ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇದ್ದರೂ ಕರಾಟೆಯಲ್ಲಿ ಚಿನ್ನದ ಬೇಟೆ: ದೇಶಕ್ಕೆ ಕೀರ್ತಿ ತಂದ ಕೋಲಾರದ ‘ಕೌಸರ್’
ಬೆಂಗಳೂರು, ಜೂ.9: ಕ್ರೀಡಾಪಟಗಳು ಕೆಲವೊಮ್ಮೆ ಅನಾರೋಗ್ಯಕ್ಕೆ ಗುರಿಯಾದರೆ, ಕ್ರೀಡೆಯನ್ನು ತೊರೆಯುವ ಸಾಧ್ಯತೆಗಳೇ ಹೆಚ್ಚು. ಆದರೆ, ಕೆಲ ಕ್ರೀಡಾಪಟುಗಳು ಅಂಥ ನ್ಯೂನತೆಯನ್ನು ಮೆಟ್ಟಿ ನಿಂತು ಸಾಧನೆ ಶಿಖರವೇರಿದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಅಂಥವರ ಸಾಲಿಗೆ ಕೋಲಾರ ಜಿಲ್ಲೆಯ ‘ರುಮಾನಾ ಕೌಸರ್’ ಸೇರಿದ್ದಾರೆ.
ಹೌದು.., ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಕಾಣಿಸಿಕೊಂಡು, ಚಿಕಿತ್ಸೆಗೆ ಒಳಗಾದರೂ, ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವುದರ ಮೂಲಕ ಕೋಲಾರದ ಶ್ರೀನಿವಾಸಪುರ ತಾಲೂಕಿನ ಎಸ್.ವಿ.ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ರುಮಾನಾ ಕೌಸರ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ಇತರ ಕ್ರೀಡಾ ಪಟುಗಳ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿದ್ದಾರೆ. ರುಮಾನಾ ಅವರ ತಂದೆ ರಷೀದ್ ಅಹ್ಮದ್ ಆಟೊ ಚಾಲಕರಾದರೆ, ತಾಯಿ ಶಬಾನಾ ಗೃಹಿಣಿ. ಇವರಿಬ್ಬರೂ ತಮ್ಮ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತು ಮಗಳ ಆಸೆಗೆ ನೀರೆರೆದರು. ಓದಿನಲ್ಲಿ ಮುಂದಿದ್ದ ಮಗಳ ವಿದ್ಯಾಭ್ಯಾಸ ಹಾಗೂ ಕರಾಟೆ ತರಬೇತಿಗೆ ಅಗತ್ಯವಾದ ಅನುಕೂಲ ಕಲ್ಪಿಸಿದರು.
ಮೇ.3ರಂದು ಮಲೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಪೂರ್ವಭಾವಿಯಾಗಿ ಹೊಸದಿಲ್ಲಿಯಲ್ಲಿ ನಡೆದ ಎಲ್ಲ ಕಠಿಣ ಸ್ಪರ್ಧೆಗಳಲ್ಲೂ ಕೌಸರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ, ಇದರ ಮಧ್ಯೆ ಮಲೇಷ್ಯಾಕ್ಕೆ ತೆರಳಲು ಹಣದ ಸಮಸ್ಯೆಯಾದರೆ, ಮತ್ತೊಂದೆಡೆ ದಿಲ್ಲಿಯಿಂದ ಆಯ್ಕೆಯಾಗಿ ಮನೆಗೆ ಬರುತ್ತಿದ್ದಂತೆ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಕಾಣಿಸಿಕೊಂಡಿತು. ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಲೇಸರ್ ಚಿಕಿತ್ಸೆ ಮೂಲಕ ಕಿಡ್ನಿ ಕಲ್ಲು ಸಮಸ್ಯೆ ನಿವಾರಿಸಲಾಯಿತು. ಆದರೆ ಹಣದ ಸಮಸ್ಯೆ ಹೆಚ್ಚಾಯಿತು. ಪ್ರತಿಭೆಯಿದ್ದರೂ ಹಣದ ಕೊರತೆ ಅಡ್ಡಿಯಾಯಿತು. ಆಗ ಕೌಸರ್ ಅವರ ನೆರವಿಗೆ ಬಂದದ್ದು, ಎಸ್.ವಿ.ಪ್ಯಾರಾ ಮೆಡಿಕಲ್ ಕಾಲೇಜಿನ ಅಧ್ಯಕ್ಷ ವೈ.ವಿ.ವೆಂಕಟಾಚಲ, ಸಿಎಂಆರ್ ಟೊಮೆಟೊ ಮಂಡಿ ಮಾಲಕ ಹರಿಕೃಷ್ಣ, ಎಚ್.ಪಿ.ಪೆಟ್ರೋಲ್ ಬಂಕ್‌ನ ನವೀದ್, ನಾರಾಯಣ ಚಿತ್ರ ಮಂದಿರದ ಹರಿಕೃಷ್ಣ, ದಾನಿಗಳಾದ ಕಷ್ಣಪ್ಪ ಹಾಗೂ ಗೋವಿಂದಗೌಡ ಎನ್ನುತ್ತಾರೆ ಕೌಸರ್.
ಸಾಧನೆ ಮಾಡಬೇಕು ಎಂಬ ರುಮಾನಾ ಕೌಸರ್ ಅವರ ತುಡಿತಕ್ಕೆ ಬಲ ನೀಡಿದವರು, ಅವರ ಮಾವ ಅಲ್ತಾಫ್ ಪಾಷಾ. ಉತ್ತಮ ಕರಾಟೆ ಪಟುವಾಗಿರುವ ಅಲ್ತಾಫ್ ಪಾಷಾ ನೀಡಿದ ತರಬೇತಿಯ ಫಲವಾಗಿ ಕೌಸರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಯಿತು. ಅದರ ಹಿಂದೆ ಅವರು ಚಿಕ್ಕ ವಯಸ್ಸಿನಿಂದಲೇ ಪಡೆದ ಕಠಿಣ ತರಬೇತಿ ಹಾಗೂ ಶ್ರಮ ಅಡಗಿದೆ.
‘ಸರಕಾರ ನೆರವು ನೀಡಲಿ’
ರುಮಾನಾ ಅವರ ಚಿನ್ನದ ಬೇಟೆಯಿಂದ ನಾಡಿಗೆ ಮಾತ್ರವಲ್ಲದೆ ದೇಶಕ್ಕೆ ಕೀರ್ತಿ ಬಂದಿದೆ. ಸರಕಾರ ರುಮಾನಾ ಕೌಸರ್ ಅವರ ನೆರವಿಗೆ ಬರಬೇಕು. ಅವರ ಪ್ರತಿಭೆ ಇನ್ನಷ್ಟು ಪ್ರಜ್ವಲಿಸುವುದಕ್ಕೆ ಅಗತ್ಯವಾದ ಎಲ್ಲ ನೆರವು ನೀಡಬೇಕು ಎಂಬುದು ಕ್ರೀಡಾ ಆಸಕ್ತರ ಬಯಕೆ.
‘200 ಸ್ಪರ್ಧಿಗಳು’
ಮಲೇಷ್ಯಾ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 20 ದೇಶಗಳಿಂದ 200 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಪರ್ಧೆ ಕಷ್ಟವಾಗಿದ್ದರೂ, ಚಿನ್ನದ ಪದಕ ಗೆದ್ದಾಗ ಅತೀವ ಸಂತೋಷವಾಯಿತು. ಗೆಲುವಿಗೆ ಕಾರಣರಾದ ತಾಯ್ನಾಡಿನ ಪ್ರತಿಯೊಬ್ಬರನ್ನೂ ಮನಸ್ಸಿನಲ್ಲಿ ಸ್ಮರಿಸಿದೆ. ಪದಕವೂ ಕೊರಳಿಗೇರಿತು. 2 ಲಕ್ಷ ನಗದು ಬಹುಮಾನ ದೊರೆಯಿತು ಎಂದು ಹೇಳಿ, ರುಮಾನಾ ಕೌಸರ್ ನಗೆಬೀರಿದರು.