ಮಂದಾರದ ಬದುಕು ಕಸಿದ ಮಂಗಳೂರಿನ ತ್ಯಾಜ್ಯ !
ಮಂಗಳೂರು, ಆ.13: ಮಳೆಯ ಪ್ರವಾಹ ದ.ಕ. ಜಿಲ್ಲೆಯನ್ನೊಳಗೊಂಡು ಭಾರೀ ಅನಾಹುತಗಳನ್ನೇ ಸೃಷ್ಟಿಸಿದ್ದರೆ, ಮಂಗಳೂರು ನಗರದ ಹಚ್ಚ ಹಸಿರಿನ ಪ್ರದೇಶವೊಂದು ಮಾನವ ನಿರ್ಮಿತ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಅಲ್ಲಿನ ಕುಟುಂಬಗಳ ಬದುಕನ್ನು ನರಕಸದೃಶಗೊಳಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪು ಸಮೀಪದ ಮಂದಾರ ಪ್ರದೇಶವೀಗ ಮಂಗಳೂರು ನಗರದ ಹತ್ತಾರು ವರ್ಷಗಳ ಲಕ್ಷಗಟ್ಟಲೆ ಟನ್ ಕಸದ ರಾಶಿಯಡಿ ಹೂತು ಹೋಗುತ್ತಿದೆ. ಹಚ್ಚ ಹಸಿರಿನ ಮಂದಾರವೀಗ ಅಕ್ಷರಶಃ ತ್ಯಾಜ್ಯಮಯವಾಗಿದೆ.
ಊಹೆಗೂ ನಿಲುಕದ, ಕಲ್ಪನೆಗೂ ಮೀರಿದ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಮಂದಾರ ಪ್ರದೇಶದ ಜನರ ಬದುಕನ್ನು ಅತಂತ್ರಗೊಳಿಸಿದೆ. ಹಚ್ಚಹಸಿರಿನ ಕೃಷಿಯಿಂದ ನಳ ನಳಿಸುತ್ತಿದ್ದ ಮಂದಾರ ಪ್ರದೇಶ ಇಂದು ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯೇ ಇಲ್ಲದಂತೆ ಕಸದ ರಾಶಿ ನಡುವೆ ಮುಚ್ಚಿ ಹೋಗುತ್ತಿದೆ. ಕಳೆದ ಒಂದು ವಾರದಲ್ಲಿ ಮಳೆ ನೀರಿನ ಜತೆ ಭಾರೀ ಪ್ರಮಾಣದ ಪ್ರವಾಹದಂತೆ ಹರಿದ ಲಕ್ಷಾಂತರ ಟನ್ ಗಟ್ಟಲೆ ಕಸದ ರಾಶಿ ಅಸಹನೀಯ ವಾಸನೆಯೊಂದಿಗೆ ಅಲ್ಲಿದ್ದ ಸಾವಿರಾರು ಸಂಖ್ಯೆಯ ತೆಂಗು, ಕಂಗು ಮರಗಳು ಸೇರಿದಂತೆ ತೋಟಗಳನ್ನು ಅಪೋಷಣ ಪಡೆಯುತ್ತಿದೆ. ಈಗಾಗಲೇ ಸುಮಾರು ಎರಡು ಕಿ.ಮೀ. ಉದ್ದಕ್ಕೆ ಪ್ರವಾಹದ ರೀತಿಯಲ್ಲಿ ಹರಿದ ತ್ಯಾಜ್ಯ ಅಲ್ಲಿರುವ 30ಕ್ಕೂ ಅಧಿಕ ಕೃಷಿ ಕುಟುಂಬಗಳ ಬದುಕನ್ನೇ ಕಸಿದಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತ್ಯಾಜ್ಯವನ್ನು ಶೇಖರಿಸುವ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಕೆಳಮುಖವಾಗಿರುವ ಮಂದಾರ ಪ್ರದೇಶದ ಸುಮಾರು ಎರಡು ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿ ಕಸದ ರಾಶಿ ಹರಿದಿದ್ದು, ಸದ್ಯ ಅಲ್ಲಿನ 27 ಮನೆಗಳವರನ್ನು ಮುಂಜಾಗೃತಾ ಕ್ರಮವಾಗಿ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ತ್ಯಾಜ್ಯ ರಾಶಿಯಡಿ 6,000ಕ್ಕೂ ಅಧಿಕ ತೆಂಗು, ಅಡಿಕೆ ಮರಗಳು ಕುರುಹೇ ಇಲ್ಲದಂತೆ ಧಾರಾ ಶಾಯಿ ಯಾಗಿರುವ ಜತೆಗೆ ಸ್ಥಳೀಯರು ಪೂಜಿಸುತ್ತಿದ್ದ ನಾಗಬನ, ದೈವಸ್ಥಾನವೂ ಕುರುಹಿಲ್ಲದಂತೆ ತ್ಯಾಜ್ಯ ರಾಶಿಯಡಿ ಹೂತು ಹೋಗಿವೆ. ಮಂದಾರದಿಂದ ಸ್ಥಳೀಯ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ಇದೀಗ ತ್ಯಾಜ್ಯ ರಾಶಿಯಿಂದ ಸಂಪೂರ್ಣ ತುಂಬಿ ಹೋಗಿದೆ.
ಕಳೆದ ಒಂದು ವಾರದಿಂದ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಇಳಿಜಾರು ಪ್ರದೇಶದಿಂದ ಮಂದಾರ ನಗರಕ್ಕೆ ಜಾರಲಾರಂಭಿಸಿದ ಕೊಳಚೆ ತುಂಬಿದ ತ್ಯಾಜ್ಯ ರಾಶಿ ಇದೀಗ ಮೂರು ಕಿ.ಮೀ. ಉದ್ದಕ್ಕೆ ಇಳಿದಿದೆ. 100 ಮೀಟರ್‌ಗೂ ಅಧಿಕ ಅಗಲದಲ್ಲಿ ಹಾಗೂ 50 ಮೀಟರ್‌ಗೂ ಅಧಿಕ ಎತ್ತರದಲ್ಲಿ ಇಳಿದಿರುವ ಲಕ್ಷಾಂತರ ಟನ್ ತ್ಯಾಜ್ಯ ರಾಶಿಯ ಕಪ್ಪಾದ ವಾಸನೆಯುಕ್ತ ಮಲಿನ ನೀರು ಇಲ್ಲಿನ ಗದ್ದೆ, ತೋಡು, ಕೆರೆ, ಬಾವಿಗಳಿಗೂ ವ್ಯಾಪಿಸಿದೆ. ಇಲ್ಲಿದ್ದ 3-4 ಬಾವಿ ತ್ಯಾಜ್ಯ ರಾಶಿಯಿಂದ ಮುಚ್ಚಿಹೋಗಿದ್ದರೆ, ಸದ್ಯ ಇರುವ 203 ಬಾವಿಗಳಿಗೆ ತ್ಯಾಜ್ಯ ನೀರು ಹರಿದು ಸಂಪೂರ್ಣ ಹಾಳಾಗಿದೆ. ರವೀಂದ್ರ ಭಟ್ ಸೇರಿದಂತೆ ಹಲವರ ಮನೆಯ ಸುತ್ತಲೂ ತ್ಯಾಜ್ಯದ ಜತೆಗೆ ಕಲುಷಿತ ನೀರೇ ಆವರಿಸಿದೆ.
ರವಿವಾರ ಮತ್ತು ಸೋಮವಾರ ತ್ಯಾಜ್ಯ ರಾಶಿಯ ಹರಿಯುವಿಕೆ ಕೊಂಚ ಇಳಿಮುಖವಾಗಿತ್ತು. ಆದರೆ ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಇಂದು ಮುಂಜಾನೆಯಿಂದ ಮತ್ತೆ ಮರ ಗಿಡಗಳನ್ನು ಅಪಾಯಕಾರಿ ರೀತಿಯಲ್ಲಿ ಭಾರೀ ಸದ್ದಿನೊಂದಿಗೆ ಧರೆಗುರುಳಿಸುತ್ತಾ ಸಾಗಿದೆ. ಇಲ್ಲಿನ ಸುಮಾರು 26 ಮನೆಯವರಿಗೆ ಸದ್ಯ ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್ ನಲ್ಲಿ ಆಶ್ರಯ ನೀಡಲಾಗಿದೆ. ಮನಪಾ ಆಯುಕ್ತರಾದ ಮುಹಮ್ಮದ್ ನಝೀರ್ ಸೇರಿದಂತೆ, ಹಿರಿಯ ಅಧಿಕಾರಿಗಳು ಇಂದು ಕೂಡಾ ಸ್ಥಳದಲ್ಲಿದ್ದು, ಸ್ಥಳೀಯರಿಗೆ ಸಾಂತ್ವನ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ ಸ್ಥಳೀಯರ ಬದುಕಿನ ಮೂಲವನ್ನೇ ಕಸಿದುಕೊಂಡು ಮುನ್ನುಗ್ಗುತ್ತಿರುವ ತ್ಯಾಜ್ಯ ರಾಶಿ ಪ್ರಪಾತವನ್ನೇ ಸೃಷ್ಟಿಸಿದೆ. ಕಳೆದ ವಾರ ದ.ಕ. ಜಿಲ್ಲಾಧಿಕಾರಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಕಣ್ಣೆದುರೇ ತ್ಯಾಜ್ಯಮಯವಾದ ಕೃಷಿ ಬದುಕು !
ಕರುಣಾಕರ್ ತಮ್ಮ ಪತ್ನಿ, ಮಗ ಹಾಗೂ ತಮ್ಮನ ಕುಟುಂಬ ದೊಂದಿಗೆ ಪ್ರತ್ಯೇಕ ಮನೆಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಯೇ ಇವರ ಬದುಕಿನ ಮೂಲಾಧಾರ. ಹಲವು ಕೌಟುಂಬಿಕ ಸಮಸ್ಯೆಗಳ ನಡುವೆಯೂ ಅವರು ಇಲ್ಲಿ ತಮ್ಮ ಪೂರ್ವಜರ ಕೃಷಿ ಬದುಕನ್ನು ಮುಂದುವರಿಸುತ್ತಾ, ಸುಂದರ ತೋಟದೊಂದಿಗೆ ಬದುಕು ರೂಪಿಸಿಕೊಂಡಿದ್ದರು. ಕಳೆದ ವರ್ಷವಷ್ಟೇ ತೋಟದಲ್ಲಿದ್ದ ಸಣ್ಣ ಕೆರೆಯೊಂದನ್ನು ಸಾವಿರಾರು ರೂ. ಖರ್ಚು ಮಾಡಿ ದುರಸ್ತಿಗೊಳಿಸಿ, ಅಕ್ಕಪಕ್ಕದ ತೋಟಗಳಿಗೂ ನೀರು ಹಾಯಿಸಲು ಯೋಗ್ಯವಾಗುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ಆ ಕೆರೆಯೀಗ ಅಕ್ಷರಶ: ತ್ಯಾಜ್ಯ ರಾಶಿಯ ಕಲ್ಮಶ ನೀರಿನಿಂದ ತುಂಬಿ ಹರಿಯುತ್ತಿದೆ. ಆ ಕೆರೆಯ ಸುತ್ತಲಿನ ತೋಟದಲ್ಲಿದ್ದ ಅಡಿಕೆ, ತೆಂಗು ಮರಗಳು ಕಣ್ಣೆದುರೇ ತ್ಯಾಜ್ಯದಡಿ ಸೇರುತ್ತಿರುವುದನ್ನು ಕಂಡು ಅವರು ಮಗುವಿನಂತೆ ಅಳುತ್ತಾರೆ.
‘‘ನಮ್ಮ ಅಜ್ಜನ ಕಾಲದಿಂದ ಇಲ್ಲಿ ನಾವು ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ. ಪ್ರಾಕೃತಿಕ ವಿಕೋಪದ ಎದುರು ಮನುಷ್ಯ ಏನೂ ಇಲ್ಲ. ಆದರೆ ಇದು ಮಾನವ ನಿರ್ಮಿತ ಸಮಸ್ಯೆ. ಇದರಿಂದಾಗಿ ನಮ್ಮ ಕೃಷಿ ಬದುಕೇ ನಾಶವಾಗಿದೆ. ನಮಗೆ ಬೇರೆ ಕಡೆ ಪುನರ್ವಸತಿ ಒದಗಿಸಬಹುದು. ಬೇರೆ ಮನೆಯನ್ನೂ ಕಟ್ಟಬಹುದು. ಆದರೆ ತಲೆತಲಾಂತರದಿಂದ ನಾವು ಕಾಪಾಡಿಕೊಂಡು ಬಂದ ನಮ್ಮ ತೋಟ ನಮ್ಮ ಕಣ್ಣೆದುರಿಗೇ ಕಸದ ರಾಶಿಯಡಿ ಹೂತು ಹೋಗುತ್ತಿರುವುದನ್ನು ನೋಡುವನ್ನು ಅದು ಹೇಗೆ ಸಹಿಸಲು ಸಾಧ್ಯ. ನಾವು ಮತ್ತೆ ಇಂತಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೇ?’’ ಎಂದು ಅವರು ಬಿಕ್ಕಳಿಸುತ್ತಾರೆ.
‘‘ನನ್ನ ಮಗ ಹುಟ್ಟಿದಾಗಿನಿಂದ ಅಸ್ತಮಾ ರೋಗದಿಂದ ಬಳಲುತ್ತಿದ್ದಾನೆ. ಲಕ್ಷಾಂತರ ರೂ. ಆತನ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿದೆ. ಈಗ ನಮ್ಮ ಬದುಕಿನ ಆಧಾರವೇ ಇಲ್ಲವಾಗಿದೆ. ನಮ್ಮ ಮುಂದಿನ ಬದುಕಾದರೂ ಹೇಗೆ. ನಾವು ಇಲ್ಲೇ ಬದುಕನ್ನು ಕಟ್ಟಿಕೊಂಡವರು. ಇದನ್ನು ಬಿಟ್ಟು ಬೇರೆ ಕಡೆ ಬದುಕು ವುದಾದರೂ ಹೇಗೆ’’ ಎಂದು ಕರುಣಾಕರ್ ಪತ್ನಿ ಕಣ್ಣೀರಿಡುತ್ತಾರೆ.
ಇಲ್ಲಿ ಕೆಲವು ಮನೆಗಳವರು ಇಲ್ಲಿಂದ ಹೋಗಲು ತಯಾರಿಲ್ಲ. ನಮ್ಮ ಬದುಕನ್ನೇ ಬಿಟ್ಟು ಹೋಗುವುದಾದರೂ ಎಲ್ಲಿಗೆ? ಜಿಲ್ಲಾಡಳಿತದಿಂದ ಸಿಗುವ ಶಾಶ್ವತ ಪರಿಹಾರ ನಮಗೆ ಈ ಬದುಕನ್ನು ನೀಡಬಲ್ಲುದೇ? ಆ ಪರಿಹಾರಕ್ಕಾಗಿ ನಾವಿನ್ನು ಎಷ್ಟು ಒದ್ದಾಡಬೇಕು? ಈ ನಮ್ಮ ಪರಿಸ್ಥಿತಿಗೆ ನಾವು ಮಾಡಿದ ತಪ್ಪಾದರೂ ಏನು? ಎಂದು ಸ್ಥಳೀಯರ ಪ್ರಶ್ನೆಗೆ ಉತ್ತರಿಸುವವರು ಯಾರು?
ಮೂಕ ಪ್ರೇಕ್ಷಕರಾಗಬೇಕಾದ ಪರಿಸ್ಥಿತಿ!
ಮಂದಾರ ಪ್ರದೇಶದ ಜನತೆ ಅನುಭವಿಸು ತ್ತಿರುವ ಈ ತ್ಯಾಜ್ಯದ ಸಮಸ್ಯೆ ದಶಕಗಳ ಹಳೆಯದು. ಈ ಹಿಂದೆಯಲ್ಲಾ ಮಳೆಯ ಸಂದರ್ಭ ತ್ಯಾಜ್ಯ ನೀರು ಇಲ್ಲಿನ ತೋಟ, ಬಾವಿಗಳಿಗೆ ಹರಿದು ಇಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಸೃಷ್ಟಿಸುತ್ತಿತ್ತು. ಕಳೆದ ಸುಮಾರು ಒಂದೂವರೆ ದಶಕಗಳಿಂದೀಚೆ ಸ್ಥಳೀಯರು ಸಮಸ್ಯೆ ಪರಿಹಾರಕ್ಕೆ ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ವೈಜ್ಞಾನಿಕವಾಗಿ ಡಂಪಿಂಗ್ ಯಾರ್ಡ್‌ಗೆ ವ್ಯವಸ್ಥೆ ಕಲ್ಪಿಸದಿರುವುದೇ ಇಂದು ಇಲ್ಲಿನ ಜನತೆ ಅನುಭವಿಸುತ್ತಿರುವ ಸಮಸ್ಯೆಗೆ ಮೂಲ ಕಾರಣ. ಇದೀಗ ಸಮಸ್ಯೆಯು ತ್ಯಾಜ್ಯ ರಾಶಿಯ ಪರ್ವತದ ರೂಪದಲ್ಲಿ ಸ್ಥಳೀಯರ ಬದುಕನ್ನೇ ಕಸಿದುಕೊಳ್ಳುತ್ತಿರುವಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಮೂಕಪ್ರೇಕ್ಷಕರಾಗಬೇಕಾದ ಪರಿಸ್ಥಿತಿ.
ಮಳೆಗಾಲದ ಬಳಿಕ ಕಸವನ್ನು ತೆರವುಗೊಳಿಸಿ ದರೂ ಈ ಪ್ರದೇಶದಲ್ಲಿ ಮತ್ತೆ ಹಿಂದಿನ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೆಂಬಂತಿದೆ. ಸುಮಾರು 30ರಷ್ಟು ಮನೆಗಳ ಜತೆಗೆ ಅಲ್ಲಿರುವ ದನ, ಕರು, ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳು ಕೂಡಾ ಅಸಹಾುಕ ಪರಿಸ್ಥಿತಿಯಿಂದ ತತ್ತರಿಸಿವೆ.
‘‘ನಾವು ಕೂಡಾ ಮನೆ ಖಾಲಿ ಮಾಡುವಂತೆ ತಿಳಿಸಿದ್ದಾರೆ. ಈಗಾಗಲೇ ಸುತ್ತಮುತ್ತಲಿನವರು ಮನೆ ಖಾಲಿ ಮಾಡಿ ಹೋಗಿದ್ದಾರೆ. ನಮಗೂ ಫ್ಲಾಟ್‌ನಲ್ಲಿ ಮನೆ ಒದಗಿಸಿದ್ದಾರೆ. ಆದರೆ ಹೆತ್ತವರ ಕಾಲದಿಂದ ಅದೆಷ್ಟು ಕಷ್ಟ ಪಟ್ಟು ಮಾಡಿದ ಮನೆ, ಇಲ್ಲಿರುವ ಸಾಮಾನು, ಅದಕ್ಕಿಂತಲೂ ಮುಖ್ಯವಾಗಿ ನಾವು ಸಾಕಿರುವ ಪ್ರಾಣಿಗಳನ್ನು ಬಿಟ್ಟು ಹೋಗುವುದಾದರೂ ಹೇಗೆ? ಕಳೆದ ಒಂದು ವಾರದಿಂದ ರಾತ್ರಿ ಹಗಲು ನಿದ್ದೆಯಿಲ್ಲದೆ ಇಲ್ಲಿನ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ನಮ್ಮ ತೋಟದ ಮರಗಳು ತ್ಯಾಜ್ಯದಡಿ ಹೂತುಹೋಗುತ್ತಿವೆ. ನಮ್ಮದು ಕೂಡು ಕುಟುಂಬ. 13 ಮಂದಿ ಸದಸ್ಯರಿದ್ದೇವೆ. ನಮ್ಮ ಬದುಕೇ ಅತಂತ್ರವಾಗಿದೆ’’ ಎಂದು ಕಣ್ಣೀರಿಡುತ್ತಾರೆ ರುಕ್ಮಿಣಿ.
ಕಾದಿದೆ ಮತ್ತಷ್ಟು ಅಪಾಯ!
ಮಳೆ ಬಿರುಸು ಪಡೆಯುತ್ತಿರು ವಂತೆಯೇ ಅತ್ತ ತ್ಯಾಜ್ಯ ರಾಶಿಯು ಪ್ರವಾಹದ ರೀತಿಯಲ್ಲಿ ಹರಿದು ಮುನ್ನುಗ್ಗುತ್ತಿದೆ. ಇದರಿಂದಾಗಿ ಕುಡುಪು ಪ್ರದೇಶವನ್ನು ಬೆಸೆಯುವ ಮಳೆ ನೀರು ಹರಿಯುವ ಬೃಹತ್ ತೋಡು ಕೂಡ ಬಂದ್ ಆಗುವ ಅಪಾಯದಲ್ಲಿದೆ. ಒಂದು ವೇಳೆ ತೋಡು ಬಂದಾದರೆ ಕುಡುಪು ವ್ಯಾಪ್ತಿಯಲ್ಲಿ ನೆರೆ ನೀರು ವ್ಯಾಪಿಸುವ ಅಪಾಯವೂ ಇದೆ. ಜತೆಗೆ ಸಮೀಪದಲ್ಲಿ ರೈಲ್ವೆ ಟ್ರ್ಯಾಕ್ ಕೂಡ ಇರುವುದರಿಂದ ತ್ಯಾಜ್ಯ ರಾಶಿ ಮುನ್ನುಗ್ಗಿದಲ್ಲಿ ಮತ್ತಷ್ಟು ಅಪಾಯವನ್ನು ಅಲ್ಲಗಳೆಯಲಾಗದು.
ಜಾರುತ್ತಿರುವ ಕಸದ ರಾಶಿ ಮಧ್ಯೆ ಹೊಗೆ !
ತುಳು ವಾಲ್ಮೀಕಿ, ಮಂದಾರ ರಾಮಾಯಣ ಕೃತಿಕರ್ತೃ ಮಂದಾರ ಕೇಶವ ಭಟ್ ಅವರ ಮನೆಯೂ ಇಲ್ಲಿದೆ. ಸದ್ಯ ಮನೆ ಖಾಲಿ ಮಾಡಲಾಗಿದ್ದು, 100ವರ್ಷಗಳ ಹಳೆಯ ಎರಡು ಮಹಡಿ ಮನೆಯ ಒಂದು ಪಾರ್ಶ್ವವನ್ನು ಸಂಪೂರ್ಣವಾಗಿ ಕಸದ ರಾಶಿ ಆವರಿಸಿದೆ. ಮನೆಯ ಎದುರು ಕಸದ ತ್ಯಾಜ್ಯ ನೀರು ಹರಿಯುತ್ತಿದ್ದರೆ, ಮನೆ ಎದುರಿದ್ದ ತೋಟ ಸಂಪೂರ್ಣ ಕಸದ ರಾಶಿಯಡಿ ಮುಚ್ಚಿ ಹೋಗಿದೆ. ಇಳಿಜಾರಿನುದಕ್ಕೂ ಜಾರುತ್ತಿರುವ ಕಸದ ರಾಶಿಯ ನಡುವೆ ನೋಡ ನೋಡುತ್ತಿರುವಂತೆಯೇ ಅಡಿಕೆ, ತೆಂಗು ಮರಗಳು ಭಾರೀ ಸದ್ದಿನೊಂದಿಗೆ ಇಂದು ಕೂಡಾ ಧರಾಶಾಯಿಯಾಗುತ್ತಿದ್ದರೆ, ಮತ್ತೊಂದೆಡೆ ಕಸದ ರಾಶಿಯ ಮಧ್ಯೆ ಸಮೀಪದಲ್ಲಿ ಉಸಿರಾಡಲು ಸಾಧ್ಯವಾಗದ ರೀತಿಯ ವಾಸನೆಯೊಂದಿಗೆ ಹೊಗೆ (ಮಿಥೇನ್ ಅನಿಲ) ಹೊರಸೂಸುತ್ತಿದೆ.
ಎಕರೆಗಟ್ಟಲೆ ಜಾಗದಲ್ಲಿ ಲಕ್ಷಾಂತರ ಟನ್ ಕಸ !
ಪಚ್ಚನಾಡಿ ಡಂಪಿಂಗ್ ಯಾರ್ಡ್ 77.93 ಎಕರೆ ಜಾಗವನ್ನು ಹೊಂದಿದ್ದು, ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಇದೀಗ ಸುಮಾರು 12 ಎಕರೆ ಜಾಗದಲ್ಲಿ ಕಳೆದ ಸುಮಾರು 10 ವರ್ಷಗಳಿಗೂ ಅಧಿಕ ಸಮಯದಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಮಂಗಳೂರು ವ್ಯಾಪ್ತಿಯಿಂದ ಪ್ರತಿನಿತ್ಯ ಸುಮಾರು 250ರಿಂದ 300 ಟನ್‌ನಷ್ಟು ಕಸವನ್ನು ಸಂಗ್ರಹಿಸಲಾಗುತ್ತದೆ. ಇದನ್ನು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಿಸಿ, ಅದರಲ್ಲಿ ಬಾಕಿಯಾಗುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್‌ನಲ್ಲಿ ಡಂಪ್ ಮಾಡಲಾಗುತ್ತದೆ.
''ಇದೇ ರೀತಿ ಉಳ್ಳಾಲ ಹಾಗೂ ಬಂಟ್ವಾಳ ದಿಂದ ಪ್ರತಿದಿನ ಸುಮಾರು 50 ಟನ್‌ನಷ್ಟು ಕಸವನ್ನು ನೇರವಾಗಿ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತಿದೆ. ಪ್ರತಿದಿನ ಸುಮಾರು 100ರಿಂದ 120 ಟನ್‌ನಷ್ಟು ಕಸವನ್ನು ಯಾರ್ಡ್‌ನಲ್ಲಿ ತುಂಬಿಸಲಾಗುತ್ತಿದೆ. ಹೀಗೆ ಕಳೆದ ಸುಮಾರು 10 ವರ್ಷಗಳಿಗೂ ಅಧಿಕ ಸಮಯದಿಂದ ಸುರಿಯಾದ ಲಕ್ಷಗಟ್ಟಲೆ ಟನ್ ಕಸ ಡಂಪಿಂಗ್ ಯಾರ್ಡ್‌ನಲ್ಲಿದೆ. ಮಂದಾರದಲ್ಲಿ ನಿರ್ವಸಿತರಾದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಈ ವಾರ ವಿಶೇಷ ಸಭೆ ನಡೆದು, ಪರ್ಯಾಯ ಹಾಗೂ ಶಾಶ್ವತ ವ್ಯವಸ್ಥೆಗಳ ಬಗ್ಗೆ ನಿರ್ಧಾರ ಮಾಡಲಾಗುವುದು. ತ್ಯಾಜ್ಯ ವಿಲೇಯನ್ನು ತಜ್ಞರ ಸಲಹೆ ಪಡೆದು ಮಾಡಬೇಕಾಗಿದೆ.''
- ಮುಹಮ್ಮದ್ ನಝೀರ್, ಮನಪಾ ಆಯುಕ್ತರು.
''ಮಳೆಹಾನಿ ಆಗಿರುವಂತಹ ಪ್ರದೇಶಗಳಿಗಿಂತಲೂ ಅಧಿಕ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಮಾದರಿಯ ದುರ್ಘಟನೆ ಮಂದಾರದಲ್ಲಿ ಸಂಭವಿಸಿದೆ. ಇದಕ್ಕೆ ಶಾಸಕರು-ಜಿಲ್ಲಾಧಿಕಾರಿ ಏನೂ ಮಾಡಲು ಆಗದು. ಮುಖ್ಯಮಂತ್ರಿ ಈ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ರಾಶಿಯನ್ನು ತೆಗೆಯುವ ಸಂಬಂಧ ತಕ್ಷ ಣವೇ ನಗರಾಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಮಂಗಳೂರಿಗೆ ಕಳುಹಿಸುವಂತೆ ಮುಖ್ಯಮಂತ್ರಿಯ ಸಲಹೆಗಾರರಿಗೆ ತಿಳಿಸಲಾಗಿದೆ. ಜತೆಗೆ, ಬಿಬಿಎಂಪಿ ಯ ತ್ಯಾಜ್ಯ ನಿರ್ವಹಣೆ ಮಾಡುವ ತಜ್ಞರನ್ನು ಕರೆಸುವಂತೆ ತಿಳಿಸಲಾಗಿದೆ.''
- ಯು.ಟಿ.ಖಾದರ್, ಶಾಸಕರು, ಮಾಜಿ ಸಚಿವರು.