ಪಾಕ್: ಸಿಂಧ್ ಪ್ರಾಂತದ ಎಚ್‌ಐವಿ ಪೀಡಿತ 324 ಮಂದಿ ಚಿಕಿತ್ಸೆಯಿಂದ ವಂಚಿತ

Update: 2019-06-09 18:34 GMT

 ಕರಾಚಿ,ಜೂ.9: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತದಲ್ಲಿ ಎಚ್‌ಐವಿ ಪತ್ತೆಯಾದ 751 ಮಂದಿಯ ಪೈಕಿ ಅರ್ಧಾಂಶಕ್ಕಿಂತಲೂ ಅಧಿಕ ಮಂದಿ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಬಹಿರಂಗಪಡಿಸಿದೆ.

  ಮೇನಲ್ಲಿ ಸಿಂಧ್ ಪ್ರಾಂತದ ಲರ್ಖಾನದಲ್ಲಿ 21,375 ಮಂದಿಯನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 751 ಮಂದಿ ಎಚ್‌ಐವಿ ಬಾಧಿತರೆಂದು ದೃಢಪಟ್ಟಿತ್ತು. ಅವರಲ್ಲಿ 604 ಮಂದಿ 2ರಿಂದ 15 ವರ್ಷದೊಳಗಿನ ವಯಸ್ಸಿನವರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

 ಶುಚಿತ್ವವಿಲ್ಲದ ಸಾಮಾಗ್ರಿಗಳ ಬಳಕೆ, ಅಸುರಕ್ಷಿತ ರಕ್ತ ವರ್ಗಾವಣೆ ಹಾಗೂ ನಕಲಿ ವೈದ್ಯರ ಹಾವಳಿ, ಈ ಪ್ರದೇಶದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಉಲ್ಬಣಿಸಲು ಕಾರಣವೆಂದು ವರದಿ ಹೇಳಿದೆ.

 ಈತನಕ ಕೇವಲ 324 ಮಂದಿ ಎಚ್‌ಐವಿ ರೋಗಿಗಳಿಗೆ (ಶೇ.47) ಮಾತ್ರವೇ ಈವರೆಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗಿದ್ದು, ಉಳಿದ 427 (ಶೇ.57) ಮಂದಿ ಈಗಲೂ ವೈದ್ಯಕೀಯ ನೆರವಿನ ನಿರೀಕ್ಷೆಯಲ್ಲಿರುವುದಾಗಿ ವರದಿ ತಿಳಿಸಿದೆ.

   ಎಚ್‌ಐವಿ ಪೀಡಿತ ಮಕ್ಕಳಿಗೆ ಚಿಕಿತ್ಸೆಗೆ ಬೇಕಾದ ಔಷಧಿಗಳ ಕೊರತೆಯು ಪಾಕಿಸ್ತಾನಕ್ಕೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿವಿಧ ಆಸ್ಪತ್ರೆಗಳಲ್ಲಿ ಎಚ್‌ಐವಿ ಪೀಡಿತ ಮಕ್ಕಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬೇಕಾದ ಔಷಧಿ ದಾಸ್ತಾನುಗಳು ಜುಲೈ 15ರೊಳಗೆ ಖಾಲಿಯಾಗಲಿದೆಯೆಂದು ಅದು ಅಂದಾಜಿಸಿದೆ.

 ಸಿಂಧ್ ಪ್ರಾಂತದಲ್ಲಿ ಎಪ್ರಿಲ್ 25ರಂದು ಮೊದಲ ಬಾರಿಗೆ ಎಚ್‌ಐವಿ ಸೋಂಕು ವರದಿಯಾಗಿತ್ತು. ಎಚ್‌ಐವಿ ವೈರಸ್ ಸೋಂಕಿನ ಸೂಜಿಯನ್ನು ಚುಚ್ಚಿ ಈ ಮಾರಣಾಂತಿಕ ರೋಗವನ್ನು ಹರಡಿಲರ್ಖಾನಾ ಜಿಲ್ಲೆಯ ವೈದ್ಯ ಮುಝಫರ್ ಗಾಂಗ್ರೂನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಆದರೆ ಆತನನ್ನು ಈಗ ಉದ್ದೇಶಪೂರ್ವಕವಾಗಿ ರೋಗ ಹರಡಿದ್ದಾನೆಂಬ ಆರೋಪದಿಂದ ಮುಕ್ತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News