ಭದ್ರತಾ ಸಲಹೆಗಾರ ಬೋಲ್ಟನ್‌ರನ್ನು ಉಚ್ಚಾಟಿಸಿದ ಟ್ರಂಪ್
Update: 2019-09-11 17:09 GMT
ವಾಶಿಂಗ್ಟನ್, ಸೆ. 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತನ್ನ ತೀವ್ರವಾದಿ ಧೋರಣೆಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್‌ರನ್ನು ಉಚ್ಚಾಟಿಸಿದ್ದಾರೆ.
‘‘ಜಾನ್‌ರ ನಿಲುವುಗಳೊಂದಿಗೆ ನಾನು ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ. ಶ್ವೇತಭವನದಲ್ಲಿ ಇನ್ನು ನಿಮ್ಮ ಸೇವೆಯ ಅಗತ್ಯವಿಲ್ಲ ಎಂದು ನಾನು ಅವರಿಗೆ ನಿನ್ನೆ ರಾತ್ರಿ ಹೇಳಿದ್ದೇನೆ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನನ್ನು ಮುಂದಿನ ವಾರ ನೇಮಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬೋಲ್ಟನ್ ಮಾಜಿ ಸೈನಿಕರಾಗಿದ್ದು, ಇರಾಕ್ ಮೇಲಿನ ಯುದ್ಧ ಮತ್ತು ಇತರ ಆಕ್ರಮಣಾತ್ಮಕ ವಿದೇಶಿ ನೀತಿ ನಿರ್ಧಾರಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇರಾನ್, ವೆನೆಝುವೆಲ ಮತ್ತು ಇತರ ಸಂಘರ್ಷಪೀಡಿತ ದೇಶಗಳ ಬಗ್ಗೆ ಅಮೆರಿಕ ತೆಗೆದುಕೊಂಡಿರುವ ಆಕ್ರಮಣಾತ್ಮಕ ನಿಲುವುಗಳ ಹಿಂದೆ ಅವರಿದ್ದಾರೆ ಎನ್ನಲಾಗಿದೆ.