ಮೋದಿತ್ವದ ಗೆಲುವು: ದೀರ್ಘವಾದರೂ ಅನಂತವಲ್ಲ ಈ ಇರುಳು....

Update: 2019-05-24 18:30 GMT

ಮೋದಿ ಪ್ರತಿನಿಧಿಸುವ ಭಾರತೀಯ ಫ್ಯಾಶಿಸಂಅನ್ನು ಈ ಚುನಾವಣೆ ರಂಗದಲ್ಲಿ ಸೋಲಿಸಬಹುದೆಂದುಕೊಂಡಿದ್ದ ನಮ್ಮಲ್ಲಿನ ಹಲವರ ಬಯಕೆಗಳು ವಾಸ್ತವವಾಗಿರಲಿಲ್ಲ. ಹೀಗಾಗಿ ಮೋದಿ ಜಯದ ಹಿಂದಿರುವ ವಾಸ್ತವಗಳನ್ನು ನಮ್ಮ ವ್ಯಕ್ತಿನಿಷ್ಠ ಆಲೋಚನೆಗಳನ್ನು ಹಾಗೂ ಬಯಕೆಗಳನ್ನು ಪಕ್ಕಕ್ಕಿಟ್ಟು ‘ವಾಸ್ತವ ಹೇಗಿದೆಯೋ ಹಾಗೆ’ ಅರ್ಥಮಾಡಿಕೊಳ್ಳಬೇಕು. ಹಾಗೂ ಭಾರತದ ಪ್ರಜಾತಂತ್ರಕ್ಕೆ ಒದಗಿರುವ ಈ ಅಪಾಯವನ್ನು ನಿವಾರಿಸಿಕೊಳ್ಳುವ ದಾರಿಯನ್ನು ಆ ಗ್ರಹಿಕೆಯಿಂದಲೇ ಪಡೆದುಕೊಳ್ಳಬಹುದೆಂಬ ಭರವಸೆಯನ್ನು ಬಿಟ್ಟುಕೊಡಬಾರದು.


ಮತ್ತೆ ಮೋದಿತ್ವ ಗೆದ್ದಿದೆ. ಭಾರತ ಸೋತಿದೆ. ವಾಸ್ತವಗಳು ನಾವಂದು ಕೊಂಡಿದ್ದಕ್ಕಿಂತ ಎಷ್ಟೋಪಟ್ಟು ಭಿನ್ನವಾಗಿದೆ. ಸಂಕೀರ್ಣವಾಗಿವೆ. ಮುಂದಿನ ಐದು ವರ್ಷಗಳು ಈ ದೇಶದ ಬಡವರ, ಮುಸ್ಲಿಮರ, ದಲಿತರ, ಮಹಿಳೆಯರ ಮತ್ತು ಆದಿವಾಸಿಗಳ ಅಥವಾ ಒಟ್ಟಾರೆಯಾಗಿ ದುರ್ಬಲರ ಪಾಲಿಗೆ ಮತ್ತಷ್ಟು ಭೀಕರವಾಗಲಿದೆ. ಕಳೆದ ಐದು ವರ್ಷಗಳಲ್ಲಿ ಸ್ಯಾಂಪಲ್ಲಿನ ರೂಪದಲ್ಲಿ ಕಂಡ ಲಿಂಚಿಂಗ್, ಭಿನ್ನಮತದ ಹತ್ಯೆ, ರೈತ-ಕಾರ್ಮಿಕ ವಿರೋಧಿ ನೀತಿ... ಇತ್ಯಾದಿಗಳನ್ನು ಮಾಡಿದವರು ಹಿಂದಿಗಿಂತ ಹೆಚ್ಚು ಬಹುಮತದಿಂದ ಚುನಾಯಿತಗೊಂಡು ಶಾಸಕರಾಗುತ್ತಿದ್ದಾರೆ. ಹೀಗಾಗಿ ಆ ಭಯೋತ್ಪಾದನೆಗಳೂ ಜನಮಾನ್ಯತೆಯನ್ನು ಪಡೆದುಕೊಂಡು ಶಾಸನಬದ್ಧವಾಗಿಬಿಟ್ಟಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ಅಧಿಕಾರಹೀನ ಭಾರತದ ಮೇಲೆ ಅಧಿಕಾರಸ್ಥ ಭಾರತದ ಬಹುಬಗೆಯ ‘ಸಂವಿಧಾನಬದ್ಧ ಭಯೋತ್ಪಾದನೆ’ ತೀವ್ರಗೊಳ್ಳಲಿದೆ.

ಆದರೆ ಹೀಗಾಗುತ್ತಿರುವುದು ಮನುಕುಲದ ಇತಿಹಾಸದಲ್ಲಿ ಮೊದಲೂ ಅಲ್ಲ. ಹೊಸದೂ ಅಲ್ಲ. ಇತಿಹಾಸದಲ್ಲಿ ನಮ್ಮ ಬಯಕೆ ಮತ್ತು ಅಂದಾಜುಗಳನ್ನು ಮೀರಿ ಇರುಳುಗಳು ದೀರ್ಘವಾಗಿಬಿಟ್ಟಿವೆ. ಆದರೆ ಅನಂತವಾಗುಳಿದುಕೊಂಡಿಲ್ಲ.

ಆದರೆ ಆ ಕತ್ತಲು ತನ್ನಂತೆ ತಾನೇ ಕರಗಿಲ್ಲ. ಕತ್ತಲ ಜೊತೆ ಕದನ ಮಾಡುವ ಮೂಲಕ ಮಾತ್ರ ಅದರ ಕಾರಾಸ್ಥಾನಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಹಾಗೆ ಅರ್ಥಮಾಡಿಕೊಂಡಿದ್ದ ರಿಂದಲೇ ಅದನ್ನು ಅಂತ್ಯಗೊಳಿಸುವ ದಾರಿಯೂ ದೊರೆತು ಸುರಂಗದ ಅಂಚಿನಲ್ಲಿ ಬೆಳಕಿನ ಕಿರಣಗಳನ್ನು ಕಾಣಲು ಸಾಧ್ಯವಾಯಿತು. ಅನುಭವ ಮನುಕುಲಕ್ಕೆ ಕಲಿಸಿಕೊಟ್ಟ ಪಾಠಗಳು ಎರಡು. ಕತ್ತಲ ಜೊತೆ ಗುದ್ದಾಡುವ ಮೂಲಕ ಮತ್ತು ಆ ಅನುಭವ ಜ್ಞಾನವನ್ನು ರಾಗ-ದ್ವೇಷವಿಲ್ಲದೆ ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವ ಮೂಲಕ ಮಾತ್ರ ಕತ್ತಲಿನ ವಿರಾಟ್ ಸ್ವರೂಪವನ್ನು ಮತ್ತು ಅದನ್ನು ಅಂತ್ಯಗೊಳಿಸುವ ದಾರಿಯನ್ನು ಅರ್ಥಮಾಡಿಕೊಳ್ಳಬಹುದು. ಎರಡನೆ ಯದಾಗಿ ಈ ಅನ್ವೇಷಣೆಯುದ್ದಕ್ಕೂ ಸಿನಿಕತೆಗೆ ಅಥವಾ ವಿಧಿವಾದಕ್ಕೆ ಶರಣಾಗದೆ ಬೆಳಕಿನ ಬಗ್ಗೆ ಭರವಸೆಯನ್ನು ಇಟ್ಟುಕೊಂಡಿದ್ದರೆ ಮಾತ್ರ ಕತ್ತಲನ್ನು ಸೋಲಿಸಬಹುದು. ಈ ಹಿನ್ನೆಲೆಯಲ್ಲೇ ಗ್ರಾಮ್ಸ್ಕಿ ಹೇಳಿದ ವಿವೇಕದ ಮಾತೊಂದಿದೆ.

ಇಡೀ ಯೂರೋಪನ್ನು ಹಿಟ್ಲರನ ನಾಝಿಸಂ ಮತ್ತು ಮುಸಲೋನಿಯ ಫ್ಯಾಶಿಸಂ ಆವರಿಸಿಕೊಂಡು ವಿಮೋಚನೆಯ ಭರವಸೆಯಿಲ್ಲದ ಹತಾಷೆಯ ಸ್ಥಿತಿಯಲ್ಲಿದ್ದಾಗ ಮುಸ್ಸೋಲಿನಿಯ ಜೈಲಿನಲ್ಲಿದ್ದ ಗ್ರಾಮ್ಸ್ಕಿ ಕಾರ್ಗತ್ತಲಿನಿಂದ ಬೆಳಕಿನೆಡೆಗೆ ಸಾಗಲು ''Pessimism of the intellect and Optimism of the hope''  ಎಂದರೆ ‘‘ಬೌದ್ಧಿಕತೆಯ ನಿರ್ದಾಕ್ಷಿಣ್ಯ ನಿರಾಶವಾದ ಮತ್ತು ಭರವಸೆಯ ಆಶಾವಾದ’’ ಎರಡೂ ಇರಬೇಕೆಂದು ಹೇಳುತ್ತಾನೆ.
ಅದರ ಅರ್ಥವಿಷ್ಟೆ. ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಬಯಕೆಗಳನ್ನು ಅದರ ಮೇಲೆ ಆರೋಪಿಸಬಾರದು. ವಾಸ್ತವಗಳು ಎಷ್ಟು ಕಠೋರವಾಗಿದೆಯೋ, ಎಷ್ಟು ಕಠಿಣವಾಗಿದೆಯೋ ಹಾಗೆಯೇ ಅರ್ಥಮಾಡಿಕೊಳ್ಳಬೇಕು. ಆ ವಾಸ್ತವಿಕತೆ ನಮ್ಮಲ್ಲಿ ನಿರಾಶಾವಾದವನ್ನು ಹುಟ್ಟಿಸುವಂತಿದ್ದರೂ ಅದರ ಸ್ವರೂಪವನ್ನು ಮಾತ್ರ ಹೇಗಿದೆಯೋ ಹಾಗೆಯೇ ಅರ್ಥಮಾಡಿಕೊಳ್ಳಬೇಕು. ಆದರೆ ಅದೇ ಸಮಯದಲ್ಲಿ ವಾಸ್ತವಿಕತೆಗಳು ಎಷ್ಟೇ ಭೀಕರವಾಗಿದ್ದರೂ ಅದನ್ನು ಬದಲಿಸಬಹುದೆಂಬ ಆಶಾವಾದ ನಮ್ಮಲ್ಲಿ ಅಂತರ್ಗತವಾಗಿರಬೇಕು. ಅಥವಾ ವಾಸ್ತವಿಕ ವೈಜ್ಞಾನಿಕ ಗ್ರಹಿಕೆಗಳೇ ಬಿಡುಗಡೆಯ ಭರವಸೆಯನ್ನೂ ಹುಟ್ಟಿಸಬೇಕು.

ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಈ ವಿವೇಕ ಅತ್ಯಗತ್ಯವಾಗಿದೆ. ಮೋದಿ ಪ್ರತಿನಿಧಿಸುವ ಭಾರತೀಯ ಫ್ಯಾಶಿಸಂ ಅನ್ನು ಈ ಚುನಾವಣೆ ರಂಗದಲ್ಲಿ ಸೋಲಿಸಬಹುದೆಂದುಕೊಂಡಿದ್ದ ನಮ್ಮಲ್ಲಿನ ಹಲವರ ಬಯಕೆಗಳು ವಾಸ್ತವವಾಗಿರಲಿಲ್ಲ. ಹೀಗಾಗಿ ಮೋದಿ ಜಯದ ಹಿಂದಿರುವ ವಾಸ್ತವಗಳನ್ನು ನಮ್ಮ ವ್ಯಕ್ತಿನಿಷ್ಠ ಆಲೋಚನೆಗಳನ್ನು ಹಾಗೂ ಬಯಕೆಗಳನ್ನು ಪಕ್ಕಕ್ಕಿಟ್ಟು ‘ವಾಸ್ತವ ಹೇಗಿದೆಯೋ ಹಾಗೆ’ ಅರ್ಥಮಾಡಿಕೊಳ್ಳಬೇಕು. ಹಾಗೂ ಭಾರತದ ಪ್ರಜಾತಂತ್ರಕ್ಕೆ ಒದಗಿರುವ ಈ ಅಪಾಯವನ್ನು ನಿವಾರಿಸಿಕೊಳ್ಳುವ ದಾರಿಯನ್ನು ಆ ಗ್ರಹಿಕೆಯಿಂದಲೇ ಪಡೆದುಕೊಳ್ಳಬಹುದೆಂಬ ಭರವಸೆಯನ್ನು ಬಿಟ್ಟುಕೊಡಬಾರದು. ಅದಾಗಬೇಕೆಂದರೆ ಮೋದಿತ್ವದ ವಿಜಯದ ವಿರಾಟ್ ಸ್ವರೂಪ ನಮ್ಮ ವಿವೇಕಕ್ಕೂ ಹಾಗೂ ಆಲೋಚನೆಗೂ ಮತ್ತು ಭರವಸೆಗಳಿಗೂ ಮಂಕುಹಿಡಿಸಬಾರದು. ಹೀಗಾಗಿ ಇವತ್ತು ಗೆಲ್ಲಬೇಕಿರುವ ಮೊದಲ ಸವಾಲೆಂದರೆ ನಮ್ಮ ವಿವೇಕವನ್ನು ಉಳಿಸಿಕೊಳ್ಳುವುದೇ ಆಗಿದೆ.

ಈ ನಿಟ್ಟಿನಲ್ಲಿ ಮೊದಲು ಈ ಮೋದಿತ್ವದ ವಿಜಯದ ಸ್ವರೂಪವನ್ನು ನಿಷ್ಠೂರವಾಗಿ ಅರ್ಥಮಾಡಿಕೊಳ್ಳೋಣ. ಬಿಜೆಪಿಗೆ 2014ಕ್ಕಿಂತ 22 ಸೀಟುಗಳು ಹಾಗೂ ಶೇ.6ರಷ್ಟು ಹೆಚ್ಚು ವೋಟುಗಳು ದಕ್ಕಿವೆ. ಅಂದರೆ 2014ರಲ್ಲಿ 17.5 ಕೋಟಿ ಮತದಾರರು ಬಿಜೆಪಿ ಪರವಾಗಿ ವೋಟು ಹಾಕಿದ್ದರೆ ಈ ಬಾರಿ ಅಂದಾಜು 20 ಕೋಟಿಗೂ ಹೆಚ್ಚು ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಸ್ವತಂತ್ರವಾಗಿ ಅಧಿಕಾರ ರಚಿಸಲು ಬೇಕಾದಷ್ಟು ಬಹುಮತವನ್ನು ಧಾರಾಳವಾಗಿ ನೀಡಿದ್ದಾರೆ. ಅದೇ ಸಮಯದಲ್ಲಿ ವಿರೋಧಪಕ್ಷಗಳ ನೈತಿಕತೆಯೇ ಉಡುಗಿಹೋಗುವಷ್ಟು ಹೀನಾಯವಾಗಿ ಮೋದಿ ವಿರೋಧಿ ಪಕ್ಷಗಳನ್ನು ಸೋಲಿಸಿದ್ದಾರೆ. ವಿಜಯದ ಕೆಲವು ಅಂಶಗಳನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳೋಣ:

2014ಕ್ಕೂ 2019ಕ್ಕೂ ಇರುವ ವ್ಯತ್ಯಾಸಗಳು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿತ್ವ ಗಳಿಸಿರುವ ವಿಜಯ 2014ರ ವಿಜಯಕ್ಕಿಂತ ಗುಣಾತ್ಮಕವಾಗಿ ಭಿನ್ನವಾಗಿದೆ. 2014ರಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಭುಗಿಲೆದ್ದಿದ್ದ ಜನಾಭಿಪ್ರಾಯ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ಗುಜರಾತ್ ಅಭಿವೃದ್ಧಿ ಮಾದರಿಯ ಹೆಸರಲ್ಲಿ ಮೋದಿ ಹುಟ್ಟುಹಾಕಿದ ಅಭಿವೃದ್ಧಿಯ ಹುಸಿ ಭರವಸೆಗಳನ್ನು ಜನ ನಂಬಿದ್ದು ಎಲ್ಲವೂ ಸೇರಿಕೊಂಡು ಹೊಸ ಕನಸನ್ನು ನೀಡುತ್ತಿದ್ದ ಮೋದಿ ಜನರ ಬದಲಿ ಆಯ್ಕೆಯಾಯಿತು. ಇವೆಲ್ಲದರ ಜೊತೆ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳು ತಣ್ಣಗೆ ನಡೆಸಿದ ಹಿಂದುತ್ವ ಮತ್ತು ಮುಸ್ಲಿಂ ವಿರೋಧಿ ಪ್ರಚಾರಗಳೂ ಸಹ ಮೋದಿಯ ಪರವಾಗಿ ಮತಗಳನ್ನು ಧ್ರುವೀಕರಿಸಿದವು. ಹೀಗಾಗಿ 2014ರ ಮೋದಿ ಗೆಲುವಿಗೆ ಹಿಂದುತ್ವವೇ ಏಕೈಕ ಕಾರಣವೆಂದು ಹೇಳಲಾಗುವುದಿಲ್ಲ.

ಆದರೆ 2019ರ ಚುನಾವಣೆಯ ಸಂದರ್ಭದಲ್ಲಿ ಮೋದಿ ಸರಕಾರದ ಐದು ವರ್ಷಗಳ ಕ್ರೌರ್ಯ ಮತ್ತು ವೈಫಲ್ಯಗಳು ಜನರ ಮುಂದೆ ಇದ್ದವು. ಸಾಮಾಜಿಕ ರಂಗದಲ್ಲಿ ಮುಸ್ಲಿಂ, ದಲಿತ, ಮಹಿಳೆಯರ ಮೇಲೆ ಅವಿರತವಾಗಿ ನಡೆಯುತ್ತಲೇ ಹೋದ ಭೀಕರ ದೌರ್ಜನ್ಯಗಳು, ಆರ್ಥಿಕ ರಂಗದಲ್ಲಿ ಹೆಚ್ಚಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ನೋಟು ನಿಷೇಧ ಮತ್ತು ಜಿಎಸ್‌ಟಿಗಳು ತಂದೊಡ್ಡಿದ ಆತಂಕಗಳು, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಿನ್ನಮತದ ಹತ್ಯೆಗಳು ಇವೆಲ್ಲವೂ ಸಹ ಜನರ ಮುಂದಿತ್ತು. ವಾಸ್ತವವಾಗಿ 2018-19ರ ಜನವರಿಯಲ್ಲಿ ನಡೆದ ಮತದಾರರ ಸರ್ವೇಗಳು ಹಾಗೂ 2018ರಲ್ಲಿ ನಡೆದ ಐದು ರಾಜ್ಯದ ಚುನಾವಣೆಯಲ್ಲಿ ಬಿಜೆಪಿಯ ಸೋಲುಗಳು ಬಿಜೆಪಿಯ ವಿರುದ್ಧದ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಎಂಬ ಅಭಿಪ್ರಾಯಕ್ಕೆ ರೆಕ್ಕೆಗಳನ್ನು ಕಟ್ಟಿಕೊಟ್ಟಿತ್ತು.

ಆದರೆ ಪುಲ್ವಾಮ ದುರಂತ ಹಾಗೂ ಬಾಲಕೋಟ್ ದಾಳಿಗಳ ನಂತರದಲ್ಲಿ ಮೋದಿ ಸರಕಾರ ಮತ್ತು ಮೋದಿ ಮಾಧ್ಯಮಗಳು ‘‘ಭಾರತ ದೇಶವು ಅಪಾಯಕ್ಕೆ ಸಿಲುಕಿದೆ ಮತ್ತು ಅದನ್ನು ಕಾಪಾಡಲು ಅಗತ್ಯವಿರುವ ಸ್ಥಿರ ಸರಕಾರ ಹಾಗೂ ಪ್ರಬಲ ನಾಯಕನನ್ನು ಮೋದಿ ಮಾತ್ರ ನೀಡಬಲ್ಲರು’’ ಎಂಬ ಅಬ್ಬರದ ಪ್ರಚಾರಗಳನ್ನು ಶುರುವಿಟ್ಟುಕೊಂಡವು ಹಾಗೂ ಅವು ಐದು ವರ್ಷದ ಬದುಕಿನ ಎಲ್ಲಾ ಅನುಭವಗಳನ್ನು ಮಸುಕು ಮಾಡಿಬಿಟ್ಟಿತೆಂಬುದು ನಿಜ. ಅದರಿಂದಾಗಿ ಬಿಜೆಪಿಗೆ ಏನಿಲ್ಲವೆಂದರೂ ಶೇ.2-3ರಷ್ಟು ಹೆಚ್ಚಿನ ಮತಗಳು ಸಿಕ್ಕಿರಬಹುದು. ಇದು ಪ್ರತಿ ಹಂತದ ಮತದಾನದಲ್ಲೂ ಒಟ್ಟಾರೆ ಮತಚಲಾವಣೆಯ ಪ್ರಮಾಣ ಹೆಚ್ಚಾಗುತ್ತಾ ಹೋದಾಗಲೆ ಸ್ಪಷ್ಟವಾದ ಸಂಗತಿಯಾಗಿತ್ತು.

ಆದರೆ ಪುಲ್ವಾಮ ಮಾತ್ರ ಬಿಜೆಪಿಯ 2019ರ ಈ ಪರಿ ವಿಜಯವನ್ನು ವಿವರಿಸಲು ಸಾಧ್ಯವಿಲ್ಲ. ಬಿಜೆಪಿಯಿಂದ ಗೆದ್ದಿರುವ 303 ಸಂಸದರಲ್ಲಿ 200 ಸಂಸದರಿಗೆ ಶೇ.50ಕ್ಕಿಂತ ಹೆಚ್ಚು ವೋಟುಗಳು ದಕ್ಕಿವೆ. ಅಲ್ಲದೆ ಬರಿಯ ಬಾಲಕೋಟ್ ದಾಳಿಯೊಂದರಿಂದಲೇ ಬಿಜೆಪಿಗೆ ಕರ್ನಾಟಕವನ್ನೂ ಒಳಗೊಂಡಂತೆ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳು ಸಿಗುತ್ತಿರಲಿಲ್ಲ. ದಿಲ್ಲಿಯಲ್ಲಿ ಆಪ್‌ನಂತಹ ಪಕ್ಷಕ್ಕೆ ಶೇ.30ಕ್ಕಿಂತ ಕಡಿಮೆ ಮತಗಳು ಹಾಗೂ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಘಟಬಂಧನ್‌ಗೆ ಕೇವಲ 15 ಸೀಟುಗಳು ಮತ್ತು ಬಿಜೆಪಿಗಿಂತ ಕಡಿಮೆ ವೋಟು ಸರಾಸರಿಗಳು ದಕ್ಕುತ್ತಿರಲಿಲ್ಲ. ಕರ್ನಾಟಕದಲ್ಲಿ ಗೆದ್ದ ಬಿಜೆಪಿಯ ಅಭ್ಯರ್ಥಿಗಳು ಕನಿಷ್ಠ 90,000ದಿಂದ ಹೆಚ್ಚೂ ಕಡಿಮೆ 5 ಲಕ್ಷದಷ್ಟು ಅಂತರದಿಂದ ಗೆದ್ದಿದ್ದಾರೆ. ಪಕ್ಷವೊಂದರ ನಾಯಕರು ವಿರೋಧಿಗಳಿಂದಲೋ ಅಥವಾ ಇತರ ಸಾರ್ವಜನಿಕ ಕಾರಣಗಳಿಗೋ ಹತ್ಯೆಗೊಳಗಾದಾಗ ಹುಟ್ಟುವ ಅನುಕಂಪದ ಅಲೆಯನ್ನು ಹೊರತುಪಡಿಸಿದರೆ ಮಿಕ್ಕಂತೆ ಈ ಪರಿಯ ಗೆಲುವಿಗೆ ಕೇವ ಅದು ಒಂದು ಘಟನೆಯ ಸುತ್ತ ಹುಟ್ಟಿಕೊಳ್ಳುವ ದಿಢೀರ್ ಕಾರಣವಿರುವುದಿಲ್ಲ.

ವಾಸ್ತವವೇನೆಂದರೆ ಕೇವಲ ಪುಲ್ವಾಮವನ್ನು ಮಾತ್ರ ಕಾರಣವಾಗಿರಿಸಿಕೊಂಡರೆ ಅದಕ್ಕೆ ಮುಂಚೆ ಕಳೆದ ಐದು ವರ್ಷಗಳಲ್ಲಿ ನಡೆದ ಹಾಗೂ ಬಿಜೆಪಿ ಸೋತ ಯಾವುದೇ ಚುನಾವಣೆಗಳಲ್ಲೂ ಅದರ ವೋಟು ಶೇರು ಮಾತ್ರ ಕಡಿಮೆಯಾಗದಿರುವುದನ್ನೂ ನಾವು ಮರೆತುಬಿಡುತ್ತೇವೆ. ಆದ್ದರಿಂದಲೇ ಪುಲ್ವಾಮ ನಡೆಯದಿದ್ದರೂ ಬಿಜೆಪಿ ಅಲ್ಲದಿದ್ದರೂ ಎನ್‌ಡಿಎಯಂತೂ ಸರಳ ಬಹುಮತ ಪಡೆಯುವ ಸಾಧ್ಯತೆ ಇತ್ತೆಂಬುದನ್ನು ನಾವು ಮರೆಯುತ್ತೇವೆ. ಆದ್ದರಿಂದ ಇದಕ್ಕೆ ಕಾರಣ ಕೇವಲ ಪುಲ್ವಾಮ ಅಲ್ಲ. ಬದಲಿಗೆ ಕಳೆದ ಐದು ವರ್ಷಗಳಲ್ಲಿ ಭಾರತ ಅತಿ ವೇಗವಾಗಿ ಬಲಪಂಥೀಯತೆ ಎಡೆಗೆ ಜಾರಿರುವುದು. ಆದ್ದರಿಂದ 2014ಕ್ಕಿಂತ 2019ರ ಈ ಜನಾದೇಶ ಹೆಚ್ಚು ಹಿಂದುತ್ವದ ಪರವಾಗಿದೆಯೆಂಬುದು ನಾವು ಅರ್ಥಮಾಡಿಕೊಳ್ಳಬೇಕಿರುವ ಮೊದಲ ಪಾಠವಾಗಿದೆ.

ಸಂಘೀ ಭಯೋತ್ಪಾದಕರಿಗೆ ಹೆಚ್ಚಿದ ಜನಮನ್ನಣೆ: ಈ ಬಾರಿಯ ಜನಾದೇಶದಲ್ಲಿ ಮೇಲಿನ ಅಂಶವನ್ನು ಸಾಬೀತು ಪಡಿಸುವ ಮತ್ತೊಂದು ಅಂಶವಿದೆ. ಈ ಬಾರಿ ಸಂಘಪರಿವಾರವು ಚುನಾವಣೆಗೆ ಮುನ್ನ ಉದ್ದೇಶಪೂರ್ವಕವಾಗಿಯೇ ತನ್ನ ಅಂಗಸಂಸ್ಥೆಗಳಿಂದ ನಾಥೂರಾಮ್ ಗೋಡ್ಸೆ ಜಯಂತಿಗಳನ್ನು ಮಾಡಿಸಿತು. ಅದಕ್ಕೂ ಮುನ್ನ ಸಂವಿಧಾನವನ್ನು ಬದಲಾಯಿಸುವ, ಇಸ್ಲಾಮನ್ನು ಭಾರತದಿಂದ ಓಡಿಸುವಂತಹ ಮಾತುಗಳನ್ನು ತನ್ನ ಸಂಸದರಿಂದ ಆಡಿಸಿತು ಹಾಗೂ ಅಂತಿಮವಾಗಿ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್‌ರಂಥ ಪರಿವಾರದೊಳಗಿನ ತೀವ್ರಗಾಮಿಗಳನ್ನು ಚುನಾವಣಾ ಕಣಕ್ಕಿಳಿಸಿತು. ಇದರ ಹಿಂದಿದ್ದ ಉದ್ದೇಶ ಸ್ಪಷ್ಟ. ಯಾವುದನ್ನು ಬಿಜೆಪಿ ಈಗಲೇ ಹೇಳಲಾಗುವುದಿಲ್ಲವೋ ಅದನ್ನು ಅಂಚಿನವರ ಬಾಯಲ್ಲಿ ಆಡಿಸಿ ಸಾರ್ವಜನಿಕರ ಮಾನಸದಲ್ಲಿ ಈಬಗೆಯ ಸಂಘೀ ಭಯೋತ್ಪಾದನಾ ರಾಜಕೀಯಕ್ಕೆ ಮಾನ್ಯತೆ ದಕ್ಕಿಸಿಕೊಳ್ಳುವುದು ಮತ್ತು ಜನಪ್ರಿಯಗೊಳಿಸುವುದೇ ಅದರ ಉದ್ದೇಶವಾಗಿದೆ.

ಚುನಾವಣೆಗಳಲ್ಲಿ ಅದರ ಉದ್ದೇಶ ಸಫಲವಾಗಿದೆ. ಈ ಬಗೆಯ ನಂಜಿನ ಕೆಂಡದುಂಡೆ ಉಗುಳುವ ಸಾಕ್ಷೀ ಮಹಾರಾಜ್ ಉತ್ತರ ಪ್ರದೇಶದ ಉನ್ನಾವೊದಲ್ಲಿ 2014ರ ಚುನಾವಣೆಗಿಂತ ಮೂರು ಲಕ್ಷ ಹೆಚ್ಚಿನ ಮತಗಳೊದಿಗೆ ಆಯ್ಕೆಯಾಗಿದ್ದಾರೆ. ಭಯೋತ್ಪಾದನಾ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಮೂರು ಲಕ್ಷ ಬಹುಮತದಿಂದ ಭೂಪಾಲ್‌ನಿಂದ ಆಯ್ಕೆಯಾಗಿದ್ದಾರೆ. ಇನ್ನು ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತನೆಂದ, ಹಾಗೂ ಪದೇಪದೇ ಇಸ್ಲಾಮ್ ಧರ್ಮವೇ ಭಯೋತ್ಪಾದಕ ಧರ್ಮವೆಂದೂ, ಸಂವಿಧಾನವನ್ನು ಬದಲಿಸುವುದೇ ನಮ್ಮ ಉದ್ದೇಶವೆಂದು ಹೇಳುತ್ತಾ ಬಂದ ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡ ಕ್ಷೇತ್ರದಿಂದ ಕಳೆದ ಬಾರಿಗಿಂತ ಮೂರುವರೆ ಲಕ್ಷ ಹೆಚ್ಚು ವೋಟಿನಿಂದ ಅಂದರೆ ಒಟ್ಟಾರೆ 4,79,00ದಷ್ಟು ಅಧಿಕ ಮತಗಳಿಂದ ಆಯ್ಕೆಯಾಗಿದ್ದಾರೆ.

 ಹಾಗೆಯೇ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಮತ್ತು ಜಾತ್ಯತೀತ ಬಲೆಯಿಂದ ಹೊರಬರಬೇಕು ಎಂದು ಬಹಿರಂಗವಾಗಿ ಘೋಷಿಸಿದ್ದ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಲ್ಲಿ ದಿ. ಅನಂತ ಕುಮಾರ್ ಗೆಲ್ಲುತ್ತಿದ್ದಕ್ಕಿಂತ ಹೆಚ್ಚಿನ ಮತ (3,40,000)ಗಳೊಂದಿಗೆ ಗೆದ್ದಿದ್ದಾರೆ. ಮತ್ತೊಬ್ಬ ಉಗ್ರಗಾಮಿ ಭಾಷಣಕಾರ ಸಂಸದ ನಳಿನ್ ಕುಮಾರ್ ಕಟೀಲುರನ್ನು ಮಂಗಳೂರು ಕ್ಷೇತ್ರದ ಯಾವ ಅಭಿವೃದ್ಧಿಯನ್ನು ಮಾಡದಿದ್ದರೂ ಪ್ರತಿನಿತ್ಯ ಮುಸ್ಲಿಂ ದ್ವೇಷ ಉಗುಳುವ ಅರ್ಹತೆ ಇದ್ದ ಕಾರಣಕ್ಕೆ ಕಳೆದ ಸಲಕ್ಕಿಂತ ಒಂದೂವರೆ ಲಕ್ಷ ಹೆಚ್ಚು ಬಹುಮತದೊಂದಿಗೆ ಜನರು ಆಯ್ಕೆ ಮಾಡಿದ್ದಾರೆ.

ಇದರ ತಾತ್ಪರ್ಯವೂ ಇಷ್ಟೆ. ಹಿಂದುತ್ವವಾದಿ ಸಿದ್ಧಾಂತಕ್ಕೆ ಮತ್ತು ಅದರ ಭಯೋತ್ಪಾದಕ ಆಯಾಮಕ್ಕೂ ಜನರ ಸಮ್ಮತಿಯನ್ನು ದಕ್ಕಿಸಿಕೊಳ್ಳುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ. ಇದು ಕೇವಲ ಪುಲ್ವಾಮ ನಂತರದಲ್ಲಿ ಹುಟ್ಟಿ ಬೆಳೆದದ್ದಲ್ಲ. ಇದು ದೀರ್ಘಕಾಲೀನ ತಯಾರಿ, ಸಂಘಟನೆ, ಪ್ರಚಾರ ಮತ್ತು ಆಕ್ರಮಣಗಳ ಪರಿಣಾಮ. ಚುನಾವಣಾ ರಂಗವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದು ಈ ತಯಾರಿಗಳ ಮಟ್ಟಕ್ಕೆ ಅನುಗುಣವಾಗಿಯೇ ಹೊರತು ಚುನಾವಣೆಗೆ ಅವರು ಇತರ ತಯಾರಿಗಳಿಗಿಂತ ಹೆಚ್ಚಿನ ಒತ್ತನ್ನೂ ಕೊಟ್ಟಿರಲಿಲ್ಲ. ಹೀಗಾಗಿ ಅದರ ವಿರುದ್ಧದ ಪ್ರಜಾತಾಂತ್ರಿಕ ವಿರೋಧವೂ ಅಷ್ಟೇ ದೀರ್ಘಕಾಲೀನ ಹಾಗೂ ಕಟಿಬದ್ಧವಾಗಿರಬೇಕಿರುತ್ತದೆ. ಕೇವಲ ಚುನಾವಣಾ ರಂಗಕ್ಕೆ ಸೀಮಿತವಾಗಿಯಲ್ಲ.

ಅಧಿಕಾರದ ಮಾನ್ಯತೆ ಹಾಗೂ ಭಿನ್ನಮತ ಹಾಗೂ ರಾಜಕೀಯ ವಿರೋಧದ ಅಮಾನ್ಯತೆ: ಈ ಚುನಾವಣೆಯಲ್ಲಿ ಸಂಭವಿಸಿರುವ ಮತ್ತೊಂದು ಆಘಾತಕಾರಿ ಬೆಳವಣಿಗೆಯೆಂದರೆ ರಾಜಕೀಯ ವಿರೋಧದ ಅಮಾನ್ಯತೆ. ಈ ದೇಶಕ್ಕೆ ಸರ್ವಾಧಿಕಾರ ಹೊಸದಲ್ಲ. ಇಂದಿರಾಗಾಂಧಿಯ ಸರ್ವಾಧಿಕಾರದ ಸಮಯದಲ್ಲಿ ಅವರ ಅಧಿಕಾರವು ಜನರ ನೈತಿಕ ದೃಷ್ಟಿಯಲ್ಲಿ ಅಮಾನ್ಯವಾಗಿತ್ತು. ಆದರೆ ಅಧಿಕಾರ ಬಲವಿಲ್ಲದಿದ್ದರೂ ಪ್ರತಿರೋಧವು ಜನಮಾನ್ಯವಾಗಿತ್ತು. ಇದಕ್ಕೆ ಆಗಿನ ಜನಮಾನಸದಲ್ಲಿ ಇದ್ದ ಸಾರ್ವಜನಿಕ ಮೌಲ್ಯಗಳು ಸಹ ಒಂದು ಕಾರಣ.

ಆದರೆ ಮೋದಿ ಸರಕಾರದಲ್ಲಿ ಕಳೆದ ಐದು ವರ್ಷಗಳಲ್ಲಿ ಇಂದಿರಾಗಾಂಧಿ ಕಾಲಕ್ಕಿಂತಲೂ ಹೆಚ್ಚಿನ ಸರ್ವಾಧಿಕಾರ ನಡೆಯುತ್ತಿದ್ದರೂ ಅಧಿಕಾರ ಅಮಾನ್ಯವಾಗದೆ ವಿರೋಧ ಹಾಗೂ ಭಿನ್ನಮತಗಳಿಗೆ ‘ದೇಶದ್ರೋಹಿ’, ‘ಪಾಕಿಸ್ತಾನ ಪರ’, ‘ಅಭಿವೃದ್ಧಿ ವಿರೋಧಿ’ ಎಂಬ ಹಣೆಪಟ್ಟಿಯನ್ನು ಕಟ್ಟಿ ಅದನ್ನು ವಿಸ್ತೃತವಾಗಿ ಪ್ರಚಾರ ಮಾಡಿ ಮಾನ್ಯಗೊಳಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬಹುಪಾಲು ಮಾಧ್ಯಮಗಳು ಪ್ರಧಾನಿಯನ್ನು ಪ್ರಶ್ನಿಸುವುದಕ್ಕಿಂತ ವಿರೋಧಿಗಳ ಮೀಡಿಯಾ ಟ್ರಯಲ್ ನಡೆಸುತ್ತಿದ್ದುದ್ದು ಇದಕ್ಕೆ ಒಂದು ರೂಪಕವಾಗಿತ್ತಷ್ಟೆ. ಈ ಕಾರಣದಿಂದಲೂ ಜನಮಾನಸದಲ್ಲಿ ಮೋದಿಯೊಬ್ಬರೇ ಏಕೈಕ ದೇಶರಕ್ಷಕನೆಂಬ ಹಾಗೂ ಉಳಿದ ಎಲ್ಲರೂ ದೇಶಕ್ಕೆ ಆಪತ್ತೆಂಬ ಭಾವನೆಯನ್ನು ಬಿತ್ತುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಭಾರತಕ್ಕೆ ನೆರೆಹೊರೆಯ ದೇಶಗಳಿಂದ ಆಪತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಪ್ರಬಲ ನಾಯಕನ ಅಗತ್ಯವಿರುವಾಗ ಪ್ರಧಾನಿಯನ್ನು ಪ್ರಶ್ನೆ ಮಾಡುವುದು ದೇಶದ್ರೋಹಕ್ಕೆ ಸಮ ಎಂಬ ಅಭಿಪ್ರಾಯವನ್ನು ಬಿತ್ತುವಲ್ಲಿ ಸಂಘಪರಿವಾರದ ಸಾಕು ಮಾಧ್ಯಮಗಳು ಯಶಸ್ವಿಯಾಯಿತು. ಹೀಗಾಗಿ ದೇಶವೆಂದರೆ ಮೋದಿ, ಮೋದಿಯೆಂದರೆ ದೇಶವೆಂಬ ಪ್ರಚಾರ ಮೋದಿಯ ವಿರೋಧವನ್ನೆಲ್ಲಾ ಜನರ ಕಣ್ಣೆದುರು ಅಮಾನ್ಯಗೊಳಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಯಿತೆಂದೇ ಹೇಳಬೇಕು.

ಬಿಜೆಪಿಯ ವಿರುದ್ಧ ಕರ್ನಾಟಕದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ರಚಿಸಿಕೊಳ್ಳಲಾದ ಮೈತ್ರಿಕೂಟಗಳು ಹೀನಾಯವಾಗಿ ವಿಫಲಗೊಳ್ಳಲು ಈ ಬಗೆಯ ರಿವರ್ಸ್ ಪೊಲಾರೈಸೇಷನ್ ಕೂಡಾ ಒಂದು ಕಾರಣವಾಯಿತು. ಬಿಜೆಪಿಯ ವಿರುದ್ಧದ ಮತಗಳು ಧ್ರುವೀಕರಣಗೊಳ್ಳುವ ಬದಲು ಮೈತ್ರಿಕೂಟದ ಪಕ್ಷಗಳ ವಿರುದ್ಧದ ಮತಗಳು ಬಿಜೆಪಿಯ ಪರವಾಗಿ ಧ್ರುವೀಕರಣಗೊಂಡಿದ್ದಂತೂ ಸತ್ಯ. ಕನಿಷ್ಠ ಪಕ್ಷ ಕರ್ನಾಟಕದಲ್ಲಂತೂ ಬಿಜೆಪಿ ವಿರೋಧಿ ಮೈತ್ರಿಕೂಟಕ್ಕಿಂತ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರೋಧಿ ಹಾಗೂ ಜೆಡಿಎಸ್ ವಿರೋಧಿ ಮೈತ್ರಿಕೂಟಗಳೇ ಯಶಸ್ವಿಯಾಗಿ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿದೆ. ಈ ಹೊಸ ಸಂಕೀರ್ಣ ಸಂದರ್ಭದಲ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿ ವಿರೋಧಿ ಮತಗಳೆನ್ನೆಲ್ಲಾ ಗುಡ್ಡೆ ಹಾಕಬೇಕೆಂಬ ಮೈತ್ರಿಕೂಟ ರಾಜಕಾರಣದ ವೈಫಲ್ಯದಿಂದ ಹೊಸ ಪಾಠವನ್ನು ಕಲಿಯಬೇಕಿದೆ. ಕ್ರೌರ್ಯ ಮತ್ತು ಅಧಿಕಾರಗಳನ್ನು ನೈತಿಕವಾಗಿ ಮತ್ತು ರಾಜಕೀಯವಾಗಿ ಅಮಾನ್ಯಗೊಳಿಸದೆ ಈ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ.

ಅದಾಗಬೇಕೆಂದರೆ ಫ್ಯಾಶಿಸ್ಟ್ ವಿರೋಧಿ ಪ್ರತಿರೋಧಗಳು ನೈತಿಕವಾಗಿ ಮತ್ತು ರಾಜಕೀಯವಾಗಿ ಮಾನ್ಯವಾಗಬೇಕು. ಇದನ್ನು ಔಟ್‌ಸೋರ್ಸ್ ಮಾಡಲೂ ಆಗುವುದಿಲ್ಲ. ಶಾರ್ಟ್ ಕಟ್ ಕೂಡಾ ಇರುವುದಿಲ್ಲ. ಫ್ಯಾಶಿಸ್ಟ್ ವಿರೋಧಿ ರಾಜಕೀಯದ ಬಗ್ಗೆ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದ ಕೇವಲ ಅಧಿಕಾರದ ಕಾರಣಕ್ಕಾಗಿ ಬಿಜೆಪಿಯನ್ನು ರಾಜಕೀಯವಾಗಿ ಮಾತ್ರ ವಿರೋಧಿಸುವ ಶಕ್ತಿಗಳನ್ನು ಅವಲಂಬಿಸುವುದರಿಂದ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಅಮಾನ್ಯರಾಗುವ ಅಪಾಯ ಹೆಚ್ಚಿದೆ. ಅಲ್ಲದೆ ಇದಕ್ಕೊಂದು ಇಪ್ಪತ್ತು ವರ್ಷಗಳ ಸುದೀರ್ಘ ದೂರದೃಷ್ಟಿಯಿಲ್ಲದೆ ಬೆಂಕಿಬಿದ್ದಾಗ ಬಾವಿ ತೋಡುವ ಅವಸರಗಳು ಚಳವಳಿಗಳಿಗೆ ಖೆಡ್ಡಾ ಆಗಿಬಿಡುವ ಸಾಧ್ಯತೆ ಹೆಚ್ಚು. ಇದು ಕಳೆದ ಐದು ವರ್ಷಗಳು ಮತ್ತು ಈ ಚುನಾವಣೆ ಫ್ಯಾಶಿಸ್ಟ್ ವಿರೋಧಿ ರಾಜಕೀಯಕ್ಕೂ ಕಲಿಸುವ ತುಂಬಾ ಮುಖ್ಯವಾದ ಪಾಠ. ಈ ಪ್ರಮುಖ ಪಾಠಗಳ ಹಿನ್ನೆಲೆಯಲ್ಲಿ ಭಾರತವನ್ನು ಫ್ಯಾಶಿಸಂನಿಂದ ಉಳಿಸಲು ಪ್ರಜಾತಂತ್ರವಾದಿಗಳು ಮುಂದೇನು ಮಾಡಬೇಕು? ಭಾರತದ ಫ್ಯಾಶಿಸಂ ಅನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಅದರ ವಿರುದ್ಧ ಹೋರಾಟದ ಸ್ವರೂಪವೇನು? ಈ ಬಗ್ಗೆ ಸುದೀರ್ಘವಾದ ಚರ್ಚೆಯ ಅಗತ್ಯವಂತೂ ತುರ್ತಾಗಿದೆ. ಅದನ್ನು ಆಶಿಸುತ್ತಾ ಈ ಪ್ರಬಂದ್ಯ (ಪ್ರಬಂಧ+ಪದ್ಯ= ಪ್ರಬಂದ್ಯ!) ಫ್ಯಾಶಿಸಂ ಎಂದರೆ

ಫ್ಯಾಶಿಸಂ ಎಂದರೆ

ಅಮಾಯಕರ ಹತ್ಯೆ ಮಾತ್ರವಲ್ಲ ಉಳಿದವರ ಗೂಢ-ಕೊಲೆಗಡುಕ ಮೌನ

ಫ್ಯಾಶಿಸಂ ಎಂದರೆ
ಬಲಾತ್ಕಾರಗಳು ಮಾತ್ರವಲ್ಲ


ನಿಟ್ಟುಸಿರುಗಳೇ ಪರಾಕು ಗೀತೆಯಾಗುವ ಪಾಷಂಡಿಕೆ ಫ್ಯಾಶಿ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ