ಕುರ್ದ್ ವಿರುದ್ಧದ ಟರ್ಕಿ ದಾಳಿ: 100 ಸಮೀಪಿಸಿದ ಮೃತರ ಸಂಖ್ಯೆ
ಇಸ್ತಾಂಬುಲ್ (ಟರ್ಕಿ), ಅ. 12: ಈಶಾನ್ಯ ಸಿರಿಯದಲ್ಲಿರುವ ಕುರ್ದ್ ಬಂಡುಕೋರರ ವಿರುದ್ಧ ನಡೆಸಲಾಗುತ್ತಿರುವ ವಾಯು ದಾಳಿ ಮತ್ತು ಫಿರಂಗಿ ದಾಳಿಗಳನ್ನು ಟರ್ಕಿ ತೀವ್ರಗೊಳಿಸಿದೆ.
ಐಸಿಸ್ ಭಯೋತ್ಪಾದಕರ ವಿರುದ್ಧ ಕುರ್ದಿಶ್ ಬಂಡುಕೋರರೊಂದಿಗೆ ಕೈಜೋಡಿಸಿ ಹೋರಾಡುತ್ತಿದ್ದ ಅಮೆರಿಕ ಸೈನಿಕರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಕ್ಕೆ ಕರೆಸಿಕೊಂಡ ಬಳಿಕ, ಟರ್ಕಿ ಕುರ್ದಿಶ್ ಬಂಡುಕೋರರ ಮೇಲೆ ದಾಳಿ ಆರಂಭಿಸಿತ್ತು.
ಟರ್ಕಿ ದಾಳಿಯು ಎಂಟು ವರ್ಷಗಳ ಸಿರಿಯ ನಾಗರಿಕ ಸಮರದಲ್ಲಿ ಹೊಸ ತಿರುವಾಗಿದೆ ಹಾಗೂ ಇದಕ್ಕೆ ಅಂತರ್‌ರಾಷ್ಟ್ರೀಯ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಗುರುವಾರ ಟರ್ಕಿ ಆಕ್ರಮಣ ಆರಂಭಿಸಿದಂದಿನಿಂದ ಮೃತಪಟ್ಟವರ ಸಂಖ್ಯೆ 100ನ್ನು ಸಮೀಪಿಸಿದೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಮೃತಪಟ್ಟವರಲ್ಲಿ 17 ನಾಗರಿಕರು ಸೇರಿದ್ದಾರೆ ಎಂದು ಅದು ಹೇಳಿದೆ. ಅವರನ್ನು ಹೊರತುಪಡಿಸಿ, ಹತ್ತಾರು ಕುರ್ದಿಶ್ ಬಂಡುಕೋರರು ಮತ್ತು ಟರ್ಕಿ ಬೆಂಬಲಿತ ಸಿರಿಯ ಬಂಡುಕೋರರು ಹತರಾಗಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ನಡೆಸಲಾದ ಶೆಲ್ ದಾಳಿಯಲ್ಲಿ, ಗಡಿಯ ಟರ್ಕಿ ಭಾಗದಲ್ಲಿ ಒಂಬತ್ತು ನಾಗರಿಕರು ಮೃತರಾಗಿದ್ದಾರೆ ಎಂದು ಟರ್ಕಿ ಹೇಳಿದೆ.
ಶುಕ್ರವಾರ ಟರ್ಕಿಯ ಯುದ್ಧ ವಿಮಾನಗಳು ಮತ್ತು ಫಿರಂಗಿಗಳು ಸಿರಿಯದ ರಾಸ್ ಅಲ್ ಐನ್ ಪಟ್ಟಣದ ಮೇಲೆ ದಾಳಿ ನಡೆಸಿದವು. ಈ ಪಟ್ಟಣವನ್ನೇ ಗುರಿಯಾಗಿಸಿ ಮೊದಲಿನಿಂದಲೂ ದಾಳಿ ನಡೆಸಲಾಗುತ್ತಿದೆ.
ಅಮೆರಿಕ ಸೈನಿಕರ ಮೇಲೆ ದಾಳಿ: ಅಮೆರಿಕ
ಉತ್ತರ ಸಿರಿಯದ ಗಡಿಯ ಸಮೀಪದಲ್ಲಿದ್ದ ಅಮೆರಿಕದ ಸೈನಿಕರ ಮೇಲೆ ಟರ್ಕಿಯ ನೆಲೆಗಳಿಂದ ಶುಕ್ರವಾರ ಫಿರಂಗಿ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ವಕ್ತಾರೊಬ್ಬರು ಹೇಳಿದ್ದಾರೆ.
ಆಕ್ರಮಣವನ್ನು ರಕ್ಷಣಾ ಕ್ರಮಗಳ ಮೂಲಕ ತಕ್ಷಣ ಎದುರಿಸಲು ಅಮೆರಿಕ ಸಿದ್ಧವಾಗಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ಕೊಬನಿ ಪಟ್ಟಣದ ಸಮೀಪದಲ್ಲಿರುವ ಅಮೆರಿಕ ಸೈನಿಕರ ನೆಲೆಯಿಂದ ಕೆಲವು ನೂರು ಮೀಟರ್‌ಗಳ ಅಂತರದಲ್ಲಿ ರಾತ್ರಿ 9 ಗಂಟೆಯ ಸುಮಾರಿಗೆ ಸ್ಫೋಟವೊಂದು ಸಂಭವಿಸಿದೆ ಎಂದು ಅಮೆರಿಕ ಸೇನೆ ಖಚಿತಪಡಿಸಿದೆ.
‘‘ಅಮೆರಿಕದ ಯಾವುದೇ ಸೈನಿಕರಿಗೆ ಗಾಯವಾಗಿಲ್ಲ. ಕೊಬನಿ ಪಟ್ಟಣದಿಂದ ಅಮೆರಿಕ ಸೈನಿಕರು ಹೊರಗೆ ಹೋಗಿಲ್ಲ’’ ಎಂದು ನೌಕಾಪಡೆ ಕ್ಯಾಪ್ಟನ್ ಬ್ರೂಕ್ ಡೆವಾಲ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದರು.