ಬೆಂಗಳೂರಿನಲ್ಲಿ ಬಾಪೂ ಮೆಚ್ಚಿದ್ದ ‘ಜಿಲ್’ ಹಸು
ಬೆಂಗಳೂರು, ಅ.1: ಹೊಸ ಸಂಶೋಧನೆಗಳ ಮೂಲಕವೇ ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿರುವ ಬೆಂಗಳೂರಿನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯ(ಎನ್‌ಡಿಆರ್‌ಐ) ಮತ್ತೊಂದು ಕಿರೀಟ ಎಂದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಭೇಟಿ ನೀಡಿ, ತರಬೇತಿ ಪಡೆದದ್ದು. ಅಷ್ಟೇ ಅಲ್ಲದೆ, ಪ್ರಪಂಚದೆಲ್ಲೆಡೆ ಈ ವರ್ಷ ಬಾಪೂ ಅವರ 150ನೆ ಜಯಂತಿ ಆಚರಿಸುತ್ತಿರುವ ಹಿನ್ನೆಲೆ ಈ ಸಂಶೋಧನಾ ಸಂಸ್ಥೆ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಅಖಂಡ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೋಹನ್ ದಾಸ್ ಕರಮ್ ಚಂದ್ ಗಾಂಧಿ, ದೇಶದುದ್ದಕ್ಕೂ ನಿರಂತರವಾಗಿ ಹತ್ತಾರು ಕಾರ್ಯಕ್ರಮ, ಪ್ರತಿಭಟನೆಗಳನ್ನು ಹಮ್ಮಿಕೊಂಡು ಓಡಾಡುತ್ತಲೇ ಇದ್ದರು.
ಆ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾದಾಗ ವಿಶ್ರಾಂತಿಗಾಗಿ ಆಯ್ದುಕೊಂಡು ಸ್ಥಳ ರಾಜಧಾನಿ ಬೆಂಗಳೂರಿನ ಕುಮಾರಕೃಪಾ. ಕೆಲ ದಿನಗಳ ಬಳಿಕ, ಆರೋಗ್ಯ ಚೇತರಿಕೆಯಾದ ನಂತರ ಸ್ಥಳೀಯರಾದ ಪಶುಪಾಲನಾ ತಜ್ಞ ಹಾಗೂ ಇಂಪೀರಿಯಲ್ ಡೈರಿ ನಿರ್ದೇಶಕರಾಗಿದ್ದ ವಿಲಿಯಂ ಸ್ಮಿತ್ ಅವರ ಸ್ನೇಹ ಸಂಪಾದಿಸಿದ್ದರು.
ಆಗ 1927 ಜೂನ್‌ನಿಂದ ಇಂಪೀರಿಯಲ್ ಡೈರಿಯಲ್ಲಿ ದಿನಕ್ಕೆ ಒಂದು ತಾಸು ಡೈರಿಯಲ್ಲಿ ತರಬೇತಿ ಪಡೆಯುತ್ತಿದ್ದ ಬಾಪೂ, ಭಾರತದ ಗ್ರಾಮಾಂತರ ಪರಿಸ್ಥಿತಿಗಳ ಸುಧಾರಣೆ, ಪಶುಪಾಲನೆಯ ಕುರಿತು ತಿಳಿವಳಿಕೆಗೆ ಮುಂದಾದರು.
ತರಬೇತಿ ಸಮಯದಲ್ಲಿ ‘ಜಿಲ್’ ಎಂಬ ಹಸುವಿನ ಬಗ್ಗೆ ಆಗಾಗ ಪ್ರಸ್ತಾಪ ಆಗುತಿತ್ತು. ಅಲ್ಲದೆ, ಜಿಲ್ ಅದೇ ಡೈರಿಯಲ್ಲಿ ಜನ್ಮ ಪಡೆದಿದ್ದ ಮಿಶ್ರ ತಳಿ ಹಸು ಆಗಿದ್ದು, ರೋಗ ನಿರೋಧಕ ಗುಣವನ್ನು ಮೈಗೂಡಿಸಿಕೊಂಡಿತ್ತು. ಐದಾರು ಬಾರಿ ಕಾಲು ಬಾಯಿ ರೋಗ ಕೇಂದ್ರದಲ್ಲಿ ಕಾಣಿಸಿಕೊಂಡರೂ, ಜಿಲ್ ಹಸುವಿಗೆ ರೋಗ ತಟ್ಟಿರಲಿಲ್ಲ.
ಜಿಲ್ ಹುಟ್ಟಿದ್ದು ಅ.18, 1909ರಲ್ಲಿ. ಇದು ಸ್ಕಾಟ್‌ಲ್ಯಾಂಡ್‌ನಿಂದ ತಂದಿದ್ದ ಐರ್ ಶೇರ್ ಗೂಳಿ ಹಾಗೂ ಹರಿಯಾಣದ ಹಸುವಿನಿಂದ ಹುಟ್ಟಿದ ಮಿಶ್ರ ತಳಿ. ಇಂತಹ ಸಂಕರ ತಳಿಗಳಿಂದ ಹಾಲು ಉತ್ಪಾದನೆ ಹೆಚ್ಚುತ್ತದೆ ಎಂಬುದನ್ನು ಪರೀಕ್ಷಿಸಲು ಇಂಪೀರಿಯಲ್ ಡೈರಿಯಲ್ಲಿ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಅದರ ಫಲವಾಗಿ ಜನಿಸಿದ್ದೇ ಜಿಲ್ ಹಸು.
ಜಿಲ್ ಹಸು ತನ್ನ ಜೀವಿತಾವಧಿಯ ಹತ್ತೊಂಬತ್ತೂವರೆ ವರ್ಷಗಳಲ್ಲಿ ಹದಿನೆಂಟು ಆಕಳುಗಳಿಗೆ ಜನ್ಮ ನೀಡಿತ್ತು. ಇದೇ ಅವಧಿಯಲ್ಲಿ ಅದು ಕೊಟ್ಟ ಹಾಲು 1,54,779 ಪೌಂಡುಗಳು. ಇದನ್ನು ತಿಳಿದುಕೊಂಡ ಬಾಪೂಜಿ ಜಿಲ್ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು ನಾಲ್ಕೈದು ಬಾರಿ ಅದನ್ನು ನೋಡಿ, ಮೈ ತಡವಿ ಬಂದಿದ್ದರು.
ಹೈನು ಸಂಶೋಧನಾ ಕೇಂದ್ರದಲ್ಲಿಯೇ ಹುಟ್ಟಿ ದೇಶದ ಮೂಲೆ ಮೂಲೆಗಳಿಂದ ಪಶುಪಾಲಕರ ಗಮನ ಸೆಳೆದಿದ್ದ ಜಿಲ್, ಬಾಪೂಜಿ ಜೊತೆಗೆ ಛಾಯಾಚಿತ್ರ ತೆಗೆಸಿಕೊಳ್ಳುವಷ್ಟು ಹೆಸರುವಾಸಿ ಆಗಿತ್ತು. ಹಳ್ಳಿಗಳ ಏಳಿಗೆಗೆ ಅತಿಮುಖ್ಯ ಎನ್ನುವುದನ್ನು ಮನಗಂಡಿದ್ದ ಬಾಪು ಜಿಲ್ ಹಸುವಿನ ಉದಾಹರಣೆಯನ್ನು ಅನೇಕ ಕಡೆ ನೀಡಿ ಆಕಳು ತಳಿ ಸಂವರ್ಧನೆಗೆ ಪ್ರೋತ್ಸಾಹ ನೀಡಲು ಆಗ್ರಹಿಸಿದ್ದರು.
ಬಾಪೂ ಸಹಿ: ಮತ್ತೊಂದು ಪ್ರಸಂಗ ಎಂದರೆ, ಬೆಂಗಳೂರಿನ ಇಂಪೀರಿಯಲ್ ಡೈರಿಯಲ್ಲಿ ಹೈನುಗಾರಿಕೆಯ ತರಬೇತಿ ಪಡೆದ ಗಾಂಧಿ ಅವರು, ಎಂ.ಕೆ.ಗಾಂಧಿ ಎಂದು ದಾಖಲಿಸಿ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಜಿಲ್ ಜ್ಞಾಪಕಾರ್ಥ ಜಿಲ್ ಹಸು ಕೊಟ್ಟಿಗೆ ಕಟ್ಟಲಾಗಿದೆ ಹಾಗೂ ಬಾಪೂ ಅವರ ಅಪರೂಪದ ಛಾಯಚಿತ್ರಗಳು ಸಹ ಇಲ್ಲಿ ರಾರಾಜಿಸುತ್ತಿವೆ.
‘ಗಾಂಧಿ ನಮ್ಮ ಹೆಮ್ಮೆ’
ಬಾಪೂ ಅವರ ಜಿಲ್ ಹಸು ಸೇರಿದಂತೆ ಹತ್ತು ಹಲವು ನೆನಪು ನಮ್ಮ ಕೇಂದ್ರದಲ್ಲಿಯೇ ಉಳಿದುಕೊಂಡಿದೆ. ಇಂದಿಗೂ ಸಹ ಪ್ರತಿಯೊಬ್ಬರು ಸ್ಮರಿಸುವಂತೆ ಮಾಡುತ್ತಿದ್ದಾರೆ.
-ಡಾ.ಕೆ.ಪಿ.ರಮೇಶ್, ಎನ್‌ಡಿಆರ್‌ಐ ಮುಖ್ಯಸ್ಥ