ಒಮಾನ್-ದುಬೈ ಬಸ್ ಅಪಘಾತ: ಮೃತಪಟ್ಟ 17 ಮಂದಿಯ ಪೈಕಿ 12 ಭಾರತೀಯರು

Update: 2019-06-07 15:44 GMT

ದುಬೈ, ಜೂ.7: ಇಲ್ಲಿನ ಅಲ್ ರಶಿದಿಯದಲ್ಲಿ ಗುರುವಾರ ನಡೆದ ಭೀಕರ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ 17 ಮಂದಿಯ ಪೈಕಿ 12 ಮಂದಿ ಭಾರತೀಯರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡು ರಶಿದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಭಾರತೀಯರನ್ನು ಮನೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಗುರುವಾರ ನಡೆದ ಬಸ್ ಅಪಘಾತದಲ್ಲಿ 12 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಲಾಗಿದೆ ಎಂದು ಭಾರತದ ದುಬೈ ರಾಯಬಾರಿ ವಿಪುಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಗತ್ಯ ದಾಖಲೆಗಳು ಮತ್ತು ಪತ್ರಗಳನ್ನು ಶೀಘ್ರವಾಗಿ ಸಂಪೂರ್ಣಗೊಳಿಸಲು ನಮ್ಮ ತಂಡ ದುಬೈ ಸರಕಾರದ ಇಲಾಕೆಗಳ ಜೊತೆ ಕಾರ್ಯಪ್ರವೃತ್ತವಾಗಿದೆ. ಮೃತದೇಹಗಳನ್ನು ಒಂದೆರಡು ದಿನಗಳೊಳಗೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇನ್ನು ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿರುವ ಕಾರಣ ಆರು ಮಂದಿಯ ಗುರುತುಪತ್ತೆ ಸಾಧ್ಯವಾಗಿಲ್ಲ. ಮೃತ ದುರ್ದೈವಿಗಳ ಕುಟುಂಬಸ್ಥರು ದುಬೈ ಪೊಲೀಸ್ ವಿಧಿವಿಜ್ಞಾನ ಇಲಾಕೆಯಲ್ಲಿ ಮೃತದೇಹಗಳ ಗುರುತುಪತ್ತೆಯಲ್ಲಿ ತೊಡಗಿದ್ದಾರೆ ಎಂದು ವರದಿ ತಿಳಿಸಿದೆ.

ಬಸ್ ಅಪಘಾತದಲ್ಲಿ ಮೃತಪಟ್ಟ ಭಾರತೀಯರು; ವಿಕ್ರಮ್ ಜವಾಹರ್ ಠಾಕೂರ್, ವಿಮಲ್ ಕುಮಾರ್ ಕಾರ್ತಿಕೇಯನ್ ಕೇಶವಪಿಲೈಕರ್, ಕಿರಣ್ ಜಾನಿ ವಲ್ಲಿತೋಟತ್ತಿಲ್ ಪೈಲಿ, ಫಿರೋಝ್ ಖಾನ್ ಅಝೀಝ್ ಪಠಾಣ್, ಉಮ್ಮರ್ ಚೊನೊಕತವತ್ ಮುಹಮ್ಮದ್ ಪುತೆನ್, ನಬಿಲ್ ಉಮ್ಮರ್ ಚೊನೊಕತವತ್, ವಾಸುದೇವ್ ವಿಶನ್‌ದಾಸ್, ರಾಜನ್ ಪುದಿಯಪುರಯಿಲ್ ಗೋಪಾಲನ್, ಜಮಾಲುದ್ದೀನ್ ಮುಹಮ್ಮದುನ್ನಿ ಜಮಾಲುದ್ದೀನ್, ಪ್ರಬುಲ ಮಾಧವನ್ ದೀಪ ಕುಮಾರ್, ರೋಶನಿ ಮೂಲ್ಚಂದಾನಿ. ಆಸ್ಪತ್ರೆಯಲ್ಲಿ ಇನ್ನೂ ಗುರುತುಪತ್ತೆಯಾಗದ ಮೃತದೇಹಗಳಿದ್ದು ಘಟನೆಯಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ ಏರಿಕೆಯಾಗಲೂ ಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News