85 ರೋಗಿಗಳ ಹತ್ಯೆಗೈದ ನರ್ಸ್‌: ಮಾರಕ ಇಂಜೆಕ್ಷನ್ ನೀಡಿ ಕೊಲ್ಲುತ್ತಿದ್ದ ಸರಣಿ ಹಂತಕ

Update: 2019-06-06 17:39 GMT

ಓಲ್ಡನ್‌ಬರ್ಗ್ (ಜರ್ಮನಿ), ಜೂ. 6: ಜರ್ಮನಿಯ ಯುದ್ಧಾನಂತರದ ಇತಿಹಾಸದಲ್ಲೇ ಅತ್ಯಂತ ಸಕ್ರಿಯ ಸರಣಿ ಹಂತಕ ಎಂಬುದಾಗಿ ಭಾವಿಸಲಾಗಿರುವ ಆ ದೇಶದ ನರ್ಸ್ ಒಬ್ಬನಿಗೆ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

42 ವರ್ಷದ ಹಂತಕ ನೀಲ್ಸ್ ಹೋಜಲ್ ತನ್ನ ಆರೈಕೆಯಲ್ಲಿದ್ದ 85 ರೋಗಿಗಳನ್ನು ಹತ್ಯೆ ಮಾಡಿರುವುದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.

‘‘ಹೋಜಲ್‌ನ ಹತ್ಯಾಕಾಂಡದ ಬಗ್ಗೆ ಯೋಚಿಸಲು ಕೂಡ ಸಾಧ್ಯವಿಲ್ಲ’’ ಎಂಬುದಾಗಿ ನ್ಯಾಯಾಧೀಶ ಸೆಬಾಸ್ಟಿಯನ್ ಬೋಹ್ರಮನ್ ಬಣ್ಣಿಸಿದರು.

ಹಂತಕನು 2000 ಮತ್ತು 2005ರ ನಡುವಿನ ಅವಧಿಯಲ್ಲಿ ರೋಗಿಗಳನ್ನು ಒಟ್ಟಾರೆಯಾಗಿ ಆರಿಸಿ ಅವರಿಗೆ ಮಾರಕ ಇಂಜೆಕ್ಷನ್‌ಗಳನ್ನು ಚುಚ್ಚುತ್ತಿದ್ದನು ಎಂದು ಆರೋಪಿಸಲಾಗಿದೆ. 2005ರಲ್ಲಿ ಅವನು ಕೃತ್ಯ ನಡೆಸುತ್ತಿದ್ದಾಗಲೇ ಸಿಕ್ಕಿಬಿದ್ದನು.

ಇತರ ಆರು ಹತ್ಯೆಗಳಿಗಾಗಿ ಈ ಹಿಂದೆಯೇ ಅವನಿಗೆ ಇನ್ನೊಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವನು ಈಗಾಗಲೇ ಒಂದು ದಶಕವನ್ನು ಜೈಲಿನಲ್ಲಿ ಕಳೆದಿದ್ದಾನೆ.

ಅವನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದಕ್ಕಾಗಿ 130ಕ್ಕೂ ಅಧಿಕ ಮೃತದೇಹಗಳನ್ನು ಗೋರಿಯಿಂದ ಅಗೆದು ಶವಪರೀಕ್ಷೆ ನಡೆಸಲಾಗಿತ್ತು.

ಅವನು ಒಟ್ಟು 200ಕ್ಕೂ ಅಧಿಕ ಮಂದಿಯನ್ನು ಕೊಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆದರೆ, ಹೋಜಲ್‌ನ ಜ್ಞಾಪಕಶಕ್ತಿಯ ಕೊರತೆಯಿಂದಾಗಿ ಹಾಗೂ ಹಲವು ಸಂಭಾವ್ಯ ಸಂತ್ರಸ್ತರನ್ನು ಶವಪರೀಕ್ಷೆ ನಡೆಸುವ ಮೊದಲೇ ದಫನ ಮಾಡಿರುವುದರಿಂದಾಗಿ ಅವನು ಇಂತಿಷ್ಟೇ ಜನರನ್ನು ಕೊಂದಿದ್ದಾನೆ ಎಂಬುದಾಗಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

‘ಭಯಾನಕ ಕೃತ್ಯಗಳಿಗಾಗಿ’ ಸಂತ್ರಸ್ತರ ಕುಟುಂಬಿಕರ ಕ್ಷಮೆ ಕೋರಿದ ಹಂತಕ

ವಿಚಾರಣೆಯ ಕೊನೆಯ ದಿನವಾದ ಬುಧವಾರ, ‘ನನ್ನ ಭಯಾನಕ ಕೃತ್ಯಗಳಿಗಾಗಿ ಕ್ಷಮಿಸಿ’ ಎಂಬುದಾಗಿ ಹಂತಕನು ಸಂತ್ರಸ್ತರ ಕುಟುಂಬ ಸದಸ್ಯರಲ್ಲಿ ವಿನಂತಿಸಿದನು.

‘‘ಹಲವು ವರ್ಷಗಳ ಅವಧಿಯಲ್ಲಿ ನಾನು ನಿಮಗೆ ಮಾಡಿರುವ ಅನ್ಯಾಯಗಳಿಗಾಗಿ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ’’ ಎಂದು ಅವನು ಹೇಳಿದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News