ಸ್ವರ್ಗದ ಕಣಿವೆಯ ಮೌನಿ ವಿಧವೆ
ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಆಝಾದ್ ಕಾಶ್ಮೀರದ ಉಗ್ರವಾದಿ ಹೋರಾಟಗಾರರು ಮತ್ತು ಭಾರತ ಸರಕಾರದ ನಡುವೆ ಕೆಳಸ್ತರದಲ್ಲಿ ಯುದ್ಧ ನಡೆಯುತ್ತಲೇ ಇದೆ. ಶುಭ್ರ ಶ್ವೇತ ಹಿಮಾಲಯ ಪಂಕ್ತಿಗಳ, ಹಚ್ಚ ಹಸುರಿನ ಕಣಿವೆಗಳ ಸುಂದರನಾಡಿನಲ್ಲಿ ರಕ್ತದೋಕುಳಿ ಆಟಕ್ಕೆ ವಿರಾಮವಿಲ್ಲ. ಆದರೆ ಇದು ‘ವಿಡೋ ಆಫ್ ಸೈಲೆನ್ಸ್’ ಚಿತ್ರಕ್ಕೆ ಒಂದು ಹಿನ್ನೆಲೆ ಮಾತ್ರ. ಪ್ರವೀಣ್‌ರವರ ಚಿತ್ರ ಈ ಎರಡು ಪಕ್ಷಗಳ ನಡುವಿನ ಹೋರಾಟವನ್ನು ಕುರಿತ ಚಿತ್ರವಲ್ಲ. ಇದು ಪ್ರತಿಕೂಲ ಪರಿಸ್ಥಿತಿಯಲ್ಲೂ ತಲೆಯೆತ್ತಿ ನಿಲ್ಲುವ ಛಲದ ಹೆಣ್ಣು ಮಗಳು, ತನ್ನ ಘನತೆ ಮತ್ತು ಹಕ್ಕುಗಳಿಗಾಗಿ ಸೆಟೆದು ನಿಲ್ಲುವ ಹೋರಾಟದ ಕಥನ.
ಕಾಶ್ಮೀರ ರಾಜ್ಯ ರಾಜಕೀಯವಾಗಿ ಒಂದು ರಣರಂಗ. ಸ್ವತಂತ್ರ ಕಾಶ್ಮೀರ(ಆಝಾದ್ ಕಾಶ್ಮೀರ)ದ ಹೋರಾಟಗಾರರು ಮತ್ತು ಭಾರತೀಯ ಸೇನೆಯ ನಡುವಿನ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ. ಕಾಶ್ಮೀರದ ಕಣಿವೆ ಗುಂಡಿನ ಶಬ್ದವನ್ನು ಅನುರಣಿಸುತ್ತಿರುವ ಸಮಯದಲ್ಲಿಯೇ ಅರ್ಥಹೀನ ಸಂಘರ್ಷದಲ್ಲಿ ಕಂಗೆಟ್ಟ ನಿರಪರಾಧಿಗಳಿಗೆ ನೆರವಿನ ಹಸ್ತ ಚಾಚಿ ಶಾಂತಿಯನ್ನು ಸ್ಥಾಪಿಸಲು ಭಾರತ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹೃದಯದ ಗಹ್ವರದಿಂದ ಹರಿಯಬೇಕಾದ ಕರುಣೆ, ನಿರ್ದಯಿ ಅಧಿಕಾರಶಾಹಿಯ ಕ್ರೂರ ಹಸ್ತದಲ್ಲಿ ಹೊಸಕಿಹಾಕಿರುವುದರಿಂದಲೇ ಪರಿಸ್ಥಿತಿ ಸಂಕೀರ್ಣವಾದ ಸಮಸ್ಯೆಗಳಿಗೆ ಎಡೆ ನೀಡಿದೆ. ಹಾಗಾಗಿ ಇಲ್ಲಿ ಗುಂಡು ಹಾರುತ್ತಲೇ ಇದೆ. ಮನುಷ್ಯರು ಕಾಣೆಯಾಗುತ್ತಾರೆ. ಅವರಿಗಾಗಿ ಕುಟುಂಬದವರ ಹುಡುಕಾಟ ನಿರಂತರವಾಗಿ ನಡೆಯುತ್ತಲಿದೆ. ಈ ಅಗ್ನಿಕುಂಡದಲ್ಲೂ ಮಾನವೀಯ ಸೆಲೆಗಳು ಚಿಮ್ಮುವ, ಕರುಣೆಯ ಸಸಿಗಳು ಕುಡಿಯೊಡೆಯುವ, ಭಾವನಾತ್ಮಕ ಎಳೆಗಳು ಮಾನವೀಯತೆಯ ಬಲೆಯನ್ನು ಹೆಣೆಯುವ ಸಂಗತಿಗಳು ಜರುಗುತ್ತಲೇ ಇರುತ್ತವೆ. ಇಂತಹ ಭಯಾನಕ ಭಿತ್ತಿಯಲ್ಲಿ ಮೂಡುವ ಮಾನವನ ಅದಮ್ಯ ಪ್ರೀತಿಯ ಚಿತ್ರಗಳು ಚಲನಚಿತ್ರಗಳಿಗೆ ಸಿದ್ಧಮಾಡಿದ ವಸ್ತುಗಳಂತಿವೆ. ಕಾಶ್ಮೀರದ ಈ ಒಳಗುದಿಯಲ್ಲಿ ಮಾನವೀಯತೆಯ ಹೂವರಳಿಸಿದ ಅನೇಕ ನಿರ್ದೇಶಕರು ಅನೇಕ ಉತ್ತಮ ಚಿತ್ರಗಳನ್ನು ನೀಡುವಲ್ಲಿ ಯಶಸ್ಸು ಕಂಡಿದ್ದಾರೆ. ಆ ನಿಟ್ಟಿನಲ್ಲಿ ಈ ವರ್ಷದ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ವಿಡೋ ಆಫ್ ಸೈಲೆನ್ಸ್’ ಗಮನಾರ್ಹ ಪ್ರಯತ್ನ.
ಕಾಶ್ಮೀರದ ಕಣಿವೆಯಲ್ಲಿ ಜನ ಕಾಣೆಯಾಗುವುದು ಸಾಮಾನ್ಯ. ಅಂಥ ಕಾಣೆಯಾದ ಜನರ ಹುಡುಕಾಟವನ್ನೇ ಆಧರಿಸಿ ಹಲವಾರು ಶ್ರೇಷ್ಠ ಚಿತ್ರಗಳು ಬಂದಿವೆ. ಕಣಿವೆಯಲ್ಲಿ ಬೀಡುಬಿಟ್ಟ ಉಗ್ರಗಾಮಿಗೆ ಚಿಕಿತ್ಸೆ ನೀಡಿ ಕಾಣೆಯಾದ ವೈದ್ಯನೊಬ್ಬನ ಹುಡುಕಾಟವನ್ನು ಷೇಕ್ಸ್ ಪಿಯರ್‌ನ ಹ್ಯಾಮ್ಲೆಟ್ ನಾಟಕಕ್ಕೆ ಅನ್ವಯಿಸಿ ಹೆಣೆದ ವಿಶಾಲ ಭಾರದ್ವಾಜ್ ಅವರು ‘ಹೈದರ್’ (2014) ಸಂಕೀರ್ಣ ಭಿತ್ತಿಯಿದ್ದ ಯಶಸ್ವಿ ಚಿತ್ರ. ಕಾಣೆಯಾದ ತಂದೆಯನ್ನು ಹುಡುಕಲು ದೇವರ ಮೊರೆ ಹೋಗಿ, ಹುಡುಕಾಟದ ಯಾತ್ರೆಯುದ್ದಕ್ಕೂ ಮಿಲಿಟರಿಯ ಅಧಿಕಾರಿ ಮತ್ತು ಕಣಿವೆಯ ಮಗುವಿನ ನಡುವೆ ಬೆಳೆಯುವ ಬಾಂಧವ್ಯದ ಕತೆಯ ‘ಹಮೀದ್’ (2018) ಮತ್ತೊಂದು ಮನಕಲಕುವ ಚಿತ್ರ. ‘ವಿಡೋ ಆಫ್ ಸೈಲೆನ್ಸ್’ (2019) ಅದೇ ಸಾಲಿಗೆ ಸೇರುವ ಮತ್ತೊಂದು ಕಾಡುವ ಚಿತ್ರ.
ಸ್ಥಳೀಯವಾಗಿ ಅಮಾಯಕ ಜನತೆಯ ಮೇಲೆ ಎಸಗುವ ಅನ್ಯಾಯ, ದಬ್ಬಾಳಿಕೆ, ಮೋಸಗಳನ್ನು ಆಧರಿಸಿ ಹೆಣೆದ ಕಥನಗಳು ಮನಕಲಕುವ ಚಿತ್ರಗಳಿಗೆ ಉತ್ತಮ ಸರಕಾಗಬಹುದು. ಆದರೆ ಇಂತಹ ಅನ್ಯಾಯವನ್ನೇ ಆಧರಿಸಿದ ‘ವಿಡೋ ಆಫ್ ಸೈಲೆನ್ಸ್’ ಚಿತ್ರ ಮನಕಲಕುವ ಬದಲು ಪ್ರವೀಣ್ ಮಾರ್ಷಲೆ ಅವರ ನಿರ್ದೇಶನ ಮತ್ತು ನಾಯಕಿಯ ಪಾತ್ರದ ನಟಿ ಶಿಲ್ಪಿಮಾರವಾಡ ಅವರ ಸಂಯಮಪೂರ್ಣ ನಟನೆ ಮನಸ್ಸನ್ನು ಅಲ್ಲಾಡಿಸಿ ಕ್ಷೋಭೆಯುಂಟು ಮಾಡುವ ಚಿತ್ರವಾಗಿ ರೂಪುಗೊಂಡಿದೆ. ಈ ಹಿಂದೆ ‘ಬೇರ್ ಫುಟ್ ಗೋವಾ’, ‘ವಾಕಿಂಗ್ ವಿತ್ ದ ವಿಂಡ್’ ಎಂಬ ವಿಶಿಷ್ಟ ಮಾದರಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರವೀಣ್ ಈ ಚಿತ್ರದಲ್ಲಿ ನಿರ್ದಯವಾದ ಅಧಿಕಾರಶಾಹಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಹೋರಾಡುವ ಛಲ ಉಳಿಸಿಕೊಂಡ ನಾರಿಶಕ್ತಿಗೆ ಗೌರವ ಸಲ್ಲಿಸಿದ್ದಾರೆ. ಸ್ತ್ರೀ ವಿರೋಧಿ ಸಮಾಜ ಮತ್ತು ಆಡಳಿತದ ನಿಲುವಿನ ವಿರುದ್ಧ ಕೆಂಡ ಕಾರಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಆಝಾದ್ ಕಾಶ್ಮೀರದ ಉಗ್ರವಾದಿ ಹೋರಾಟಗಾರರು ಮತ್ತು ಭಾರತ ಸರಕಾರದ ನಡುವೆ ಕೆಳಸ್ತರದಲ್ಲಿ ಯುದ್ಧ ನಡೆಯುತ್ತಲೇ ಇದೆ. ಶುಭ್ರ ಶ್ವೇತ ಹಿಮಾಲಯ ಪಂಕ್ತಿಗಳ, ಹಚ್ಚ ಹಸುರಿನ ಕಣಿವೆಗಳ ಸುಂದರನಾಡಿನಲ್ಲಿ ರಕ್ತದೋಕುಳಿ ಆಟಕ್ಕೆ ವಿರಾಮವಿಲ್ಲ. ಆದರೆ ಇದು ಈ ಚಿತ್ರಕ್ಕೆ ಒಂದು ಹಿನ್ನೆಲೆ ಮಾತ್ರ. ಪ್ರವೀಣ್‌ರವರ ಚಿತ್ರ ಈ ಎರಡು ಪಕ್ಷಗಳ ನಡುವಿನ ಹೋರಾಟವನ್ನು ಕುರಿತ ಚಿತ್ರವಲ್ಲ. ಇದು ಪ್ರತಿಕೂಲ ಪರಿಸ್ಥಿತಿಯಲ್ಲೂ ತಲೆಯೆತ್ತಿ ನಿಲ್ಲುವ ಛಲದ ಹೆಣ್ಣು ಮಗಳು, ತನ್ನ ಘನತೆ ಮತ್ತು ಹಕ್ಕುಗಳಿಗಾಗಿ ಸೆಟೆದು ನಿಲ್ಲುವ ಹೋರಾಟದ ಕಥನ.
ಚಿತ್ರ ಆರಂಭವಾಗುವುದೇ ಒಂದು ಅತಿವಾಸ್ತವತೆಯ ಚಿತ್ರದಂತಹ ಸನ್ನಿವೇಶದಿಂದ. ಅಲ್ಲಿಂದಲೇ ಪ್ರೇಕ್ಷಕನನ್ನು ಅದು ಹಿಡಿದು ಕೂರಿಸುತ್ತದೆ. ಒಂದು ಮಂದ ಬೆಳಕಿನ, ಮಂಕಾದ ಗೋಡೆಯ ಎದುರಿನಲ್ಲಿ ಮೌನವಾಗಿ ಕುಳಿತ ಮುದುಕಿಯೊಬ್ಬಳನ್ನು, ಸಣ್ಣ ಹುಡುಗಿಯೊಬ್ಬಳು ಉದ್ದವಾದ ಗಟ್ಟಿ ಟೇಪಿನಂಥ ಹಗ್ಗದಿಂದ ಬಿಗಿದು ಕಟ್ಟುತ್ತಾಳೆ. ಕಿಟಕಿಯ ಒಂದು ಭಾಗವನ್ನು ತೆರೆದು ಚಜ್ಜದ ಮೇಲಿನ ಗಿಡದ ಕುಂಡಕ್ಕೆ ನೀರೆರೆದು ಚೆಂಬಿನಿಂದ ಉಳಿದ ನೀರನ್ನು ಮುದುಕಿಗೆ ತುಸು ದೂರದಲ್ಲಿಟ್ಟು ಹೋಗುತ್ತಾಳೆ. ಆನಂತರ ಮನೆಗೆ ಬೀಗ ಹಾಕಿ ಶಾಲೆಗೆ ಹೋಗುತ್ತಾಳೆ. ಅವಳು ಇನಯ. ಕಾಣೆಯಾದ ತಂದೆಯ ಮಗಳು. ಆನಂತರ ಬಿಚ್ಚಿಕೊಳ್ಳುವ ಸರಣಿ ದೃಶ್ಯಗಳು ಗಂಡಸರನ್ನು ಕಳೆದುಕೊಂಡ ಸಂಸಾರಗಳ ಪ್ರತಿನಿಧಿಯಾದ ಆಸಿಯಾಳ ಬದುಕನ್ನು ಮತ್ತು ಅವಳ ಹೋರಾಟವನ್ನು ಕಟ್ಟುತ್ತಾ ಹೋಗುತ್ತದೆ.
ಆಸಿಯಾ, ಕಾಶ್ಮೀರದ ಕಣಿವೆಯ ಸರಕಾರದ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿ. ಇತರರ ಗಾಯಗಳಿಗೆ ಮುಲಾಮು ಹಚ್ಚಿ ಉಪಶಮನ ಮಾಡುವ ಆಕೆಗೆ ತನ್ನದು ಮಾಯದ ಗಾಯವೆಂಬುದರ ಅರಿವಿದೆ. ಸಾಮಾನ್ಯವಾಗಿ ಕಾಶ್ಮೀರ ರಾಜ್ಯ ಎಂದ ಕೂಡಲೇ ಮನಸ್ಸಿಗೆ ಹೊಳೆಯುವ ಪೈನ್ ಮರಗಳ ರಾಶಿಯ, ಹಸಿರು ಹೊದ್ದ ಕಣಿವೆಗಳಲ್ಲಿ ಜುಳು ಜುಳು ಹರಿಯುವ ನದಿಗಳು, ಹಿಮಾಚ್ಛಾದಿತ ಪರ್ವತಪಂಕ್ತಿ ಮೂಡುತ್ತವೆ. ಆದರೆ ಇಲ್ಲಿ ಹಸಿರಿನ ಕಣಿವೆಯ ಬದಲು ಬರದ ಛಾಯೆಯಿರುವ ಶುಷ್ಕ ವಾತಾವರಣದ, ಹಳ್ಳ ದಿಣ್ಣೆಯ ಕಿರುದಾರಿಗಳ, ಧೂಳಿನ ಹಳ್ಳಿ. ಮುರುಕಲು ಮನೆಗಳು. ಅಂತಹ ಮನೆಯೊಂದರಲ್ಲಿ ತಾಯಿ, ಹೆಂಡತಿ ಮತ್ತು ಎಳೆಯ ಮಗಳೊಡನೆ ಬದುಕುತ್ತಿದ್ದ ಯಜಮಾನನನ್ನು ಒಂದು ದಿನ ಭದ್ರತಾ ಸಿಬ್ಬಂದಿ ಬಂಧಿಸಿ ಕರೆದುಕೊಂಡು ಹೋಗುತ್ತಾನೆ. ಆತ ಮತ್ತೆ ಹಿಂದಿರುಗಿಲ್ಲ. ಅವನು ಬದುಕಿರುವ ಅಥವಾ ಸತ್ತಿರುವ ಬಗ್ಗೆ ಮಾಹಿತಿಯಿಲ್ಲ. ಮಾಹಿತಿ ನೀಡುವ ಉತ್ತರದಾಯಿತ್ವ ಆಡಳಿತಕ್ಕಾಗಲೀ, ಸೇನೆಗಾಗಲೀ ಇಲ್ಲ.
ಇಂತಹ ಎದೆನಡುಗುವ ಘಟನೆಗಳು ಅಲ್ಲೇನೂ ಹೊಸದಲ್ಲ. ಬಂಧಿಸಲಾದ ವ್ಯಕ್ತಿಗಳು ಹಿಂದಿರುಗದಿರುವುದು ಸಾಮಾನ್ಯ. ಅವರೆಲ್ಲೋ ಗುಂಡಿಗೆ ಬಲಿಯಾಗುತ್ತಾರೆಂಬುದು ಜನಸಾಮಾನ್ಯರ ನಂಬಿಕೆ. ಇಲ್ಲಿ ಕಾಣೆಯಾದ ವ್ಯಕ್ತಿಯ ಹೆಂಡತಿ ಆಸಿಯಾಗೆ ತನ್ನ ಗಂಡ ಬದುಕಿರಬಹುದೆಂಬ ಕ್ಷೀಣ ಆಸೆ. ಅದರ ಬೆನ್ನತ್ತಿ ಆಕೆ ಎಲ್ಲ ಕಡೆ- ಆಸ್ಪತ್ರೆ, ಶವಾಗಾರ, ಜೈಲು, ಪೊಲೀಸ್ ಠಾಣೆ- ಹುಡುಕಿದ್ದಾಳೆ. ಗಂಡನ ಸುಳಿವು ಎಲ್ಲೂ ಸಿಗದು. ಗಂಡನ ಇರುವಿಕೆ ಅಥವಾ ಸಾವು ಖಾತ್ರಿಯಾಗುವವರೆಗೆ ಆಕೆಯ ಬದುಕು ನರಕ. ಮತ್ತೆ ಮದುವೆಯಾಗುವಂತಿಲ್ಲ. ಇಂತಹ ನತದೃಷ್ಟ ಮಹಿಳೆಯರನ್ನು ‘ಅರೆ ವಿಧವೆ’ ಎಂದೇ ಅಲ್ಲಿನ ಸಮಾಜ ನಿಕೃಷ್ಟವಾಗಿ ನೋಡುತ್ತದೆ. ಆದರೆ ಇಂತಹ ‘ಅರೆ ವಿಧವೆ’ಯರು ಕಾಣೆಯಾದ ಗಂಡ ನಾಲ್ಕು ವರ್ಷ ಪತ್ತೆಯಾಗದಿದ್ದರೆ ಮರುಮದುವೆಯಾಗಲು ಇಸ್ಲಾಂ ಧರ್ಮ ಅವಕಾಶ ಕಲ್ಪಿಸಿರುವುದನ್ನು ಚಿತ್ರದ ಅನೇಕ ಪಾತ್ರಗಳು ಆಸಿಯಾಳ ಗಮನಕ್ಕೆ ತರುತ್ತವೆ. ಅವಳಿಗೆ ಮತ್ತು ಮಗಳಿಗೆ ಬಾಳು ಕೊಡಲು ಪರಿಚಿತನೊಬ್ಬ ಮುಂದೆ ಬಂದಿದ್ದಾನೆ. ಆದರೆ ಆಸಿಯಾ ಮಾತ್ರ ತನ್ನ ಬದುಕಿಗಾಗಿ ಇದನ್ನು ಒಪ್ಪಿಕೊಳ್ಳುವುದಿಲ್ಲ. ಮದುವೆಯಾಗಲು ಬಂದ ಪ್ರಸ್ತಾವಗಳನ್ನು ನಿರಾಕರಿಸಿ ಗಂಡನ ಹುಡುಕಾಟ ಮುಂದುವರಿಸುತ್ತಾಳೆ. ಗಂಡ ಒಂದಲ್ಲ ಒಂದು ದಿನ ಹಿಂದಿರುಗಬಹುದೆಂಬ ಅದಮ್ಯ ನಿರೀಕ್ಷೆ ಆಕೆಯದು.
ಕುರ್ಚಿಯಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ, ಮಗನ ಬರುವಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿರುವಳಂತೆ ನಿಶ್ಚಲವಾಗಿ ಕುಳಿತ ತನ್ನ ಅತ್ತೆ ಮತ್ತು ಹನ್ನೊಂದು ವರ್ಷದ ಮಗಳು ಇನಯಾ ಜೊತೆಯಲ್ಲಿ ಮಣ್ಣಿನಲ್ಲಿ ಕಟ್ಟಿದ ಮಹಡಿ ಮನೆಯಲ್ಲಿ ಜೀವಿಸುವ ಆಸಿಯಾ ತನ್ನ ಘನತೆ ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿರುವ ಛಲದ ಹೆಣ್ಣು. ಅದಷ್ಟೇ ಅಲ್ಲ ಶಾಲೆಯಲ್ಲಿ ಸಹಪಾಠಿಗಳು ‘ಅಪ್ಪನಿಲ್ಲದ ಅರೆ ಮಗಳು’ ಎಂಬ ದೂಷಣೆಯಿಂದ ಕಂಗೆಟ್ಟು ಏಕಾಂಗಿತನದಲ್ಲಿ ಅದ್ದಿಹೋದ, ಗೆಳತಿಯರ ಕುಹಕಕ್ಕೆ ಕೆರಳುವ ಮತ್ತು ಅಪ್ಪನಿಗಾಗಿ ಹಂಬಲಿಸುವ ಮಗಳನ್ನು ಸಂತೈಸಬೇಕಾದ ಹೊಣೆಗಾರಿಕೆ ಆಕೆಯ ಮೇಲಿದೆ. ಇದರ ಜೊತೆಗೆ ಇನ್ನೂ ಯೌವನವಿರುವ ಮಹಿಳೆಯನ್ನು ಹುರಿದು ಮುಕ್ಕಲು ಸಿದ್ಧವಿರುವ ನಿರ್ದಯಿ ರಣಹದ್ದುಗಳೆದುರು ಅಸಹಾಯಕತೆ ಭಾವ ತೋರದೆ ಗಟ್ಟಿಗಿತ್ತಿಯಾಗಿ ನಿಲ್ಲಬೇಕಿದೆ. ಇಂತಹ ಸಮಯದಲ್ಲಿ ತಾನೇ ಹೆಣ್ಣಾಗಿ ಹುಟ್ಟುವುದು ಎಂಥ ಘೋರ ಎಂದು ಅನುಭವಕ್ಕೆ ದಕ್ಕುವುದು! ಆದರೆ ಹೆಚ್ಚು ಮಾತನಾಡದ, ತನ್ನೆಲ್ಲ ನೋವುಗಳನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡ ಆಸಿಯಾ ಸವಾಲುಗಳನ್ನು ಎದುರಿಸುವ ದಿಟ್ಟತನ ಮೆರೆಯುತ್ತಾಳೆ.
ತನ್ನ ಮನೆಯಿಂದ ಆಸ್ಪತ್ರೆಗೆ ಜನರನ್ನು ಒಯ್ಯುವ ಟ್ಯಾಕ್ಸಿಯಲ್ಲಿ ಸಂಚರಿಸುವ ಆಸಿಯಾಗೆ ಆ ದಿನನಿತ್ಯದ ಪಯಣ ಕಾಶ್ಮೀರದ ಸಮಕಾಲೀನ ಪರಿಸ್ಥಿತಿಯನ್ನು ದರ್ಶಿಸುತ್ತದೆ. ಆ ಉರಿ ಬಿಸಿಲಿನಲ್ಲಿ, ತನ್ನ ಕಣ್ಣ ಮುಂದೆಯೇ ನರಕವಾದ ಕಾಶ್ಮೀರದ ಕಣಿವೆಯನ್ನು ಭೂಮಿಯ ಮೇಲಿನ ಸ್ವರ್ಗವೆಂದು ಬಣ್ಣಿಸುತ್ತಾ, ವ್ಯಂಗ್ಯ, ಹಾಸ್ಯ, ಕುಚೋದ್ಯದ ಮೂಲಕ ಸಮಕಾಲೀನ ಪರಿಸ್ಥಿತಿಗೆ ಟ್ಯಾಕ್ಸಿ ಡ್ರೈವರ್ ಕನ್ನಡಿ ಹಿಡಿಯುತ್ತಾನೆ. ದುರಂತದ ಛಾಯೆಯ ಕಥನಕ್ಕೆ ಕಾಮಿಕ್ ರಿಲೀಫ್ ಒದಗಿಸುವವನು ಈ ಟ್ಯಾಕ್ಸಿ ಡ್ರೈವರ್. ಆ ಪಾತ್ರದಲ್ಲಿ ವೃತ್ತಿಪರ ನಟನಲ್ಲದ ಬಿಲಾಲ್ ಅಹಮದ್‌ನ ನಟನೆ ಚಿತ್ರದ ವಿಶೇಷತೆಗಳಲ್ಲೊಂದು.
ಗಂಡ ಹಿಂದಿರುಗಲಾರ ಎಂಬ ನಂಬಿಕೆ ಬಲವಾದ ನಂತರ ಆತನ ಮರಣ ಪ್ರಮಾಣ ಪತ್ರಕ್ಕಾಗಿ ಪರಿಹಾರ ಕಚೇರಿಯನ್ನು ಎಡತಾಕುವ ಆಸಿಯಾಗೆ ಅಲ್ಲಿನ ಸಂಚುಗಳು ಆಘಾತ ನೀಡುತ್ತವೆ. ಅಸಹಾಯಕ ಜನರಿಗೆ ನೆರವಾಗಲೆಂದೇ ರೂಪಿಸಿದ ಕಚೇರಿಯ ಅಧಿಕಾರಿ, ತನ್ನದೇ ಧರ್ಮದ ಅನುಯಾಯಿಯು ಪ್ರಮಾಣ ಪತ್ರ ನೀಡಲು ಮುಂದಿಡುವ ಪ್ರಸ್ತಾವಗಳು ಬೆಚ್ಚಿ ಬೀಳಿಸುತ್ತವೆ. ಒಂದು, ಆಕೆಗೆ ಇರುವ ಆಸ್ತಿಯನ್ನು ತಾನು ಹೇಳಿದವರಿಗೆ ಮಾರಬೇಕು; ಅದರಲ್ಲಿ ಶೇ. 20 ಕಮಿಷನ್ ನೀಡಬೇಕು; ಇಲ್ಲವೇ ತನ್ನೊಡನೆ ಮಲಗಬೇಕು. ಅವೆರಡನ್ನೂ ನಿರಾಕರಿಸಿದ ಆಸಿಯಾ ಬಲವಂತವಾಗಿ ಲೈಂಗಿಕ ಆಕ್ರಮಣ ಮಾಡಲು ಬಂದ ಅಧಿಕಾರಿಯನ್ನು ಧಿಕ್ಕರಿಸುತ್ತಾಳೆ. ಕೆರಳಿದ ಅಧಿಕಾರಿ ಆಕೆ ಎಂದೋ ಸತ್ತುಹೋಗಿರುವ ವ್ಯಕ್ತಿಯೆಂಬಂತೆ ದಾಖಲೆ ಸೃಷ್ಟಿಸಿ ಅವಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಅವಳ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ. ಸತ್ತ ವ್ಯಕ್ತಿ ಕೆಲಸ ಮಾಡುವಂತಿಲ್ಲ ಎಂದು ಉದ್ಯೋಗದ ಬಾಗಿಲು ಮುಚ್ಚುತ್ತದೆ. ಅಧಿಕಾರಶಾಹಿ ಗಹಗಹಿಸುತ್ತದೆ. ಇದು ತಣ್ಣನೆಯ ಸೇಡಿನಲ್ಲಿ, ಪುರುಷಾಂಕಾರದ ಸಾವಿನಲ್ಲಿ, ಅನಿರೀಕ್ಷಿತವಾದ ಅಂತ್ಯ ಕಾಣುತ್ತದೆ. ಈಗಾಗಲೇ ಸತ್ತಿರುವ ವ್ಯಕ್ತಿಯೊಬ್ಬಳು ತಾನು ಪರಿಹಾರ ಕೇಂದ್ರದ ಅಧಿಕಾರಿಯನ್ನು ಕೊಂದಿರುವುದಾಗಿ ದೂರು ತಂದಿದ್ದಾಳೆ. ಏನು ಮಾಡಲಿ? ಎಂದು ದೂರು ಸ್ವೀಕರಿಸಿದ ಪೊಲೀಸ್ ಪೇದೆ ಅಸಹಾಯಕತೆಯಿಂದ ಮೇಲಧಿಕಾರಿಯನ್ನು ಕೋರುತ್ತಾನೆ. ಅಟ್ಟಹಾಸದಿಂದ ಮೆರೆದ ಆಡಳಿತಶಾಹಿ ಮಹಿಳೆಯೊಬ್ಬಳು ರೋಷದಿಂದ ಕುಸಿಯುವುದರೊಂದಿಗೆ ಚಿತ್ರ ಅಂತ್ಯವಾಗುತ್ತದೆ.
ಅಂತಿಮ ದೃಶ್ಯದ ಪರಿಣಾಮವು ಪ್ರೇಕ್ಷಕನೆದೆಗೆ ತಟ್ಟಬೇಕಾದರೆ, ಆ ನಟಿ ಅತ್ಯಂತ ಪ್ರತಿಭಾವಂತೆಯಾಗಿರಬೇಕು. ದಿಲ್ಲಿ ಮೂಲದ ನಟಿ ಶಿಲ್ಪಿ ಮಾರವಾಡ ಅಂತಹ ಪ್ರತಿಭಾವಂತೆ. ಅಧಿಕಾರಿಯ ಕ್ರೌರ್ಯವನ್ನು ಎದೆ ನಡುಗಿಸುವಂತೆ ತಣ್ಣಗೆ ಅಭಿನಯಿಸಿರುವ ಅಜಯ್ ಚೌರೀ ಸಹ ಪ್ರತಿಭೆಯಲ್ಲಿ ಕಡಿಮೆಯೇನಿಲ್ಲ.
ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದರೂ ತಾಂತ್ರಿಕ ಮೌಲ್ಯಗಳು ಉನ್ನತ ಮಟ್ಟದಲ್ಲಿರುವುದು ಈ ಚಿತ್ರದ ವಿಶೇಷ. ಕಾಶ್ಮೀರದ ಶುಷ್ಕ ಬಯಲನ್ನು ಚಿತ್ರದ ಆಶಯಕ್ಕೆ ತಕ್ಕಂತೆ ಬಳಸಿಕೊಂಡಿರುವ ನಿರ್ದೇಶಕನ ಜಾಣ್ಮೆಗೆ ಕ್ಯಾಮರಾ ಕೆಲಸ ಜೊತೆಯಾಗಿ ನಿಂತಿದೆ. ಕೆಲವೊಂದು ಫ್ರೇಮುಗಳಂತೂ ಸರ್ರಿಯಲ್ ಚಿತ್ರಗಳಂತೆ ಎದೆಯೊಳಕ್ಕೆ ಇಳಿಯುತ್ತವೆ. ಮುಹಮ್ಮದ್ ರೇಜಾ ಜಹಾಪನಾ ಅವರ ಕ್ಯಾಮರಾ ಕುಶಲತೆ ಚಿತ್ರದ ಪರಿಣಾಮವನ್ನು ಗಾಢವಾಗಿಸಲು ಸಫಲವಾಗಿದೆ. ಕೆಲವು ಪುನರಾವರ್ತನೆ ಯಾಗುವ ಸನ್ನಿವೇಶಗಳನ್ನು ಹೊರತುಪಡಿಸಿದರೆ, ಚಿತ್ರವು ತನ್ನ ವಸ್ತು, ನಿರೂಪಣೆ ಮತ್ತು ಪರಿಣಾಮದಿಂದ ಉನ್ನತ ಮಟ್ಟದ ಕೃತಿಯಾಗಿದೆ.