ಜಮ್ಮು-ಕಾಶ್ಮೀರ ಭಾರತೀಯ ರಾಜ್ಯ ಎಂದು ಹೇಳಿದ ಪಾಕ್

Update: 2019-09-10 17:08 GMT

ಪಾಕಿಸ್ತಾನವು ಮಂಗಳವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ‘ಭಾರತೀಯ ರಾಜ್ಯ’ ಎಂದು ಕರೆದಿದೆ.

ಪಾಕಿಸ್ತಾನವು ಈ ವರೆಗಿನ ತನ್ನ ಎಲ್ಲ ಅಧಿಕೃತ ಪತ್ರವ್ಯವಹಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ‘ಭಾರತದ ಆಡಳಿತಕ್ಕೆ ಒಳಪಟ್ಟ ಕಾಶ್ಮೀರ’ ಎಂದು ಕರೆದಿದೆ.

 ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನಿ ನಿಯೋಗದ ನೇತೃತ್ವ ವಹಿಸಿರುವ ಆ ದೇಶದ ವಿದೇಶ ವ್ಯವಹಾರಗಳ ಸಚಿವ ಶಾ ಮಹ್ಮೂದ್ ಕುರೇಶಿ, ‘ಭಾರತದ ರಾಜ್ಯ ಜಮ್ಮು ಮತ್ತು ಕಾಶ್ಮೀರ’ಕ್ಕೆ ಹೋಗಲು ಅಂತರ್‌ರಾಷ್ಟ್ರೀಯ ಮಾಧ್ಯಮ ಮತ್ತು ಸಂಘಟನೆಗಳಿಗೆ ಭಾರತ ಯಾಕೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

‘‘ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂಬ ಭಾವನೆಯನ್ನು ಜಗತ್ತಿನಲ್ಲಿ ಉಂಟುಮಾಡಲು ಭಾರತ ಪ್ರಯತ್ನಿಸುತ್ತಿದೆ. ಅಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ್ದರೆ, ‘ಭಾರತದ ಆಡಳಿತಕ್ಕೆ ಒಳಪಟ್ಟ ಕಾಶ್ಮೀರ’ಕ್ಕೆ ಹೋಗಲು ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಾಣಲು ನಿಮಗೆ, ಅಂತರ್‌ರಾಷ್ಟ್ರೀಯ ಮಾಧ್ಯಮಗಳಿಗೆ ಮತ್ತು ಅಂತರ್‌ರಾಷ್ಟ್ರೀಯ ಸಂಘಟನೆಗಳಿಗೆ, ಸರಕಾರೇತರ ಸಂಘಟನೆಗಳಿಗೆ ಮತ್ತು ನಾಗರಿಕ ಸಮಾಜದ ಸಂಘಟನೆಗಳಿಗೆ ಅವರು ಯಾಕೆ ಬಿಡುತ್ತಿಲ್ಲ ಎಂದು ನಾನು ಕೇಳುತ್ತೇನೆ’’ ಎಂದು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಪತ್ರಕರ್ತರೊಂದಿಗೆ ಮಾತನಾಡಿದ ಪಾಕ್ ವಿದೇಶ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News