ಭಾರತೀಯ ಮಹಿಳೆಯರ ಸ್ಥಿತಿಗತಿ ಹೇಗಿದೆ?

Update: 2019-10-06 07:05 GMT

 ಸಂಘಪರಿವಾರದ ಸಂಘಟನೆಯೊಂದು ನಡೆಸಿದ ಸಮೀಕ್ಷೆಯು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ಹಾಗೂ ಆದಿವಾಸಿ ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದಾರೆ ಹಾಗೂ ಉತ್ತಮ ಉದ್ಯೋಗಗಳಲ್ಲಿದ್ದಾರೆ ಎಂದು ಒಪ್ಪಿಕೊಂಡಿರುವುದು ಗಮನಾರ್ಹವಾಗಿದೆ. ಈ ಸಮುದಾಯಗಳು ಭಾರೀ ಸಂಪತ್ತು, ಭೂಮಿ, ಆಸ್ತಿ ಅಥವಾ ದೊಡ್ಡ ಬಂಡವಾಳವನ್ನು ಹೊಂದಿರುವುದಾಗಿ ಕೊಚ್ಚಿಕೊಳ್ಳಲಾರವು. ಆದರೆ ಅವರು ನಡೆಸುವ ಸಮಾವೇಶಗಳು ಸಹಕಾರ ಹಾಗೂ ವಿತರಣೆಯನ್ನು ಉತ್ತೇಜಿಸುವಷ್ಟು ಸಮಗ್ರತೆಯನ್ನು ಹೊಂದಿರುತ್ತವೆ.


ಭಾರತದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಆರೆಸ್ಸೆಸ್‌ನ ‘ಚಿಂತನಾ ಚಿಲುಮೆ’ಯೆಂದು ಬಣ್ಣಿಸಲ್ಪಟ್ಟ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ಅಂಶಗಳ ಕುರಿತಾಗಿ ಕಳೆದ ವಾರ ಪ್ರಕಟವಾದ ವರದಿಯೊಂದನ್ನು ಅವಲೋಕಿಸಿದಾಗ ಅಚ್ಚರಿಯುಂಟಾಯಿತು.

ಆಧ್ಯಾತ್ಮಿಕ ನೆರವನ್ನು ಕೋರುವ ವಿವಾಹಿತ ಮಹಿಳೆಯರು ಹಾಗೂ ಸ್ತ್ರೀಯರು ಇತರರಿಗಿಂತ ಹೆಚ್ಚು ಸಂತುಷ್ಟರಾಗಿರುತ್ತಾರೆಂದು ಸಮೀಕ್ಷೆಯು ಹೇಳಿಕೊಂಡಿತ್ತು. ಕ್ರೈಸ್ತ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದು, ಹಿಂದೂ, ಮುಸ್ಲಿಮ್ ಹಾಗೂ ಜೈನ ಮಹಿಳೆಯರು ಕ್ರಮವಾಗಿ ಆನಂತರದ ಸ್ಥಾನಗಳಲ್ಲಿದ್ದಾರೆಂದು ವರದಿಯು ತಿಳಿಸಿದೆ.

ಮಹಿಳೆಯರ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ವರದಿಯು ಯಾವುದೇ ಉಲ್ಲೇಖ ಮಾಡಿಲ್ಲವಾದರೂ, 2011ರ ಜನಗಣತಿಯ ದತ್ತಾಂಶವು ಕ್ರೈಸ್ತ ಮಹಿಳೆಯರಲ್ಲಿ ಅನಕ್ಷರಸ್ಥರ ಶೇಕಡವಾರು ಪ್ರಮಾಣ (ಶೇ. 28.03)ವು ಹಿಂದೂ ಮಹಿಳೆಯರು (ಶೇ. 44.02) ಹಾಗೂ ಮುಸ್ಲಿಂ ಮಹಿಳೆಯರಿಗೆ (ಶೇ. 48.1) ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಬೌದ್ಧ ಮಹಿಳೆಯರ ನಿರಕ್ಷರತೆಯು ಶೇ.34.4 ದಷ್ಟಿದ್ದು, ಕ್ರೈಸ್ತ ಮಹಿಳೆಯರಿಗಿಂತಲೂ ಅಧಿಕವಾಗಿದೆ.
ಈ ಸಮೀಕ್ಷೆಯಲ್ಲಿ ಕಂಡುಬಂದ ಅಂಶವೆಂದರೆ, ಆಧ್ಯಾತ್ಮಿಕ ವಲಯದಲ್ಲೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಹಾಗೂ ಹೆಚ್ಚು ಪ್ರಜಾತಾಂತ್ರಿಕವಾಗಿರುವ ಧರ್ಮದಲ್ಲಿ ಮಹಿಳೆಯರು, ಪುರುಷ ಪ್ರಾಧಾನ್ಯತೆಯನ್ನು ಉತ್ತೇಜಿಸುವ ಧರ್ಮಗಳವರಿಗಿಂತ ಹೆಚ್ಚು ಪ್ರಗತಿಯನ್ನು ಹೊಂದುತ್ತಾರೆ. ಪಾಶ್ಚಾತ್ಯ ಕ್ರೈಸ್ತ ಜಗತ್ತಿನಲ್ಲಿ ಕರಿಯ ಪಂಗಡದವರು ಸೇರಿದಂತೆ ಮಹಿಳೆಯರು, ಹೆಚ್ಚು ತ್ವರಿತವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಪುರುಷರೊಂದಿಗೆ ಸ್ಪರ್ಧಿಸುವಲ್ಲಿ ಯಶಸ್ವಿಯಾಗಲಿಲ್ಲವೇ?.

ಮಹಿಳೆಯರನ್ನು ಮನೆಗಳಿಗೆ ಸೀಮಿತವಾಗಿರಿಸದ ಸಮಾಜಗಳು ಹೆಚ್ಚು ತ್ವರಿತವಾಗಿ ಪ್ರಗತಿಯನ್ನು ಕಂಡಿವೆ. ಮಹಿಳೆ ಒಂದು ಲೈಂಗಿಕ ವಸ್ತು ಹಾಗೂ ಒಂದು ಹೆರುವ ಯಂತ್ರವೆಂದು ಕಂಡಂತಹ ಸಮಾಜಗಳು ಬಹುತೇಕ ಹಿಂದುಳಿದಿವೆ.
ಭಾರತದಲ್ಲಿ ಬಹುತೇಕ ಕ್ರೈಸ್ತರು, ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಕ್ರೈಸ್ತ ಧರ್ಮಕ್ಕೆ ನಡೆದಿರುವ ಬಹುತೇಕ ಮತಾಂತರಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಬದುಕನ್ನು ಬಯಸಿದಂತಹ ಮಹಿಳೆಯರ ಮುತುವರ್ಜಿಯಿಂದಲೇ ನಡೆದವಾಗಿದ್ದವು.

ಸಂಘಪರಿವಾರದ ಸಂಘಟನೆಯೊಂದು ನಡೆಸಿದ ಸಮೀಕ್ಷೆಯು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ಹಾಗೂ ಆದಿವಾಸಿ ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದಾರೆ ಹಾಗೂ ಉತ್ತಮ ಉದ್ಯೋಗಗಳಲ್ಲಿದ್ದಾರೆ ಎಂದು ಒಪ್ಪಿಕೊಂಡಿರುವುದು ಗಮನಾರ್ಹವಾಗಿದೆ. ಈ ಸಮುದಾಯಗಳು ಭಾರೀ ಸಂಪತ್ತು, ಭೂಮಿ, ಆಸ್ತಿ ಅಥವಾ ದೊಡ್ಡ ಬಂಡವಾಳವನ್ನು ಹೊಂದಿರುವುದಾಗಿ ಕೊಚ್ಚಿಕೊಳ್ಳಲಾರವು. ಆದರೆ ಅವರು ನಡೆಸುವ ಸಮಾವೇಶಗಳು ಸಹಕಾರ ಹಾಗೂ ವಿತರಣೆಯನ್ನು ಉತ್ತೇಜಿಸುವಷ್ಟು ಸಮಗ್ರತೆಯನ್ನು ಹೊಂದಿರುತ್ತವೆ. ಕ್ರೈಸ್ತ ಸಮುದಾಯದಲ್ಲಿ ಲಭ್ಯವಿರುವ ಸಂಪನ್ಮೂಲ ವಿತರಣೆಯು ಇತರ ಸಮುದಾಯಗಳಿಗಿಂತ ಅಧಿಕವಾಗಿವೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಕ್ರೈಸ್ತ ಧರ್ಮಕ್ಕೆ ಮತಾಂತರವನ್ನು ಆರೆಸ್ಸೆಸ್ ಯಾಕೆ ವಿರೋಧಿಸುತ್ತಿದೆಯೆಂಬುದು?. ಯಾಕೆ ಅದು ಧಾರ್ಮಿಕ ಸ್ವಾತಂತ್ರವನ್ನು ಒಪ್ಪಿಕೊಳ್ಳುತ್ತಿಲ್ಲ ಹಾಗೂ ತಮ್ಮ ಆಯ್ಕೆಯ ಧರ್ಮವನ್ನು ಆಯ್ದುಕೊಳ್ಳಲು ಜನತೆಗಿರುವ ಹಕ್ಕನ್ನು ಅದು ಯಾಕೆ ಒಪ್ಪಿಕೊಳ್ಳುತ್ತಿಲ್ಲ?. ಒಂದು ವೇಳೆ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಲಾಗುತ್ತಿದೆಯೆಂಬ ವಾದವನ್ನು ಒಪ್ಪುವುದಾದರೆ, ಆರೆಸ್ಸೆಸ್ ಈಗ ಒಪ್ಪಿಕೊಂಡಂತೆ ತೋರುತ್ತಿರುವ ಕ್ರೈಸ್ತ ಮಹಿಳೆಯರಲ್ಲಿ ಉತ್ತಮ ಶಿಕ್ಷಣ ಹಾಗೂ ಉತ್ತಮ ಉದ್ಯೋಗ ದೊರೆಯುವುದನ್ನು ಹೇಗೆಂದು ವಿವರಿಸಬಹುದಾಗಿದೆ?.

ಶಿಕ್ಷಣ ಹಾಗೂ ಉದ್ಯೋಗದ ವಿಷಯದಲ್ಲಿ ಹಿಂದೂ ಹಾಗೂ ಮುಸ್ಲಿಂ ಮಹಿಳೆಯರು ಯಾಕೆ ಹೆಚ್ಚು ಹಿಂದುಳಿದಿದ್ದಾರೆ ಮತ್ತು ಜಾತಿ ವಿಷಯದಲ್ಲಿ ಹೆಚ್ಚು ದಮನಕ್ಕೊಳಗಾದ ಇತಿಹಾಸವಿದ್ದರೂ ಕ್ರೈಸ್ತ ಮಹಿಳೆಯರು ಯಾಕೆ ಹೆಚ್ಚು ಮುಂದುವರಿದಿದ್ದಾರೆಂಬುದು ಇಲ್ಲಿ ಕೇಳಬೇಕಾದ ಪ್ರಶ್ನೆಯಾಗಿದೆ.
ಗಮನಾರ್ಹವೆಂದರೆ, ಚೀನಾದಲ್ಲಿ ಕೂಡಾ ಅಭಿವೃದ್ಧಿಯಲ್ಲಿ ಇತರರಿಗಿಂತ ಕ್ರೈಸ್ತರ ಅಧಿಕ ಪಾಲ್ಗೊಳ್ಳುವಿಕೆಯಿರುವುದಾಗಿ ಇತ್ತೀಚಿನ ಧಾರ್ಮಿಕ ಹಾಗೂ ಆರ್ಥಿಕ ಪ್ರಗತಿ ಕುರಿತಾದ ಅಧ್ಯಯನ ವರದಿಯೊಂದು ತಿಳಿಸಿದೆ.

ನನ್ನ ಅನಿಸಿಕೆಯ ಪ್ರಕಾರ ಕ್ರೈಸ್ತ ಧರ್ಮವು, ಕ್ರೈಸ್ತರಿಗೆ ಉತ್ತಮ ಬದುಕನ್ನು ಸಾಗಿಸಲು ಸಾಮಾಜಿಕ ಹಾಗೂ ಆರ್ಥಿಕ ಪ್ರಜಾತಾಂತ್ರಿಕ ಪಾಲ್ಗೊಳ್ಳುವಿಕೆಗೆ ಅನುಮತಿ ನೀಡುವಂತಹ ಧರ್ಮವಾಗಿದೆ. ಚೀನಾವು ದಮನಕಾರಿ ಆಡಳಿತವನ್ನು ಹೊಂದಿದ್ದರೂ ಹಾಗೂ ಒಂದು ಹಂತದವರೆಗೆ ನಿರ್ಬಂಧಿತ ಸಮಾಜವಾಗಿರುವ ಹೊರತಾಗಿಯೂ ಅದು ತನ್ನ ನೆಲದಲ್ಲಿ ನಡೆಯುತ್ತಿರುವ ಮತಾಂತರಗಳನ್ನು ಬೇರೆಯದೇ ಆದ ರೀತಿಯಲ್ಲಿ ನೋಡುತ್ತಿರುವುದಕ್ಕೆ ಇದು ಒಂದು ಕಾರಣವಾಗಿದೆ.

ಹೀಗಿದ್ದರೂ, ಭಾರತದ ಬಹುತೇಕ ರಾಜ್ಯಗಳಲ್ಲಿ ಯಾಕೆ ಮತಾಂತರ ವಿರೋಧಿ ಕಾನೂನು ಈಗಲೂ ಜಾರಿಯಲ್ಲಿದೆ?. ಬಲವಂತದ ಮತಾಂತರ ನಡೆಸುತ್ತಿದ್ದಾರೆಂಬ ಆರೋಪದಲ್ಲಿ ಚರ್ಚುಗಳು ಹಾಗೂ ಕ್ರೈಸ್ತ ಸಂಸ್ಥೆಗಳ ಮೇಲೆ ಯಾಕೆ ದಾಳಿಗಳು ನಡೆಯುತ್ತಿವೆ?.

ಒಂದು ಬಹುಸಂಸ್ಕೃತಿಯ ಹಾಗೂ ಬಹುಧರ್ಮೀಯ ಸಮಾಜದಲ್ಲಿ ತನ್ನ ಸ್ವಾತಂತ್ರಕ್ಕೆ ಅಡ್ಡಗಾಲು ಹಾಕುವಂತಹ ಧಾರ್ಮಿಕ ಕಟ್ಟಳೆಗಳನ್ನು ಪ್ರಶ್ನಿಸುವುದಕ್ಕೆ ಅವಕಾಶವಿರಬೇಕು. ಧರ್ಮಗಳು ಇಂತಹ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಆದರೆ ಊಳಿಗಮಾನ್ಯ ಕಾನೂನುಗಳಿಗೆ ವಿಧೇಯರಾಗುವಂತೆ ಮಹಿಳೆಯರನ್ನು ಬಲವಂತಪಡಿಸಕೂಡದು.

ಕ್ರೈಸ್ತ ಧರ್ಮ ಕೂಡಾ ತನಗೆದುರಾಗಿರುವ ಹಲವಾರು ಅಡೆತಡೆಗಳನ್ನು ಮೀರಿ ನಿಲ್ಲಬೇಕಾಗಿದೆ. ಕ್ರೈಸ್ತ ಮಹಿಳೆಯರು ಕೂಡಾ ತಮ್ಮ ಧರ್ಮದಲ್ಲಿನ ಅಸಮಾನತೆ, ಪುರುಷ ಪ್ರಾಧಾನ್ಯತೆ ಹಾಗೂ ಧಾರ್ಮಿಕ ನಿರ್ಬಂಧಗಳ ವಿರುದ್ಧ ಹೋರಾಡಬೇಕಾಗಿದೆ. ಆದರೆ ಅವರು ಹೆಚ್ಚು ಸ್ವತಂತ್ರರಾಗಿದ್ದಾರೆ ಹಾಗೂ ತಮ್ಮ ಲೈಂಗಿಕತೆಯ ನಿಯಂತ್ರಣದ ಕುರಿತಾದ ಕಂದಾಚಾರದ ನಿಯಮಗಳಿಗೆ ಕಡಿಮೆ ಬದ್ಧತೆಯನ್ನು ಹೊಂದಿದ್ದಾರೆ. ಯಾವುದೇ ಧರ್ಮದ ವ್ಯಕ್ತಿಗಳ ಜೊತೆ ಸಾರ್ವಜನಿಕ ಹಾಗೂ ಖಾಸಗಿ ರಂಗದಲ್ಲಿ ಬೆರೆಯಲು ಹೆಚ್ಚು ಸ್ವತಂತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮತಾಂತರಗಳ ಕುರಿತ ತನ್ನ ನಿಲುವಿನ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ ಹಾಗೂ ಬಡ ದಲಿತರು ಹಾಗೂ ಆದಿವಾಸಿಗಳಿಗೆ, ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಹೊಂದುವುದಕ್ಕೆ ಅವಕಾಶ ನೀಡಬೇಕಾಗಿದೆ. ಭಾರತದಲ್ಲಿ ಎಲ್ಲಾ ರೀತಿಯ ಮತಾಂತರ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲು ಇದು ಸಕಾಲವಾಗಿದೆ.

 ಕೃಪೆ: countercurrents.org

Writer - ಕಾಂಚ ಐಲಯ್ಯ ಶೆಫರ್ಡ್

contributor

Editor - ಕಾಂಚ ಐಲಯ್ಯ ಶೆಫರ್ಡ್

contributor

Similar News