ಇನ್‌ವಿಕ್ಟಸ್: ದೇಶ ಕಟ್ಟುವ ಆಟ

Update: 2019-07-21 06:14 GMT

ಮಾನವ ಚರಿತ್ರೆಯಲ್ಲಿ ನೆಲ್ಸನ್ ಮಂಡೇಲಾ ಅವರದು ವಿಶಿಷ್ಟ ವ್ಯಕ್ತಿತ್ವ. ಅದಮ್ಯವಾದ ಸಂಕಲ್ಪ, ಎದೆಗುಂದದ ಹೋರಾಟ ಮತ್ತು ದೇಶವನ್ನು ಕಟ್ಟುವ ಕಾರ್ಯದಲ್ಲಿ ತೋರಿದ ದಾರ್ಶನಿಕತೆಯಿಂದ ಅವರು ಜಗತ್ತಿನ ಇತರ ಮಹಾನ್ ನಾಯಕರಿಗಿಂತ ಭಿನ್ನವಾಗಿ ಕಾಣುತ್ತಾರೆ. ಬದುಕಿದ್ದರೆ ಈ ತಿಂಗಳು ನೂರ ಒಂದನೆಯ ವರ್ಷ ಪೂರೈಸುತ್ತಿದ್ದ (ಜನನ 18ನೇ ಜುಲೈ 1918) ಅವರು ಆಟವೊಂದರ ಮೂಲಕ ದೇಶ ಕಟ್ಟಿದ ಕತೆಯ ಇನ್‌ವಿಕ್ಟಸ್ ಚಲನಚಿತ್ರದ ಪರಿಚಯ ಇಲ್ಲಿದೆ.

ಜಗತ್ತಿನ ಚಲನಚಿತ್ರರಂಗ ಈಗ ಎರಡು ಶೈಲಿಯ ಕಥನಗಳಿಗೆ ಒಲಿದಿರುವಂತೆ ಕಾಣುತ್ತದೆ. ಒಂದು ಬಯೋಪಿಕ್(ನಿಜವಾದ ವ್ಯಕ್ತಿಗಳ ಜೀವನ ವೃತ್ತಾಂತ)ಗಳು, ಮತ್ತೊಂದು ಆಟಗಳಿಗೆ ಸಂಬಂಧಿಸಿದ ಕಥನಗಳು. ಆಟವೆನ್ನುವುದು ಕೇವಲ ಸ್ಪರ್ಧೆಯಾಗಿ ಉಳಿಯದೆ ರಾಷ್ಟ್ರೀಯತೆ, ದೇಶಪ್ರೇಮ ಮತ್ತು ಒಳಿತು ಕೆಡುಕುಗಳ ನಡುವಿನ ಹೋರಾಟವನ್ನು ಬಿಂಬಿಸಲು ಸಮರ್ಥ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಹಾಗಾಗಿ ಅವುಗಳ ಜನಪ್ರಿಯತೆ ಈಗ ಬಾಕ್ಸ್ ಆಫೀಸ್ ಸೂತ್ರವಾಗಿ ಮೆಚ್ಚುಗೆ ಪಡೆದಿದೆ. ಆದರೆ ನಿಜವ್ಯಕ್ತಿಯ ಬದುಕಿನೊಡನೆ ಆಟವೂ ಒಂದು ಭಾಗವಾಗಿ ಬರುವ ಕಥನಗಳು ಅಪರೂಪ. ಆಮಿರ್ ಖಾನ್‌ರ ‘ದಂಗಲ್’ ಅಂಥವುಗಳಲ್ಲೊಂದು. ಅಲ್ಲಿ ದೇಶಪ್ರೇಮ ಒಂದು ಕಥನಕ್ಕೆ ಹೇರಲಾದ ಭಾವವಾಗಿ ಬರುತ್ತದೆಯೇ ಹೊರತು ಪ್ರಧಾನವಾಗಿ ಅದು ವ್ಯಕ್ತಿ ಸಾಧನೆಯನ್ನು ಬಿಂಬಿಸುವ ಚಿತ್ರ. ಆದರೆ ವ್ಯಕ್ತಿಯ ಜೀವನ, ಆಡಳಿತದ ಜೊತೆ ದೇಶಕಟ್ಟುವ ಸಾಧನವಾಗಿ ಆಟವನ್ನು ಬಳಸಿಕೊಂಡ ಅಪರೂಪದ ಚಿತ್ರವೆಂದರೆ ಇನ್‌ವಿಕ್ಟಸ್ (2009).
‘ಡರ್ಟಿ ಹ್ಯಾರಿ’ ಖ್ಯಾತಿಯ ಹಾಲಿವುಡ್ ನಟ ಕ್ಲಿಂಟ್ ಈಸ್ಟ್‌ವುಡ್ ಅತ್ಯಂತ ಸಂವೇದನಾಶೀಲ ನಿರ್ದೇಶಕನಾಗಿ ರೂಪಾಂತರಗೊಂಡದ್ದು ಚಿತ್ರ ಜಗತ್ತಿನ ಅಚ್ಚರಿಗಳಲ್ಲೊಂದು. ಅನ್‌ಫರ್ಗೀವನ್, ಮಿಲಿಯನ್ ಡಾಲರ್ಸ್ ಬೇಬಿ ಮುಂತಾದ ಚಿತ್ರಗಳಲ್ಲಿ ಮನುಷ್ಯನ ಹೋರಾಟವನ್ನು ಎಪಿಕ್ ಮಟ್ಟದಲ್ಲಿ ನಿರ್ವಹಿಸಿದ ಈಸ್ಟ್‌ವುಡ್ ಈ ಚಿತ್ರದಲ್ಲಿ ರಾಜಕೀಯವಾಗಿ ಬದಲಾವಣೆಗೊಂಡು ಸಂಕ್ರಮಣ ಕಾಲದಲ್ಲಿರುವ ರಾಷ್ಟ್ರವೊಂದರ ಪರಿತಾಪಗಳನ್ನು ಕ್ರೀಡೆಯೊಂದರ ಹಿನ್ನೆಲೆಯಲ್ಲಿ ನಿರೂಪಿಸಿರುವುದೇ ವಿಶಿಷ್ಟವಾಗಿದೆ. ಕ್ಲಿಂಟ್ ಈಸ್ಟ್ ವುಡ್‌ನ ಇತರೆ ಶ್ರೇಷ್ಠ ಚಿತ್ರಗಳ ಮಟ್ಟಕ್ಕೆ ಈ ಚಿತ್ರ ಬಾರದಿದ್ದರೂ, ಅದು ಹುಟ್ಟುಹಾಕುವ ಭಾವತರಂಗಗಳ ಲಯಕ್ಕೆ ಪ್ರೇಕ್ಷಕ ಮನಸೋತಿರುವುದಂತೂ ನಿಜ.
ಎಲ್ಲೋ ಒಮ್ಮೋಮ್ಮೆ ಆಟದ ಸ್ಪರ್ಧೆಯು ಚರಿತ್ರೆಯಾಗಿ ರೂಪುಗೊಳ್ಳುವುದುಂಟು. ಅಥವಾ ನಾವೇ ಒಂದು ಆಟದ ಸ್ಪರ್ಧೆಯ ಫಲಿತಾಂಶದಲ್ಲಿ ಚರಿತ್ರೆಯನ್ನು ಕಟ್ಟುತ್ತೇವೋ ಏನೋ? 1936ರಲ್ಲಿ ಇಡೀ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆರ್ಯನ್ ಜನಾಂಗದ ಹಿರಿಮೆಯನ್ನು ಸಾರುವ ವೇದಿಕೆಯನ್ನಾಗಿ ರೂಪಿಸಲು ಯತ್ನಿಸಿದ ಹಿಟ್ಲರ್‌ನ ಅಹಂಗೆ ಅಮೆರಿಕದ ಕರಿಯ ಜೆಸಿ ಓವೆನ್ಸ್ ಪೆಟ್ಟು ನೀಡಿದ. ಬಿಳಿಯರ ಸಾಮ್ರಾಜ್ಯವಾಗಿದ್ದ ಅಮೆರಿಕದ ಬೇಸ್‌ಬಾಲ್ ಆಟಕ್ಕೆ ಮೊದಲ ಬಾರಿಗೆ ಲಗ್ಗೆಯಿಟ್ಟ (1947) ಜಾಕಿ ರಾಬಿನ್ಸನ್ ತನ್ನ ಅಮೋಘ ಆಟದಿಂದ ಆವರೆಗೆ ಕಪ್ಪು ಜನರ ವಿರುದ್ಧ ಹೇರಿದ್ದ ನಿಷೇಧವನ್ನು ಕಿತ್ತೊಗೆದು ಚರಿತ್ರೆ ನಿರ್ಮಿಸಿದ. ಕರಿಯರ ಬಲ, ಕೌಶಲ್ಯ, ಚುರುಕುತನ ಬೇಸ್‌ಬಾಲ್‌ನ ದಿಕ್ಕನ್ನೇ ಬದಲಿಸಿತು. ಈ ರೀತಿಯ ಸ್ವಾತಂತ್ರ ಅಂತಿಮವಾಗಿ ಆಫ್ರೋ-ಅಮೆರಿಕನ್ನರ ಮಾನವ ಹಕ್ಕುಗಳ ಹೋರಾಟಕ್ಕೆ ದೊಡ್ಡ ಬೆಂಬಲವಾಗಿ ಪರಿಣಮಿಸಿತು. 1983ರಲ್ಲಿ ವಿಶ್ವಕಪ್ ಗೆದ್ದ ಭಾರತದ ತಂಡ ತನ್ನ ದೇಶದ ಕ್ರಿಕೆಟ್ ಆಟವನ್ನೇ ಸಂಪೂರ್ಣ ಬದಲಿಸಿತು.


ಜಾನ್ ಕಾರ್ಲಿನ್ ಅವರ ಕೃತಿ ‘ಪ್ಲೇಯಿಂಗ್ ದಿ ಎನೆಮಿ-ನೆಲ್ಸನ್ ಮಂಡೇಲಾ ಆ್ಯಂಡ್ ದಿ ಗೇಮ್ ದಟ್ ಮೇಡ್ ಎ ನೇಷನ್’ ಆಧರಿಸಿದ ‘ಇನ್‌ವಿಕ್ಟಸ್’ ಚಿತ್ರದಲ್ಲಿ ನಿರ್ದೇಶಕ ಕ್ಲಿಂಟ್ ಈಸ್ಟ್ ವುಡ್ 1995ರ ರಗ್ಬಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಕತೆಯನ್ನು ನಿರೂಪಿಸುತ್ತಾರೆ. ಆ ಮೂಲಕ ಆ ಆಟದ ಫಲಿತಾಂಶವು, ವರ್ಣಭೇದ ನೀತಿ ಅಳಿದ ನಂತರದ ದಕ್ಷಿಣ ಆಫ್ರಿಕದ ರಾಷ್ಟ್ರೀಯತೆಯನ್ನು ಸೃಷ್ಟಿಸುವಲ್ಲಿ ವಹಿಸಿದ ನಿರ್ಣಾಯಕ ಪಾತ್ರವನ್ನು ಕಟ್ಟುತ್ತಾರೆ. ಆದರೆ ಈ ಚಿತ್ರದ ಪ್ರಧಾನಧಾರೆಯೆಂದರೆ ಒಂದು ಆಟದ ಮೂಲಕ ದೇಶಕಟ್ಟುವ ಚರಿತ್ರೆಯಲ್ಲಿ ನೆಲ್ಸನ್ ಮಂಡೇಲಾ ವಹಿಸಿದ ವಿಶಿಷ್ಟ ಪಾತ್ರ. ಜಗತ್ತಿನ ಯಾವ ನಾಯಕನೂ ಆಟವೊಂದರ ಮೂಲಕ ಜನಾಂಗವನ್ನು ಒಗ್ಗೂಡಿಸಿದ ಘಟನೆ ಚರಿತ್ರೆಯಲ್ಲೇ ಇಲ್ಲ. ಅಂಥ ದಾಖಲೆಯೊಂದನ್ನು ಬರೆದ ನೆಲ್ಸನ್ ಮಂಡೇಲಾರ ನಿಜ ವ್ಯಕ್ತಿತ್ವವನ್ನು ಈ ಚಿತ್ರ ಅನಾವರಣಗೊಳಿಸುತ್ತದೆ. ಸಿನೆಮಾ ಕಟ್ಟುವ ರೀತಿಯಲ್ಲಿ ಅನೇಕ ದೋಷಗಳನ್ನು ಹುಡುಕಲು ಸಾಧ್ಯವಿದ್ದರೂ, ಅದು ನಿರ್ವಹಿಸುವ ವಸ್ತುವಿನ ಗಹನತೆಯಿಂದಾಗಿ ಉಳಿದೆಲ್ಲವೂ ಗೌಣವಾಗುತ್ತವೆ.
ಇಪ್ಪತ್ತೇಳು ವರ್ಷಗಳ ಸೆರೆಮನೆವಾಸ ಮುಗಿಸಿ ತನ್ನ ನಾಡಿಗೆ ನೆಲ್ಸನ್ ಮಂಡೇಲಾ ಹಿಂದಿರುಗಿದ್ದು 11ನೇ ಫೆಬ್ರವರಿ 1990ರಂದು. ನಾಲ್ಕು ವರ್ಷಗಳ ನಂತರ ದಕ್ಷಿಣ ಆಫ್ರಿಕ ರಾಷ್ಟ್ರದ ಮೊದಲ ಕರಿಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಾನೆ. ವರ್ಣಭೇದ ನೀತಿಗೆ ತುತ್ತಾಗಿ ಹುಟ್ಟಿದ ನಾಡಲ್ಲೇ ತೊತ್ತಾಗಿ ಬದುಕಿದ್ದ ಜನಾಂಗದ ವ್ಯಕ್ತಿ ಈಗ ಅದೇ ದೇಶದ ಅಧ್ಯಕ್ಷ. ಆದರೆ ಆತನೆದುರಲ್ಲಿ ದಾರಿದ್ರ, ಅಪರಾಧ ಮುಂತಾದ ಗಂಭೀರ ಸಮಸ್ಯೆಗಳ ಜೊತೆಗೆ ಕರಿಯರು-ಬಿಳಿಯರ ನಡುವೆ ಸ್ಥಾಯಿಯಾಗಿ ನಿಂತಿರುವ ದ್ವೇಷ, ಅಸಹನೆ ಒಂದೆಡೆಯಾದರೆ, ಮತ್ತೊಂದೆಡೆ ಸರಕಾರದ ಆಯಕಟ್ಟಿನ ಜಾಗದಲ್ಲಿ ಈ ಹಿಂದೆ ಇದ್ದ ಬಿಳಿಯ ಅಧಿಕಾರಿ, ಸಿಬ್ಬಂದಿ ಬಗ್ಗೆ ಆಫ್ರಿಕ ನ್ಯಾಷನಲ್ ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರಿಗೆ ಸಂದೇಹ-ಆಕ್ರೋಶ; ಇನ್ನೊಂದೆಡೆ ಆವೇಶಭರಿತ ಕರಿಯ ನಾಯಕರ ಬಗೆಗೆ, ಬಿಳಿಯರಿಗೂ ಅನುಮಾನಗಳು. ಸಹಜವೆಂಬತ್ತಿದ್ದ ಪರಸ್ಪರ ಅಸಮಾಧಾನ, ಅಪನಂಬಿಕೆ, ಅನುಮಾನಗಳು ಎರಡೂ ಜನರ ನಡುವಿನ ಕಂದಕವನ್ನು ಹಿಗ್ಗಿಸಿ ಹಿಂಸೆ ಭುಗಿಲೇಳಲು ಕಾರಣವಾಗಬಹುದೆಂಬ ಆತಂಕ ಹೊಸ ಅಧ್ಯಕ್ಷರಿಗಿತ್ತು.
ಆದರೆ ಅಧ್ಯಕ್ಷರಾಗಿ ಮಂಡೇಲಾ ಅವರು ತಮ್ಮ ಹಿಂದಿನ ಶತ್ರುಗಳು ಮತ್ತು ದಮನಕಾರರ ಹಕ್ಕುಗಳನ್ನು ಗೌರವಿಸಿದರು. ದಕ್ಷಿಣ ಆಫ್ರಿಕವು ಒಂದು ರಾಷ್ಟ್ರವಾಗಿ ಯಶಸ್ಸು ಕಾಣಬೇಕಾದರೆ, ಬಿಳಿಯರು ದೇಶ ತೊರೆಯದಂತೆ ನೋಡಿಕೊಳ್ಳುವುದು ಅಗತ್ಯವೆಂದು ಮಂಡೇಲಾ ನಂಬಿದ್ದರು. ಈ ಆದರ್ಶದ ಬೆನ್ನುಹತ್ತಿ ಅವರು ಯಶಸ್ಸು ಕಾಣದಿದ್ದರೆ, ಆ ರಾಷ್ಟ್ರವು ಈಗಿರುವ ಉತ್ತಮ ಸ್ಥಿತಿಗೆ ವಿಕಸನವಾಗುತ್ತಿರಲಿಲ್ಲ.
ತನ್ನ ಧ್ಯೇಯವನ್ನು ಸಾಧಿಸಲು ಆರಿಸಿಕೊಂಡ ನೆಲ್ಸನ್ ಮಂಡೇಲಾರ ಅನೇಕ ಮಾರ್ಗಗಳಲ್ಲಿ ‘ಇನ್‌ವಿಕ್ಟಸ್’ ಒಂದು ಸಣ್ಣ ಪ್ರಯತ್ನವನ್ನು ಕುರಿತು ಹೇಳುತ್ತದೆ.
ದಕ್ಷಿಣ ಆಫ್ರಿಕದಲ್ಲಿ ರಗ್ಬಿ ಒಂದು ಜನಪ್ರಿಯ ಕ್ರೀಡೆ. ಇಡೀ ಜಗತ್ತಿನಲ್ಲಿದ್ದ ಸರ್ವಶ್ರೇಷ್ಠ ರಗ್ಬಿ ಕ್ರೀಡಾ ತಂಡಗಳೆಂದರೆ- ಒಂದು ನ್ಯೂಝಿಲ್ಯಾಂಡ್ ದೇಶದ ‘ಆಲ್ ಬ್ಲಾಕ್ಸ್’. ಮತ್ತೊಂದು ದಕ್ಷಿಣ ಆಫ್ರಿಕದ ನ್ಯಾಷನಲ್ ರಗ್ಬಿ ಯೂನಿಯನ್ ತಂಡ ‘ಸ್ಪ್ರಿಂಗ್‌ಬಾಕ್ಸ್’. ದಕ್ಷಿಣ ಆಫ್ರಿಕದಲ್ಲಿ ಜೀವಿಸುವ ಕೊಂಬಿನ ಜಿಂಕೆ ಜಾತಿಗೆ ಸೇರಿದ ಸ್ಪ್ರಿಂಗ್‌ಬಾಕ್ಸ್ ಜಿಂಕೆಗಳು ದೇಶದ ಹೆಮ್ಮೆಯ ಲಾಂಛನ. ಆ ದೇಶದ ರಾಷ್ಟ್ರೀಯ ಹೂ ಪ್ರೊಟಿಯಾ ರೀತಿಯಲ್ಲೇ ಅದಕ್ಕೆ ಆರಾಧನೆ. ಅದಕ್ಕೆಂದೇ ರಗ್ಬಿ ತಂಡಕ್ಕೆ ‘ಸ್ಪ್ರಿಂಗ್‌ಬಾಕ್ಸ್’ ಎಂದು ನಾಮಕರಣ ಮಾಡಿದ್ದರು. ಮಂಡೇಲಾ ಅವರು ಅಧ್ಯಕ್ಷ ಸ್ಥಾನಕ್ಕೇರಿದ ಮರುವರ್ಷ ರಗ್ಬಿ ವಿಶ್ವಕಪ್ ಕ್ರೀಡಾಮೇಳವನ್ನು ದಕ್ಷಿಣ ಆಫ್ರಿಕ ವಹಿಸಬೇಕಿತ್ತು. ಆ ಸಂದರ್ಭದಲ್ಲಿ ಒಬ್ಬ ಕರಿಯನನ್ನು ಹೊರತುಪಡಿಸಿ ಸ್ಪ್ರಿಂಗ್‌ಬಾಕ್ಸ್ ತಂಡದಲ್ಲಿದ್ದ ಆಟಗಾರರೆಲ್ಲರೂ ಬಿಳಿಯರು. ಇಂಥ ತಂಡವನ್ನು ವಿಸರ್ಜಿಸಬೇಕೆಂದು, ಕರಿಯರ ಪ್ರಾಬಲ್ಯವಿದ್ದ ದಕ್ಷಿಣ ಆಫ್ರಿಕ ಕ್ರೀಡಾ ಸಮಿತಿಯು ಮಾಡಿದ ಪ್ರಯತ್ನಕ್ಕೆ ಅಡ್ಡಬಂದವರು ಮಂಡೇಲಾ. ತಂಡವನ್ನು ಉಳಿಸುವುದು ಮಾತ್ರವಲ್ಲ, ಆ ತಂಡದ ಮೂಲಕವೇ ವಿಶ್ವಕಪ್ ಗೆಲ್ಲಲು ಸಾಧ್ಯವಾದ ಎಲ್ಲ ಪ್ರಯತ್ನವನ್ನು ಮಾಡುತ್ತಾರೆ. ತನ್ನ ಗುರಿಯನ್ನು ಮಂಡೇಲಾ ಸಾಧಿಸುವ ಬಗೆ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತದೆ. ಮಾನವ ಸಂಘರ್ಷಗಳು, ಮಾನವೀಯತೆ ಮೇಲುಗೈ ಸಾಧಿಸಿ ಅಪನಂಬಿಕೆ, ಅನುಮಾನಗಳು ಕರಗಿ, ಆಟದ ಮೂಲಕ ಭ್ರಾತೃತ್ವವನ್ನು ಮೆರೆಯುವ ಮಹಾನಾಟಕವೊಂದು ಜರುಗುತ್ತದೆ. ಕಲಾವಿದರ ಸಹಜಾಭಿನಯ, ಬಿಗಿಯಾದ ನಿರೂಪಣೆ ಮತ್ತು ಮನೋಲ್ಲಾಸ ರಗ್ಬಿ ಪಂದ್ಯಗಳು ಪ್ರೇಕ್ಷಕನನ್ನು ಆಸನದ ತುದಿಗೆ ತಂದುಕೂರಿಸುತ್ತವೆ.


ಈ ಚಿತ್ರದಲ್ಲಿ ಅನೇಕ ಮನಸೂರೆಗೊಳ್ಳುವ ದೃಶ್ಯಗಳಿವೆ. ಎರಡು ಭಿನ್ನ ವರ್ಣೀಯ ಸಮುದಾಯಗಳ ನಡುವಿನ ತಾತ್ವಿಕ ಹೋರಾಟ ಮಾಯವಾಗಿ ಈಗ ದ್ವೇಷದ ಗೋಡೆಗಳ ನಡುವೆ ಅಡಗಿ ಕೂತ ಹೃದಯಗಳನ್ನು ಮಂಡೇಲಾ ನೋಡುತ್ತಾನೆ. ಹಿಂದೆ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭದ್ರತಾಪಡೆಯಲ್ಲಿದ್ದ ಬಿಳಿಯ ಅಧಿಕಾರಿಗಳನ್ನು ಬದಲಾಯಿಸಲು ಎಎನ್‌ಸಿ ನಾಯಕರು ಬಯಸುತ್ತಾರೆ. ಕರಿಯರ ಮೇಲೂ ಬಿಳಿಯರಿಗೆ ಅನುಮಾನ. ಆದರೆ ಇಬ್ಬರ ವಿಶ್ವಾಸ ಗೆಲ್ಲಬೇಕಾದ ಸವಾಲು ಎದುರಾಗಿದೆ. ಮಂಡೇಲಾ ನಿಲುವು ಕರಿಯರಿಗೆ ಆಘಾತ ತಂದರೆ ಬಿಳಿಯರಿಗೆ ಅಚ್ಚರಿ. ಸ್ಪ್ರಿಂಗ್‌ಬಾಕ್ಸ್ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವನ್ನು ವೀಕ್ಷಿಸುತ್ತಿದ್ದ ಸಮಯದಲ್ಲಿ ಕರಿಯ ಪ್ರೇಕ್ಷಕರು ಇಂಗ್ಲೆಂಡ್ ತಂಡಕ್ಕೆ ಹುರಿದುಂಬಿಸುವ ವಿಚಿತ್ರ ಕಾಣುತ್ತಾನೆ. ಸೆರೆಮನೆಯಲ್ಲಿದ್ದಾಗ ತಾನೂ ಸಹ ಇಂಥ ಸಂದರ್ಭಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಜಯಕಾರ ಹಾಕುತ್ತಿದ್ದದ್ದು ನೆನಪಾಗುತ್ತದೆ. ತನ್ನ ರಾಷ್ಟ್ರದ ತಂಡವನ್ನು ಮರಳಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸ್ಪ್ರಿಂಗ್‌ಬಾಕ್ಸ್ ನಾಯಕ ಫ್ರಾಂಕಾಯಿಸ್ ಪೈನಾರ್‌ನನ್ನು ಭೇಟಿ ಮಾಡುತ್ತಾನೆ. ವಿಶ್ವಕಪ್‌ನಲ್ಲಿ ಸ್ಪ್ರಿಂಗ್‌ಬಾಕ್ಸ್‌ನ ಗೆಲುವು ದೇಶವನ್ನು ಒಗ್ಗೂಡಿಸುವ ಪವಾಡಕ್ಕೆ ನಾಂದಿಯಾಗುತ್ತದೆಂದು ವಿವರಿಸುತ್ತಾನೆ. ಸೆರೆಮನೆಯಲ್ಲಿರುವಾಗ ತಾನು ಕುಸಿಯದಂತೆ ಶಕ್ತಿ ನೀಡಿದ ಇನ್‌ವಿಕ್ಟಸ್ ಶೀರ್ಷಿಕೆಯ ಇಂಗ್ಲಿಷ್ ಪದ್ಯವನ್ನು ವಾಚನ ಮಾಡುತ್ತಾನೆ. ರಗ್ಬಿ ದೇಶವನ್ನು ಒಗ್ಗೂಡಿಸುವ ಬಗ್ಗೆ ಬಿಳಿಯರಿಗೂ-ಕರಿಯರಿಗೂ ಅನುಮಾನಗಳಿದ್ದರೂ ಫ್ರಾಂಕಾಯಿಸ್ ತಂಡ ತೀವ್ರವಾಗಿ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತದೆ. ಶತಮಾನಗಳ ಕಾಲದ ಕ್ರೂರ ವರ್ಣಭೇದ ನೀತಿಯ ಕರಾಳ ನೆನಪನ್ನು ಹೊತ್ತ ಕರಿಯರಿಗಂತೂ ಬಿಳಿಯರ ಹಿರಿಮೆಯ ಸಂಕೇತದಂತಿದ್ದ ಸ್ಪ್ರಿಂಗ್‌ಬಾಕ್ಸ್ ಗೆಲುವು ರಾಷ್ಟ್ರೀಯ ಐಕ್ಯಸಾಧನೆಗೆ ಮಾರ್ಗವೆಂದು ಅನಿಸುವುದೇ ಇಲ್ಲ. ದೇಶದ ನಾಯಕ ಮಂಡೇಲಾ ಮತ್ತು ತಂಡದ ನಾಯಕ ಪೈನಾರ್‌ಗೆ ಮಾತ್ರ ಆ ಬಗ್ಗೆ ಅಚಲ ವಿಶ್ವಾಸವಿದೆ.
ತಂಡದ ಸದಸ್ಯರು ಮಂಡೇಲಾನ ಸೂಚನೆಯಂತೆ ಜನಸಾಮಾನ್ಯರ ಜೊತೆ ಬೆರೆಯುತ್ತಾ ನಿಧಾನವಾಗಿ ವಿಶ್ವಾಸ ಗಳಿಸಿಕೊಳ್ಳಲಾರಂಭಿಸುತ್ತಾರೆ. ಮಂಡೇಲಾ ಕುಳಿತು ವೀಕ್ಷಿಸುವ ಆರಂಭದ ಆಟದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಆತಿಥೇಯ ತಂಡ ಸೋಲಿಸಿದಾಗ, ಕರಿಯರ ಮನಸ್ಸಿನಲ್ಲಿ ಬದಲಾವಣೆಯ ಭಾವಗಳು ಕಾಣಿಸಿಕೊಳ್ಳುತ್ತವೆ. ಫ್ರಾಂಕಾಯಿಸ್ ತಂಡ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಫೈನಲ್ ತಲುಪಿದಾಗ ಇಡೀ ರಾಷ್ಟ್ರದ ಜನತೆ ಹುಚ್ಚೆದ್ದು ಸಂಭ್ರಮಿಸುತ್ತದೆ. ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ನ್ಯೂಝಿಲ್ಯಾಂಡ್‌ನ ಆಲ್‌ಬ್ಲಾಕ್ಸ್.
ಫೈನಲ್ ಆರಂಭವಾಗುವ ಮುನ್ನ ಸ್ಪ್ರಿಂಗ್‌ಬಾಕ್ಸ್ ತಂಡವು ಮಂಡೇಲಾ ತನ್ನ 27 ವರ್ಷಗಳ ಸೆರೆಮನೆವಾಸದ ಆರಂಭದ ಹದಿನೆಂಟು ವರ್ಷ ಕಳೆದ ರಾಬೆನ್ ದ್ವೀಪದ ಜೈಲಿಗೆ ತೆರಳಿ ಆತ ವಾಸವಿದ್ದ ಸೆರೆಮನೆಗೆ ಭೇಟಿ ನೀಡುತ್ತದೆ. ಅಲ್ಲಿನ ಪರಿಸರ ನೋಡಿ ನಾಯಕ ಪೈನಾರ್ ಒಂದು ಬಿಲದಂತಹ ಕೋಣೆಯಲ್ಲಿ ಅಷ್ಟು ವರ್ಷ ಶಿಕ್ಷೆ ಅನುಭವಿಸಿ ಹೊರಬಂದ ನಂತರ ಕೊಳೆಹಾಕಿದ ಜನರನ್ನು ಕ್ಷಮಿಸುವ ಮಂಡೇಲಾರ ಔದಾರ್ಯದ ಬಗ್ಗೆ ಉದ್ಗಾರ ತೆಗೆಯುತ್ತಾನೆ. ಮಂಡೇಲಾರ ಸಂಕಲ್ಪ ಶಕ್ತಿ, ಆತ್ಮ ಸಂಯಮ ಕುರಿತು ಹೇಳುತ್ತಾ ತಂಡಕ್ಕೆ ಹುರುಪು ತರುತ್ತಾನೆ.


ಪ್ರೇಕ್ಷಕರ ಉತ್ಸಾಹಕ್ಕೆ ನೆರೆಬಂದ ಜೋಹಾನ್ಸ್‌ಬರ್ಗ್‌ನ ಎಲಿಸ್ ಪಾರ್ಕ್ ಸ್ಟೇಡಿಯಂನಲ್ಲಿ ಬಿಳಿಯ ನಿಕ್ಕರ್, ಹಸಿರು ಬಣ್ಣದ, ಸುವರ್ಣ ರೇಖೆಗಳ ಜೆರ್ಸಿ ತೊಟ್ಟ ಸ್ಪ್ರಿಂಗ್‌ಬಾಕ್ಸ್ ಈಗ ತಾಯ್ನ್‌ಡಿನ ನೆಚ್ಚಿನ ತಂಡ. ಪ್ರೇಕ್ಷಕರ ಸಾಲಿನಲ್ಲಿ ನಾಯಕನ 6ನೇ ಸಂಖ್ಯೆಯ ಜರ್ಸಿ ತೊಟ್ಟ, ಸ್ಪ್ರಿಂಗ್‌ಬಾಕ್ಸ್ ಕ್ಯಾಪ್ ಧರಿಸಿ ಮಂಡೇಲಾ ಹಾಜರ್. ಛಿದ್ರವಾದ ಹೃದಯಗಳನ್ನು ಬೆಸೆಯುವ ರೋಚಕ ಸ್ಪರ್ಧೆಯಲ್ಲಿ ಎಕ್ಸ್‌ಟ್ರಾ ಟೈಂಗೆ ಆಟ ಮುಂದುವರಿಯುತ್ತದೆ. ತೀವ್ರ ಹಣಾಹಣಿಯಲ್ಲಿ ಸ್ಪ್ರಿಂಗ್‌ಬಾಕ್ಸ್ 15-12 ಅಂತರದಲ್ಲಿ ಅತಿಥಿ ರಾಷ್ಟ್ರವನ್ನು ಮಣಿಸುತ್ತದೆ. ವಿಜಯೀ ತಂಡಕ್ಕೆ ಹರ್ಷೋದ್ಗಾರದ ನಡುವೆ ಕಪ್ ಪ್ರದಾನ ಮಾಡಿದ ಮಂಡೇಲಾ ಕ್ರೀಡಾಂಗಣ ಬಿಟ್ಟು ಹೊರಡುತ್ತಾನೆ. ಹಾದಿ ಬದಿಯ ದೃಶ್ಯಗಳು ಅವನ ಕಣ್ ತುಂಬುತ್ತವೆ. ಬಿಳಿಯರು-ಕರಿಯರು ವರ್ಣಭೇದ ಮರೆತು ಆಲಂಗಿಸಿಕೊಂಡು, ಕೇಕೆ ಹಾಕಿ ಸಂಭ್ರಮಿಸುತ್ತಿದ್ದಾರೆ! ಆ ಕ್ಷಣ ಆಟವೊಂದರ ಗೆಲುವು ಗೋಡೆಗಳನ್ನು ಕೆಡುಹುವ ಸಶಕ್ತ ಆಯುಧವಾಗಿ ಮಾರ್ಪಾಡಾಗಿರುವುದು ವೇದ್ಯವಾಗುತ್ತದೆ. ತೆರೆಯಲ್ಲಿ ಇನ್‌ವಿಕ್ಟಸ್ ಪದ್ಯ ಮಂಡೇಲಾನ ದನಿಯಲ್ಲಿ ತೇಲಿಬರುತ್ತದೆ. ಅಂದಹಾಗೆ ಇನ್‌ವಿಕ್ಟಸ್ ಎಂದರೆ ಅಜೇಯ ಎನ್ನುವ ಅರ್ಥಕ್ಕೆ ಸಮೀಪವಾದದ್ದು. ಗ್ರೀಕ್ ಪುರಾಣಗಳ ದೇವತೆಗಳನ್ನು ಅಂಗೀಕರಿಸಿರುವ ರೋಮನ್ನರು ತಮ್ಮ ದೇವರುಗಳ, ಪುರಾಣ ವ್ಯಕ್ತಿಗಳ ಗುಣ ಲಕ್ಷಣಗಳಿಗೆ ತಕ್ಕ ಬಿರುದು ನೀಡುತ್ತಾರೆ. ಜುಪಿಟರ್, ಮಾರ್ಸ್, ಹರ್ಕ್ಯುಲಿಸ್, ಸೋಲ್ ಮುಂತಾದವರಿಗೆ ಒಪ್ಪುವ ಬಿರುದು ಇನ್‌ವಿಕ್ಟಸ್. ಬ್ರಿಟನ್‌ನ ಕವಿ ವಿಲಿಯಂ ಅರ್ನೆಸ್ಟ್ ಹೆನ್ಲಿ ಬರೆದ ಇನ್‌ವಿಕ್ಟಸ್ ಕವಿತೆ ಮಂಡೇಲಾಗೆ ಅಚ್ಚುಮೆಚ್ಚು. ರಾಬೆನ್ ದ್ವೀಪದಲ್ಲಿ ವಾಚಿಸುತ್ತಿದ್ದ ಆ ಕವಿತೆಯ ಮುಖ್ಯ ಸಾಲುಗಳು ನನ್ನ ವಿಧಿಗೆ ನಾನೇ ಯಜಮಾನ; ನನ್ನ ಆತ್ಮಕ್ಕೆ ನಾನೇ ನಾಯಕ. ಫ್ರಾಂಕಾಯಿಸ್ ಈ ಸಾಲುಗಳಲ್ಲಿಯೇ ತನ್ನ ಗುರಿ ಸಾಧನೆಗೆ ಸ್ಫೂರ್ತಿ ಪಡೆಯುತ್ತಾನೆ.
ಮಂಡೇಲಾ ಪಾತ್ರದಲ್ಲಿ ಈಸ್ಟ್‌ವುಡ್‌ನ ನೆಚ್ಚಿನ ನಟ ಮಾರ್ಗನ್ ಫ್ರೀಮನ್ ಮತ್ತು ನಾಯಕ ಫ್ರಾಂಕಾಯಿಸ್ ಫೈನಾರ್ ಪಾತ್ರದಲ್ಲಿ ಮ್ಯಾಟ್ ಡಮಾನ್ ಲೀನವಾಗಿದ್ದಾರೆ. ಇನ್‌ವಿಕ್ಟಸ್ ಚಿತ್ರವು ಖಂಡಿತವಾಗಿಯೂ ಉದಯಿಸಿದ ರಾಷ್ಟ್ರವೊಂದರ ನಿರ್ಣಾಯಕ ಗಳಿಗೆಗಳನ್ನು ದಾಖಲಿಸಿದ ಚಿತ್ರವಾಗಿ ಗಮನ ಸೆಳೆಯುತ್ತದೆ.

Writer - ಕೆ.ಪುಟ್ಟಸ್ವಾಮಿ

contributor

Editor - ಕೆ.ಪುಟ್ಟಸ್ವಾಮಿ

contributor

Similar News