ಇಮ್ರಾನ್ ಖಾನ್ ರನ್ನು ಅವಗಣಿಸಿದ ಅಮೆರಿಕಾ: ವಿಮಾನ ನಿಲ್ದಾಣದಲ್ಲಿ ಸ್ವಾಗತವಿಲ್ಲ!

Update: 2019-07-22 07:35 GMT

ವಾಷಿಂಗ್ಟನ್, ಜು.22: ಪಾಕಿಸ್ತಾನದ ತೀವ್ರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖಾಸಗಿ ಜೆಟ್ ಬದಲು ಅಮೆರಿಕಾಗೆ ಕತರ್ ಏರ್‍ ವೇಸ್ ವಿಮಾನದ ಮೂಲಕ ಪ್ರಯಾಣಿಸಿದ್ದಾರೆ. ಆದರೆ ಅಮೆರಿಕಾದ ಡಲ್ಲೆಸ್ ವಿಮಾನ ನಿಲ್ದಾಣದಲ್ಲಿ ಅವರಿದ್ದ ವಿಮಾನ ಇಳಿಯುತ್ತಿದ್ದಂತೆಯೇ ಅಲ್ಲಿ ಅಮೆರಿಕಾ ಆಡಳಿತದ ಯಾವುದೇ ಉನ್ನತ ಅಧಿಕಾರಿ ಅವರನ್ನು ಎದುರುಗೊಳ್ಳಲು ಹಾಜರಿರಲಿಲ್ಲ. ಇಮ್ರಾನ್ ನಂತರ ಅಲ್ಲಿನ ಪಾಕ್ ರಾಯಭಾರಿ ನಿವಾಸಕ್ಕೆ ಮೆಟ್ರೊ ಮೂಲಕ ಪಯಣಿಸಿದರು.

ಪಾಕ್ ಪ್ರಧಾನಿಗೆ ಅಧಿಕೃತ ಸ್ವಾಗತ ನೀಡುವ ಸಲುವಾಗಿ ಪಾಕ್ ಸರಕಾರವೇ  ಅಮೆರಿಕಾಗೆ 2,50,000 ಡಾಲರ್ ನೀಡಲು ಮುಂದೆ ಬಂದರೂ ಅದನ್ನು ನಿರಾಕರಿಸಲಾಯಿತೆಂಬ ಸುದ್ದಿಯೂ ಹರಿದಾಡುತ್ತಿದೆ.

ಇಮ್ರಾನ್ ಇದ್ದ ವಿಮಾನ ಡಲ್ಲೆಸ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಪಾಕ್ ಪ್ರಧಾನಿ ಶಾ ಮೆಹಮೂದ್ ಖುರೇಶಿ ಅವರನ್ನು ಸ್ವಾಗತಿಸಲು ಹಾಜರಿದ್ದರು.  ಹಂಗಾಮಿ ಪ್ರೊಟೋಕಾಲ್ ಮುಖ್ಯಸ್ಥೆ ಮೇರಿ-ಕೇಟ್ ಫಿಶರ್ ಕೂಡ ಹಾಜರಿದ್ದು, ಇಮ್ರಾನ್ ಅವರನ್ನು ಸ್ವಾಗತಿಸುವ ಜತೆ ಮೆಟ್ರೋ ಪ್ರಯಾಣದ ವೇಳೆಯೂ ಅವರ ಜತೆ ಹಾಜರಿದ್ದರು.

ಶ್ವೇತ ಭವನಕ್ಕೆ ಅಧಿಕೃತ ಕೆಲಸಕ್ಕಾಗಿ ಭೇಟಿ ನೀಡುವವರಿಗೆ ನೀಡಲಾಗುವ ಸ್ವಾಗತದ ಶಿಷ್ಟಾರದಂತೆಯೇ ಪಾಕ್ ಪ್ರಧಾನಿಯನ್ನು ಪ್ರೊಟೋಕಾಲ್ ವಿಭಾಗದ ಮುಖ್ಯಸ್ಥೆ ಎದುರುಗೊಂಡಿದ್ದಾರೆಂದು ಸರಕಾರ ಹೇಳಿದೆ.

ಅಮೆರಿಕಾದಲ್ಲಿನ ಪಾಕ್ ರಾಯಭಾರಿ ಅಸಾದ್ ಮಜೀದ್ ಖಾನ್ ನಿವಾಸದಲ್ಲಿ ತಂಗಿರುವ ಇಮ್ರಾನ್ ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.

ಈಗಾಗಲೇ ಅಮೆರಿಕಾದಲ್ಲಿನ ಪಾಕ್ ಉದ್ಯಮಿಗಳನ್ನು ಭೇಟಿಯಾಗಿರುವ ಇಮ್ರಾನ್, ತಮ್ಮ ಮೂರು ದಿನಗಳ ಪ್ರವಾಸದ  ವೇಳೆ ಐಎಂಎಫ್ ಮುಖ್ಯಸ್ಥ ಡೇವಿಡ್ ಲಿಪ್ಟನ್ ಹಾಗೂ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಸ್ಸ್ ಅವರನ್ನೂ ಭೇಟಿಯಾಗಲಿದ್ದಾರೆ.

ಇಮ್ರಾನ್ ಜತೆಗೆ ಸೇನಾ ಮುಖ್ಯಸ್ಥ ಹಾಗೂ ಐಎಸ್‍ಐ ಮಹಾನಿರ್ದೇಶಕ ಜನರಲ್ ಖಮರ್ ಜಾವೇದ್ ಬಜ್ವಾ  ಕೂಡ ಅಮೆರಿಕಾ ಪ್ರವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News