ಇನ್ನು ಪಕ್ಷವಾತ ಪೀಡಿತರು ನಡೆದಾಡಬಹುದು!

Update: 2019-10-04 17:06 GMT

ಪ್ಯಾರಿಸ್, ಅ. 4: ನೈಟ್‌ಕ್ಲಬ್ ಒಂದರಲ್ಲಿ ನಡೆದ ಅಪಘಾತದಲ್ಲಿ ಪಕ್ಷವಾತಕ್ಕೆ ಒಳಗಾಗಿದ್ದ ಫ್ರಾನ್ಸ್‌ನ ವ್ಯಕ್ತಿಯೊಬ್ಬರು ಈಗ ಮತ್ತೆ ನಡೆಯಲು ಆರಂಭಿಸಿದ್ದಾರೆ. ಮೆದುಳಿನ ನಿಯಂತ್ರಣಕ್ಕೊಳಪಟ್ಟ ‘ಎಕ್ಸೋಸ್ಕೆಲೆಟಾನ್’ ಎಂಬ ಸಾಧನವೊಂದನ್ನು ಬಳಸಿ ಅವರು ನಡೆದಾಡುತ್ತಿದ್ದಾರೆ.

 ಇದು ಕುತ್ತಿಗೆಯಿಂದ ಕೆಳಗಿನ ದೇಹದ ಭಾಗ ಸಂಪೂರ್ಣವಾಗಿ ನಿಶ್ಚಲವಾಗಿರುವ ರೋಗಿಗಳಿಗೆ ಭರವಸೆಯ ಬೆಳಕನ್ನು ನೀಡುವ ಅಮೋಘ ಸಂಶೋಧನೆಯಾಗಿದೆ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.

ಈ ಪ್ರಯೋಗದಲ್ಲಿ ರೋಗಿಯು ಹಲವು ತಿಂಗಳ ಕಾಲ ತರಬೇತಿಗೊಳಗಾಗಿದ್ದಾರೆ. ತರಬೇತಿಯ ಅವಧಿಯಲ್ಲಿ, ದೇಹದ ಮೂಲ ಚಲನೆಗಳನ್ನು ನಿಭಾಯಿಸುವುದಕ್ಕಾಗಿ ಅವರ ಮೆದುಳಿನ ಸಂಕೇತಗಳು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯೊಂದರ ಮೇಲೆ ನಿಯಂತ್ರಣ ಹೊಂದುವಂತೆ ಮಾಡಲಾಯಿತು. ಬಳಿಕ ರೋಬಟ್ ಸಾಧನವೊಂದರ ಸಹಾಯದೊಂದಿಗೆ ನಡೆದಾಡಿದರು.

ಆದರೆ, ಈ ಸಾಧನ ಸಾರ್ವಜನಿಕರ ಬಳಕೆಗೆ ಲಭ್ಯವಾಗಲು ವರ್ಷಗಳೇ ಬೇಕು ಎಂದು ಈ ಪ್ರಯೋಗ ನಡೆಸಿದ ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಅದು ಪಕ್ಷವಾತ ರೋಗಿಗಳ ಜೀವನ ಗುಣಮಟ್ಟ ಮತ್ತು ಸ್ವಾಯತ್ತತೆಯನ್ನು ಅಮೂಲಾಗ್ರವಾಗಿ ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ಸೌಲಭ್ಯದ ಮೊದಲ ಫಲಾನುಭವಿಯಾಗಿರುವ ಫ್ರಾನ್ಸ್‌ನ ಲಯೋನ್ ನಗರದ ನಿವಾಸಿ 28 ವರ್ಷದ ತಿಯಾಬೊ ನಾಲ್ಕು ವರ್ಷಗಳ ಹಿಂದೆ ನೈಟ್‌ಕ್ಲಬ್ ಒಂದರಲ್ಲಿ 12 ಮೀಟರ್ ಎತ್ತರದ ಬಾಲ್ಕನಿಯಿಂದ ಬಿದ್ದಿದ್ದರು. ಅವರ ಬೆನ್ನುಮೂಳೆ ತುಂಡಾಗಿ ಭುಜದಿಂದ ಕೆಳಗೆ ಅವರ ದೇಶ ನಿಶ್ಚಲಗೊಂಡಿತು.

ಈ ತಂತ್ರಜ್ಞಾನವು ನನಗೆ ಹೊಸ ಬದುಕೊಂದನ್ನು ನೀಡಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News