‘ತಮಸ್’-ಕತ್ತಲೆಯಾಚೆಗಿನ ಬೆಳಕು
ಪ್ರೇಕ್ಷಕನ ಕೊರಳಪಟ್ಟಿ ಹಿಡಿದು ಆಸನಕ್ಕೆ ಕೂರಿಸುವ ಶಕ್ತಿ ತಮಸ್ ಕೃತಿಗಿದೆ. ಇದು ದೇಶವಿಭಜನೆಯ ಕಾಲದ ಕತೆ. ಶಾಪಗ್ರಸ್ತ ಅವಧಿಯ ಸ್ಮರಣೆಯ ಕೃತಿ. ಮನುಷ್ಯನನ್ನು ತೋಳವನ್ನಾಗಿ ಪರಿವರ್ತಿಸಿದ ಕಾಲದ ಕೃತಿ. ಎಲ್ಲ ಸಮುದಾಯಗಳಲ್ಲಿರುವ ಕೋಮುವಾದಿಗಳು, ಮೂಲಭೂತವಾದಿಗಳು ಸೃಷ್ಟಿಸಿದ ಮಾನವ ಯಜ್ಞಕಾಂಡದ ಘೋರವನ್ನು ದರ್ಶಿಸಿದ ಸಿನೆಮಾ. ಅಮಾಯಕ ಜನತೆ ಕ್ರೂರ ಕೋಮುವಾದಿಗಳ ಜಾಲಕ್ಕೆ ಸಿಕ್ಕಿ ದಳ್ಳುರಿಯಲ್ಲಿ ಬೇಯುವ ಕತೆ. ಈಗ ಇದೇ ಹಾದಿಯಲ್ಲಿ ಆರ್ಟಿಕಲ್ 15 ಚಿತ್ರ ಬಿಡುಗಡೆಯಾಗಿ ಚರ್ಚೆಗೊಳಗಾಗುತ್ತಿರುವುದು ಕುತೂಹಲಕರವಾಗಿದೆ...
ದೀಪಗಳು ಆರಿಹೋದ ಮಂದಿರದಲ್ಲಿ ಕತ್ತಲಿನ ತೆರೆಯನ್ನು ಸೀಳಿದ ಆರ್ತನಾದವೊಂದು ಕಿವಿಯನ್ನು ಅಪ್ಪಳಿಸುತ್ತದೆ. ಆ ದನಿಯೇ ಪ್ರೇಕ್ಷಕನನ್ನು ಮುಂದಿನ ಐದು ಗಂಟೆಯ ‘ಒದ್ದಾಟ’ಕ್ಕೆ ಸಿದ್ಧಗೊಳಿಸುತ್ತದೆ. ನಿಧಾನವಾಗಿ ತೆರೆಯಲ್ಲಿ ಬೆಳಕು ಮೂಡುತ್ತದೆ. ಶೀರ್ಷಿಕೆಗಳು ಕಾಣತೊಡಗುತ್ತವೆ. ತೆರೆಯಲ್ಲಿ ದೃಶ್ಯಗಳು ತೆರೆದುಕೊಂಡಂತೆ ಗೋವಿಂದ ನಿಹಲಾನಿಯವರ ಐದು ಗಂಟೆಗಳ ಸುದೀರ್ಘ ಟೆಲಿಫಿಲಂ ಭಾರತೀಯ ಚಲನಚಿತ್ರರಂಗದ ಹೊಸ ಇತಿಹಾಸವೊಂದನ್ನು ಬರೆಯತೊಡಗುತ್ತದೆ.
ಇದು ‘ತಮಸ್’. ಭಾರತದ ಕತ್ತಲಿನ ಚರಿತ್ರೆಗೆ ಬೆಳಕು ಹಿಡಿದ ಚಿತ್ರ. ಭೀಷ್ಮ ಸಹಾನಿಯವರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ರೂಪಿಸಿದ ಆರು ಭಾಗಗಳ ಚರಿತ್ರೆ. ಪ್ರಾಯಶಃ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಅಪೂರ್ವ ನಿರ್ದೇಶಕ ಗೋವಿಂದ ನಿಹಲಾನಿಯವರ ಗಮನಾರ್ಹ ಬಹುಮುಖ್ಯ ಚಿತ್ರ. 1980ರಲ್ಲಿ ದೂರದರ್ಶನಕ್ಕಾಗಿ ಸತ್ಯಜಿತ್ ರೇ ಅವರು ನಿರ್ದೇಶಿಸಿದ ಒಂದು ಗಂಟೆ ಅವಧಿಯ ಸದ್ಗತಿ ಟೆಲಿಫಿಲಂ ನಂತರ ಭಾರತೀಯ ದೂರದರ್ಶನಕ್ಕಾಗಿ ಸೃಷ್ಟಿಸಿದ ಅತ್ಯಂತ ಗಂಭೀರವಾದ ಕಲಾಕೃತಿಯೆಂದರೆ ‘ತಮಸ್’ (1988). ದೂರದರ್ಶನದಲ್ಲಿ ಪ್ರಸಾರವಾಗಿ ಯಶಸ್ಸು ಕಂಡ ರಮೇಶ್ ಸಿಪ್ಪಿಯವರ ‘ಬುನಿಯಾದ್’ (ಮೇ 1986ರಿಂದ ಒಂದು ವರ್ಷ) ಧಾರಾವಾಹಿ ಸರಣಿಯಲ್ಲಿ ದೇಶವಿಭಜನೆಯ ಕತೆ ಹಿನ್ನೆಲೆಯಲ್ಲಿದ್ದರೆ ‘ತಮಸ್’ ಕೃತಿಯು ಮನುಕುಲ ಕಂಡ ಭೀಕರ ಉನ್ಮಾದದ ದುರಂತದ ಹಿಂದಿನ ಮನಸ್ಥಿತಿಯನ್ನು ತೀವ್ರವಾಗಿ ಅನ್ವೇಷಿಸುತ್ತದೆ. ಆ ಮೂಲಕ ಭಾರತದ ಚರಿತ್ರೆಯ ಒಂದು ಕಾಲಘಟ್ಟದ ಸಾಮಾಜಿಕ ತರತಮಗಳು, ರಾಜಕೀಯ ಸಿದ್ಧಾಂತಗಳು ಪಾಲಿಸುವ ಮನುಕುಲ ವಿರೋಧಿ, ಅಮಾನವೀಯ ಆಚರಣೆಗಳು ಅನಾವರಣಗೊಳ್ಳುತ್ತವೆ. ದುರಂತಗಳು ಹೃದಯ ಹೆಪ್ಪುಗಟ್ಟುವಂತೆ ಮಾಡುತ್ತವೆ. ಎಂ.ಎಸ್. ಸತ್ಯು ಅವರ ‘ಗರಂ ಹವಾ’ ಚಿತ್ರದಂತೆಯೇ ಈ ಕಥನವು ಎಲ್ಲವನ್ನು ನಗ್ನಗೊಳಿಸುತ್ತದೆ. ಕಲೆಯ ಹೆಸರಿನಲ್ಲಿ ಏನನ್ನೂ ಮುಚ್ಚಿಡುವುದಿಲ್ಲ.
ಭಾರತದ ಟೆಲಿವಿಷನ್ ಮೂಲಕ ಭಾರತೀಯರ ಆತ್ಮಸಾಕ್ಷಿಯನ್ನು ಕೆಣಕಿದ ‘ತಮಸ್’ ಪ್ರದರ್ಶನಗೊಂಡು ಮೂವತ್ತು ವರ್ಷಗಳಾದವು. ಈಗ ‘ಆರ್ಟಿಕಲ್ 15’ ಚಿತ್ರವು ನಿರ್ವಹಿಸಿರುವ ವಸ್ತುವನ್ನು ನೋಡಿದರೆ 1947 ಮತ್ತು 2019ರ ನಡುವೆ ಭಾರತೀಯ ಸಮಾಜದಲ್ಲಿ ಆರ್ಥಿಕ ಪ್ರಗತಿ, ಶಿಕ್ಷಣ, ಉತ್ಪಾದನೆಯ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಹೊರತುಪಡಿಸಿದರೆ, ಭಾರತೀಯರ ಮನೋಭೂಮಿಕೆಯಲ್ಲಿ ಯಾವ ಪರಿವರ್ತನೆಯೂ ಆಗದಿರುವುದು ಸ್ಪಷ್ಟವಾಗಿದೆ.
ಭಾರತದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲೊಬ್ಬರಾದ ಕ್ಯಾಮರಾಮನ್ ಗೋವಿಂದ ನಿಹಲಾನಿಯವರು ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದವರು (1940). ದೇಶ ವಿಭಜನೆಯ ಕಾಲದಲ್ಲಿ ನಿರಾಶ್ರಿತರಾಗಿ ಉದಯಪುರಕ್ಕೆ ಬಂದು ಸೇರಿದವರು. ಅವರದು ತಲಾ ನಾಲ್ವರು ಸೋದರರು, ಸೋದರಿಯರಿದ್ದ ದೊಡ್ಡ ಕುಟುಂಬ. ಕುಟುಂಬ ಬದುಕಲು ಒದ್ದಾಡುತ್ತಿದ್ದಾಗ ಹತ್ತೊಂಬತ್ತು ವಯಸ್ಸಿನ ಕಿರಿಯ ನಿಹಲಾನಿ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನೆಮಾಟೋಗ್ರಫಿ ಕಲಿಯಲು ಬಂದರು. (ಅಂದ ಹಾಗೆ ಭಾರತದ ಪ್ರತಿಷ್ಠಿತ ಸಿನೆಮಾ ತರಬೇತಿ ಕೇಂದ್ರವೆನಿಸಿದ ಎಸ್.ಜೆ. ಪಾಲಿಟೆಕ್ನಿಕ್ ಈ ವರ್ಷ ಅಮೃತ ಮಹೋತ್ಸವ ಆಚರಿಸಲಿದೆ)
1962ರಲ್ಲಿ ಮೂರು ವರ್ಷದ ಡಿಪ್ಲೋಮಾ ಪಡೆದ ಅವರು ಕ್ಯಾಮರಾ ಸಹಾಯಕನಾಗಿ ಸೇರಿದ್ದು ಭಾರತದ ಶ್ರೇಷ್ಠ ಛಾಯಾಗ್ರಾಹಕರೆನಿಸಿದ ಕನ್ನಡಿಗ ವಿ.ಕೆ. ಮೂರ್ತಿ ಅವರ ಹತ್ತಿರ. ಗುರುದತ್ ಅವರ ‘ಪ್ಯಾಸಾ’, ‘ಕಾಗಜ್ ಕೆ ಫೂಲ್’ ಚಿತ್ರದಲ್ಲಿ ಸಹಾಯಕರಾದ ನಂತರ ಮುಂದಿನ ಹತ್ತು ವರ್ಷಗಳ ಕಾಲ ಹಿಂದಿ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರು, ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ಸತ್ಯದೇವ್ ದುಬೆ, ವಿಜಯ ತೆಂಡುಲ್ಕರ್ ಅವರ ಸಹವಾಸದಲ್ಲಿ ತಮ್ಮ ಸಾಮಾಜಿಕ ತಿಳಿವಳಿಕೆಯನ್ನು ವಿಸ್ತರಿಸಿಕೊಂಡರು. ಆ ನಂತರ ಶ್ಯಾಮ್ ಬೆನೆಗಲ್ ಅವರೊಡನೆ ಅರ್ಥಪೂರ್ಣ ಸಾಂಗತ್ಯ ದೊರೆಯಿತು. ಬೆನೆಗಲ್ ಅವರ ಆರಂಭದ ಚಿತ್ರ ‘ಅಂಕುರ್’ನಿಂದ ಹಿಡಿದು, ‘ನಿಶಾಂತ್’, ‘ಮಂಥನ್’, ‘ಭೂಮಿಕ’, ‘ಜುನೂನ್’, ಕಲಿಯುಗ್, ಆರೋಹಣ್ ಮೊದಲಾದ ಚಿತ್ರಗಳ ಕಲಾತ್ಮಕ ಮತ್ತು ವಾಣಿಜ್ಯ ಯಶಸ್ಸಿನ ಪಾಲುದಾರರಾದರು. ಕನ್ನಡದ ‘ಕಾಡು’ ಚಿತ್ರದ ಛಾಯಾಗ್ರಹಣದಲ್ಲಿ ತಮ್ಮ ಕೈಚಳಕ ತೋರಿದ ನಿಹಲಾನಿ ಅವರು ಕರ್ನಾಟಕದ ಜೊತೆ ಅರ್ಥಪೂರ್ಣ ಸಂಬಂಧ ಹೊಂದಿದ್ದಾರೆ.
ಇಂದಿಗೆ ನಾಲ್ಕು ದಶಕಗಳ ಹಿಂದೆ ಅವರ ನಿರ್ದೇಶನದ ಮೊದಲ ಚಿತ್ರ ‘ಆಕ್ರೋಶ್’ (1979)ಬಿಡುಗಡೆಯಾದಾಗ ಭಾರತೀಯ ಚಿತ್ರರಂಗದಲ್ಲಿ ಸಂಚಲನವೊಂದು ಮೂಡಿತು. ಇಂದಿನ ‘ಆರ್ಟಿಕಲ್ 15’ರ ಮಾತೃಕೆಯಂತಿರುವ ಆಕ್ರೋಶ್ ಭಾರತೀಯ ಸಿನೆಮಾರಂಗ ಆವರೆಗೂ ಮೂಸಿನೋಡದಿದ್ದ, ಬುಡಕಟ್ಟು ಜನಾಂಗದ ಎಲ್ಲ ಬಗೆಯ ಶೋಷಣೆಗಳನ್ನು, ಪೊಲೀಸ್ ನಿಷ್ಕ್ರಿಯತೆ, ಪಾಳೇಗಾರ ಮನಸ್ಥಿತಿಯ ಕಂಟ್ರಾಕ್ಟರು. ಜಮೀನುದಾರರ ಅಟ್ಟಹಾಸ ಮತ್ತು ನ್ಯಾಯ ದೊರಕಿಸಿಕೊಡಲು ಹೋರಾಡುವ ಆದರ್ಶದ ಹಿಂದೆ ಬಿದ್ದ ವಕೀಲ-ಹೀಗೆ ಭಾರತದ ಮಧ್ಯಮ, ಮೇಲ್ವರ್ಗದ ಕ್ರೌರ್ಯವನ್ನು ಎದೆಗೆ ನಾಟುವಂತೆ ನಿರೂಪಿಸಿತು. ಆ ಮೂಲಕ ಭಾರತ ಚಿತ್ರರಂಗಕ್ಕೆ ಸಾಮಾಜಿಕ ಸಂಗತದ ವಿಷಯಗಳನ್ನು ಕಲಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರೂಪಿಸಬಲ್ಲ ಅಪ್ರತಿಮ ನಿರ್ದೇಶಕನೊಬ್ಬನ ಆಗಮನವಾಯಿತು.
ರಿಚರ್ಡ್ ಅಟೆನ್‌ಬರೋ ಅವರ ಗಾಂಧಿ (1981) ಚಿತ್ರದ ಎರಡನೇ ಯೂನಿಟ್‌ನ ನಿರ್ದೇಶಕ-ಕ್ಯಾಮರಾಮನ್ ಆಗಿ ದುಡಿದ ನಿಹಲಾನಿಯವರು ಶಶಿಕಪೂರ್ ಅವರಿಗಾಗಿ ಭಾರತದ ವಾಯುದಳದ ಗೌರವಾರ್ಥ ವಿಜೇತ (1982) ಚಿತ್ರವನ್ನು ನಿರ್ದೇಶಿಸಿದರು. ನನ್ನ ದೃಷ್ಟಿಯಲ್ಲಿ ಅದು ಅವರ ಅತ್ಯಂತ ದುರ್ಬಲ ಸಿನೆಮಾ. ಆದರೆ ಅರ್ಧ ಸತ್ಯ (1982) ಚಿತ್ರದ ಮೂಲಕ ಭಾರತೀಯ ಚಲನಚಿತ್ರರಂಗಕ್ಕೆ ಹೊಸ ತಿರುವು ನೀಡಿದರು. ಎಪ್ಪತ್ತರ ದಶಕದ ಯುವ ರುದ್ರ ಅಮಿತಾಭ್ ಪಾತ್ರಗಳ ಕಲಾತ್ಮಕ ಹಾಗೂ ವಸ್ತುನಿಷ್ಠ ರೂಪವೊಂದನ್ನು ಅರ್ಧಸತ್ಯ ಚಿತ್ರದ ಅನಂತ್ ವೇಲೇಕರ್‌ನ ಪಾತ್ರದಲ್ಲಿ ಸೃಷ್ಟಿಸಿದರು. ಅಭೂತಪೂರ್ವ ಯಶಸ್ಸು ಕಂಡ ‘ಅರ್ಧಸತ್ಯ’, ಓಂಪುರಿಯಂಥ ನಟನಿಗೆ ಚಿತ್ರರಂಗದಲ್ಲಿ ಭದ್ರಸ್ಥಾನ ಕಲ್ಪಿಸಿತು. ಆನಂತರ ನಿಹಲಾನಿಯವರು ಆರಿಸಿಕೊಂಡ ವಸ್ತುಗಳು ಹೊಸತನದಿಂದ ಕೂಡಿದ್ದು ಮಾತ್ರವಲ್ಲ, ಚಿತ್ರವನ್ನು ನೋಡುವ, ಆಸ್ವಾದಿಸುವ ಕ್ರಮವನ್ನೇ ಬದಲಿಸುವಷ್ಟು ಶಕ್ತವಾಗಿ ಚಿತ್ರಗಳನ್ನು ರೂಪಿಸಿದರು. ‘ಆಘಾತ್’ ಚಿತ್ರವು ಮುಂಬೈಯ ಕಾರ್ಮಿಕ ಸಂಘಗಳ ಸಂಘರ್ಷವನ್ನು ಅವಲೋಕಿಸಿದರೆ, ಪಾರ್ಟಿ ಮೇಲ್ವರ್ಗದ, ಆರಾಮ ಬುದ್ಧಿಜೀವಿಗಳ ಅರ್ಥಹೀನ ಚರ್ಚೆಗಳ ಬಗ್ಗೆ ಬೆಳಕು ಚೆಲ್ಲಿತು. ಈ ಎಲ್ಲ ಅನುಭವಗಳ ಹಿನ್ನೆಲೆಗಳನ್ನಿಟ್ಟುಕೊಂಡು ನಿಹಲಾನಿಯವರು ತಮ್ಮೆಲ್ಲ ಪ್ರತಿಭೆ, ಕೌಶಲವನ್ನು ಬಸಿದು ‘ತಮಸ್’ ರೂಪಿಸಿದರು.
ಪ್ರೇಕ್ಷಕನ ಕೊರಳಪಟ್ಟಿ ಹಿಡಿದು ಆಸನಕ್ಕೆ ಕೂರಿಸುವ ಶಕ್ತಿ ‘ತಮಸ್’ ಕೃತಿಗಿದೆ. ಇದು ದೇಶವಿಭಜನೆಯ ಕಾಲದ ಕತೆ. ಶಾಪಗ್ರಸ್ತ ಅವಧಿಯ ಸ್ಮರಣೆಯ ಕೃತಿ. ಮನುಷ್ಯನನ್ನು ತೋಳವನ್ನಾಗಿ ಪರಿವರ್ತಿಸಿದ ಕಾಲದ ಕೃತಿ. ಎಲ್ಲ ಸಮುದಾಯಗಳಲ್ಲಿರುವ ಕೋಮುವಾದಿಗಳು, ಮೂಲ ಭೂತವಾದಿಗಳು ಸೃಷ್ಟಿಸಿದ ಮಾನವ ಯಜ್ಞಕಾಂಡದ ಘೋರವನ್ನು ದರ್ಶಿಸಿದ ಸಿನೆಮಾ. ಅಮಾಯಕ ಜನತೆ ಕ್ರೂರ ಕೋಮುವಾದಿಗಳ ಜಾಲಕ್ಕೆ ಸಿಕ್ಕಿ ದಳ್ಳುರಿಯಲ್ಲಿ ಬೇಯುವ ಕತೆ.
ಚಿತ್ರ ಆರಂಭವಾಗುವುದೇ ಚಮ್ಮಾರನೊಬ್ಬ ಹಂದಿಯೊಂದನ್ನು ಹಿಡಿಯಲು ಮಾಡುವ ಸಾಹಸದಿಂದ. ಗರ್ಭಿಣಿ ಹೆಂಡತಿಯನ್ನು ಬಿಟ್ಟು ಬಂದಿರುವ ಆತ ನಾಲ್ಕು ಕಾಸಿನ ಆಸೆಗೆ ನಾಯಕನೊಬ್ಬನ ಆಣತಿಯಂತೆ ಹಂದಿಯೊಂದನ್ನು ಹಿಡಿದು ಕೊಲ್ಲುವ ಯತ್ನವು ಸಾವು-ಬದುಕಿನ, ಜೀವನ ಸಂಘರ್ಷವೆಂಬಂತೆ ನಿಹಲಾನಿ ಚಿತ್ರಿಸಿದ್ದಾರೆ. ಸತ್ತ ಹಂದಿ ಮಸೀದಿ ಮುಂದೆ ಕಾಣಿಸಿಕೊಳ್ಳುತ್ತದೆ. ಇದು ದೇಶ ವಿಭಜನೆಯ ಪೂರ್ವದ (ಮೇ 1947) ರಾವಲ್ಪಿಂಡಿಯಲ್ಲಿ ಕೋಮು ಗಲಭೆಯ ಕಿಡಿಗಳನ್ನು ಹೊತ್ತಿಸುತ್ತದೆ. ಘಟನಾವಳಿಗಳಿಗೆ ಸಾಕ್ಷಿಯಾದ ಚಮ್ಮಾರ ನತ್ತು(ಓಂಪುರಿ)ವಿನಲ್ಲಿ ಪಾಪಪ್ರಜ್ಞೆ ಸುತ್ತಿಕೊಳ್ಳುತ್ತದೆ. ಆ ಪ್ರಜ್ಞೆಯಿಂದ ಬಿಡುಗಡೆ ಮಾಡಲು ಅವನ ಹೆಂಡತಿ ಕರ್ಮೋ (ದೀಪಾ ಸಾಹಿ) ವಿಫಲಯತ್ನ ಮಾಡುತ್ತಾಳೆ. ನೋಡು ನೋಡುತ್ತಿದ್ದಂತೆ ಅಣ್ಣತಮ್ಮಂದಿರಂತಿದ್ದವರು ಕ್ಷುದ್ರ ರಾಜಕಾರಣಿಗಳು, ಧರ್ಮಾಂಧರ ಮಾತಿಗೆ ಜೀವ ತೆಗೆಯಲು, ಜೀವಕೊಡಲು ಆಯುಧ ಹಿಡಿದು ನಿಲ್ಲುತ್ತಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ವಿಫಲವಾದ ಕಾಂಗ್ರೆಸ್‌ನ ಅಸಮರ್ಥತೆ, ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾದ ಯುದ್ಧೋನ್ಮಾದ, ಬ್ರಿಟಿಷ್ ಆಡಳಿತದ ಉಪೇಕ್ಷೆಯೆಲ್ಲವೂ ಕತೆಯಲ್ಲಿ ಹೆಣೆದುಕೊಂಡು ಮನುಕುಲದ ಮಹಾದುರಂತಗಳಲ್ಲಿ ಒಂದೆನಿಸಿದ, ಭಾರತದ ಕೋಮುದಳ್ಳುರಿಗೆ ನೆರವಾಗುತ್ತವೆ. ಹೊತ್ತಿ ಉರಿಯುವ ನಗರದಲ್ಲಿ ತೊಳಲಾಡುವ ನತ್ತು ತನ್ನ ಗರ್ಭಿಣಿ ಹೆಂಡತಿ ಮತ್ತು ಕಾಯಿಲೆಯ ತಾಯಿಯೊಡನೆ ಊರು ಬಿಡುತ್ತಾನೆ.
ದೇಶ ವಿಭಜನೆಯ ಕಾಲದ ಕ್ಲೇಷಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ನತ್ತುವಿನ ಯಾನ ಇಡೀ ಕಥಾನಕದ ಕೇಂದ್ರವಾಗುತ್ತದೆ. ನತ್ತುವಿನ ತಾಯಿಯ ಸಾವು, ಅದೇ ರೀತಿಯ ಸಂಕಷ್ಟದ ಪ್ರಯಾಣದಲ್ಲಿರುವ ಹರ್‌ನಾಮ್ ಸಿಂಗ್ (ಭೀಷ್ಮ ಸಹಾನಿ)ನ ಭೇಟಿ ಮತ್ತು ಗುರುದ್ವಾರದ ಬಳಿ ತಾತ್ಕಾಲಿಕವಾಗಿ ತಂಗುವ ದೃಶ್ಯಗಳು ಮನದಾಳಕ್ಕೆ ಇಳಿಯುತ್ತವೆ. ಧರ್ಮಾಂಧರು ಯುವಕರು, ಬಾಲಕರ ಮನಸ್ಸುಗಳನ್ನು ಧರ್ಮಾಂಧತೆಗೆ ಪರಿವರ್ತಿಸುವ ನೀಚರು, ಗುಂಪು ಗಲಭೆಯ ಸ್ವರೂಪಗಳು, ಮನುಷ್ಯ ಉನ್ಮಾದದಲ್ಲಿ ತೋಳವಾಗಿ ಬದಲಾಗುವ, ನಿರರ್ಥಕತೆಯ ಜಗಳದಲ್ಲಿ ಅಮಾನವೀಯವಾಗಿ ವರ್ತಿಸುವ, ವಿವೇಕದ ಧ್ವನಿ ಹುಚ್ಚರ ಅರಚಾಟದಲ್ಲಿ ಅಡಗಿಹೋಗುವ, ಆ ಮೂಲಕ ಆಳವಾದ ದುರಂತ ಏರ್ಪಡುವ ಕಥಾನಕವನ್ನು ನಿಹಲಾನಿ ದೃಶ್ಯಗಳ ಸಂಯೋಜನೆಯ ಮೂಲಕ ಗಾಢವಾಗಿ ತಟ್ಟುತ್ತಾರೆ. ಅತ್ಯಂತ ಮನಕಲಕುವ ದೃಶ್ಯವೆಂದರೆ, ಸಂಧಾನವನ್ನು ವಿಫಲಗೊಳಿಸಿದ ಮುಸ್ಲಿಂ ಧರ್ಮಾಂಧರ ವಿರುದ್ಧ ಕಡಿಮೆ ಸಂಖ್ಯೆಯ ಸಿಖ್ ಜನರು ಹೊಡೆದಾಡುತ್ತಿರುವ ಸಮಯದಲ್ಲಿ ಹರ್‌ನಾಮ್ ಸಿಂಗ್‌ನ ಮಗಳು, ಮಕ್ಕಳುಗಳನ್ನು ಹಿಡಿದ ಮಹಿಳೆಯರೂ ಸೇರಿದಂತೆ ಸಿಖ್ ಮಹಿಳಾ ಸಮುದಾಯದ ನೇತೃತ್ವ ವಹಿಸಿ ಬಾವಿಗೆ ಹಾರಿ ಮಾಡಿಕೊಳ್ಳುವ ಸಾಮೂಹಿಕ ಆತ್ಮಹತ್ಯೆಯ ಘಟನೆ.
ಈ ಯಾನದಲ್ಲಿ ಹರ್‌ನಾಮ್ ಸಿಂಗ್ ದಂಪತಿ ಮತ್ತು ಗಂಡನಿಂದ ಬೇರ್ಪಟ್ಟ ಕರ್ಮೋ ಸೇರುವುದು ನಿರಾಶ್ರಿತರ ಶಿಬಿರಕ್ಕೆ. ಗಂಡನನ್ನು ಹುಡುಕಿಕೊಂಡು ಆಸ್ಪತ್ರೆಗೆ ಬರುವ ಕರ್ಮೋಗೆ ಅನಾಥಶವಗಳ ನಡುವೆ ಸಿಗುವ ನತ್ತುವಿನ ದೇಹ ಕಂಡು ಆಘಾತಕ್ಕೊಳಗಾಗಿ ಹೊಸದಾಗಿ ಉದಯಿಸಿದ ದೇಶಕ್ಕೆ ಮಗುವನ್ನು ಕೊಡಲೋ ಎಂಬಂತೆ ಹೆರಿಗೆಗಾಗಿ ಆಸ್ಪತ್ರೆ ಸೇರುತ್ತಾಳೆ. ನಿರಾಶ್ರಿತರ ಶಿಬಿರದಲ್ಲಿ ಕುಳಿತ ಹರ್‌ನಾಮ್ ಸಿಂಗ್ ದಂಪತಿ ಎಲ್ಲಾ ದಿಕ್ಕಿನಿಂದ ಗಾಳಿಯಲ್ಲಿ ತೇಲಿಬರುವ ಧಾರ್ಮಿಕ ಪ್ರಾರ್ಥನೆಗಳನ್ನು ಕೇಳುತ್ತಾ ನಿರ್ಭಾವುಕರಾಗಿ ದಿಟ್ಟಿಸುವುದರೊಂದಿಗೆ ಕರುಳು ಕಿವುಚುವ ಕಥನ ಕೊನೆಯಾಗುತ್ತದೆ.
ಈ ಕಥನವನ್ನು ದೃಶ್ಯದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟವರು ನಿಹಲಾನಿಯವರ ಗುರು ವಿ.ಕೆ. ಮೂರ್ತಿ. ಟಿ.ವಿ. ಮಾಧ್ಯಮವನ್ನೇ ಕೇಂದ್ರೀಕರಿಸಿ ದೃಶ್ಯ ಸಂಯೋಜನೆಯಲ್ಲಿ ಅವರು ಮಾಡಿಕೊಂಡಿರುವ ಬದಲಾವಣೆಗಳು ಅಧ್ಯಯನ ಯೋಗ್ಯ. ಕ್ಲೋಸ್ ಅಪ್ ಶಾಟ್‌ಗಳನ್ನೇ ಹೆಚ್ಚು ಅವಲಂಬಿಸದೆ, ಕಥನದಲ್ಲಿ ಅಂತರ್ಗತವಾದ ದುರಂತದ ಛಾಯೆಯನ್ನು ಹೊಮ್ಮಿಸುವ ರೀತಿಯಲ್ಲಿ ದೃಶ್ಯಗಳನ್ನು ಹೆಣೆಯಲಾಗಿದೆ. ಅದಕ್ಕೆ ಪೂರಕವಾಗಿ ವನರಾಜ ಭಾಟಿಯಾ ಸಂಗೀತ ದುರಂತದ ಪರಿಣಾಮವನ್ನು ಗಾಢಗೊಳಿಸಿದೆ. ಚಿತ್ರದ ನಾಯಕನೆನಿಸಿದ ನತ್ತುವಿನ ಪಾತ್ರದಲ್ಲಿ ಓಂಪುರಿಯ ಜೊತೆಗೆ ಪ್ರತಿಭಾವಂತ ಕಲಾವಿದರಾದ ಅಮರೇಶ್ ಪುರಿ, ಪಂಕಜ್ ಕಪೂರ್, ದೀಪಾ ಸಾಹಿ, ಸುರೇಖಾ ಸಿಕ್ರಿ, ಮನೋಹರ್ ಸಿಂಗ್, ಕೆ.ಕೆ. ರೈನಾ, ಎಂ.ಕೆ. ರೈನಾ, ದೀನಾ ಪಾಠಕ್ ಇತ್ಯಾದಿ ನಟರ ಅಭಿನಯ ಶ್ರೇಷ್ಠ ಮಟ್ಟದ್ದು.
ಈ ಚಿತ್ರದ ಧೈರ್ಯವನ್ನು ಸಹಿಸಲಾಗದ ಹಲವರು ದೂರದರ್ಶನದಲ್ಲಿ ಪ್ರಸಾರವಾಗುವುದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಪ್ರಯತ್ನಿಸಿದರು. ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ. ಲೆಂಟಿನ್ ಮತ್ತು ಶ್ರೀಮತಿ ಸುಜಾತ ಮನೋಹರ್ ಅವರು ತಮ್ಮ ಪ್ರಖ್ಯಾತವಾದ ತೀರ್ಪಿನಲ್ಲಿ ಚಿತ್ರದ ಪರವಾಗಿ ನಿಂತರು. ಅವರ ತೀರ್ಪಿನ ಕೆಲವು ಸಾಲುಗಳು- ‘‘ತಮಸ್ ಚಿತ್ರವು ಎರಡು ಸಮುದಾಯಗಳ ಮೂಲಭೂತವಾದಿಗಳು ಮತ್ತು ತೀವ್ರವಾದಿಗಳ ವಿರುದ್ಧ ಸಮಾನ ಪ್ರಮಾಣದಲ್ಲಿ ಟೀಕೆ ವ್ಯಕ್ತಪಡಿಸಿದೆಯೇ ಹೊರತು ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ನಿಂತಿಲ್ಲ. ಎರಡು ಸಮುದಾಯಗಳನ್ನು ಸಮಾನ ರೀತಿಯಲ್ಲಿ ವಿಮರ್ಶೆಗೊಳಪಡಿಸಿದೆ. ಅರ್ಹವೆನಿಸಿದ ಸಂದರ್ಭದಲ್ಲಿ ಶ್ಲಾಘಿಸಿದೆ. ಇಲ್ಲಿಯ ಸಂದೇಶ ಸ್ಪಷ್ಟವಾಗಿದೆ. ಗಟ್ಟಿದನಿಯಲ್ಲಿ ಹೇಳಿದೆ. ಚಿತ್ರವು ಕೋಮುವಾದ ರೋಗದ ವಿರುದ್ಧ ದನಿ ಎತ್ತಿದೆ. ದ್ವೇಷ ದ್ವೇಷವನ್ನು, ಹಿಂಸೆ ಹಿಂಸೆಯನ್ನೇ ಹುಟ್ಟುಹಾಕುತ್ತದೆಂದು ಅದು ತೋರಿಸಿದೆ. ಎರಡೂ ಧರ್ಮಗಳ ತೀವ್ರವಾದಿಗಳು ಮತ್ತು ಮೂಲಭೂತವಾದಿಗಳನ್ನು ನಗ್ನಗೊಳಿಸಿದೆ. ತಪ್ಪು ಅರಿವಾದಾಗ ಎರಡೂ ಸಮುದಾಯ ಸೋದರರಂತೆ ಒಂದಾಗುವ ಆಶಾಭಾವದಲ್ಲಿ ಕೊನೆಗೊಂಡಿದೆ..... ‘ತಮಸ್’ ಮನರಂಜನೆಯಲ್ಲ ಅದು ಚರಿತ್ರೆ. ನಮ್ಮ ದಾರುಣ ಚರಿತ್ರೆಯನ್ನು ಹಾಗೆ ಸುಮ್ಮನೆ ಕೊಡವಿಕೊಳ್ಳಲಾಗುವುದಿಲ್ಲ.’’ ಮುಂದುವರಿದು ‘ತಮಸ್’ನ ಪ್ರತಿ ಎಪಿಸೋಡ್‌ನ ಆರಂಭದಲ್ಲಿ ಹಾಕುವ ‘‘ಯಾರು ಚರಿತ್ರೆಯನ್ನು ಮರೆಯುತ್ತಾರೋ ಅವರು ಮತ್ತೆ ಅದನ್ನು ಜೀವಿಸಬೇಕಾದ ಶಾಪಕ್ಕೆ ಒಳಗಾಗುತ್ತಾರೆ’’ ಎಂಬ ಶೀರ್ಷಿಕೆಯನ್ನು ಉಲ್ಲೇಖಿಸಿದ ತೀರ್ಪು ‘‘ಪ್ರತಿಯೊಂದು ದೃಶ್ಯವನ್ನು ಪ್ರತ್ಯೇಕವಾಗಿ ವಿಶ್ಲೇಷಣೆಗೆ ಒಳಪಡಿಸುವುದು ತಪ್ಪು. ಅದು ನೀಡುವ ಒಟ್ಟಾರೆ ಪರಿಣಾಮವೇ ಮುಖ್ಯ’’ ಎಂದು ಹೇಳಿ ಅದರ ಅಬಾಧಿತ ಪ್ರದರ್ಶನಕ್ಕೆ ಅನುಮತಿ ನೀಡಿತು.
ಅನೇಕ ಪ್ರತಿಭಾವಂತರ ಸಂಗಮದಿಂದ ಭಾರತದ ಒಂದು ರುದ್ರ, ಭೀಕರ ಚರಿತ್ರೆ ಯನ್ನು ಮರುಸೃಷ್ಟಿಸಿದ ನಿಹಲಾನಿಯವರ ತಮಸ್ ಚಿತ್ರವನ್ನು ಸರಕಾರಿ ಸಂಸ್ಥೆ ದೂರದರ್ಶನ ಆ ಕಾಲದಲ್ಲಿ ಪ್ರದರ್ಶಿಸಿದ್ದು ನಮಗೆ ಸೋಜಿಗವೆನಿಸಿರಲಿಲ್ಲ. ಆದರೆ ಈ ಕಾಲದ ದೂರದರ್ಶನದ ದುಃಸ್ಥಿತಿಯನ್ನು ನೋಡಿದರೆ ಅದು ಸೋಜಿಗವೇ ಸರಿ!