ಟೆಲಿಕಾಮ್ ಬೆದರಿಕೆ: ತುರ್ತು ಪರಿಸ್ಥಿತಿ ಹೇರಿದ ಟ್ರಂಪ್‌

Update: 2019-05-16 17:34 GMT

ವಾಶಿಂಗ್ಟನ್, ಮೇ 16: ಬುಧವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ರಾಷ್ಟ್ರೀಯ ಭದ್ರತಾ ಅಪಾಯ'ವನ್ನು ಒಡ್ಡುತ್ತದೆ ಎಂಬುದಾಗಿ ನಂಬಲಾಗುವ ಕಂಪೆನಿಗಳು ತಯಾರಿಸಿರುವ ಟೆಲಿಕಾಮ್ ಉಪಕರಣಗಳನ್ನು ಬಳಸುವುದರಿಂದ ಅಮೆರಿಕದ ಕಂಪೆನಿಗಳನ್ನು ನಿಷೇಧಿಸುವ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ.

ಈ ಆದೇಶವು, ಇಂಟರ್‌ನ್ಯಾಶನಲ್ ಎಮರ್ಜನ್ಸಿ ಎಕನಾಮಿಕ್ ಪವರ್ಸ್ ಕಾಯ್ದೆಯಡಿ ನಡೆಯುವ ಅಂತರ್‌ರಾಜ್ಯ ವ್ಯಾಪಾರವನ್ನು ನಿಯಂತ್ರಿಸಲು ಅಧ್ಯಕ್ಷ ಟ್ರಂಪ್‌ಗೆ ಅಧಿಕಾರ ನೀಡುತ್ತದೆ ಎಂದು 'ಸ್ಪೂತ್ನಿಕ್' ಸುದ್ದಿ ಸಂಸ್ಥೆ ವರದಿ ಮಾಡಿದೆ.''ನಮ್ಮ ದೇಶದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮತ್ತು ಸೇವೆಗಳನ್ನು ರಕ್ಷಿಸುವ ತನ್ನ ಬದ್ಧತೆಯ ಭಾಗವಾಗಿ, ಇಂದು ಅಧ್ಯಕ್ಷ ಟ್ರಂಪ್ 'ಸೆಕ್ಯೂರಿಂಗ್ ದ ಇನ್‌ಫಾರ್ಮೇಶನ್ ಆ್ಯಂಡ್ ಕಮ್ಯುನಿಕೇಶನ್ಸ್ ಟೆಕ್ನಾಲಜಿ ಆ್ಯಂಡ್ ಸರ್ವಿಸಸ್ ಸಪ್ಲೈ ಚೇನ್' ಎಂಬ ಹೆಸರಿನ ಸರಕಾರಿ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ'' ಎಂದು ಶ್ವೇತಭವನ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.

 ಅಮೆರಿಕದ ನಿಷೇಧ ಪಟ್ಟಿಗೆ ಚೀನಾದ ವಾವೇ ಕಂಪೆನಿ ತನ್ನ 'ಎಂಟಿಟಿ ಪಟ್ಟಿ'ಗೆ ಚೀನಾದ ಟೆಲಿಕಾಮ್ ದೈತ್ಯ ವಾವೇ ಟೆಕ್ನಾಲಜೀಸ್ ಕೊ ಲಿಮಿಟೆಡ್ ಮತ್ತು ಅದರೊಂದಿಗೆ ನಂಟು ಹೊಂದಿರುವ 70 ಕಂಪೆನಿಗಳನ್ನು ಸೇರಿಸಿರುವುದಾಗಿ ಅಮೆರಿಕದ ವಾಣಿಜ್ಯ ಇಲಾಖೆ ಬುಧವಾರ ಹೇಳಿದೆ.ಇದರಿಂದಾಗಿ, ಅಮೆರಿಕ ಸರಕಾರದ ಅನುಮೋದನೆಯಿಲ್ಲದೆ ವಾವೆ ಕಂಪೆನಿಗೆ ಅಮೆರಿಕದ ಕಂಪೆನಿಗಳಿಂದ ಬಿಡಿಭಾಗಗಳು ಅಥವಾ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.ಈ ನಿರ್ಧಾರದಿಂದಾಗಿ ವಾವೇ ಕಂಪೆನಿಗೆ ಕೆಲವೊಂದು ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ, ಯಾಕೆಂದರೆ, ಅವುಗಳ ಬಿಡಿಭಾಗಗಳಿಗಾಗಿ ಅದು ಅಮೆರಿಕದ ಕಂಪೆನಿಗಳನ್ನೇ ಆಶ್ರಯಿಸಿದೆ ಎಂದು ಅಮೆರಿಕದ ಅಧಿಕಾರಿಗಳು 'ರಾಯ್ಟರ್ಸ್' ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News