ಟರ್ಕಿ ದಾಳಿಯಿಂದ 4 ಲಕ್ಷ ಜನರು ನಿರ್ವಸಿತ: ವಿಶ್ವಸಂಸ್ಥೆ ಎಚ್ಚರಿಕೆ

Update: 2019-10-13 17:25 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 13: ಉತ್ತರ ಸಿರಿಯದಲ್ಲಿರುವ ಕುರ್ದಿಶ್ ನೆಲೆಗಳ ಮೇಲೆ ಟರ್ಕಿ ನಡೆಸಿರುವ ಭೀಕರ ದಾಳಿಯ ಹಿನ್ನೆಲೆಯಲ್ಲಿ ಸುಮಾರು 1,30,000 ಮಂದಿ ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ರವಿವಾರ ಹೇಳಿದೆ. ಅದೇ ವೇಳೆ, ಈ ಸಂಖ್ಯೆ ಮೂರು ಪಟ್ಟಿಗಿಂತಲೂ ಹೆಚ್ಚಾಗುವ ಭೀತಿಯನ್ನು ಅದು ವ್ಯಕ್ತಪಡಿಸಿದೆ.

‘‘ಸುಮಾರು 4,00,000 ಜನರು ನಿರ್ವಸಿತರಾಗಬಹುದಾದ ಪರಿಸ್ಥಿತಿಯ ಬಗ್ಗೆ ನಾವು ಯೋಚಿಸುತ್ತಿದ್ದೇವೆ’’ ಎಂದು ವಿಶ್ವಸಂಸ್ಥೆಯ ಮಾನವೀಯ ಸಂಸ್ಥೆ ಒಸಿಎಚ್‌ಎನ ವಕ್ತಾರ ಜೆನ್ಸ್ ಲೇರ್ಕ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ‘‘ಈ ಜನರಿಗೆ ನೆರವು ಮತ್ತು ರಕ್ಷಣೆಯ ಅಗತ್ಯವಿದೆ’’ ಎಂಬುದಾಗಿಯೂ ಅವರು ಹೇಳಿದ್ದಾರೆ.

ಟರ್ಕಿಯ ಸೇನಾ ದಾಳಿ ಬುಧವಾರ ಆರಂಭಗೊಂಡ ಬಳಿಕ, ಸುಮಾರು ಒಂದು ಲಕ್ಷ ಮಂದಿ ಮನೆಬಿಟ್ಟು ಪಲಾಯನಗೈಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿತ್ತು. ಆದರೆ, ತೆಲ್‌ಲ್ ಅಬಿಯಾದ್ ಮತ್ತು ರಾಸ್ ಅಲ್ ಐನ್ ಪಟ್ಟಣಗಳ ಸುತ್ತಲಿನ ಗ್ರಾಮೀಣ ಪ್ರದೇಶಗಳಿಂದಲೂ ಜನರು ಪಲಾಯನಗೈಯುತ್ತಿದ್ದು, ನಿರ್ವಸಿತರ ಸಂಖ್ಯೆ 1,30,000ವನ್ನೂ ದಾಟಿದೆ ಎಂದು ರವಿವಾರ ಅದು ಹೇಳಿದೆ.

ಟರ್ಕಿಗೆ ಶಸ್ತ್ರಾಸ್ತ್ರಗಳ ರಫ್ತನ್ನು ನಿಲ್ಲಿಸಿದ ಜರ್ಮನಿ, ಫ್ರಾನ್ಸ್

ಸಿರಿಯದಲ್ಲಿರುವ ಕುರ್ದಿಶ್ ಬಂಡುಕೋರರ ವಿರುದ್ಧ ಟರ್ಕಿ ಸೇನಾ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಟರ್ಕಿಗೆ ಮಾಡುತ್ತಿರುವ ಶಸ್ತ್ರಾಸ್ತ್ರಗಳ ರಫ್ತನ್ನು ಅಮಾನತಿನಲ್ಲಿಡಲು ಫ್ರಾನ್ಸ್ ಮತ್ತು ಜರ್ಮನಿ ಶನಿವಾರ ನಿರ್ಧರಿಸಿವೆ.

ಸಿರಿಯದಲ್ಲಿ ನಡೆಸುತ್ತಿರುವ ಯುದ್ಧದಲ್ಲಿ ಬಳಸಬಹುದಾದ ಎಲ್ಲ ಯುದ್ಧ ಸಾಮಗ್ರಿಗಳ ರಫ್ತನ್ನು ನಿಲ್ಲಿಸಲು ಫ್ರಾನ್ಸ್ ನಿರ್ಧರಿಸಿದೆ ಎಂದು ಫ್ರಾನ್ಸ್‌ನ ರಕ್ಷಣಾ ಮತ್ತು ವಿದೇಶ ಸಚಿವಾಲಯಗಳು ಹೊರಡಿಸಿರುವ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಇದಕ್ಕೂ ಕೆಲವು ಗಂಟೆಗಳ ಮೊದಲು ಜರ್ಮನಿಯು ಹೇಳಿಕೆಯೊಂದನ್ನು ನೀಡಿ, ಟರ್ಕಿಗೆ ಮಾಡಲಾಗುತ್ತಿರುವ ಯುದ್ಧ ಸಾಮಗ್ರಿಗಳ ರಫ್ತನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ. ಜರ್ಮನಿಯು ಟರ್ಕಿಯ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆ ದೇಶವಾಗಿದೆ.

ಟರ್ಕಿಯ ಆಕ್ರಮಣವನ್ನು ಹಲವಾರು ದೇಶಗಳು ಖಂಡಿಸಿವೆ. ಟರ್ಕಿಗೆ ಶಸ್ತ್ರಾಸ್ತ್ರಗಳ ರಫ್ತನ್ನು ನಿಲ್ಲಿಸುವುದಾಗಿ ಫಿನ್‌ಲ್ಯಾಂಡ್, ನಾರ್ವೆ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳು ಈಗಾಗಲೇ ಘೋಷಿಸಿವೆ.

ಸಂಘರ್ಷ ನಿಲ್ಲಿಸಲು ಟರ್ಕಿ ಅಧ್ಯಕ್ಷಗೆ ಬ್ರಿಟನ್ ಪ್ರಧಾನಿ ಒತ್ತಾಯ

ಉತ್ತರ ಸಿರಿಯದಲ್ಲಿ ಟರ್ಕಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಬಗ್ಗೆ ಬ್ರಿಟನ್ ತೀವ್ರ ಕಳವಳ ಹೊಂದಿದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ಗೆ ಹೇಳಿದ್ದಾರೆ ಹಾಗೂ ಸಂಘರ್ಷವನ್ನು ನಿಲ್ಲಿಸಿ ಮಾತುಕತೆಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

‘‘ಟರ್ಕಿಯ ಕೃತ್ಯವು ಅಲ್ಲಿ ನೆಲೆಸಿರುವ ಮಾನವೀಯ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು ಹಾಗೂ ಐಸಿಸ್ ಉಗ್ರರ ವಿರುದ್ಧ ಸಾಧಿಸಲಾಗಿರುವ ಪ್ರಗತಿಯನ್ನು ದುರ್ಬಲಗೊಳಿಸಬಹುದು ಎಂಬ ಕಳವಳವನ್ನು ಜಾನ್ಸನ್ ವ್ಯಕ್ತಪಡಿಸಿದ್ದಾರೆ’’ ಎಂದು ಅವರ ವಕ್ತಾರರೊಬ್ಬರು ತಿಳಿಸಿದರು.

ಉಭಯ ನಾಯಕರು ಶನಿವಾರ ಸಂಜೆ ಟೆಲಿಫೋನ್‌ನಲ್ಲಿ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News