ದಕ್ಷಿಣ ಚೀನಾ ಸಮುದ್ರದಲ್ಲಿ ಆಸ್ಟ್ರೇಲಿಯ ಹೆಲಿಕಾಪ್ಟರ್‌ಗಳ ಮೇಲೆ ಲೇಸರ್ ಬೆಳಕು
ಸಿಡ್ನಿ, ಮೇ 29: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದ ಮೇಲಿನಿಂದ ಹಾರಾಟ ನಡೆಸುತ್ತಿದ್ದ ವೇಳೆ ಆಸ್ಟ್ರೇಲಿಯ ನೌಕಾಪಡೆಯ ಹೆಲಿಕಾಪ್ಟರ್‌ಗಳಿಗೆ ಲೇಸರ್ ಬೆಳಕನ್ನು ಹಾಯಿಸಲಾಗಿತ್ತು ಎಂಬುದಾಗಿ ಆಸ್ಟ್ರೇಲಿಯ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ (ಎಬಿಸಿ) ವರದಿ ಮಾಡಿದೆ.
ಚೀನಾದ ಅನಧಿಕೃತ ಹೋರಾಟ ಹಡಗುಗಳು ಈ ದಾಳಿಗಳನ್ನು ನಡೆಸಿವೆ ಎಂಬುದಾಗಿ ಭಾವಿಸಲಾಗಿದೆ.
ಇಡೀ ದಕ್ಷಿಣ ಚೀನಾ ಸಮುದ್ರ ತನ್ನದು ಎಂಬುದಾಗಿ ಚೀನಾ ಹೇಳುತ್ತಿದೆ. ಅದೇ ವೇಳೆ, ಆಗ್ನೇಯ ಏಶ್ಯದ ಹಲವು ದೇಶಗಳು ಹಾಗೂ ಆಸ್ಟ್ರೇಲಿಯ ಮತ್ತು ಅಮೆರಿಕಗಳು ಅದರ ಮೇಲೆ ಹಕ್ಕು ಸಾಧಿಸುತ್ತಿವೆ. ಹಾಗಾಗಿ, ಈ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ.
ರಾತ್ರಿ ಸಮಯದಲ್ಲಿ ಹಾರಾಟ ನಡೆಸುತ್ತಿದ ಹೆಲಿಕಾಪ್ಟರ್‌ಗಳ ಮೇಲೆ ಲೇಸರ್ ಬೆಳಕನ್ನು ಹಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪೈಲಟ್‌ಗಳು ವೈದ್ಯಕೀಯ ತಪಾಸಣೆಗಾಗಿ ಅರ್ಧದಲ್ಲೇ ತಮ್ಮ ನೌಕೆಗಳಿಗೆ ವಾಪಸಾಗಿದ್ದಾರೆ ಎಂದು ರಕ್ಷಣಾ ಮೂಲಗಳು ಎಬಿಸಿಗೆ ತಿಳಿಸಿವೆ.
ಆಸ್ಟ್ರೇಲಿಯದ ಯುದ್ಧನೌಕೆಗಳು ಏಶ್ಯದಲ್ಲಿ ತಿಂಗಳುಗಳ ಅವಧಿಯ ಕಾರ್ಯಕ್ರಮಗಳನ್ನು ಹೊಂದಿದ್ದವು. ಅದರ ಕಾರ್ಯಕ್ರಮಗಳು ಈ ವಾರ ಮುಕ್ತಾಯಗೊಂಡಿವೆ.