ಹಡಗುಗಳ ಮೇಲೆ ನಡೆದ ದಾಳಿಯ ಹಿಂದೆ ‘ಸರಕಾರ’: ಯುಎಇ, ನಾರ್ವೆ, ಸೌದಿ ಅರೇಬಿಯ ವಿಶ್ವಸಂಸ್ಥೆಯಲ್ಲಿ ಆರೋಪ
ನ್ಯೂಯಾರ್ಕ್, ಜೂ. 7: ತನ್ನ ಸಮುದ್ರ ತೀರದಲ್ಲಿ ಮೇ 12ರಂದು ನಾಲ್ಕು ಹಡಗುಗಳ ಮೇಲೆ ನಡೆದ ದಾಳಿಗಳು ‘ಪರಿಣತರು ನಡೆಸಿದ ಸಂಘಟಿತ ಕಾರ್ಯಾಚರಣೆ’ಯಂತೆ ಕಂಡುಬಂದಿವೆ ಹಾಗೂ ಸರಕಾರವೊಂದು ಇದನ್ನು ನಡೆಸಿರುವ ಸಾಧ್ಯತೆಗಳಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಿಗೆ ಗುರುವಾರ ಹೇಳಿದೆ.
ಯುಎಇಯು ನಾರ್ವೆ ಮತ್ತು ಸೌದಿ ಅರೇಬಿಯದ ಜೊತೆಗೂಡಿ ದಾಳಿ ಘಟನೆಗಳ ಬಗ್ಗೆ ಭದ್ರತಾ ಮಂಡಳಿಯ ಸದಸ್ಯರಿಗೆ ದಾಖಲೆ ಆಧಾರಿತ ವಿವರಗಳನ್ನು ನೀಡಿತು. ಆದರೆ, ದಾಳಿಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಗುರುತಿಸಲು ಅದು ನಿರಾಕರಿಸಿತು ಹಾಗೂ ಇರಾನ್‌ನ ಹೆಸರನ್ನು ಹೇಳಲಿಲ್ಲ.
ತೈಲ ಟ್ಯಾಂಕರ್‌ಗಳು ಸೇರಿದಂತೆ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯ ಹಿಂದೆ ಇರಾನ್ ಇದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಆರೋಪ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಈ ದಾಳಿಗಳಿಗೆ ವೇಗದ ದೋಣಿಗಳನ್ನು ನಡೆಸುವ ಪರಿಣತಿ ಹಾಗೂ ತರಬೇತಿ ಪಡೆದ ಮುಳುಗುಗಾರರು ಬೇಕಾಗುತ್ತದೆ. ಈ ಮುಳುಗುಗಾರರು ಹಡಗುಗಳು ಮುಳುಗದಂತೆ ಅವುಗಳ ಚಲನೆಗೆ ಮಾತ್ರ ಹಾನಿ ಮಾಡುವುದಕ್ಕಾಗಿ ನೀರಿನ ಅಡಿಯಲ್ಲಿ ಅತ್ಯಂತ ನಿಖರತೆಯೊಂದಿಗೆ ಅವುಗಳಲ್ಲಿ ಲಿಂಪಿಟ್ ಬಾಂಬ್‌ಗಳನ್ನು ಇಟ್ಟಿರುವ ಸಾಧ್ಯತೆಯಿದೆ ಎಂದು ಸಂಬಂಧಪಟ್ಟ ದೇಶಗಳು ನಡೆಸಿದ ಜಂಟಿ ತನಿಖೆಯ ಪ್ರಾಥಮಿಕ ವರದಿಯು ಹೇಳಿದೆ.