ದಾಖಲೆಯ 23 ಬಾರಿ ಎವರೆಸ್ಟ್ ಏರಿದ ನೇಪಾಳಿ ಆರೋಹಿ
ಕಠ್ಮಂಡು (ನೇಪಾಳ), ಮೇ 15: ನೇಪಾಳದ ಪರ್ವತಾರೋಹಿ ಕಮಿ ರಿಟ ಶೆರ್ಪಾ ಮಂಗಳವಾರ 23ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರದ ತುದಿಗೆ ಹತ್ತಿದ್ದು, ಈ ಮೂಲಕ ಜಗತ್ತಿನ ಅತಿ ಎತ್ತರದ ಶಿಖರವನ್ನು ಅತಿ ಹೆಚ್ಚು ಬಾರಿ ಏರಿದ ದಾಖಲೆಯನ್ನು ನಿರ್ಮಿಸಿದ್ದಾರೆ.
ಪರ್ವತಾರೋಹಣ ಋತು ಮಾರ್ಚ್‌ನಲ್ಲಿ ಆರಂಭಗೊಂಡು ಮೇ ತಿಂಗಳ ಕೊನೆಯವರೆಗೆ ಇರುತ್ತದೆ. 49 ವರ್ಷದ ಕಮಿ ರಿಟ ಶೆರ್ಪಾ ನೇಪಾಳದ ಕಡೆಯಿಂದ ಶಿಖರಾರೋಹಣ ಆರಂಭಿಸಿದ್ದರು. ಮೌಂಟ್ ಎವರೆಸ್ಟ್ ಶಿಖರಕ್ಕೆ ಏರಲು ಎರಡು ದಾರಿಗಳಿವೆ. ಒಂದು ನೇಪಾಳದ ಕಡೆಯಿಂದ ಹಾಗೂ ಇನ್ನೊಂದು ಟಿಬೆಟ್ ಕಡೆಯಿಂದ.
ನೇಪಾಳದ ಶೆರ್ಪಾಗಳು ವಿದೇಶಿ ಪರ್ವತಾರೋಹಿಗಳಿಗೆ ಮಾರ್ಗದರ್ಶಿಗಳಾಗಿ ಸೇವೆ ಸಲ್ಲಿಸುತ್ತಾರೆ.
ಕಮಿ ರಿಟ ಶೆರ್ಪಾ ಸೇರಿದಂತೆ ಎಂಟು ನೇಪಾಳಿ ಆರೋಹಿಗಳು ಮಂಗಳವಾರ ಮೌಂಟ್ ಎವರೆಸ್ಟ್ ಶಿಖರದ ತುದಿಯನ್ನು ತಲುಪಿದರು. ಈ ಮೂಲಕ ಅವರು ಶಿಖರದ ತುದಿಗೆ ತಲುಪುವ ದಾರಿಯನ್ನು ಸಿದ್ಧಪಡಿಸಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂದಿನ ವಾರಗಳಲ್ಲಿ ದಾಖಲೆಯ ಸಂಖ್ಯೆಯ ಆರೋಹಿಗಳು ಶಿಖರವನ್ನು ತಲುಪುವ ನಿರೀಕ್ಷೆಯಿದೆ.
ಅನುಭವಿ ಪರ್ವತಾರೋಹಿಗಳ ತಂಡವೊಂದು, ವಿದೇಶಿ ಆರೋಹಿಗಳಿಗೆ ಹತ್ತಲು ಸಹಾಯವಾಗುವಂತೆ ಹಗ್ಗಗಳನ್ನು ನೆಡುವುದಕ್ಕಾಗಿ ಎವರೆಸ್ಟ್‌ನ ತುದಿಯ ಸುತ್ತಲೂ ಬೀಸುತ್ತಿದ್ದ ಪ್ರಬಲ ಗಾಳಿ ಕಡಿಮೆಯಾಗಲು ಕಾಯುತ್ತಿತ್ತು. ಅಂತಿಮವಾಗಿ ಮಂಗಳವಾರ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.