ಪರಮಾಣು ಒಪ್ಪಂದದ ಕೆಲವು ಬಾಧ್ಯತೆಗಳನ್ನು ಕಳಚಿಕೊಂಡ ಇರಾನ್
Update: 2019-05-08 17:35 GMT
ಟೆಹರಾನ್ (ಇರಾನ್), ಮೇ 8: ಜಗತ್ತಿನ ಪ್ರಮುಖ ದೇಶಗಳೊಂದಿಗೆ 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದದ ಕೆಲವು ಬದ್ಧತೆಗಳಿಂದ ಹೊರಬರಲು ಇರಾನ್ ನಿರ್ಧರಿಸಿದೆ ಎಂದು ಆ ದೇಶದ ವಿದೇಶ ಸಚಿವಾಲಯ ಬುಧವಾರ ಘೋಷಿಸಿದೆ.
ಈ ಒಪ್ಪಂದದಿಂದ ಅಮೆರಿಕ ಕಳೆದ ವರ್ಷದ ಮೇ ತಿಂಗಳಲ್ಲಿ ಹೊರಬಂದಿರುವುದನ್ನು ಸ್ಮರಿಸಬಹುದಾಗಿದೆ.
‘‘ಪರಮಾಣು ಒಪ್ಪಂದದಡಿ ಇರಾನ್ ಹೊಂದಿರುವ ಕೆಲವು ಬದ್ಧತೆಗಳನ್ನು ಅನುಸರಿಸುವುದನ್ನು ನಿಲ್ಲಿಸಲು ಉನ್ನತಾಧಿಕಾರದ ಭದ್ರತಾ ಕೌನ್ಸಿಲ್ ನಿರ್ಧರಿಸಿದೆ ಹಾಗೂ ಈ ನಿರ್ಧಾರವನ್ನು ಒಪ್ಪಂದದಲ್ಲಿ ಈಗಲೂ ಭಾಗಿಯಾಗಿರುವ ದೇಶಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ’’ ಎಂದು ಸಚಿವಾಲಯ ತಿಳಿಸಿದೆ.
ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ ಮತ್ತು ರಶ್ಯಗಳು ಪರಮಾಣು ಒಪ್ಪಂದದ ಇತರ ಭಾಗೀದಾರ ದೇಶಗಳಾಗಿವೆ.
ಬುಧವಾರ ನಡೆದ ಸಭೆಯೊಂದರಲ್ಲಿ, ಇರಾನ್‌ನ ನಿರ್ಧಾರವನ್ನು ಈ ಐದು ದೇಶಗಳ ರಾಯಭಾರಿಗಳಿಗೆ ಇರಾನ್‌ನ ಉಪ ವಿದೇಶ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ತಲುಪಿಸಿದರು ಎಂದು ಅದು ತಿಳಿಸಿದೆ.