ಬಹು ಜನರಿಗೆ ದಕ್ಕದ ‘ಸ್ವಾತಂತ್ರ್ಯ’: ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಝಾದ್
ನಾವು ಇಂದು 73ನೆ ಸ್ವಾತಂತ್ರೋತ್ಸವ ಆಚರಣೆ ಮಾಡಿದ್ದೇವೆ.ಆದರೆ, ಈ ಸ್ವಾತಂತ್ರ ಕೆಲ ಮಂದಿಗೆ ಸೀಮಿತವಾಗಿದ್ದು, ದಲಿತ, ಮುಸ್ಲಿಮ್, ಆದಿವಾಸಿ, ಮಹಿಳೆಯರು ಸೇರಿ ಬಹುಜನರಿಗೆ ‘ಸ್ವಾತಂತ್ರವೇ’ ದಕ್ಕಿಲ್ಲ. ಆ ಸಂತೋಷವೂ ನಮಗಿಲ್ಲ ಎಂದು ಭೀಮ್ ಆರ್ಮಿ ಸಂಸ್ಥಾಪಕ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಆಝಾದ್ ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ವಾ.ಭಾ.: ಭೀಮ್ ಆರ್ಮಿ ತನ್ನ ಸ್ಥಾಪನೆಯ ಉದ್ದೇಶದ ಹಾದಿಯಲ್ಲಿಯೇ ಸಾಗುತ್ತಿದೆಯೇ, ಈ ಬಗ್ಗೆ ನಿಮ್ಮ ಅಭಿಪ್ರಾಯ?
ಚಂ.ಆಝಾದ್: ಸಂವಿಧಾನದ ಮೂಲ ಉದ್ದೇಶಗಳನ್ನು ಉಳಿಸುವ ಜೊತೆಗೆ, ಅರಿವು ಮೂಡಿಸುವ ಕಾಯಕವನ್ನೇ ಭೀಮ್ ಆರ್ಮಿ ಮೈಗೂಡಿಸಿಕೊಂಡಿದೆ. ಅಷ್ಟೇ ಅಲ್ಲದೆ, ನನ್ನ ಜೊತೆಗಿರುವ ಕಾರ್ಯಕರ್ತರು ಸಹ ಸಂವಿಧಾನದ ಜ್ಞಾನ ಹೊಂದಿದ್ದಾರೆ. ಹಾಗಾಗಿ, ಒಳ್ಳೆಯ ಹಾದಿಯಲ್ಲಿಯೇ ಹೊರಟ್ಟಿದ್ದೇವೆ.
ವಾ.ಭಾ: ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿ ಸುಭದ್ರ ನೆಲೆ ಹೊಂದಿದ್ದರೂ, ರಾಜ್ಯ ಸರಕಾರದ ವೈಫಲ್ಯಗಳು ಹೆಚ್ಚಾಗಿದ್ದರೂ, ಬಿಜೆಪಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ದಲಿತರೂ ಈ ಫಲಿತಾಂಶದ ಭಾಗವಾಗಿದ್ದಾರೆಂದು ಅನ್ನಿಸುವುದಿಲ್ಲವೇ?
ಚಂ.ಆಝಾದ್: ನಮ್ಮ ಸಂಘಟನೆ ಉತ್ತರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಮಧ್ಯ ಪ್ರದೇಶದಲ್ಲೂ ಇದೆ. ಇತ್ತೀಚಿಗೆ ರಾಜಸ್ತಾನ ಬಂದ್ ಮಾಡಲಾಗಿತ್ತು. ಕೆಲ ಬಹುಜನ ನಾಯಕರು, ತಮ್ಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡದ ಕಾರಣ, ಮೂರನೇ ವ್ಯಕ್ತಿಗೆ ಲಾಭವಾಯಿತೆ ಹೊರತು, ಪೂರ್ಣ ಪ್ರಮಾಣದಲ್ಲಿ ಜನರು ಬಿಜೆಪಿಗೆ ಬೆಂಬಲ ನೀಡಿಲ್ಲ. ಸೈದ್ದಾಂತಿಕ ಹೋರಾಟಗಳಿಗೆ ಸಿದ್ಧವಾದರೆ ಮಾತ್ರ ಬಿಜೆಪಿಯನ್ನು ಮಣಿಸಬಹುದು.
ವಾ.ಭಾ: ದಲಿತ-ಮುಸ್ಲಿಮ್ ಸಮುದಾಯಗಳ ಐಕ್ಯತೆ ಗುರಿ ಸಾಧ್ಯವೇ ಅಥವಾ ಕೇವಲ ಭಾಷಣಕ್ಕಷ್ಟೇ ಸೀಮಿತವೆ?
ಚಂ.ಆಝಾದ್: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾಯಿಸಿ ಸಂಸತ್ತಿಗೆ ಕಳುಹಿಸಿದ್ದು ಮುಸ್ಲಿಮರು. ಇವರೊಂದಿಗೆ ದಲಿತ, ಶೋಷಿತ ಸಮುದಾಯಗಳು ಜತೆಗೂಡಿ ಸಾಗಬೇಕು ಎನ್ನುವುದು ಬಹುದಿನಗಳ ಕನಸು. ಇದಕ್ಕಾಗಿಯೇ ಭೀಮ್ ಆರ್ಮಿ ಶ್ರಮಿಸುತ್ತಿದೆ. ಎಲ್ಲರೂ ಒಂದೇ ವೇದಿಕೆಯಲ್ಲಿಯೇ ಬರುವ ವಿಶ್ವಾಸ ನನ್ನಲಿದೆ.
ವಾ.ಭಾ: ಬಿಜೆಪಿ ವಿರೋಧಿಸಿ ಬೆಳೆಯುವ ಕೆಲ ದಲಿತ ನಾಯಕರು, ಕೊನೆಗೆ ಬಿಜೆಪಿ ಪಕ್ಷವನ್ನೇ ಅಪ್ಪಿಕೊಳ್ಳುತ್ತಾರೆ. ಹೀಗೇಕೆ?
ಚಂ.ಆಝಾದ್: ಕೆಲ ಆಮಿಷಗಳಿಗೆ ದಲಿತರ ನಾಯಕರು ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿರುವುದು ದುರಂತ. ನಾವು ಅಂಬೇಡ್ಕರ್ ಅವರ ವಿಚಾರಗಳಿಂದ ಬಲಾಢ್ಯರಾದರೆ ಮಾತ್ರ, ಇದಕ್ಕೆ ಕಡಿವಾಣ ಹಾಕಲು ಸಾಧ್ಯ.
ವಾ.ಭಾ: ಬಿಎಸ್ಪಿ ದಲಿತರ ಬೆಂಬಲ ಕಳೆದುಕೊಳ್ಳುತ್ತಿದೆಯೇ? ಅದರ ರಾಜಕೀಯ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯ?
ಚಂ.ಆಝಾದ್: ದಲಿತರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ ದಾದಾ ಸಾಹೇಬ್ ಕಾನ್ಷಿರಾಂ ಅವರ ಬಿಎಸ್ಪಿ ಮೇಲೆ ಅಪಾರ ಗೌರವವಿದೆ. ಆದರೆ, ಈಗಿನ ಮುಖ್ಯಸ್ಥರು (ಮಾಯಾವತಿ) ಅಧಿಕಾರದ ಹಪಾಹಪಿಗೆ ಬಿದ್ದಿದ್ದಾರೆ. ಕೆಲ ವಿಚಾರಗಳಲ್ಲಿ ತಿಳಿವಳಿಕೆ ಇಲ್ಲದೇ ಮಾತನಾಡುತ್ತಾರೆ. ಬಹುಜನರ ಸಮಸ್ಯೆಗೆ ಸ್ಪಂದಿಸುವುದನ್ನೇ ನಿಲ್ಲಿಸಿದ್ದಾರೆ.
ವಾ.ಭಾ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಿಮ್ಮ ಕಾರ್ಯತಂತ್ರವೇನು?
ಚಂ.ಆಝಾದ್: ಬಹುಜನರು ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಸಂಸತ್ತಿಗೂ ಕಳುಹಿಸಬೇಕು. ಇದೇ, ಗುರಿಯನ್ನಿಟ್ಟುಕೊಂಡು ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದೇವೆ.
‘ಟಿಪ್ಪು ಸುಲ್ತಾನ್ ದಲಿತರ ಧ್ವನಿ’
ಮೈಸೂರು ಹುಲಿ ಟಿಪ್ಪು ಸುಲ್ತಾನ್, ರಾಜ ಮಾತ್ರವಲ್ಲದೆ, ದಲಿತರ, ಶೋಷಿತ ವರ್ಗಗಳ ಧ್ವನಿ ಆಗಿದ್ದರು. ಆದರೆ, ಹಣಬಲದಿಂದ ಅಧಿಕಾರಕ್ಕೆ ಬಂದಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ, ಏಕಾಏಕಿ ಜಯಂತಿಯನ್ನು ರದ್ದುಗೊಳಿಸಿರುವುದು ಸಂವಿಧಾನ ಬಾಹಿರ. ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿ ಆಚರಿಸುವ ಜೊತೆಗೆ, ಈ ಕುರಿತು ನಡೆಯುವ ಹೋರಾಟಗಳಲ್ಲೂ ಭಾಗವಾಗಿರುವೆ.
-ಚಂದ್ರಶೇಖರ್ ಆಝಾದ್, ಮುಖ್ಯಸ್ಥ, ಭೀಮ್ ಆರ್ಮಿ