ಉಗ್ರ ಬಂಡವಾಳಶಾಹಿಯನ್ನು ಸೌಮ್ಯ ಬಂಡವಾಳಶಾಹಿ ಸೋಲಿಸಬಲ್ಲದೇ?

Update: 2019-06-14 18:30 GMT

 ಇಂದಿನ ಸಂದರ್ಭದ ಕಾರಣಗಳನ್ನು ಅರಿತುಕೊಳ್ಳಬೇಕೆಂದರೆ ಈ ಪುಸ್ತಕದಲ್ಲಿರುವ ಸಂಗತಿಗಳನ್ನು ಗಂಭೀರವಾಗಿ ಗಮನಿಸಬೇಕು. ಅದರ ಜೊತೆಗೆ ಅದರಲ್ಲಿ ಚರ್ಚಿಸದ ಮತ್ತೊಂದು ಪ್ರಮುಖ ವಿದ್ಯಮಾನವನ್ನು ಗಮನಿಸಬೇಕು. 1984ರ ನಂತರದಲ್ಲಿ ಆರೆಸ್ಸೆಸ್ ಮತ್ತದರ ಅಂಗಸಂಘಟನೆಗಳು ಸಮಾಜದಲ್ಲಿ ಆಳವಾಗಿ ಬೇರೂರತೊಡಗಿದ ಕಾಲಾವಧಿಯಲ್ಲೇ ಎಡಪಂಥೀಯ ಪಕ್ಷಗಳ ಮತ್ತು ಇತರ ಸೋಷಿಯಲ್ ಡೆಮಾಕ್ರಾಟ್ ಎನ್ನಬಹುದಾದ ಲೋಹಿಯಾವಾದಿ, ಜೆಪಿವಾದಿ ಪಕ್ಷ ಮತ್ತು ಸಂಘಟನೆಗಳ ಸಮೂಹ ಸಂಘಟನೆಗಳು ಕೂಡಾ ನಿರಂತರವಾಗಿ ಕುಸಿಯಲಾರಂಭಿಸಿದವು. ಅದರ ಕುಸಿತದ ವೇಗ 1991ರ ನಂತರದಲ್ಲಿ ಹೆಚ್ಚಾಯಿತು. ಉದಾರೀಕರಣ- ಖಾಸಗೀಕರಣ-ಜಾಗತೀಕರಣವೆಂಬ ನವ ಉದಾರವಾದಿ ಆರ್ಥಿಕತೆಯ ಪ್ರಹಾರಗಳು ಎಷ್ಟು ತೀವ್ರವಾಗಲಾರಂಭಿಸಿತೋ ಅಷ್ಟೇ ವೇಗವಾಗಿ ಈ ನಡು-ಎಡ ಮತ್ತು ಎಡಪಕ್ಷಗಳ ಕುಸಿತವೂ ಆಗಲಾರಂಭಿಸಿತು.


ಆರೆಸ್ಸೆಸ್ ಬಗ್ಗೆ ಮೃದು ಧೋರಣೆಯನ್ನು ಹೊಂದಿರುವ ವಾಲ್ಟರ್ ಆಂಡರ್‌ಸನ್ ಎಂಬ ಅಮೆರಿಕನ್ ವಿದ್ವಾಂಸ ಮತ್ತು ಮೋದಿ ಅಭಿಮಾನಿ ಭಾರತೀಯ ಲೇಖಕ ಶ್ರೀಧರ್ ದಾಮ್ಲೆ ಎಂಬ ಲೇಖಕರಿಬ್ಬರು 1984ರಲ್ಲಿ ಆರೆಸ್ಸೆಸ್ ಹಾಗೂ ಭಾರತದಲ್ಲಿ ಹಿಂದೂ ಪುನರುತ್ಥಾನ ಚಳವಳಿಯ ಮರುಹುಟ್ಟಿನ ಬಗ್ಗೆ 'Brotherhood In Saffron' ಎಂಬ ಸಂಶೋಧನಾಧಾರಿತ ವಿದ್ವತ್‌ಪೂರ್ಣ ಪುಸ್ತಕವನ್ನು ಬರೆದಿದ್ದರು. ಆರೆಸ್ಸೆಸ್‌ನ ಹುಟ್ಟು, ಸಿದ್ಧಾಂತ, ಇತಿಹಾಸ, ಒಳರಚನೆ, ರಾಜಕೀಯ ಇತ್ಯಾದಿಗಳ ಬಗ್ಗೆ ಅದನ್ನು ಎಲ್ಲಾ ಬಗೆಯ ವಿದ್ವಾಂಸರೂ ಈಗಲೂ ಒಂದು ಪ್ರಮುಖವಾದ ಆಕರ ಗ್ರಂಥವಾಗಿ ಬಳಸುತ್ತಾರೆ. ಅದೇ ಲೇಖಕರೇ 2016ರಲ್ಲಿ ''The RSS: A View To The Inside” (ಆರೆಸ್ಸೆಸ್: ಒಂದು ಒಳಗಿನ ನೋಟ) ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರು ಆರೆಸ್ಸೆಸ್ 1984ರ ನಂತರದಲ್ಲಿ ಸಾಧಿಸಿರುವ ಬೃಹತ್ ಬೆಳವಣಿಗೆ, ಅದಕ್ಕೆ ಕಾರಣವಾದ ಸಂಗತಿಗಳು ಅದು ಅನುಸರಿಸಿದ ವ್ಯೆಹತಂತ್ರಗಳು, ಹಿಂದೂರಾಷ್ಟ್ರ ಸಾಧನೆಯ ಬಗ್ಗೆ ಅದರ ಯೋಜನೆಗಳು ಇತ್ಯಾದಿಗಳ ಬಗ್ಗೆ ಅಷ್ಟೇ ಸಂಶೋಧನಾಪೂರ್ಣ, ಅಧ್ಯಯನಯೋಗ್ಯ ಆದರೆ ಆರೆಸ್ಸೆಸ್ ಬಗ್ಗೆ ಒಳಮೆಚ್ಚುಗೆಯುಳ್ಳ ಪುಸ್ತಕವನ್ನು ಬರೆದಿದ್ದಾರೆ.

ಲೇಖಕರ ಧೋರಣೆಯನ್ನು ಗಮನದಲ್ಲಿಟ್ಟುಕೊಂಡೇ ಪುಸ್ತಕವನ್ನು ಓದಿದರೂ ಸಹ ಅದು ಬಿಜೆಪಿಯ ಇಂದಿನ ಚುನಾವಣಾ ವಿಜಯ ಮತ್ತು ಹಿಂದೂರಾಷ್ಟ್ರ ಸಾಧನೆಯ ಕಡೆಗಿನ ಅದರ ನಾಗಾಲೋಟದ ಬಗ್ಗೆ ಹಲವು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ. ಆ ಲೇಖಕರ ಪ್ರಕಾರ 1984ರ ನಂತರದಲ್ಲಿ ಆರೆಸ್ಸೆಸ್ ಬೆಳವಣಿಗೆಗೆ ಕಾರಣವಾಗಿರುವುದು ಅದರ ಮಾತೃಸಂಘಟನೆಗಿಂತ ಹೆಚ್ಚಾಗಿ ಅದರ ಅಂಗಸಂಘಟನೆಗಳ ಬೃಹತ್ ಬೆಳವಣಿಗೆ. 1984ರ ನಂತರದಲ್ಲಿ ಆರೆಸ್ಸೆಸ್ ಹೊಸ ವ್ಯೆಹತಂತ್ರವನ್ನು ಅನುಸರಿಸಿ, ತನ್ನ ಬೆಂಬಲಿಗರ ತಳಹದಿಯನ್ನು ಭೌಗೋಳಿಕವಾಗಿಯೂ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಮತ್ತು ಪ್ರತಿಯೊಂದು ಸಾಮಾಜಿಕ ವಿಭಾಗಗಳಲ್ಲೂ ವಿಸ್ತರಿಸಿಕೊಂಡಿತು. ಆವರೆಗೆ ಕೇವಲ ನಾಮಕಾವಸ್ಥೆಯಾಗಿದ್ದ ವಿಎಚ್‌ಪಿ, ಎಬಿವಿಪಿಯಂತಹ ಸಂಘಟನೆಗಳನ್ನು ಪುನಶ್ಚೇತನಗೊಳಿಸಲಾಯಿತಲ್ಲದೆ, ಭಜರಂಗದಳ, ಕಾರ್ಮಿಕ ಸಂಘಟನೆ, ರೈತ ಸಂಘಟನೆ, ಆದಿವಾಸಿ ಸಂಘಟನೆ, ವ್ಯಾಪಾರಿಗಳ ಸಂಘಟನೆ, ಸಣ್ಣ ಉದ್ದಿಮೆದಾರರ ಸಂಘಟನೆಗಳಂತಹ ಅಂಗಸಂಸ್ಥೆಗಳ ಮೂಲಕ ಸಮಾಜದ ಎಲ್ಲಾ ವಿಭಾಗಗಳನ್ನೂ ತನ್ನ ರಾಜಕೀಯ ‘ಯಾಜಮಾನ್ಯ’ದಡಿ ತಂದುಕೊಳ್ಳುವ ನೂರಾರು ಸಂಘಟನೆಗಳನ್ನು ಈ ಅವಧಿಯಲ್ಲಿ ಕಟ್ಟಲಾಗಿದೆ. ಅವುಗಳ ಮೂಲಕ 1989ರ ನಂತರದಲ್ಲಿ ತನ್ನ ರಾಜಕೀಯ ಮುಖವಾದ ಬಿಜೆಪಿಗೆ ಚುನಾವಣಾ ವಿಜಯದ ವಿಸ್ತರಣೆಯು ಸಾಧ್ಯವಾಗುವಂತೆ ಮಾಡಿತು. ಇದು ಆ ಲೇಖಕರ ಹೊಸಪುಸ್ತಕದ ಹೂರಣ. ಇದಕ್ಕೆ ಬೇಕಾದ ಎಲ್ಲಾ ಪುರಾವೆಗಳನ್ನು ಹಾಗೂ ಅಂಕಿಸಂಖ್ಯೆಗಳನ್ನೂ ಅವರ ಸಂಶೋಧನೆಯು ನೀಡುತ್ತದೆ.

ಇಂದಿನ ಸಂದರ್ಭದ ಕಾರಣಗಳನ್ನು ಅರಿತುಕೊಳ್ಳಬೇಕೆಂದರೆ ಈ ಪುಸ್ತಕದಲ್ಲಿರುವ ಸಂಗತಿಗಳನ್ನು ಗಂಭೀರವಾಗಿ ಗಮನಿಸಬೇಕು. ಅದರ ಜೊತೆಗೆ ಅದರಲ್ಲಿ ಚರ್ಚಿಸದ ಮತ್ತೊಂದು ಪ್ರಮುಖ ವಿದ್ಯಮಾನವನ್ನು ಗಮನಿಸಬೇಕು. 1984ರ ನಂತರದಲ್ಲಿ ಆರೆಸ್ಸೆಸ್ ಮತ್ತದರ ಅಂಗಸಂಘಟನೆ ಗಳು ಸಮಾಜದಲ್ಲಿ ಆಳವಾಗಿ ಬೇರೂರತೊಡಗಿದ ಕಾಲಾವಧಿಯಲ್ಲೇ ಎಡಪಂಥೀಯ ಪಕ್ಷಗಳ ಮತ್ತು ಇತರ ಸೋಷಿಯಲ್ ಡೆಮಾಕ್ರಾಟ್ ಎನ್ನಬಹುದಾದ ಲೋಹಿಯಾವಾದಿ, ಜೆಪಿವಾದಿ ಪಕ್ಷ ಮತ್ತು ಸಂಘಟನೆಗಳ ಸಮೂಹ ಸಂಘಟನೆಗಳು ಕೂಡಾ ನಿರಂತರವಾಗಿ ಕುಸಿಯಲಾರಂಭಿಸಿದವು. ಅದರ ಕುಸಿತದ ವೇಗ 1991ರ ನಂತರದಲ್ಲಿ ಹೆಚ್ಚಾಯಿತು. ಉದಾರೀಕರಣ- ಖಾಸಗೀಕರಣ-ಜಾಗತೀಕರಣವೆಂಬ ನವ ಉದಾರವಾದಿ ಆರ್ಥಿಕತೆಯ ಪ್ರಹಾರಗಳು ಎಷ್ಟು ತೀವ್ರವಾಗಲಾರಂಭಿಸಿತೋ ಅಷ್ಟೇ ವೇಗವಾಗಿ ಈ ನಡು-ಎಡ ಮತ್ತು ಎಡಪಕ್ಷಗಳ ಕುಸಿತವೂ ಆಗಲಾರಂಭಿಸಿತು. ಹೀಗಾಗಲು ಕಾರಣವೇನು? ಎಡಪಂಥದ ಮತ್ತು ನಡುಪಂಥದ ಕುಸಿತಕ್ಕೆ ಕೇವಲ ಅದರ ಕೆಲವು ನೀತಿಗಳೋ ಅಥವಾ ನಾಯಕ ಗಣದ ದೌರ್ಬಲ್ಯವೋ ಮಾತ್ರ ಕಾರಣವಲ್ಲ ಅಥವಾ ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವೂ ಆಗಿಲ್ಲ.

1945ರ ನಂತರದಲ್ಲಿ ವಸಾಹತುಶಾಹಿಯಿಂದ ವಿಮೋಚನೆಗೊಂಡ ಬಹುಪಾಲು ವಸಾಹತೋತ್ತರ ದೇಶಗಳು ಆರ್ಥಿಕವಾಗಿ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನೂ ಮತ್ತು ರಾಜಕೀಯವಾಗಿ ಪ್ರಜಾತಂತ್ರವನ್ನೂ ಆಯ್ದುಕೊಂಡವು. 1945-70ರ ನಡುವಿನ ಈ ಅವಧಿಯು ಜಾಗತಿಕ ಬಂಡವಾಳಶಾಹಿಯು ಹೆಚ್ಚು ಬಿಕ್ಕಟ್ಟುಗಳನ್ನು ಅನುಭವಿಸದೆ ಲಾಭದ ದರವು ನಿರಂತರವಾಗಿ ಹಿಗ್ಗುವುದನ್ನು ಕಂಡ ಬಂಡವಾಳಶಾಹಿ ಸುವರ್ಣ ಯುಗ. ಆದ್ದರಿಂದಲೇ ದೇಶಗಳು ತಮ್ಮ ಸಂಪನ್ಮೂಲದ ಬಹುಪಾಲನ್ನು ಬಂಡವಾಳಶಾಹಿಗಳ ಲೂಟಿಗೆ ತೆರೆದಿಟ್ಟರೂ ಒಂದು ಪಾಲನ್ನು ಕಲ್ಯಾಣ ರಾಜ್ಯದ ನೀತಿಗಳ ಮೂಲಕ ಜನರ ಸ್ಥಿತಿಗತಿಗಳನ್ನು ಮತ್ತು ಬದುಕಿನ ಮಟ್ಟವನ್ನು ಏರಿಸಲು ವ್ಯಯ ಮಾಡುವುದಕ್ಕೆ ವಿರೋಧಿಸದಷ್ಟು ಮಟ್ಟಿಗೆ ಬಂಡವಾಳಶಾಹಿ ಸೌಮ್ಯವಾಗಿತ್ತು. ಅಲ್ಲದೆ ಕಮ್ಯುನಿಸ್ಟ್ ಸಮತಾವಾದಿ ರಾಜಕೀಯದ ಬಗ್ಗೆ ವಿಶ್ವಾದ್ಯಂತ ದುಡಿಯುವ ಜನರು ತೋರುತ್ತಿದ್ದ ಆಸಕ್ತಿಯಿಂದ ಕಂಗಾಲಾಗಿದ್ದ ಬಂಡವಾಳಶಾಹಿ ಜಗತ್ತು ತನ್ನ ಸೈದ್ಧಾಂತಿಕ ಮತ್ತು ರಾಜಕೀಯ ಯಾಜಮಾನ್ಯವನ್ನು ಕಾಪಾಡಿಕೊಳ್ಳಲೂ ಸಹ ಸೌಮ್ಯತೆಯ ಮುಖವಾಡವನ್ನು ಧರಿಸುವ ಪ್ರಜಾತಂತ್ರದ ನಾಟಕವಾಡುವ ಅಗತ್ಯವಿತ್ತು.

ಆದರೆ 1970ರ ತೈಲ ಬಿಕ್ಕಟ್ಟಿನ ನಂತರ ಬಂಡವಾಳಶಾಹಿ ಜಗತ್ತು ಹೆಚ್ಚೆಚ್ಚು ಬಿಕ್ಕಟ್ಟಿಗೆ ಸಿಲುಕುತ್ತಾ ಹೋಗಿದೆ. ಹೀಗಾಗಿ ತಾತ್ಕಾಲಿಕವಾಗಿದ್ದ ಮತ್ತು ಕೃತಕವಾಗಿದ್ದ ಅದರ ಸೌಮ್ಯ ಮುಖವು ಕಳಚುತ್ತಾ ಅದರ ಹಿಂದಿನ ಸುಲಿಯುವ ಅಸಲಿ ರಾಕ್ಷಸ ಲಾಭದ ಬಕಾಸುರ ಹಸಿವಿನಲ್ಲಿ ಜಗತ್ತಿನ ಸಂಪತ್ತು ಮತ್ತು ಶ್ರಮದ ಮೇಲೆ ಉಗ್ರ ಆಕ್ರಮಣ ನಡೆಸುತ್ತಿದೆ. ಆದರೆ ಈ ಸುಲಿಗೆಗೆ ಸೌಮ್ಯ ಬಂಡವಾಳಶಾಹಿ ಕಾಲಘಟ್ಟದ ಕಲ್ಯಾಣ ರಾಜ್ಯ ನೀತಿಗಳು ಮತ್ತು ಪ್ರಜಾತಂತ್ರದ ವ್ಯವಸ್ಥೆ ಅಡ್ಡಿಯಾಗಿದೆ. ಅದೇ ಸಮಯದಲ್ಲಿ ಜನರ ಮೇಲೆ ಸೈದ್ಧಾಂತಿಕ ಯಾಜಮಾನ್ಯ ಇಲ್ಲದಿದ್ದರೆ ಅರ್ಥಾತ್ ಜನರ ಸಮ್ಮತಿ ಯಿಲ್ಲದಿದ್ದರೆ ಬಂಡವಾಳಶಾಹಿ ವ್ಯವಸ್ಥೆಯ ಮುಂದುವರಿಕೆಯೂ ಕಷ್ಟವಿದೆ.

ಇದು ಕಳೆದ 25 ವಷರ್ಗಳ ಜಾಗತಿಕ ಮತ್ತು ಭಾರತದ ಪ್ರಜಾತಾಂತ್ರಿಕ ರಾಜಕಾರಣ ಎದುರಿಸುತ್ತಾ ಬಂದಿರುವ ವೈರುಧ್ಯ. ಆದರೆ ಜನರ ಬಳಿ ಇದ್ದದ್ದನ್ನು ಕಿತ್ತುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟರೂ ಜನರ ಪರವೆಂಬ ರಾಜಕೀಯವನ್ನು ಮಾಡುವುದು ಕಲ್ಯಾಣ ರಾಜ್ಯ ಅಥವಾ ಪ್ರಜಾತಾಂತ್ರಿಕ ವ್ಯವಸ್ಥೆಯ ಪಕ್ಷಗಳಿಗೆ ಸಾಧ್ಯವಾಗುವುದಿಲ್ಲ. ಈ ಬದಲಾದ ರಾಜಕೀಯ ಆರ್ಥಿಕತೆಯೇ ಜಗತ್ತಿನೆಲ್ಲೆಡೆ ಉಗ್ರ ಬಲಪಂಥೀಯ ಮತ್ತು ಸರ್ವಾಧಿಕಾರಿ ರಾಜಕಾರಣದ ಮರುಹುಟ್ಟಿಗೆ ಭೂಮಿಕೆ ಒದಗಿಸಿದೆ. ಈ ವೈರುಧ್ಯದ ಸಾರಾಂಶವಿಷ್ಟೆ. ಒಂದೆಡೆ ಈವರೆಗೆ ಸೌಮ್ಯ ಬಂಡವಾಳಶಾಹಿಯನ್ನು ಪ್ರತಿಪಾದಿಸುತ್ತಿದ್ದ ನಡು ಮತ್ತು ಎಡ-ನಡು ಪಕ್ಷಗಳು ಒಂದೊಮ್ಮೆ ಅಧಿಕಾರಕ್ಕೆ ಬಂದರೂ ಉಗ್ರ ಬಂಡವಾಳಶಾಹಿಯ ಆಕ್ರಮಣಕ್ಕೆ ಅನುಕೂಲಕರವಾದ ನೀತಿಯನ್ನೇ ಜಾರಿ ಮಾಡಲೇಬೇಕಿದೆ. ಅದರಿಂದಾಗಿಯೇ ಅಂತಹ ಪಕ್ಷಗಳು ಜನರ ಎದುರು ಅಮಾನ್ಯಗೊಳ್ಳುತ್ತಿವೆ. 1970ರಿಂದಲೂ ಬಂಡವಾಳಶಾಹಿಯ ನಿರಂತರವಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಬಂದಿದೆ.

ಆದರೆ ಪ್ರತಿ ಬಾರಿ ಒಂದಲ್ಲಾ ಒಂದು ರೀತಿ ಲಾಭದ ಮತ್ತೊಂದು ಮೂಲವನ್ನು ಕಂಡುಕೊಂಡು ಆ ಸದ್ಯದ ಬಿಕ್ಕಟ್ಟಿನಿಂದ ಹೊರಬರುತ್ತಿದ್ದವು. ಆದರೆ ಆಗಲೂ ಕಲ್ಯಾಣ ರಾಜ್ಯವು ಕೊಟ್ಟ ಸೌಲಭ್ಯಗಳನ್ನೂ ಒಂದೊಂದಾಗಿ ಹಿಂತೆಗೆದುಕೊಂಡು ತಮಗೆ ಒದಗಿಸಲು ರಾಜಕೀಯ ವ್ಯವಸ್ಥೆಯ ಮೇಲೆ ಯಶಸ್ವಿಯಾಗಿ ಒತ್ತಡಗಳನ್ನು ಹೇರುತ್ತಲೇ ಬಂದಿವೆ. ಆದರೆ 2008ರ ನಂತರದಲ್ಲಿ ಜಗತ್ತಿನ ಬಂಡವಾಳಶಾಹಿ ಎದುರಿಸುತ್ತಿರುವ ರಾಚನಿಕ ಬಿಕ್ಕಟ್ಟು ಇನ್ನೂ ಆಳವಾಗಿದ್ದು ಅದರಿಂದ ಹೊರಬರಲು ಅದು ಎಲ್ಲಾ ಮುಖವಾಡಗಳನ್ನು ಕಳಚಿಟ್ಟು ಅತ್ಯಂತ ನಗ್ನವಾಗಿ ಜಗತ್ತಿನ ಸುಲಿಗೆಗೆ ಇಳಿದಿದೆ. ಈ ಕ್ರೂರ ಆರ್ಥಿಕ ಆಕ್ರಮಣವನ್ನು ಕಲ್ಯಾಣ ರಾಜ್ಯದ ಕಾಲದ ಪ್ರಜಾತಾಂತ್ರಿಕ ರಾಜಕೀಯದಿಂದ ಸಮರ್ಥಿಸಲು ಸಾಧ್ಯವೇ ಇಲ್ಲ. ಏಕೆಂದರೆ ಮತ್ತೊಮ್ಮೆ ಈ ಬಂಡವಾಳಶಾಹಿ ಸೌಮ್ಯದೆಸೆಗೆ ಹೋಗಿ ಜನರೊಂದಿಗೆ ಸಂಪನ್ಮೂಲವನ್ನು ಹಂಚಿಕೊಳ್ಳುವ ಸಂದರ್ಭವಿಲ್ಲ. ಹೀಗಾಗಿಯೇ ಉಗ್ರ ಆರ್ಥಿಕ ಆಕ್ರಮಣವನ್ನು ಸಮರ್ಥಿಸಿಕೊಳ್ಳುವ ಉಗ್ರ ರಾಜಕೀಯ, ಅರ್ಥಾತ್ ಉಗ್ರ ರಾಷ್ಟ್ರವಾದ, ಚುನಾವಣಾ ಸರ್ವಾಧಿಕಾರ, ಮೋದಿ ರೂಪದ ಭಾರತೀಯ ಫ್ಯಾಶಿಸಂ ಸ್ವರೂಪಗಳು ಈ ಹಿಂದಿನ ಎಡ ಮತ್ತು ನಡು ಎಡ ರಾಜಕೀಯದ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಅಂದರೆ ಸಾರಾಂಶವಿಷ್ಟೆ.

ಇಂದಿನ ಆಕ್ರಮಣಶೀಲ ಉಗ್ರ ಬಂಡವಾಳಕ್ಕೆ ಸೌಮ್ಯ ಬಂಡವಾಳವಾದ ಉತ್ತರವಲ್ಲ. ಏಕೆಂದರೆ ಬಂಡವಾಳಶಾಹಿ ಎದುರಿಸುತ್ತಿರುವ ಈ ಬಿಕ್ಕಟ್ಟಿಗೆ ಸೌಮ್ಯ ಬಂಡವಾಳಶಾಹಿಯಲ್ಲಿ ಪರಿಹಾರವಲ್ಲ. ಈ ಸಂದರ್ಭವು ಕಲ್ಯಾಣ ರಾಜ್ಯವನ್ನು ಆಧರಿಸಿದ ಅರ್ಥಾತ್ ಸೌಮ್ಯ ಬಂಡವಾಳಶಾಹಿ ಕಾಲಘಟ್ಟದಲ್ಲಿ ಮೂಲವಿರುವ ರಾಜಕೀಯವನ್ನು ಒಂದು ಹಿಪಾಕ್ರಸಿಗೆ ಮತ್ತು ಅಸಾಂಗತ್ಯಕ್ಕೆ ದೂಡುತ್ತದೆ. 1984ರ ನಂತರ ಸಂದರ್ಭ ಹುಟ್ಟುಹಾಕಿರುವ ಈ ರಾಚನಿಕ ವೈರುಧ್ಯವೇ ಎಡ ಮತ್ತು ಎಡ-ನಡುಪಂಥೀಯ ಪ್ರತಿರೋಧ ಬೀದಿಯಲ್ಲಿ ಕಣ್ಮರೆಯಾಗುತ್ತಾ ಹೋಗಲು ಕಾರಣ. ಫಾಶ್ಯಿಸಂ ಅನ್ನು ತೀವ್ರ ಬಿಕ್ಕಟ್ಟಿಗೆ ಗುರಿಯಾಗಿರುವ ಬಂಡವಾಳಶಾಹಿಯ ಅಕ್ರಮಣಶೀಲ ಉಗ್ರ ರಾಜಕೀಯವೆಂದು ಅರ್ಥಮಾಡಿಕೊಂಡರೆ ಅದನ್ನು ಸೋಲಿಸುವ ಶಕ್ತಿ ಇರುವುದು ಅಷ್ಟೇ ದೃಢವಾದ ಪರ್ಯಾಯ ಸಮಾಜವಾದಿ ಪ್ರತಿರೋಧಕ್ಕೆ ಮಾತ್ರ. ಎಲ್ಲಾ ಬಗೆಯ ಪ್ರತಿರೋಧಗಳು ಈ ಸತ್ಯವನ್ನು ಅರ್ಥಮಾಡಿಕೊಂಡು ರೂಪಾಂತರಗೊಂಡಾಗ ಮಾತ್ರ ಈ ಕಾಲಘಟ್ಟದಲ್ಲಿ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News