯಸಿದ್ದರು. ಆದರೆ ತನ್ನನ್ನು ರಾಜ್ಯದಿಂದ ಹೊರಗೆ ಸಾಗಿಸುವ ಶಾ ಅವರ ಯೋಜನೆಯನ್ನು ನೇರವಾಗಿ ತಿರಸ್ಕರಿಸಲಾಗದ ಚೌಹಾಣ್, ತಾನು ರಾಜ್ಯದ ಏಳಿಗೆಗಾಗಿ ದುಡಿಯಲು ಬಯಸುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಲು ಆರಂಭಿಸಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೆದ್ದಾಗ, ನಾನು ಅದನ್ನು ನಿರಾಕರಿಸುವುದೂ ಇಲ್ಲ, ಸ್ವೀಕರಿಸುವುದೂ ಇಲ್ಲ ಎಂದು ಹೇಳಿಕೆ ನೀಡಿದ್ದರು. ಮಧ್ಯ ಪ್ರದೇಶದ ಜನತೆಯ ಮಧ್ಯೆ ಈಗಲೂ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ ಚೌಹಾಣ್, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸಲು ಪ್ರಯತ್ನಿಸಿದ್ದರು. ಆದರೆ ಚೌಹಾಣ್ ಮೇಲೆ ಆರೆಸ್ಸೆಸ್ ರೂಪದಲ್ಲಿ ಅದೃಷ್ಟ ಒಲಿಯಿತು. ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಸಂಘ ಪರಿವಾರ ಚೌಹಾಣ್ ನಿಟ್ಟುಸಿರು ಬಿಡುವಂತೆ ಮಾಡಿತು. ಸಂಘ ಪರಿವಾರದ ಪ್ರಸ್ತಾವನೆ ಶಾಗೂ ಮೆಚ್ಚುಗೆಯಾಯಿತು. ಪ್ರಜ್ಞಾ ಸಿಂಗ್‌ರನ್ನು ಆಯ್ಕೆ ಮಾಡುವುದರಿಂದ ಚುನಾವಣಾ ಕಣದಲ್ಲಿ ಹಿಂದುತ್ವದ ಸಿದ್ಧಾಂತವನ್ನು ಗಟ್ಟಿಗೊಳಿಸಲಿದೆ ಎಂದು ಶಾ ವಿಶ್ವಾಸ ಹೊಂದಿದ್ದಾರೆ. ಸಂಘ ಪರಿವಾರದ ನಡೆ ಚೌಹಾಣ್ ಅವರನ್ನು ರಕ್ಷಿಸಿರಬಹುದು. ಆದರೆ ಅವರ ಅಭಿಮಾನಿಗಳಿಗೆ ಚಿಂತೆ ಕಾಡುತ್ತಿದೆ. ಒಂದು ವೇಳೆ ದಿಗ್ವಿಜಯ್ ಸಿಂಗ್ ವಿರುದ್ಧ ಪಜ್ಞಾ ಗೆದ್ದರೆ ಏನು ಗತಿ? ಆಕೆ ಮಧ್ಯ ಪ್ರದೇಶದ ಯೋಗಿ ಆದಿತ್ಯನಾಥ್ ಆಗಬಹುದಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News