ಪುತ್ತೂರಿಗೆ ಬಂದಿದ್ದ ಗಾಂಧೀಜಿ

Update: 2019-08-15 05:13 GMT

ರಾಗಿದಕುಮೇರಿ ದಲಿತ ಕಾಲನಿಯಲ್ಲಿ ತೆರೆದ ಬಾವಿಗೆ ಸೂಚಿಸಿದ್ದ ಗಾಂಧೀಜಿ!

 ಪುತ್ತೂರು, ಆ.14: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ ಚಳವಳಿಯ ಸಂದರ್ಭ 1934ರಲ್ಲಿ ಪುತ್ತೂರಿಗೆ ಆಗಮಿಸಿದ್ದರು. ಅವರು ಇಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿದ್ದ ಅಶ್ವತ್ಥ ಮರದ ಅಡಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಂದಭರ್ದಲ್ಲಿ ಅವರನ್ನು ಹಿರಿಯರಾಗಿದ್ದ ಕಾರ್ನಾಡ್ ಸದಾಶಿವ ರಾಯ, ಡಾ. ಶಿವರಾಮ ಕಾರಂತ, ಸುಂದರ್ ರಾವ್ ಮತ್ತಿತರರು ಸ್ವಾಗತಿಸಿದ್ದರು.

ಗಾಂಧೀಜಿ ಪುತ್ತೂರಿನ ದಲಿತ ಕಾಲನಿಗೂ ಭೇಟಿ ನೀಡಿದ್ದರು. ಪುತ್ತೂರಿಗೆ ಆಗಮಿಸಿದ ಗಾಂಧೀಜಿ ಪ್ರಥಮವಾಗಿ ನಗರದ ಹೊರವಲಯದಲ್ಲಿರುವ ರಾಗಿದಕುಮೇರಿ ದಲಿತ ಕಾಲನಿ ಹಾಗೂ ಬೊಟ್ಟತ್ತಾರು(ಬ್ರಹ್ಮನಗರ) ಕಾಲನಿಗೆ ಭೇಟಿ ನೀಡಿ ಅಲ್ಲಿನ ದಲಿತರ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದರು. ಈ ಸಂದರ್ಭ ರಾಗಿದಕುಮೇರಿ ಕಾಲನಿಯ ಜನರು ಕುಡಿಯಲು ತೋಡಿನ ನೀರನ್ನು ಬಳಕೆ ಮಾಡುತ್ತಿದ್ದರು. ಈ ದಯನೀಯ ಪರಿಸ್ಥಿತಿಯನ್ನು ಗಮನಿಸಿ, ನೊಂದಿದ್ದ ಗಾಂಧೀಜಿ ತನ್ನ ಜತೆಗಿದ್ದ ಡಾ.ಶಿವರಾಮ ಕಾರಂತ, ಸದಾಶಿವ ಕಾರ್ನಾಡ ಮೊದಲಾದವರ ಬಳಿ ಇದರ ಬಗ್ಗೆ ಪ್ರಸ್ತಾಪಿಸಿ, ಇಲ್ಲೊಂದು ತೆರೆದ ಬಾವಿ ತೋಡಿಸಲು ಸೂಚನೆ ನೀಡಿದ್ದರು. ಅದರಂತೆ ರಾಗಿದಕುಮೇರು ಬಳಿ ಈಗಲೂ ಬಾವಿ ಇದೆ. ಆದರೆ ಸದ್ಯ ಇದರ ಸ್ಥಿತಿ ದಯನೀಯವಾಗಿದೆ.

ಗಾಂಧಿಕಟ್ಟೆ

ಗಾಂಧೀಜಿ ಬಳಿಕ ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಸುಂದರ್ ರಾವ್‌ರ ಮನೆಗೆ ಭೇಟಿ ನೀಡಿ ಸ್ಪಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದರು. ಆ ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಅದರ ನೆನಪಿಗಾಗಿ ಇಲ್ಲೊಂದು ಗಾಂಧಿ ಕಟ್ಟೆಯನ್ನು ನಿರ್ಮಿಸಿ ಅಲ್ಲಿ ಗಾಂಧೀಜಿಯ ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು. ಪ್ರತಿವರ್ಷ ಪುತ್ತೂರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಿದ್ದರು.

ಗಾಂಧಿಕಟ್ಟೆಯ ಜೊತೆಗೆ ಇಲ್ಲಿ ಅಶ್ವತ್ಥ ಮರ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಕಟ್ಟೆಯೂ ಇದೆ. ಇವೆರಡು ನಾದುರಸ್ತಿಯಲ್ಲಿದ್ದ ಕಾರಣ ಕಳೆದ ಸಾಲಿನಲ್ಲಿ ನಗರಸಭೆಯ ಸ್ವಂತ ನಿಧಿಯಿಂದ 7 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಕ್ಕೆ ನಿರ್ಧರಿಸಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಹಿನ್ನಲೆಯಲಿ ಗಾಂಧೀಜಿ ಪ್ರತಿಮೆಯನ್ನು ಇಲ್ಲಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಆದರೆ ಇಲ್ಲಿರುವ ಅಶ್ವತ್ಥ ಮರವನ್ನು ತೆರವುಗೊಳಿಸುವುದಕ್ಕೆ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನ್ನೆಲೆಯಲ್ಲಿ ಟೊಂಗೆಯನ್ನು ಕಡಿದು ಮರವನ್ನು ಉಳಿಸಿಕೊಳ್ಳಲಾಗಿದೆ. ಈ ನಡುವೆ ಪುನರ್ ನಿರ್ಮಾಣಕ್ಕೆ ಪುತ್ತೂರಿನ ಬನ್ನೂರು ನಿವಾಸಿ ಚಂದ್ರಶೇಖರ ಪಾಟಾಳಿ ಎಂಬವರು ಹೈಕೋರ್ಟ್‌ಗೆ ದೂರು ಸಲ್ಲಿಸಿ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ಗಾಂಧಿಕಟ್ಟೆ ಸಹಿತ ಈ ಕಾಮಗಾರಿ ಸ್ಥಗಿತೊಂಡಿದೆ. ಇದರಿಂದ ಈ ಬಾರಿ ಗಾಂಧಿಕಟ್ಟೆಯಲ್ಲಿ ಗಾಂಧಿ ಪ್ರತಿಮೆ ಮಾಲಾರ್ಪಣೆಯ ಮೂಲಕ ಸ್ವಾತಂತ್ರೋತ್ಸವ ಆಚರಣೆ ನಡೆಯುದಿಲ್ಲ ಎಂಬುದು ಬೇಸರದ ಸಂಗತಿ.

ಮಡಿಕೇರಿಯಿಂದ ಸುಳ್ಯ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಪುತ್ತೂರಿಗೆ ಆಗಮಿಸಿದ ಮಹಾತ್ಮ ಗಾಂಧೀಜಿ ಬಳಿಕ ಮಂಗಳೂರು ಮೂಲಕ ತೆರಳಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಪುತ್ತೂರಿನ ಇತಿಹಾಸದಲ್ಲಿ ಗಾಂಧಿಕಟ್ಟೆ ಪ್ರಸಿದ್ಧ ತಾಣ.
 

Writer - ಸಂಶುದ್ದೀನ್ ಸಂಪ್ಯ

contributor

Editor - ಸಂಶುದ್ದೀನ್ ಸಂಪ್ಯ

contributor

Similar News