ಭಯೋತ್ಪಾದನೆ ವಿರುದ್ಧ ಕ್ರಮವಿಲ್ಲದಿದ್ದರೆ ಭಾರತ-ಪಾಕ್ ಮಾತುಕತೆ ವ್ಯರ್ಥ
ವಾಶಿಂಗ್ಟನ್, ಜೂ. 12: ಪಾಕಿಸ್ತಾನದ ಭೂಭಾಗದಲ್ಲಿರುವ ಅಥವಾ ಅದು ಆಕ್ರಮಿಸಿರುವ ಭೂಭಾಗಗಳಲ್ಲಿರುವ ಭಯೋತ್ಪಾದನಾ ಮೂಲಸೌಕರ್ಯಗಳು ನಾಶವಾಗದ ಹೊರತು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆಯುವ ಇನ್ನೊಂದು ಉನ್ನತ ಮಟ್ಟದ ಸಭೆಯಿಂದ ಏನೂ ಪ್ರಯೋಜನವಿಲ್ಲ ಎಂದು ಅಮೆರಿಕಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ಹೇಳಿದ್ದಾರೆ.
ತನ್ನ ಮೇಲಿನ ಆರ್ಥಿಕ ಮತ್ತು ಅಂತರ್‌ರಾಷ್ಟ್ರೀಯ ಒತ್ತಡಗಳ ಹಿನ್ನೆಲೆಯಲ್ಲಿ, ಭಾರತಕ್ಕೆ ಪಾಕಿಸ್ತಾನವು ಮಾತುಕತೆಗಳ ಕೊಡುಗೆಗಳನ್ನು ನೀಡುತ್ತಿದೆ ಎಂದು ವಾಶಿಂಗ್ಟನ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಜೂನ್ 13 ಮತ್ತು 14ರಂದು ಕಿರ್ಗಿಸ್ತಾನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನಗಳೆರಡೂ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ದೇಶಗಳಾಗಿವೆ. ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಎರಡೂ ದೇಶಗಳ ನಾಯಕರು ಭಾಗವಹಿಸಲಿದ್ದಾರೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ಮೂಲಸೌಕರ್ಯಗಳು ನಾಶವಾಗದಿದ್ದರೆ ಹಾಗೂ ಎರಡು ದೇಶಗಳು ‘ಶಾಶ್ವತ ವೈರಿಗಳು’ ಎಂಬ ಮನೋಭಾವ ಹೋಗದಿದ್ದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಇನ್ನೊಂದು ಉನ್ನತ ಮಟ್ಟದ ಸಭೆ ಅರ್ಥಹೀನ ಎಂದು ಹಕ್ಕಾನಿ ಅಭಿಪ್ರಾಯಪಟ್ಟರು.
1950ರ ಬಳಿಕ 45 ಬಾರಿ ಉನ್ನತ ಮಟ್ಟದ ಮಾತುಕತೆ
‘‘1950 ಮತ್ತು 2015ರ ಡಿಸೆಂಬರ್‌ರ ನಡುವೆ ಉಭಯ ದೇಶಗಳ ನಾಯಕರು 45 ಬಾರಿ ಭೇಟಿಯಾಗಿದ್ದಾರೆ’’ ಎಂದು ಹೇಳಿದ ಅವರು, ಮಾತುಕತೆಗಳಿಂದ ಯಾವುದೇ ದೀರ್ಘಾವಧಿಯ ಶಾಂತಿ ಏರ್ಪಟ್ಟಿಲ್ಲ ಎಂದರು.
‘‘ಮಾತುಕತೆಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂಬುದಾಗಿ ಯಾವತ್ತೂ ಪರಿಗಣಿಸಬಾರದು. ಆದರೆ, ಅದೇ ಹೊತ್ತಿಗೆ, ಎಲ್ಲವೂ ಮಾತುಕತೆಯಲ್ಲೇ ಮುಗಿಯಬಾರದು’’ ಎಂದು ಹಕ್ಕಾನಿ ಹೇಳಿದರು.