ಸೌದಿ: ಮಹಿಳೆಯರ ಮುಕ್ತ ಪ್ರಯಾಣಕ್ಕೆ ಅನುಮತಿ ನೀಡುವ ಕಾನೂನು ಜಾರಿ
Update: 2019-08-21 17:52 GMT
ರಿಯಾದ್ (ಸೌದಿ ಅರೇಬಿಯ), ಆ. 21: ಪುರುಷ ರಕ್ಷಕರ ಅನುಮತಿಯ ಅಗತ್ಯವಿಲ್ಲದೆ, ಪಾಸ್‌ಪೋರ್ಟ್ ಪಡೆಯಲು ಹಾಗೂ ಪ್ರಯಾಣ ಕೈಗೊಳ್ಳಲು ಮಹಿಳೆಯರಿಗೆ ಅವಕಾಶ ನೀಡುವ ನೂತನ ಕಾನೂನುಗಳು ಸೌದಿ ಅರೇಬಿಯದಲ್ಲಿ ಮಂಗಳವಾರ ಜಾರಿಯಾಗಿವೆ.
ಈ ಕಾನೂನುಗಳನ್ನು ರಾಜಾಜ್ಞೆಯೊಂದರ ಮೂಲಕ ಕಳೆದ ತಿಂಗಳು ಘೋಷಿಸಲಾಗಿತ್ತು. ಈಗ ವಯಸ್ಕ ಮಹಿಳೆಯರು ಮುಕ್ತವಾಗಿ ಪ್ರಯಾಣಿಸಬಹುದಾಗಿದೆ ಹಾಗೂ ಕೌಟುಂಬಿಕ ವಿಷಯಗಳಲ್ಲಿ ಹೆಚ್ಚಿನ ನಿಯಂತ್ರಣವನ್ನು ಹೊಂದಬಹುದಾಗಿದೆ.
‘‘ರಾಜಾಜ್ಞೆಯಲ್ಲಿ ತಿಳಿಸಲಾದ ತಿದ್ದುಪಡಿಗಳ ಜಾರಿಯನ್ನು ಸೌದಿ ಅರೇಬಿಯದ ಎಲ್ಲ ವಲಯಗಳಲ್ಲಿರುವ ಪಾಸ್‌ಪೋರ್ಟ್ ಮತ್ತು ನಾಗರಿಕ ಸ್ಥಾನಮಾನ ಇಲಾಖೆಗಳು ಮತ್ತು ಅವುಗಳ ಶಾಖೆಗಳು ಆರಂಭಿಸಿವೆ’’ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.