ಮೂವರು ಸಂಶೋಧಕರಿಗೆ ಭೌತಶಾಸ್ತ್ರದ ನೊಬೆಲ್

Update: 2019-10-08 15:46 GMT

ಸ್ಟಾಕ್‌ಹೋಮ್,ಅ.8: ಬ್ರಹ್ಮಾಂಡದ ವಿಕಾಸ ಮತ್ತು ಅದರಲ್ಲಿ ಪೃಥ್ವಿಯ ಸ್ಥಾನ ಕುರಿತು ತಿಳುವಳಿಕೆಯಲ್ಲಿ ತಮ್ಮ ಕೊಡುಗೆ ಗಳಿಗಾಗಿ ಜೇಮ್ಸ್ ಪೀಬಲ್ಸ್,ಮಿಷೆಲ್ ಮೇಯರ್ ಮತ್ತು ಡಿಡಿಯೆರ್ ಕ್ವೆಲೋಜ್ ಅವರು 2019ನೇ ಸಾಲಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.

ಭೌತಿಕ ಬ್ರಹ್ಮಾಂಡ ವಿಜ್ಞಾನದಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಕೆನಡಿಯನ್-ಅಮೆರಿಕನ್ ಭೌತಶಾಸ್ತ್ರಜ್ಞ ಪೀಬಲ್ಸ್ ಅವರಿಗೆ ಹಾಗೂ ನಮ್ಮ ಸೌರವ್ಯವಸ್ಥೆಯ ಹೊರಗಿನ ಸೂರ್ಯನಂತಹ ನಕ್ಷತ್ರವೊಂದನ್ನು ಪರಿಭ್ರಮಿಸುತ್ತಿರುವ ‘ ಎಕ್ಸೋಪ್ಲಾನೆಟ್ ’ನ ಶೋಧಕ್ಕಾಗಿ ಸ್ವಿಝರ್‌ಲ್ಯಾಂಡ್‌ನ ಖಗೋಳ ಭೌತಶಾಸ್ತ್ರಜ್ಞ ಮೇಯರ್ ಮತ್ತು ಖಗೋಳ ಶಾಸ್ತ್ರಜ್ಞ ಕ್ವೆಲೋಜ್ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರವನ್ನು ಜಂಟಿಯಾಗಿ ನೀಡಲಾಗುವುದು ಎಂದು ನೊಬೆಲ್ ಸಮಿತಿಯು ಮಂಗಳವಾರ ಪ್ರಕಟಿಸಿದೆ. ಈ ಆವಿಷ್ಕಾರಗಳು ವಿಶ್ವದ ಕುರಿತು ನಮ್ಮ ಪರಿಕಲ್ಪನೆಗಳನ್ನು ಶಾಶ್ವತವಾಗಿ ಬದಲಿಸಿವೆ ಎಂದು ಅದು ತಿಳಿಸಿದೆ.

 1901ರಿಂದ ಭೌತಶಾಸ್ತ್ರ ಕ್ಷೇತ್ರದಲ್ಲಿ 206 ವ್ಯಕ್ತಿಗಳಿಗೆ 111 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಜಾನ್ ಬಾರ್ಡಿನ್ ಅವರು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಎರಡು ಬಾರಿ (1956 ಮತ್ತು 1972) ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ.

 ಜೀವಶಾಸ್ತ್ರ ಅಥವಾ ಔಷಧ ಶಾಸ್ತ್ರದಲ್ಲಿ 2019ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಅಮೆರಿಕನ್ ಸಂಶೋಧಕರಾದ ವಿಲಿಯಂ ಜಿ.ಕೇಲಿನ್ ಮತ್ತು ಗ್ರೆಗ್ ಎಲ್.ಸೆಮೆಂಝಾ ಹಾಗೂ ಬ್ರಿಟಿಷ್ ವಿಜ್ಞಾನಿ ಸರ್ ಪೀಟರ್ ಜೆ.ರ್ಯಾಟ್‌ ಕ್ಲಿಫ್ ಅವರು ಭಾಜನರಾಗಿದ್ದಾರೆ. ಜೀವಕೋಶಗಳು ಆಮ್ಲಜನಕ ಲಭ್ಯತೆಯನ್ನು ಅರಿತುಕೊಳ್ಳುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಕುರಿತು ಆವಿಷ್ಕಾರಗಳಿಗಾಗಿ ಸೋಮವಾರ ಈ ಮೂವರಿಗೆ ಜಂಟಿಯಾಗಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ

ನೊಬೆಲ್ ಸಮಿತಿಯು ರಾಸಾಯನಿಕ ಶಾಸ್ತ್ರಕ್ಕಾಗಿ ಬುಧವಾರ,ಸಾಹಿತ್ಯಕ್ಕಾಗಿ ಗುರುವಾರ,ಶಾಂತಿಗಾಗಿ ಶುಕ್ರವಾರ ಮತ್ತು ಅರ್ಥಶಾಸ್ತ್ರಕ್ಕಾಗಿ ಅ.14ರಂದು ಪ್ರಶಸ್ತಿಗಳನ್ನು ಪ್ರಕಟಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News