ಟ್ರಂಪ್ ರ ‘ಗೋ ಬ್ಯಾಕ್’ ಟ್ವೀಟ್ ನಂತರ ನ್ಯೂಯಾರ್ಕ್ ನಲ್ಲಿ ಹಿಂದೂ ಅರ್ಚಕನ ಮೇಲೆ ಹಲ್ಲೆ
ನ್ಯೂಯಾರ್ಕ್, ಜು.21: ಇಲ್ಲಿನ ಫ್ಲೋರಲ್ ಪಾರ್ಕ್ ನಲ್ಲಿರುವ ದೇವಸ್ಥಾನದ ಬಳಿ ತಮ್ಮ ಧಾರ್ಮಿಕ ಉಡುಪಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿಂದೂ ಅರ್ಚಕರೊಬ್ಬರ ಮೇಲೆ 52 ವರ್ಷದ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಗುರುವಾರ ಗ್ಲೆನ್ ಒಕಾಸ್‍ನ ಶಿವಶಕ್ತಿಪೀಠದ ಪಕ್ಕದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದು ವ್ಯಕ್ತಿಯೊಬ್ಬ ಒಂದೇ ಸಮನೆ ಹೊಡೆಯಲಾರಂಭಿಸಿದ್ದಾಗಿ ಸ್ವಾಮಿ ಹರೀಶ್ ಚಂದ್ರ ಪುರಿ ಹೇಳಿದ್ದಾರೆ ಎಂದು ಪಿಕ್ಸ್ 11 ಸುದ್ದಿವಾಹಿನಿ ವರದಿ ಮಾಡಿದೆ.
ಥಳಿತಕ್ಕೊಳಗಾದ ಪುರಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಳಿಯಿಂದ ಅರ್ಚಕರ ಮುಖ ಹಾಗೂ ಕೈಕಾಲು ಸೇರಿದಂತೆ ದೇಹದ ವಿವಿಢೆಗಳಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ದಾಳಿಯ ಸಂಬಂಧ ಸೆರ್ಗಿಯೊ ಗೋವೆಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ, ಕಿರುಕುಳ ಹಾಗೂ ಅಪರಾಧ ಉದ್ದೇಶಕ್ಕೆ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಹೊರಿಸಲಾಗಿದೆ. ಇದು ದ್ವೇಷಾಪರಾಧದ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋಮಾಲಿಯಾ ಸಂಜಾತೆ ಮಿನೆಸೊಟಾ ಇಲ್ಹಾನ್ ಒಮರ್ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ನಾಲ್ವರು ಸಂಸದೆಯರನ್ನು ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, "ನೀವು ಎಲ್ಲಿಂದ ಬಂದಿದ್ದೀರೋ ಅಲ್ಲಿಗೇ ವಾಪಸ್ಸಾಗಿ" ಎಂದು ಟ್ವೀಟ್ ಮಾಡಿದ ಮರುದಿನವೇ ಘಟನೆ ನಡೆದಿದೆ.
"ನಮ್ಮದು ಮುಕ್ತ, ಸುಂದರ ಹಾಗೂ ಯಶಸ್ಸು ಸಾಧಿಸಿ ದೇಶ. ನೀವು ಈ ದೇಶವನ್ನು ದ್ವೇಷಿಸುವುದಾದರೆ, ಅಥವಾ ಇಲ್ಲಿ ನೀವು ಸಂತೋಷವಾಗಿಲ್ಲ ಎನ್ನುವುದಾದರೆ ನೀವು ಹೊರಡಬಹುದು" ಎಂದು ಟ್ರಂಪ್ ಟ್ವೀಟ್ ಮಾಡಿದ್ದರು