2021ಕ್ಕೆ ಸಂವಿಧಾನ ಬದಲಾಗುವುದೇ?

Update: 2019-05-31 18:30 GMT

ಆದರೆ ಸಂವಿಧಾನ ಬದಲಾವಣೆಯನ್ನೇ ಮಾಡಿಬಿಟ್ಟಲ್ಲಿ ಉಂಟಾಗಬಹುದಾದ ರಾಜಕೀಯ-ಸಾಮಾಜಿಕ ಸಂಕ್ಷೋಭೆಯನ್ನು ನಿಯಂತ್ರಿಸಬಹುದೇ ಎನ್ನುವ ಏಕೈಕ ಲೆಕ್ಕಾಚಾರವು ಮಾತ್ರ ಅಂತಹ ನಿರ್ಧಾರಗಳ ಮೇಲೆ ಪ್ರಭಾವಿಸಬಹುದೇ ವಿನಾ ಬೇರೆ ಯಾವ ಸಾಂಸ್ಥಿಕ ಅಡೆತಡೆಗಳೂ ಇಂದು ಸಂಘಪರಿವಾರಕ್ಕಿಲ್ಲ.


ಮೋದಿ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೇರುತ್ತಿರುವ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳು ಮುಸ್ಲಿಮರಿಗೆ-ದಲಿತರಿಗೆ-ರಾಜಕೀಯ ಭಿನ್ನಮತೀಯರಿಗೆೆ ಹೇಗಿರಬಹುದೆಂಬ ಝಲಕುಗಳು ಈಗಾಗಲೇ ದಿನನಿತ್ಯ ವರದಿಯಾಗುತ್ತಿದೆ. ಇದರ ಜೊತೆಗೆ ಬಿಜೆಪಿಯ ಈ ಬಾರಿಯ ವಿಜಯದ ಅಪಾಯಕಾರಿ ಮತ್ತು ವಿರಾಟ್ ಸ್ವರೂಪವೂ ನಿಧಾನಕ್ಕೆ ಅರ್ಥವಾಗುತ್ತಿದೆ.

ಹಾಗೆ ನೋಡಿದರೆ 2019ರ ನಿಜವಾದ ಪಾಠವಿರುವುದು ಬಿಜೆಪಿಯ ಗೆಲುವಿಗಿಂತ ವಿರೋಧ ಪಕ್ಷಗಳು ನೆಲಕಚ್ಚಿರುವ ರೀತಿಯಲ್ಲಿ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ 17 ರಾಜ್ಯಗಳಲ್ಲಿ ಒಂದೂ ಸೀಟು ಬರಲಿಲ್ಲ. ಆದರೆ ಬಿಜೆಪಿಯು ದಿಲ್ಲಿ, ಹರ್ಯಾಣ, ಗುಜರಾತ್, ಹಿಮಾಚಲ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಅಷ್ಟೂ ಕ್ಷೇತ್ರಗಳನ್ನೂ ಗೆದ್ದಿದ್ದರೆ ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ವಿರೋಧಿಗಳಿಗೆ ಬಿಟ್ಟುಕೊಟ್ಟಿರುವುದು ಒಂದೊಂದು ಸೀಟುಗಳನ್ನು ಮಾತ್ರ. ಡಿಎಂಕೆ, ಟಿಎಂಸಿ ಮತ್ತು ಆಂಧ್ರದ ಜಗನ್ ರೆಡ್ಡಿಯ ವೈಎಸ್‌ಆರ್‌ಸಿ ಪಕ್ಷಗಳನ್ನು ಬಿಟ್ಟರೆ ಎಸ್ಪಿ, ಬಿಎಸ್ಪಿ, ಜೆಡಿಎಸ್ ಹಾಗೂ ಎಲ್ಲಾ ಎಡಪಕ್ಷಗಳನ್ನೂ ಒಳಗೊಂಡಂತೆ ಬೇರೆ ಯಾವ ಪಕ್ಷಗಳೂ ಸಹ 2014ಕ್ಕಿಂತ ಹೆಚ್ಚಿನ ವೋಟುಗಳನ್ನು ಪಡೆದುಕೊಂಡಿಲ್ಲ. ಈ ಎಲ್ಲದರ ಸಾರವಿಷ್ಟೆ. ಬಿಜೆಪಿಯು ದೇಶದ ಎಲ್ಲಾ ಪಕ್ಷಗಳಿಗಿಂತ 2014ಕ್ಕಿಂತಲೂ ಹೆಚ್ಚಿನ ಜನಬೆಂಬಲವನ್ನು ಪಡೆದುಕೊಂಡಿದೆ. ಮತ್ತದು ದಿನೇದಿನೇ ದೃಢಗೊಳ್ಳುತ್ತಿದೆ. ಎದುರಿಲ್ಲದಂತೆ ವಿಸ್ತಾರಗೊಳ್ಳುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ರಾಷ್ಟ್ರದ ಅಜೆಂಡಾವನ್ನು ಮುಂದಿಟ್ಟುಕೊಂಡೇ ಈ ಬಾರಿ ಬಿಜೆಪಿಯು ಈ ಬಹುಮತವನ್ನು ಗಳಿಸಿಕೊಂಡಿದೆ. ಸಂಸದೀಯ ಪದ್ಧತಿಯ ಮೂಲಕವೇ ಸಂಸತ್ತನ್ನು ನಾಶ ಮಾಡಬಹುದಾದ ಎಲ್ಲಾ ಶಾಸನಬದ್ಧ ಅಧಿಕಾರವನ್ನು ಬಿಜೆಪಿ ಸಂಚಯಿಸಿಕೊಳ್ಳುತ್ತಿದೆ. ಕಳೆದ ಬಾರಿ ಅಧಿಕಾರಕ್ಕೆ ಬಂದಾಗಲೇ ಬಿಜೆಪಿ ಮತ್ತು ಅರೆಸ್ಸೆಸ್‌ಗಳು ರಾಷ್ಟ್ರಪತಿ ಭವನ, ಚುನಾವಣಾ ಆಯೋಗ, ಸಿಬಿಐ, ಆರ್‌ಬಿಐ, ಆರ್‌ಟಿಐ, ಪೊಲೀಸು-ಸೈನ್ಯ ಇತ್ಯಾದಿ ಸಂಸ್ಥೆಗಳನ್ನು ಸಾಕಷ್ಟು ಕೇಸರೀಕರಿಸಿತ್ತು. ಮಾಧ್ಯಮಗಳಂತೂ ಬಗ್ಗೂ ಎನ್ನುವ ಮೊದಲೇ ತೆವಳಲು ಪ್ರಾರಂಭಿಸಿವೆ. ಇದ್ದಿದ್ದರಲ್ಲಿ ಭಾರತದ ಸಾಂವಿಧಾನಿಕ ಸಂಸ್ಥೆಗಳಲ್ಲಿ ನ್ಯಾಯಾಂಗ ಮತ್ತು ಸಂಸತ್ತು ಇನ್ನೂ ಅದು ಬಯಸುವಷ್ಟು ಕೇಸರೀಕರಣಗೊಂಡಿರಲಿಲ್ಲ. ಆದರೆ ಈ ಬಾರಿ ಅದು ಪಡೆದಿರುವ ಬಹುಮತ ಮತ್ತು ಐದು ವರ್ಷಗಳ ಎಣೆಯಿಲ್ಲದ ಅಧಿಕಾರಗಳು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಡ್ಡಿಯಿದ್ದ ಅಳಿದುಳಿದ ಸಂಸದೀಯ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಲಿದೆ.

ರಾಜ್ಯಸಭೆಯ ಬಹುಮತಕ್ಕಿನ್ನು ಎರಡು ಹೆಜ್ಜೆಗಳು:

ಭಾರತದ ಸಂಸದೀಯ ಪದ್ಧತಿಯಲ್ಲಿ ಚುನಾಯಿತ ಸಂಸತ್ತು ಭಾರತದ ಜನತೆಯ ಪರವಾಗಿ ಯಾವುದೇ ಶಾಸನ ಮಾಡುವ ಪರಮಾಧಿಕಾರ ಹೊಂದಿದೆ. ಕೇಂದ್ರದಲ್ಲಿ ಸರಕಾರ ರಚಿಸುವ ಪಕ್ಷಕ್ಕೆ ಲೋಕಸಭೆಯಲ್ಲಿ ಬಹುಮತ ಬಂದರೆ ಸಾಕು. ಆದರೆ ಕೇಂದ್ರ ಸರಕಾರ ಜಾರಿ ಮಾಡಬಯಸುವ ಮಸೂದೆಗಳಿಗೆ ಮಾತ್ರ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಬಹುಮತ ದೊರೆಯಬೇಕು. ಹಣಕಾಸು ಮಸೂದೆಯೊಂದನ್ನು ಹೊರತುಪಡಿಸಿ. ಲೋಕಸಭೆಯ ಸದಸ್ಯರನ್ನು ಜನರು ಸಾರ್ವತ್ರಿಕ ಚುನಾವಣೆಗಳ ಮೂಲಕ ಆಯ್ಕೆ ಮಾಡಿದರೆ ರಾಜ್ಯಗಳ ಪ್ರಾತಿನಿಧಿಕ ಪರಿಷತ್ತಾಗಿರುವ ರಾಜ್ಯಸಭೆಯ ಸದಸ್ಯರುಗಳನ್ನು ಆಯಾ ರಾಜ್ಯಗಳ ವಿಧಾನ ಸಭೆಗಳ ಸದಸ್ಯರು ಆಯ್ಕೆ ಮಾಡುತ್ತಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಅಧಿಕಾರರೂಢ ಸರಕಾರಕ್ಕೆ ಕನಿಷ್ಠ ಪಕ್ಷ 272 ಸದಸ್ಯರ ಬೆಂಬಲ ಇದ್ದೇ ಇರಬೇಕಾದ್ದರಿಂದ ಆಳುವ ಸರಕಾರ ಜಾರಿ ಮಾಡಬಯಸುವ ಮಸೂದೆಗಳು ಲೋಕಸಭೆಯಲ್ಲಿ ಸುಲಭವಾಗಿ ಅನುಮೋದನೆಗೊಳ್ಳುತ್ತವೆ. ಆದರೆ 250 ಸದಸ್ಯ ಬಲದ ರಾಜ್ಯ ಸಭೆಯು ಪ್ರಧಾನವಾಗಿ ವಿವಿಧ ರಾಜ್ಯಗಳ ಪ್ರತಿನಿಧಿಗಳ ಪರಿಷತ್ತಾಗಿರುವುದರಿಂದ ಆಳುವ ಪಕ್ಷಕ್ಕೆ ದೇಶದ ಬಹುಪಾಲು ರಾಜ್ಯಗಳಲ್ಲಿ ಬೆಂಬಲವಿಲ್ಲದಿದ್ದರೆ ರಾಜ್ಯಸಭೆಯಲ್ಲಿ ಬಹುಮತ ದೊರೆಯುವುದು ಕಷ್ಟ.

ವಾಸ್ತವವಾಗಿ 1984ರಿಂದಾಚೆಗೆ ಇಲ್ಲಿಯವರೆಗೆ ಕೇಂದ್ರವನ್ನು ಆಳಿದ ಯಾವುದೇ ಪಕ್ಷಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಬಹುಮತ ದಕ್ಕಿಲ್ಲ. ಹಾಗೆ ನೋಡಿದರೆ 1984ರಿಂದ 2014ರ ತನಕ ಯಾವುದೇ ಒಂದು ಪಕ್ಷಕ್ಕೆ ಲೋಕಸಭೆಯಲ್ಲಿ ಸಹ ಬಹುಮತ ದಕ್ಕಿರಲಿಲ್ಲ. ಆದರೆ 1984ರ ನಂತರ ಪ್ರಥಮ ಬಾರಿಗೆ 2014ರ ಚುನಾವಣೆಯಲ್ಲಿ 282 ಸೀಟುಗಳನ್ನು ಪಡೆದ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ದೊರೆಯಿತು. ನಂತರ ಬಿಜೆಪಿಯು ಸತತವಾಗಿ ಹಲವಾರು ರಾಜ್ಯಗಳನ್ನು ಗೆಲ್ಲುತ್ತಲೇ ಬಂದಿರುವುದರಿಂದ ಮತ್ತು ಸೋತ ರಾಜ್ಯಗಳಲ್ಲೂ ಹಿಂದಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿರುವುದರಿಂದ 2018ರ ನಂತರ ರಾಜ್ಯಸಭೆಯಲ್ಲೂ ಸಹ ಮೊತ್ತಮೊದಲ ಬಾರಿಗೆ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿತು. ಇಂದು ರಾಜ್ಯಸಭೆಯಲ್ಲಿರುವ ಹಾಲಿ 245 ಸ್ಥಾನಗಳಲ್ಲಿ ಬಿಜೆಪಿಯು 71 ಸ್ಥಾನಗಳನ್ನು ಮತ್ತು ಅದರ ಮಿತ್ರ ಪಕ್ಷಗಳು 31 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅಂದರೆ ಒಟ್ಟು ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ರಾಜ್ಯಸಭೆಯಲ್ಲಿ 102 ಸ್ಥಾನಗಳ ಬಲವಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ಗೆ ರಾಜ್ಯಸಭೆಯಲ್ಲಿ 50 ಸ್ಥಾನಗಳಿದ್ದು ಅದರ ಮಿತ್ರ ಪಕ್ಷಗಳ ಸ್ಥಾನಗಳನ್ನು ಸೇರಿಸಿ ಒಟ್ಟು ಯುಪಿಎ ಕೂಟಕ್ಕೆ ರಾಜ್ಯಸಭೆಯಲ್ಲಿ 66 ಸ್ಥಾನ ಬಲವಿದೆ.

ಯುಪಿಎ ಮತ್ತು ಎನ್‌ಡಿಎ ಎರಡೂ ಕೂಟಗಳಿಗೂ ಸೇರದ ಎಸ್ಪಿ, ಬಿಎಸ್ಪಿ, ಬಿಜೆಡಿ, ಎಡಪಕ್ಷಗಳು, ಟಿಎಂಸಿಯಂತಹ ಪಕ್ಷಗಳಿಗೆಲ್ಲಾ ಒಟ್ಟು ಸೇರಿ 70ಕ್ಕೂ ಹೆಚ್ಚು ಸ್ಥಾನಬಲವಿದೆ. ಇನ್ನು 12 ಸದಸ್ಯರನ್ನು ರಾಷ್ಟ್ರಪತಿಗಳಿಂದ ನೇಮಕಗೊಂಡ ‘ಪಕ್ಷಾತೀತ’ರಾದ ಸಮಾಜದ ವಿವಿಧ ಕ್ಷೇತ್ರಗಳ ‘ಗಣ್ಯರು’. ಆದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನೇಮಕಾತಿ ಸದಸ್ಯರೆಲ್ಲಾ 2018ರಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿಬಿಟ್ಟಿದ್ದಾರೆ! ಆದರೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಈವರೆಗೆ ರಾಜ್ಯಸಭೆಯಲ್ಲಿ ಬಹುಮತಕ್ಕೆ ಬೇಕಿರುವ 124 ಸ್ಥಾನಬಲ ಗಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಅದು ಪಡೆದುಕೊಂಡಿರುವ ಜನಬೆಂಬಲವನ್ನು ನೋಡಿದರೆ ಈ ವರ್ಷ ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್‌ಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲೂ ಅದು ಬಹುಮತವನ್ನು ಪಡೆಯುವುದಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ. ಅದರಲ್ಲಿ ಜಾರ್ಖಂಡ್ ಮತ್ತು ಹರ್ಯಾಣಗಳಲ್ಲಂತೂ ಬಿಜೆಪಿ ಶೇ.66ಕ್ಕಿಂತ ಜಾಸ್ತಿ ಮತಗಳನ್ನೇ ಪಡೆದುಕೊಂಡಿದೆ. ಇದಲ್ಲದೆ 2020ಕ್ಕೆ ರಾಜ್ಯಸಭೆಯಿಂದ 72 ಸದಸ್ಯರು ನಿವೃತ್ತರಾಗಲಿದ್ದಾರೆ. ಅವರಲ್ಲಿ ಬಹುಪಾಲು ಸದಸ್ಯರು ಉತ್ತರಪ್ರದೇಶ, ಅಸ್ಸಾಂ, ಪ.ಬಂಗಾಳ ಇನ್ನಿತರ ರಾಜ್ಯಗಳಿಂದ ಆಯ್ಕೆಯಾದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಮತ್ತು ಎಡಪಕ್ಷಗಳಿಗೆ ಸೇರಿದವರಾಗಿದ್ದಾರೆ.

ಉತ್ತರ ಪ್ರದೇಶ, ಪ.ಬಂಗಾಳ ಹಾಗೂ ಇತರ ಹಲವಾರು ರಾಜ್ಯಗಳ ವಿಧಾನ ಸಭೆಗಳಲ್ಲಿ ಈ ಪಕ್ಷಗಳ ಸ್ಥಾನಬಲ ಕುಸಿದಿರುವುದರಿಂದ ಆ ಪಕ್ಷದ ಶೇ.80 ಸದಸ್ಯರು ಪುನರಾಯ್ಕೆಯಾಗುವುದಿಲ್ಲ. ಅವುಗಳಲ್ಲಿ ಬಹುಪಾಲು ಬಿಜೆಪಿಗೇ ದಕ್ಕಲಿದೆ. ಉದಾಹರಣೆಗೆ ಉತ್ತರ ಪ್ರದೇಶದ ಶಾಸನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಬೃಹತ್ ಸೀಟುಬಲದಿಂದಾಗಿ ಅಲ್ಲಿ 2020ರಲ್ಲಿ ಖಾಲಿಯಾಗುವ 10 ರಾಜ್ಯಸಭಾ ಸೀಟುಗಳಲ್ಲಿ 9 ಸೀಟುಗಳು ಬಿಜೆಪಿಗೆ ದಕ್ಕಲಿದೆ ಹಾಗೂ 2020ರಲ್ಲಿ ಬಿಹಾರದಲ್ಲೂ ಚುನಾವಣೆ ನಡೆಯಲಿದ್ದು ಈಗಿನ ಲಹರಿಯೇ ಮುಂದುವರಿದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಸಿಕ್ಕುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಏನಿಲ್ಲವೆಂದರೂ ಈಗಾಗಲೇ ಹಲವಾರು ವಿಧಾನಸಭೆಗಳಲ್ಲಿ ಬಿಜೆಪಿಗಿರುವ ಶಾಸಕರ ಬಲವನ್ನು ಆಧರಿಸಿಯೇ 2021ಕ್ಕೆ ಬಿಜೆಪಿಗೆ ರಾಜ್ಯಸಭೆಯಲ್ಲೂ ಬಹುಮತ ಪಡೆಯಲು ಅಗತ್ಯವಿರುವ 124 ಸ್ಥಾನಗಳು ಲಭ್ಯವಾಗಲಿದೆ. ಅಂದರೆ 2021ಕ್ಕೆ ಬಿಜೆಪಿಯು ಲೋಕಸಭೆ ಮತ್ತು ವಿಧಾನಸಭೆಗಳೆರಡರಲ್ಲೂ ಬಹುಮತಗಳನ್ನು ಪಡೆಯಲಿದೆ.

ಸುಲಭವಾಗಲಿರುವ ‘ಸಂವಿಧಾನ ತಿದ್ದುಪಡಿಗಳು’: 

ಎರಡೂ ಸದನಗಳಲ್ಲೂ ಬಿಜೆಪಿಗೆ ಬಹುಮತ ದೊರೆಯುವುದರಿಂದ ಬಿಜೆಪಿಯಂತಹ ಕಾರ್ಪೊರೇಟ್ ಮತ್ತು ಮನುವಾದಿ ಪಕ್ಷಕ್ಕೆ ದೇಶವನ್ನು ಶಾಸನಬದ್ಧವಾಗಿಯೇ ಕಾರ್ಪೊರೇಟ್‌ಗಳಿಗೆ ಹರಾಜು ಹಾಕಲು ಮತ್ತು ಸಮಾಜವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಬೇಕಾದ ಬಹುಪಾಲು ಸಂಸದೀಯ ಅಧಿಕಾರಗಳು ದಕ್ಕುತ್ತವೆ. ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಬಹುಮತವಿಲ್ಲದ್ದರಿಂದ ಬಿಜೆಪಿ ಮಂಡಿಸಿದ ಕಾರ್ಪೊರೇಟ್ ಧಣಿಗಳಿಗೆ ಬೇಕಾದಂತೆ ರೈತರ ಜಮೀನನ್ನು ಕಿತ್ತುಕೊಳ್ಳುವ ಭೂಸ್ವಾಧಿನ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡರೂ ರಾಜ್ಯಸಭೆಯಲ್ಲಿ ತಿರಸ್ಕೃತವಾಯಿತು. ಹೀಗಾಗಿ ಬಿಜೆಪಿ ಸರಕಾರವು ಅದನ್ನು ಎರಡು ಬಾರಿ ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲು ಪ್ರಯತ್ನಿಸಿ ಸುಮ್ಮನಾಯಿತು. ಆದರೆ ಈಗ ಅದಕ್ಕೆ ಎರಡೂ ಸದನಗಳಲ್ಲಿ ಬಹುಮತವಿರುವುದರಿಂದ ಸುಗ್ರೀವಾಜ್ಞೆಯ ಅಗತ್ಯವೇ ಇರುವುದಿಲ್ಲ. ಈಗ ಅದನ್ನು ಶಾಸನಾತ್ಮಕವಾಗಿಯೇ ಸಂಸತ್ತಿನ ಮೂಲಕ ಜಾರಿಗೆ ತರಬಹುದು.

ಅದರ ಜೊತೆಗೆ ಬಿಜೆಪಿಯ ಬತ್ತಳಿಕೆಯ ಲ್ಲಿರುವ ಸಮಾನ ನಾಗರಿಕ ಸಂಹಿತೆ, ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ರದ್ದು, ಗೋ ಮಾಂಸ ನಿಷೇಧ, ದೊಡ್ಡ ಮಟ್ಟದ ಕಾರ್ಪೊರೇಟ್ ಪರ ಕಾರ್ಮಿಕ ನೀತಿ ಬದಲಾವಣೆಗಳು ಹಿಂದುತ್ವವಾದಿ ಶೈಕ್ಷಣಿಕ ಸುಧಾರಣೆಗಳು ಹಾಗೂ ಮತ್ತಿತರ ಊಹಿಸಲಾಗದ ಎಷ್ಟೂ ಕಾರ್ಪೊರೇಟ್ ಪರ ಮತ್ತು ಹಿಂದೂರಾಷ್ಟ್ರ ಪರವಾದ ಆರೆಸ್ಸೆಸ್ ಕಾರ್ಯಸೂಚಿಗಳಿಗಾಗಿ ಕೆಲವು ‘ಸಂವಿಧಾನ ತಿದ್ದುಪಡಿ’ಗಳ ಅಗತ್ಯ ಬೀಳುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಒಂದು ಸರಕಾರಕ್ಕೆ ಸಂಸತ್ತಿನ ಎರಡೂ ಸದನಗಳಲ್ಲೂ ಮೂರನೇ ಎರಡು ಬಹುಮತ ಹಾಗೂ ದೇಶದ ಅರ್ಧಕ್ಕೂ ಹೆಚ್ಚು ವಿಧಾನಸಭೆಗಳಲ್ಲೂ ಮೂರನೇ ಎರಡರಷ್ಟು ಬಹುಮತದ ಬೆಂಬಲ ಪಡೆದುಕೊಳ್ಳುವುದು ಅಗತ್ಯ.

ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ವಿರೋಧ ಪಕ್ಷಗಳ ಸಹಕಾರವಿಲ್ಲದೆಯೇ ಸಂವಿಧಾನ ತಿದ್ದುಪಡಿ ಮಾಡಲು ಅಗತ್ಯವಿರುವಷ್ಟು ಬಹುಮತವಿದೆ. ಇದನ್ನು ಬಳಸಿಕೊಂಡು ಅದು ಮೇಲೆ ಉದಾಹರಿಸಲಾದ ನೀತಿಗಳ ಜೊತೆಜೊತೆಗೆ ದೇಶಾದ್ಯಂತ ಶಿಕ್ಷಣ, ಆಹಾರಾಭ್ಯಾಸ, ವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಣ, ದೇಶ ರಕ್ಷಣೆಯ ಹೆಸರಲ್ಲಿ ಮುಸ್ಲಿಮರ ಮೇಲೆ ಹಾಗೂ ರಾಜಕೀಯ ಪ್ರತಿರೋಧಿಗಳ ಮೇಲೆ ತೀವ್ರ ದಮನ ಮಾಡುವಂಥ ಕರಾಳ ‘ಸಾಂವಿಧಾನಿಕ ತಿದ್ದುಪಡಿ’ಗಳನ್ನು ಮಧ್ಯರಾತ್ರಿಯ ಜಂಟಿ ಅಧಿವೇಶನಗಳ ಮೂಲಕ ‘ಸಾಂವಿಧಾನಿಕ’ವಾಗಿಯೇ ಜಾರಿಗೆ ತರಬಹುದಾಗಿದೆ. ಮೋದಿ ಸರಕಾರ ಸಂವಿಧಾನವನ್ನು ಬದಲಾವಣೆ ಮಾಡಬಹುದೇ?: 
ಮೇಲೆ ಹೇಳಿದ್ದೆಲ್ಲಾ ಸಂವಿಧಾನದ ಈಗಿನ ಚೌಕಟ್ಟಿನೊಳಗೆ ಬಹುಮತದ ಬಲದೊಂದಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಸಾಧಿಸ ಬಹುದಾದ ಅಪಾಯಗಳು. ಆದರೆ ಬಿಜೆಪಿ ‘ಸಂವಿಧಾನವನ್ನು ಬದಲಾವಣೆ’ ಮಾಡಲಿದೆಯೇ?

ಇಂತಹ ಒಂದು ಅಪಾಯವು ತುರ್ತುಸ್ಥಿತಿಯ ಸಮಯದಲ್ಲಿ ತಲೆದೋರಿತ್ತು. ಆಗ ಇಂದಿರಾಗಾಂಧಿಯವರ ಭ್ರಷ್ಟಾಚಾರಕ್ಕೆ ನ್ಯಾಯಾಲಯವು ಶಿಕ್ಷೆಯನ್ನು ಘೋಷಿಸಿತ್ತು. ಅದರಿಂದ ಬಚಾವಾಗಲು ದೇಶದ ವಿರುದ್ಧ ವಿದೇಶೀ ಶಕ್ತಿಗಳು ಸ್ಥಳೀಯ ರಾಜಕೀಯ ವಿರೋಧಿಗಳ ಜೊತೆ ಮಾಡುತ್ತಿರುವ ಸಂಚಿನಿಂದ ದೇಶವನ್ನು ಉಳಿಸುವ ಕಥನವನ್ನು ಮುಂದೆ ಮಾಡಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದರು. ತಮ್ಮ ಸರ್ವಾಧಿಕಾರದಿಂದ ಪ್ರತಿರೋಧವನ್ನು ಬಗ್ಗುಬಡಿದರು ಮತ್ತು ನ್ಯಾಯಾಂಗಕ್ಕಿಂತ ಶಾಸಕಾಂಗಕ್ಕೆ ಹೆಚ್ಚಿನ ಅಧಿಕಾರವನ್ನು ದಕ್ಕಿಸಿಕೊಳ್ಳುವ ರೀತಿಯಲ್ಲಿ ಸಂವಿಧಾನವನ್ನು ಬದಲಾವಣೆ ಮಾಡುವ ತಿದ್ದುಪಡಿಯನ್ನು ಮಾಡಿದರು. ಅದರ ಜೊತೆಜೊತೆಗೆ 1977ರ ಜನವರಿಯಲ್ಲಿ ಸಂವಿಧಾನಕ್ಕೆ ಮಾಡಿದ 42ನೇ ತಿದ್ದುಪಡಿಯ ಮೂಲಕವೇ ದೇಶದ ಸಂವಿಧಾನದ ಮುನ್ನುಡಿಗೆ ಈ ದೇಶವನ್ನು ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರವನ್ನಾಗಿ ಕಟ್ಟುವ ಶಪಥವನ್ನು ಸೇರಿಸಲಾಯಿತು. ಆದರೆ ಇದು ಸಂವಿಧಾನ ಬದಲಾವಣೆ ಮಾಡುವ ಸಂಸತ್ತಿನ ಅಧಿಕಾರ ಅಪರಿಮಿತವಾದದ್ದೇ ಅಥವಾ ಅದಕ್ಕೂ ಒಂದು ನಿಯಂತ್ರಣವಿರಬೇಕೆಂದು ಸಂವಿಧಾನ ಕರ್ತೃಗಳು ನಿರೀಕ್ಷಿಸಿದ್ದರೇ ಎಂಬ ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿತು. ಇದರ ಬಗ್ಗೆ ಸುಪ್ರೀಂ ಕೋರ್ಟಿನ ಪೂರ್ಣಪೀಠ ಕೂಲಂಕಷವಾದ ವಿಚಾರಣೆ ನಡೆಸಿತು.

ಕೇಶವಾನಂದ ಭಾರತಿ ಪ್ರಕರಣ ಎಂದು ಪ್ರಖ್ಯಾತವಾದ ಆ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟು ಈ ಬಗ್ಗೆ ಒಂದು ಸ್ಪಷ್ಟವಾದ ತೀರ್ಪನ್ನು ನೀಡಿತು. ಅದರ ಪ್ರಕಾರ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಪರಮಾಧಿಕಾರವು ಜನರಿಂದ ಚುನಾಯಿತವಾದ ಸರಕಾರಕ್ಕೆ ಇದೆಯಾದರೂ ಭಾರತದ ಸಂವಿಧಾನದ ಮೂಲರಚನೆಯಾದ (ಬೇಸಿಕ್ ಸ್ಟ್ರಕ್ಚರ್) ಸಂಸದೀಯ ಪ್ರಜಾತಂತ್ರ, ಚುನಾವಣೆ, ಜಾತ್ಯತೀತತೆ ಮತ್ತು ಗಣರಾಜ್ಯ, ಸ್ವತಂತ್ರ ನ್ಯಾಯಾಂಗ, ಇತ್ಯಾದಿಗಳಿಗೆ ಸಂಸತ್ತೂ ಸಹ ಯಾವ ಮಾರ್ಪಾಡನ್ನೂ ತರುವಂತಿಲ್ಲವೆಂದು ಆದೇಶಿಸಿತು. ಆದರೆ ಇದೀಗ ಅಗಾಧ ಬಹುಮತದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಅರ್ಧಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಅದಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಬಹುಮತವಿದೆ. 2021ರ ವೇಳೆಗೆ ರಾಜ್ಯಸಭೆಯಲ್ಲೂ ಬಹುಮತ ದೊರೆಯಲಿದೆ. ‘ಹಿಂದೂ ರಾಷ್ಟ್ರ’ವೇ ತಮ್ಮ ಗುರಿಯೆಂದು ಘೋಷಿಸಿರುವ ಬಿಜೆಪಿಯ 302 ಸಂಸದರು ಅಗಾಧವಾದ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಸಮಾಜದಲ್ಲೂ, ಸಂಸತ್ತಿನಲ್ಲೂ ವಿರೋಧ ಮತ್ತು ವಿರೋಧಪಕ್ಷಗಳು ಬಲಹೀನವಾಗಿದೆ.

ಇನ್ನು ನ್ಯಾಯಾಂಗ ತುರ್ತುಸ್ಥಿತಿಯ ಕಾಲಕ್ಕಿಂತಲೂ ಬೆನ್ನುಮೂಳೆ ಕಳೆದುಕೊಂಡಿದೆ. ತುರ್ತಿಸ್ಥಿತಿಯ ಕಾಲದಲ್ಲಿ ಇಂದಿರಾ ಗಾಂಧಿಯನ್ನು ವಿರೋಧಿಸಿದ ನ್ಯಾಯಾಧೀಶರು ಜೀವಂತವಾಗಿರುತ್ತಿದ್ದರು. ಹೆಚ್ಚೆಂದರೆ ರಾಜೀನಾಮೆ ಕೊಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ ನೋಡಿದರೆ ಆಡಳಿತರೂಢರ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದ ಲೋಯಾರಂಥ ನ್ಯಾಯಾಧೀಶರು ಕೊಲೆಯಾಗುತ್ತಿದ್ದಾರೆ. ಆಡಳಿತರೂಢರ ಪರವಾಗಿ ಮೌನಸಾಕ್ಷಿ ನುಡಿದ ಗವಾಯ್‌ರಂಥ ನ್ಯಾಯಾಧೀಶರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಪದೋನ್ನತಿ ಪಡೆಯುತ್ತಿದ್ದಾರೆ. ಇನ್ನು ಅಸ್ಸಾಂ, ಹರ್ಯಾಣ, ಹೈದರಾಬಾದ್ ಹೈಕೋರ್ಟಿನಂಥ ಕಡೆಗಳಲ್ಲಿ ನ್ಯಾಯಾಧೀಶರುಗಳೇ ನ್ಯಾಯಾಲಯಗಳಲ್ಲಿ ಹಿಂದೂರಾಷ್ಟ್ರದ ಪಾಠ ಮಾಡುತ್ತಿದ್ದಾರೆ. ಗೋಡ್ಸೆ ದೇಶಭಕ್ತರೆಂದವರು, ಹಿಂದೂ ಭಯೋತ್ಪಾದನೆಯಲ್ಲಿ ತೊಡಗಿದ್ದವರು ಶಾಸನಕರ್ತೃಗಳಾಗಿದ್ದಾರೆ. ಈ ಎಲ್ಲಾ ಕಾರಣಗಳನ್ನು ನೋಡಿದರೆ ಹಿಂದೆಂದೆಗಿಂತ ಇಂದು ಸಂವಿಧಾನವು ಬದಲಾವಣೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಸಂವಿಧಾನ ಬದಲಾವಣೆಯನ್ನೇ ಮಾಡಿಬಿಟ್ಟಲ್ಲಿ ಉಂಟಾಗಬಹುದಾದ ರಾಜಕೀಯ-ಸಾಮಾಜಿಕ ಸಂಕ್ಷೋಭೆಯನ್ನು ನಿಯಂತ್ರಿಸಬಹುದೇ ಎನ್ನುವ ಏಕೈಕ ಲೆಕ್ಕಾಚಾರವು ಮಾತ್ರ ಅಂತಹ ನಿರ್ಧಾರಗಳ ಮೇಲೆ ಪ್ರಭಾವಿಸಬಹುದೇ ವಿನಾ ಬೇರೆ ಯಾವ ಸಾಂಸ್ಥಿಕ ಅಡೆತಡೆಗಳೂ ಇಂದು ಸಂಘಪರಿವಾರಕ್ಕಿಲ್ಲ.

‘ಚುನಾವಣಾತ್ಮಕ ಸರ್ವಾಧಿಕಾರ’ ಮತ್ತು ‘ಜನಾಂಗೀಯವಾದಿ ಪ್ರಜಾಪ್ರಭುತ್ವ’:

ಹೀಗೆ ಇಂದು ನಾವು 1977ಕ್ಕಿಂತ ಬದಲಾದ ಸಂದರ್ಭದಲ್ಲಿದ್ದೇವೆ. ಹಾಗೆ ನೋಡಿದರೆ ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ಬಲಪಂಥೀಯತೆಯೆಡೆಗೆ ಸರಿಯುತ್ತಿದೆ. ಇಂದು ಬಹುಪಾಲು ಪ್ರಜಾತಾಂತ್ರಿಕ ದೇಶಗಳಲ್ಲಿ ಪ್ರಜಾತಂತ್ರವೆಂದರೆ ಕೇವಲ ಬಹುಮತ ಎಂದಾಗಿದೆಯೇ ವಿನಃ ಉದಾರವಾದೀ ಮೌಲ್ಯಗಳುಳ್ಳ ಪ್ರಜಾತಂತ್ರ ಎಂದಾಗುತ್ತಿಲ್ಲ. ಹೀಗಾಗಿ ಅಮೆರಿಕ, ಹಂಗೇರಿ, ಪೊಲ್ಯಾಂಡ್, ಟರ್ಕಿ, ಫಿಲಿಫ್ಫೀನ್ಸ್, ಬ್ರೆಝಿಲ್‌ಗಳಲ್ಲಿ ಕೂಡಾ ಭಾರತದಂತೆ ಉದಾರವಾದಿ ಮೌಲ್ಯಗಳನ್ನು ವಿರೋಧಿಸುವ ಸರ್ವಾಧಿಕಾರಿಗಳು ಬಹುಮತದೊಂದಿಗೆ ಆಯ್ಕೆಯಾಗುತ್ತಾ ಚುನಾವಣಾತ್ಮಕ ಸರ್ವಾಧಿಕಾರವನ್ನು ಜಾರಿ ಮಾಡುತ್ತಿದ್ದಾರೆ. ಆ ಅರ್ಥದಲ್ಲಿ ಚುನಾವಣಾತ್ಮಕ ಬಹುಮತಕ್ಕೂ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ನಡುವೆ ಇದ್ದ ಸಂಬಂಧವನ್ನೇ ಕಡಿದುಹಾಕುತ್ತಿದ್ದಾರೆ. ಅದಕ್ಕೆ ಇತ್ತೀಚಿನ ಉದಾಹರಣೆ ಇಸ್ರೇಲ್. ಇಸ್ರೇಲ್ ಕಾಲಕಾಲಕ್ಕೆ ಚುನಾವಣೆ ನಡೆಸುವ ಬಹುಮತ ಪಡೆಯುವ ಪಕ್ಷ ಮಾತ್ರ ಸರಕಾರ ರಚಿಸಬೇಕೆಂಬ ಪದ್ಧತಿಯುಳ್ಳ ಒಂದು ‘ಸಂಸದೀಯ ಪ್ರಜಾತಂತ್ರ’ವೇ ಆಗಿದೆ. ಆದರೆ ಮೊನ್ನೆ ಆ ದೇಶದ ಬಹುಮತವುಳ್ಳ ಸರಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಇಸ್ರೇಲ್ ಅನ್ನು ಒಂದು ‘ಯೆಹೂದಿ ಪ್ರಜಾತಂತ್ರ’ ಎಂದು ಘೋಷಿಸಿದೆ.

ಆ ಮೂಲಕ ಉದಾರವಾದಿ ಪ್ರಜಾಪ್ರಭುತ್ವದಿಂದ ‘ಜನಾಂಗೀಯವಾದಿ ಪ್ರಜಾಪ್ರಭುತ್ವ’ವಾಗಿ ಅಧಿಕೃತವಾಗಿ ಬದಲಾಗಿದೆ. ಈವರೆಗೆ ಅನಧಿಕೃತವಾಗಿ ಎರಡನೇ ದರ್ಜೆ ಪ್ರಜೆಗಳಾಗಿದ್ದ ಫೆಲೆಸ್ತೀನಿಯರು ಮತ್ತಿತರರು ಇನ್ನು ಮುಂದೆ ಅಧಿಕೃತವಾಗಿ ಎರಡನೇ ದರ್ಜೆ ಪ್ರಜೆಗಳಾಗಲಿದ್ದಾರೆ. ಪಕ್ಕದ ಶ್ರೀಲಂಕಾದಲ್ಲೂ ಸಹ ಬೌದ್ಧರಲ್ಲದವರು ಮತ್ತು ಸಿಂಹಳೀ ಭಾಷಿಕರಲ್ಲದವರು ಎರಡನೇ ದರ್ಜೆ ಪ್ರಜೆಗಳಾಗುವ ತಿದ್ದುಪಡಿಗಳನ್ನು ತಂದಿದ್ದಾರೆ. ಅದರ ಪರಿಣಾಮಗಳನ್ನು ನೋಡುತ್ತಲೇ ಇದ್ದೇವೆ. ಈಗ ಭಾರತವೂ ಸಹ ‘ಹಿಂದೂ ರಾಷ್ಟ್ರ’ದ ಹೆಸರಲ್ಲಿ ‘ಜನಾಂಗೀಯವಾದಿ ಪ್ರಜಾಪ್ರಭುತ್ವ’ವಾಗುವ ಅಂದರೆ ಹಿಟ್ಲರ್ ರಾಷ್ಟ್ರವಾಗುವ ದಿಕ್ಕಿನಲ್ಲಿದೆಯೆಂಬುದು ಸ್ಪಷ್ಟ. ಇಂದು ಭಾರತದ ಸಂಸತ್ತೇ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದರೆ ನ್ಯಾಯಾಂಗ ಅದನ್ನು ರಕ್ಷಿಸುವ ಯಾವ ಬದ್ಧತೆಯನ್ನೂ ತೋರುತ್ತಿಲ್ಲ. ಕಾರ್ಯಾಂಗವಂತೂ ಸರಕಾರದ ಗುಲಾಮನಾಗಿದೆ.

ಭಾರತವನ್ನು ಪ್ರಜಾತಂತ್ರವನ್ನು ಬದಲಿಸಿ ಹಿಂದೂರಾಷ್ಟ್ರವಾಗಿಸುವ ತನ್ನ ಅಜೆಂಡಾದ ಬಗ್ಗೆ ಜನರ ಸಮ್ಮತಿಯನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಆರೆಸ್ಸೆಸ್ ಕಳೆದ ನೂರು ವರ್ಷಗಳಿಂದಲೂ ನಿರಂತರ ಮಾಡುತ್ತಲೇ ಬಂದಿದೆ. ಈಗ ಅದು ತನ್ನ ಪ್ರಯತ್ನಗಳ ಫಲಿತವನ್ನು ಕಾಣುತ್ತಿದೆ.

ನವಉದಾರವಾದ / ಕಲ್ಯಾಣ ರಾಜ್ಯ ಕಲ್ಪನೆಯ ಸಂಸತ್ತು:
ಈ ವಿದ್ಯಮಾನಗಳಿಗೆ ಮತ್ತೊಂದು ಮುಖ್ಯವಾದ ಆಯಾಮವೂ ಇದೆ. ಎರಡನೇ ಪ್ರಪಂಚ ಯುದ್ಧದ ನಂತರದಲ್ಲಿ ರೂಪುಗೊಂಡ ಪ್ರಜಾತಂತ್ರಗಳಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯತೆ ಮತ್ತು ಕಲ್ಯಾಣ ರಾಜ್ಯ ಪರಿಕಲ್ಪನೆಗಳು ಅಂತರ್ಗತವಾಗಿತ್ತು. ಈ ಪರಿಕಲ್ಪನೆಯ ಮೂಲಕ ರಚಿಸಲಾದ ಸಂಸದೀಯ ಸಂಸ್ಥೆಗಳು, ಪ್ರಕ್ರಿಯೆಗಳೂ ಸಹ ಇದೇ ಉದ್ದೇಶವನ್ನು ಈಡೇರಿಸುವ ರೀತಿಯ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ