ಕುಟುಕು ಕಾರ್ಯಾಚರಣೆ: ಲಂಚ ಪಡೆದ ತ್ರಿಪುರಾ ವಿವಿ ಕುಲಪತಿ !

Update: 2019-09-08 04:53 GMT
ಫೋಟೊ: thenewindianexpress

ಅಗರ್ತಲ: ಕೊಲ್ಕತ್ತಾ ಮೂಲದ ಮುದ್ರಣ ಸಂಸ್ಥೆಯೊಂದಕ್ಕೆ ಕೆಲಸ ನೀಡುವ ಸಲುವಾಗಿ 60 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾದ ತ್ರಿಪುರಾ ವಿವಿ ಕುಲಪತಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನ್ಯೂಸ್ ವ್ಯಾನ್‌ಗಾರ್ಡ್ ಎಂಬ ಸ್ಥಳೀಯ ಚಾನಲ್, ಕುಲಪತಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಕುಟುಕು ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿತ್ತು. "ಆಪರೇಷನ್ ವೈಟ್ ಕಾಲರ್" ಹೆಸರಿನ ಕುಟುಕು ಕಾರ್ಯಾಚರಣೆಯ ವೀಡಿಯೊ ವನ್ನು ಎನ್‌ಡಿಟಿವಿ ಜತೆ ಹಂಚಿಕೊಳ್ಳಲಾಗಿದೆ. ಕುಲಪತಿ ವಿ.ಎಲ್.ಧಾರೂಕರ್, ಈ ಗುತ್ತಿಗೆ ನೀಡಲು ಶೇಕಡ 10ರಷ್ಟು ಲಂಚ ನೀಡುವಂತೆ ಮಾತುಕತೆ ನಡೆಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ, ಕುಲಪತಿ ರಾಜೀನಾಮೆಗೆ ಸೂಚನೆ ನಿಡಿದೆ ಎಂದು ಮೂಲಗಳು ಹೇಳಿವೆ. ಒಟ್ಟು ಮೂರು ವೀಡಿಯೊ ತುಣುಕುಗಳಿದ್ದು, ಎರಡನೇ ವೀಡಿಯೊದಲ್ಲಿ, ನೋಟಿನ ಕಂತೆಗಳು ಒಂದು ಚೀಲದಿಂದ ಮತ್ತೊಂದಕ್ಕೆ ವಿನಿಮಯ ಆಗುತ್ತಿರುವ ದೃಶ್ಯವಿದೆ.

ವಿಶ್ವವಿದ್ಯಾನಿಲಯ ಈ ಲಂಚ ಆರೋಪವನ್ನು ಅಲ್ಲಗಳೆದಿದ್ದು, ಇದು ಸಂಪಾದಿತ ವೀಡಿಯೊ ಎಂದು ಪ್ರತಿಪಾದಿಸಿದೆ. ಕುಲಪತಿಗಳ ಹೆಸರು ಕೆಡಿಸುವ ವ್ಯವಸ್ಥಿತ ಪಿತೂರಿ ಎಂದು ಹೇಳಿಕೊಂಡಿದೆ.

ವಿ.ಎಲ್.ಧಾರೂಕರ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಆಗಿದ್ದು, ಮಹಾರಾಷ್ಟ್ರದ ಔರಂಗಾಬಾದ್ ಮೂಲದವರು. ಈ ಮುನ್ನ ಮಹಾರಾಷ್ಟ್ರದ ಮರಾಠವಾಡ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News