ಹಫೀಝ್ ವಿರುದ್ಧ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪ ದಾಖಲು

Update: 2019-08-07 17:41 GMT

ಇಸ್ಲಾಮಾಬಾದ್, ಆ. 7: ಪಾಕಿಸ್ತಾನದ ಪಂಜಾಬ್ ಪ್ರಾಂತದ ನ್ಯಾಯಾಲಯವೊಂದರಲ್ಲಿ ಬುಧವಾರ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬದ ಸ್ಥಾಪಕ ಹಫೀಜ್ ಸಯೀದ್ ವಿರುದ್ಧ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪಗಳನ್ನು ಔಪಚಾರಿಕವಾಗಿ ಹೊರಿಸಲಾಗಿದೆ.

ಬಳಿಕ ಈ ಪ್ರಕರಣವನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.

ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಹಫೀಜ್ ಸಯೀದ್‌ನನ್ನು ಲಾಹೋರ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಗುಜ್ರನ್‌ವಾಲಾದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ಎದುರು ಭಾರೀ ಭದ್ರತೆಯಲ್ಲಿ ಹಾಜರುಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

 ‘‘ಪ್ರಕರಣವು ಪಂಜಾಬ್ ರಾಜ್ಯದ ಮಂಡಿ ಭಾವುದ್ದೀನ್ ಜಿಲ್ಲೆಗೆ ಸಂಬಂಧಿಸಿರುವುದರಿಂದ, ಪ್ರಕರಣವನ್ನು ಲಾಹೋರ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಗುಜ್ರಾತ್ ಭಯೋತ್ಪಾದನೆ ನಿಗ್ರಹ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ಮನವಿ ಮಾಡಿತು’’ ಎಂದು ಭಯೋತ್ಪಾದನೆ ನಿಗ್ರಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯು ಗುಜ್ರಾತ್ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ನಡೆಯಲಿದೆ.

 2008ರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಜ್ ಸಯೀದ್‌ನನ್ನು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜುಲೈ 17ರಂದು ಬಂಧಿಸಲಾಗಿತ್ತು. ಸಯೀದ್‌ನನ್ನು ಲಾಹೋರ್‌ನಲ್ಲಿರುವ ಅತಿ ಭದ್ರತೆಯ ಕೋಟ್ ಲಾಖ್‌ಪತ್ ಜೈಲಿನಲ್ಲಿ ಇರಿಸಲಾಗಿದೆ.

ಪಂಜಾಬ್ ಪ್ರಾಂತದ ವಿವಿಧ ನಗರಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಆರ್ಥಿಕ ನೆರವು ಒದಗಿಸಿದ ಆರೋಪಗಳಲ್ಲಿ ಸಯೀದ್ ಸೇರಿದಂತೆ ಜಮಾಅತುದಅವಾ (ಜೆಯುಡಿ)ದ 13 ನಾಯಕರ ವಿರುದ್ಧ ಭಯೋತ್ಪಾದನೆ ನಿಗ್ರಹ ಇಲಾಖೆಯು ಜುಲೈ 3ರಂದು 23 ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News