ಭಕ್ತರನ್ನು ಅಪ್ಪಿಕೊಳ್ಳೋಣ

Update: 2019-06-08 07:01 GMT

ಈಗ ಮಾಡಬೇಕಿರುವುದು ಜನರನ್ನು ಗೆದ್ದುಕೊಳ್ಳುವುದು. ಜನರ ಸಂಕಟಗಳಲ್ಲಿ ಒಂದಾಗುತ್ತಾ ಜನರನ್ನು ಬೆಸೆಯುತ್ತಾ ಮೋದಿಯೆಂಬ ಸುಳ್ಳು ದೇವರನ್ನು ಸೋಲಿಸುವುದು. ಸಮಾಜದ ಫ್ಯಾಶೀಕರಣವನ್ನು ತಡೆಗಟ್ಟುವುದು...ಅದು ಎಷ್ಟೇ ದೀರ್ಘ, ತ್ರಾಸದಾಯಕವಾದರೂ ಅದನ್ನು ಮಾಡದೆ ಫ್ಯಾಶಿಸಂ ಅನ್ನು ಸೋಲಿಸುವುದು ಆಗದ ಮಾತು. ಹಾಗೆಯೇ ಈ ದ್ವೇಷ ರಾಜಕಾರಣವನ್ನು ಸೋಲಿಸದೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ.


ಬಿಜೆಪಿಯು ಮುಂದಿಡುತ್ತಿರುವ ಹಿಂದುತ್ವ ರಾಷ್ಟ್ರೀಯತೆಯ ಪರಿಕಲ್ಪನೆಗಳು ಹಾಗೂ ಮುಸ್ಲಿಮರಿಂದ ‘ಹಿಂದೂ ಆತಂಕ’, ಪಾಕಿಸ್ಥಾನದಿಂದ ‘ದೇಶದ ಆತಂಕ’ ಎಂಬ ಕಥನಗಳು ನಿಧಾನಕ್ಕೆ ಜನಮಾನಸದಲ್ಲಿ ಆಳವಾಗಿ ಬೇರುಬಿಡುತ್ತಿವೆ. ಜನರ ಬಳಿ ಉಳಿದು, ಅವರ ಮನಸ್ಸಿನ ಆಳಕ್ಕೆ ಇಳಿದು ಅವನ್ನು ಸುಳ್ಳೆಂದು ಅರ್ಥಪಡಿಸುವಲ್ಲಿ ರಾಜಕೀಯ ಪಕ್ಷಗಳು ಮತ್ತು ಜನಚಳವಳಿಗಳು ಸಹ ಸೋತಿದ್ದಾವೆ. ಹಾಗೆ ನೋಡಿದಲ್ಲಿ ಕಾಂಗ್ರೆಸನ್ನೂ ಒಳಗೊಂಡಂತೆ ಪ್ರಮುಖ ವಿರೋಧ ಪಕ್ಷಗಳಿಗೆ ಬಿಜೆಪಿಯ ಈ ವಿಭಜಕ ರಾಜಕೀಯವನ್ನು ಸೋಲಿಸಬೇಕೆಂಬ ಗಂಭೀರವಾದ ಕಾರ್ಯಕ್ರಮಗಳೇ ಇಲ್ಲ. ಹತ್ತಾರು ದಶಕಗಳಿಂದ ಆರೆಸ್ಸೆಸ್‌ನ ಲಕ್ಷಾಂತರ ಕಾರ್ಯಕರ್ತರು ಮತ್ತೊಂದು ಕಡೆ ಇತ್ತೀಚಿನ ವರ್ಷಗಳಲ್ಲಿ ಮಾರಿಕೊಂಡ ಮಾಧ್ಯಮಗಳು ಮನೆಮನೆಗಳಲ್ಲಿ ಮತ್ತು ಮನಮನಗಳಲ್ಲಿ ನಿರಂತರವಾಗಿ ಮುಸ್ಲಿಂ ದ್ವೇಷವನ್ನು ಹಾಗೂ ಮನುವಾದಿ ಮೌಲ್ಯಗಳ ಹಿಂದೂ ರಾಷ್ಟ್ರದ ನಿರ್ಮಾಣದ ಕಲ್ಪನೆಯನ್ನು ಬಿತ್ತುತ್ತಾ ಬಂದಿದೆ ಹಾಗೂ ಅದಕ್ಕೆ ನಿಧಾನವಾಗಿ ಸಮ್ಮತಿಯನ್ನು ರೂಢಿಸುತ್ತಿವೆ. ಈ ಸಮ್ಮತಿಯಿಂದಾಗಿಯೇ ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಮತಗಳಿಕೆ ಏರುತ್ತಲೇ ಹೋಗುತ್ತಿದೆ. ಇದು ಸಿಎಸ್‌ಡಿಎಸ್- ಲೋಕನೀತಿ ಸಂಸ್ಥೆಗಳು ನಡೆಸಿರುವ ಆಳವಾದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಸಹ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಫುಲ್ವಾಮ ಬಗ್ಗೆ ತಿಳಿದ ಮತ್ತು ತಿಳಿಯದ ಬಹುಪಾಲು ಜನರು ದೇಶಕ್ಕೆ ಬಲವಾದ ನಾಯಕ ಮತ್ತು ಸ್ಥಿರ ಸರಕಾರದ ಅಗತ್ಯವಿದೆಯೆಂದೇ ಹೇಳಿದ್ದಾರೆ ಮತ್ತು ಮೋದಿ ಮಾತ್ರ ಅಂಥ ನಾಯಕತ್ವವನ್ನು ಒದಗಿಸಬಲ್ಲರೆಂದೂ ಹೇಳಿದ್ದಾರೆ. ಸಿಎಸ್‌ಡಿಎಸ್ ಅಧ್ಯಯನವು ಸ್ಪಷ್ಟಪಡಿಸುವಂತೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಸರಾಸರಿ ಶೇ.80ಕ್ಕೂ ಹೆಚ್ಚು ಮೇಲ್ಜಾತಿಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅದರಲ್ಲಿ ಸಹ ಶೇ. 92ರಷ್ಟು ಪ್ರಮಾಣದ ಜಾಟ್ ಮತ್ತು ರಜಪೂತರಂಥ ಕ್ಷತ್ರಿಯ ಜಾತಿಗಳ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಶೇ.65ರಷ್ಟು ಯಾದವೇತರ ಹಿಂದುಳಿದ ಜಾತಿಗಳು ಮತ್ತು ಶೇ.60ರಷ್ಟು ಜಾತವೇತರ ದಲಿತರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮುಸ್ಲಿಮರು ಮಾತ್ರ ಬಹಳಷ್ಟು ಕಡೆ ಮೊದಲಿಗಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಓಟು ನೀಡಿದ್ದಾರೆ.

ಜನರ ಬದಲಾಗುತ್ತಿರುವ ಮಾನಸಿಕತೆಯ ಬಗ್ಗೆ ನಡೆದ ಮತ್ತೊಂದು ಅಧ್ಯಯನವೂ ಇದನ್ನೇ ಸಾಬೀತು ಮಾಡುತ್ತದೆ. ಬೆಂಗಳೂರಿನ ಅಝೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಮತ್ತು ಸಿಎಸ್‌ಡಿಎಸ್ ಸಂಸ್ಥೆ ಸೇರಿ 2016-2018ರ ವರೆಗೆ ಪ್ರತಿ ವರ್ಷ 12ರಿಂದ 15 ರಾಜ್ಯಗಳ ಬೇರೆಬೇರೆ ಸಾಮಾಜಿಕ ಹಾಗೂ ಭೌಗೋಳಿಕ ಹಿನ್ನೆಲೆಗೆ ಸೇರಿದ ಒಂದು-ಒಂದೂವರೆ ಲಕ್ಷದಷ್ಟು ವಿದ್ಯಾರ್ಥಿ-ಯುವಜನರ ರಾಜಕೀಯ ಅಭಿಪ್ರಾಯಗಳ ಸಮೀಕ್ಷೆಯನ್ನು ಮಾಡಿವೆ. ಆ ಸುಶಿಕ್ಷಿತ ಯುವಕ-ಯುವತಿಯರಲ್ಲಿ ಶೇ. 60ಕ್ಕೂ ಹೆಚ್ಚು ಜನ ಮಹಿಳೆಯರ ಸ್ವಾತಂತ್ರ್ಯವನ್ನ್ನು, ಮಾಂಸಾಹಾರವನ್ನು, ಅಂತರ್ಜಾತಿ ಮದುವೆಯನ್ನು ವಿರೋಧಿಸಿದ್ದಾರೆ. ಯಾವುದೇ ಸರಿಯಾದ ಮಾಹಿತಿ ಇಲ್ಲದೆಯೂ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕೆಂಬ ಹಾಗೂ ದೇಶಕ್ಕೆ ಬಲವಾದ ನಾಯಕ ಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾತಂತ್ರಕ್ಕಿಂತ ಸರ್ವಾಧಿಕಾರಿ ಸೇನಾಡಳಿತದಿಂದ ದೇಶ ಸುಧಾರಿಸುತ್ತದೆಂದು ಸಹ ಉತ್ತರಿಸಿದ್ದಾರೆ. ಅವರೆಲ್ಲರ ಪ್ರಧಾನ ಮಾಹಿತಿದಾರ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯೇ ಆಗಿದೆ.

ಚುನಾವಣೋತ್ತರ ಸಮೀಕ್ಷೆಗಳು ಈ ಚುನಾವಣೆಯಲ್ಲಿ ಸೂಚಿಸುವ ಮತ್ತೊಂದು ಆತಂಕಕಾರಿ ವಿದ್ಯಮಾನವೆಂದರೆ ಬಹುಪಾಲು ಎಲ್ಲಾ ರಾಜ್ಯಗಳಲ್ಲೂ ಹಿಂದೂಗಳು ಮೊದಲಿಗಿಂತ ಹೆಚ್ಚು ಬಿಜೆಪಿಯೇ ತಮ್ಮ ಪ್ರತಿನಿಧಿ ಎಂದು ಭಾವಿಸುತ್ತಿರುವುದು. ಇದರಲ್ಲಿ ಹಿಂದೂ ತೆಕ್ಕೆಯಲ್ಲಿ ಸಿಲುಕಿಕೊಂಡಿರುವ ದಲಿತರು, ಆದಿವಾಸಿಗಳು ಮತ್ತು ಅತಿಹಿಂದುಳಿದ ಜಾತಿಗಳು ಸಹ ಮೊದಲಿಗಿಂತ ಹೆಚ್ಚು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹೀಗೆ ಬಿಜೆಪಿಯು ಮೋದಿಯ ನೇತೃತ್ವದಲ್ಲಿ ಒಂದು ಪ್ರಬಲ ‘ಹಿಂದೂ ಓಟ್ ಬ್ಯಾಂಕ್’ ಅನ್ನು ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನು ‘ಸಾಮಾಜಿಕ ನ್ಯಾಯ’ದ ರಾಜಕಾರಣವಾಗಲೀ ಐಡೆಂಟಿಟಿ ರಾಜಕಾರಣವಾಗಲೀ ತಡೆಯಲು ಸಾಧ್ಯವಾಗಿಲ್ಲ.

ಆದರೆ ಇದನ್ನು ಇನ್ನಷ್ಟು ಆಳಕ್ಕೆ ವಿಶ್ಲೇಷಿಸಿ ನೋಡಿದರೆ ದಲಿತ-ಶೂದ್ರ ಮೇಲ್ಚಲನೆಯ ಬಗ್ಗೆ ಅಪಾರ ಅಸಹನೆ ಹೊಂದಿರುವ ಮೇಲ್ಜಾತಿಗಳ ಆತಂಕವೂ ಬಿಜೆಪಿಯ ಬೆನ್ನಿಗೆ ಗಟ್ಟಿಯಾಗಿ ಸದೃಢೀಕರಣಗೊಂಡಿದೆ. ಮತ್ತೊಂದೆಡೆ ಸಾಮಾಜಿಕ ನ್ಯಾಯ: ರಾಜಕಾರಣದ ಮಿತಿಯಲ್ಲಿ ಪ್ರಧಾನವಾಗಿ ಫಲಾನುಭವಿಯಾದ ದಲಿತ-ಹಾಗೂ ಶೂದ್ರ ಜಾತಿಗಳ ವಿರುದ್ಧ ಇತರ ದಲಿತ ಜಾತಿಗಳು ಮತ್ತು ಇತರ ಒಬಿಸಿ ಜಾತಿಗಳನ್ನು ಬಿಜೆಪಿ ಸಂಘಟಿಸಿದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಬಿಎಸ್ಪಿಯ ಪ್ರಧಾನ ಬೆಂಬಲಿಗ ನೆಲೆಯಾದ ಜಾತವ್ ದಲಿತರ ವಿರುದ್ಧ ಅಸಹನೆಯನ್ನು ಹುಟ್ಟುಹಾಕಿ ಪಾಸಿ ಮತ್ತಿತರ ಜಾತಿಗಳನ್ನು, ಯಾದವರ ಮೇಲಾಧಿಪತ್ಯದ ವಿರುದ್ಧ ಯಾದವೇತರ ಅತಿಶೂದ್ರ ಜಾತಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಾಗೆಯೇ ಅವರನ್ನು ತನ್ನಡಿ ಸಂಘಟಿಸಿಕೊಳ್ಳುವಾಗ ಬಲವಾದ ಮುಸ್ಲಿಂ ದ್ವೇಷವನ್ನೂ ಅವರ ಅಸ್ಮಿತೆಯ ಕಥನದ ಭಾಗವಾಗಿಸಿದೆ. ಇದರ ಜೊತೆಗೆ ‘ದೇಶಕ್ಕೆ ಆತಂಕ’ ಮತ್ತು ‘‘ಮೋದಿ ಬಿಟ್ಟರೆ ಪರ್ಯಾಯ ಯಾರು?’’ ಎಂಬ ಕಥನಗಳೂ ಸಹ ಜಾತಿ ಉಪಜಾತಿಗಳನ್ನು ಮೀರಿ ಬೃಹತ್ ಹಿಂದೂ ಓಟುಗಳನ್ನು ಬಿಜೆಪಿ ಒಡಲಿಗಿರಿಸಿದೆ. ಈ ಬಾರಿ ಅಂದಾಜು 25 ಕೋಟಿ ಓಟುಗಳನ್ನು ಬಿಜೆಪಿ ಪಡೆದಿದೆ.

ಆದ್ದರಿಂದ ಇದೊಂದು ‘ಹಿಂದೂತ್ವವಾದಿ’ ರಾಜಕಾರಣಕ್ಕೆ ಏನಿಲ್ಲವೆಂದರೂ ದಕ್ಷಿಣದ ಕೆಲ ರಾಜ್ಯಗಳನ್ನು ಬಿಟ್ಟರೆ ಮಿಕ್ಕಂತೆ ಪಶ್ಚಿಮ, ಉತ್ತರ ಹಾಗೂ ಪೂರ್ವ ರಾಜ್ಯಗಳ ಬಹುಪಾಲು ಜನತೆ ಅನುಮೋದಿಸಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ಅರ್ಥಪಡಿಸುತ್ತದೆ.

ಆದ್ದರಿಂದಲೇ ಈ ಚುನಾವಣೆಯು ಭಾರತದ ಜನತೆಯ ಫ್ಯಾಶೀಕರಣವು ಪ್ರಮಾಣದಲ್ಲಿ ಮಾತ್ರವಲ್ಲದೆ ಗುಣಾತ್ಮಕವಾಗಿಯೂ ಆತಂಕಕಾರಿಯಾಗಿ ಬೆಳೆದಿರುವುದನ್ನು ಸೂಚಿಸುತ್ತದೆ. ಹಾಗಿದ್ದಲ್ಲಿ ಈಗೇನು ಮಾಡಬೇಕು? ಜನರಿಗೆ ಹಿಂದುತ್ವ, ಹಿಂದೂ ಆತಂಕ, ದೇಶಕ್ಕೆ ಅಪಾಯ, ಮಿಕ್ಕವರೆಲ್ಲಾ ಅಯೋಗ್ಯರು, ಮೋದಿ ಮಾತ್ರ ರಕ್ಷಕ ಎಂಬುದು ಸರಿ ಎನ್ನಿಸಿರುವಾಗ ಮೋದಿಯನ್ನು ಟೀಕಿಸಿದಷ್ಟೂ ಅವರು ಮೋದಿಯ ಕಡೆಗೆ ಸರಿದಿದ್ದಾರೆ. ಇದರ ಅರ್ಥ ಮೋದಿಯನ್ನು ಟೀಕಿಸಬಾರದು ಎಂಬುದಲ್ಲ. ಅದು ಮತ್ತೊಂದು ಪಲಾಯನ ವಾದಿ ಸೂತ್ರ. ಎಲ್ಲಿಯತನಕ ಜಾತಿ ವ್ಯವಸ್ಥೆ, ಕೋಮುವಾದ, ದುರ್ಬಲರ ಮೇಲಿನ ಅತ್ಯಾಚಾರಗಳು ಅನ್ಯಾಯಯೆನಿಸುವ ನ್ಯಾಯಪ್ರಜ್ಞೆ ಹಾಗೂ ಪ್ರಜಾತಾಂತ್ರಿಕ ಪ್ರಜ್ಞೆ ಗಟ್ಟಿಯಾಗಿರುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಬಗ್ಗೆ ಮಾಡುವ ಟೀಕೆಗಳು ಜನರಿಗೆ ಸರಿ ಅನಿಸುವುದೇ ಇಲ್ಲ. ಜನರ ಬದುಕು ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಸಂಕ್ಷೋಭೆಗೆ ಬಲಿಯಾಗುತ್ತಲೇ ಹೋಗುತ್ತಾ ಅಸಹಾಯಕತೆ-ಅಸಹನೆ ಹೆಚ್ಚಾಗುತ್ತಾ ಹೋಗುತ್ತಾ ನ್ಯಾಯಪ್ರಜ್ಞೆಯೂ ಹಿಂದೆ ಸರಿಯುತ್ತಾ ಹೋಗುತ್ತದೆ. ಅದರಲ್ಲೂ ಜನರಿಗೆ ಭರವಸೆಗಳನ್ನು ಮೂಡಿಸುವಂಥ ರಾಜಕೀಯ, ಸಾಮಾಜಿಕ ಬೆಂಬಲ ರಚನೆಗಳು ಕುಸಿಯುತ್ತಾ ಹೋದಂತೆ ಜನರ ‘ನಾವು’ಗಿಂತ ‘ತಾನು’ ಮಾತ್ರ ಹೇಗಾದರೂ ಬದುಕಿ ಉಳಿಯುವ ದಾರುಣ ಅಭೀಪ್ಸೆಗಳು ಹುಟ್ಟಿಕೊಳ್ಳುತ್ತವೆ. ಜನರ ಈ ದಾರುಣ ಪರಿಸ್ಥಿತಿಯನ್ನೇ ಬಳಸಿಕೊಂಡು ಸಂಘಪರಿವಾರ ಅವರನ್ನು ತನ್ನ ರಾಜಕೀಯದ ಹತಾಶ ದಾಳಗಳನ್ನಾಗಿ ಮಾಡಿಕೊಳ್ಳುತ್ತದೆ. ಹೀಗಾಗಿ ಈಗ ಮಾಡಬೇಕಿರುವುದು ಜನರನ್ನು ಗೆದ್ದುಕೊಳ್ಳುವುದು. ಜನರ ಸಂಕಟಗಳಲ್ಲಿ ಒಂದಾಗುತ್ತಾ ಜನರನ್ನು ಬೆಸೆಯುತ್ತಾ ಮೋದಿಯೆಂಬ ಸುಳ್ಳು ದೇವರನ್ನು ಸೋಲಿಸುವುದು. ಸಮಾಜದ ಫ್ಯಾಶೀಕರಣವನ್ನು ತಡೆಗಟ್ಟುವುದು...ಅದು ಎಷ್ಟೇ ದೀರ್ಘ, ತ್ರಾಸದಾಯಕವಾದರೂ ಅದನ್ನು ಮಾಡದೆ ಫ್ಯಾಶಿಸಂ ಅನ್ನು ಸೋಲಿಸುವುದು ಆಗದ ಮಾತು. ಹಾಗೆಯೇ ಈ ದ್ವೇಷ ರಾಜಕಾರಣವನ್ನು ಸೋಲಿಸದೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ.
ಈಗ ಮಾಡಬೇಕಿರುವುದಿಷ್ಟೆ...ಮತ್ತೆ ಜನರನ್ನು, ಅಮಾಯಕ ಭಕ್ತರನ್ನೂ ಸಹ ಅಪ್ಪಿಕೊಳ್ಳಬೇಕು...ಬಾಧೆಗಳಲ್ಲಿ ಬಂಧುಗಳಾಗಿ ಗೋವಿಂದನ ಅಗತ್ಯ ಇಲ್ಲವಾಗಿಸಬೇಕು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ನಾಸ್ತಿಕ ಮದ