ಅನ್ನಭಾಗ್ಯ ಯೋಜನೆಯಲ್ಲಿ ಅಲ್ಪ ಬದಲಾವಣೆ ಸಾಧ್ಯತೆ: ಅಕ್ಕಿ ಕಡಿತ, ಗೋಧಿಗೆ ಭಡ್ತಿ ?

Update: 2019-10-14 17:27 GMT

ಬೆಂಗಳೂರು, ಅ.14: ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಯೋಜನೆಗಳಲ್ಲಿ ಒಂದಾದ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ‘ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ಪ್ರಮಾಣವನ್ನು ಕೊಂಚ ತಗ್ಗಿಸಿ, ಗೋಧಿ ಹೆಚ್ಚಾಗಿ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ ಸೇರಿ ರಾಜ್ಯ ಇನ್ನಿತರ ಭಾಗಗಳಲ್ಲಿ ಗೋಧಿಗೆ ಬೇಡಿಕೆಯಿದೆ. ಜೊತೆಗೆ ಆರೋಗ್ಯ ಕಾಳಜಿ ನೆಪದಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ವಿತರಿಸುವ 7 ಕೆಜಿ ಅಕ್ಕಿಯ ಪ್ರಮಾಣವನ್ನು 5 ಕೆಜಿಗೆ ಇಳಿಸಿ ಮತ್ತೆ 2 ಕೆಜಿ ಗೋಧಿ ನೀಡಲು ಆಹಾರ ಇಲಾಖೆಗೆ ಚಿಂತಿಸಿದ್ದು, ಈ ಸಂಬಂಧ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗೋಧಿಗೆ ಭಡ್ತಿ?: ಬಿಪಿಎಲ್ ಕಾರ್ಡ್ ದಾರರಿಗೆ 2017ರ ಜೂನ್-ಜುಲೈನಲ್ಲಿ ಅಕ್ಕಿಯ ಪ್ರಮಾಣವನ್ನು 7 ಕೆಜಿಗೆ ಏರಿಸಿ 2 ಕೆಜಿ ಗೋಧಿ ನೀಡುತ್ತಿದ್ದುದನ್ನು ಅಂದಿನ ಸರಕಾರರ ನಿಲ್ಲಿಸಿತ್ತು. ಇದೀಗ, ಉತ್ತರ ಕರ್ನಾಟಕ ಸೇರಿ ರಾಜ್ಯದ ಇನ್ನಿತರ ಭಾಗಗಳಲ್ಲಿ ಗೋಧಿ ನೀಡುವಂತೆ ಫಲಾನುಭವಿಗಳಿಂದ ಬೇಡಿಕೆ ಹಾಗೂ ಆರೋಗ್ಯದ ಕಾಳಜಿಯಿಂದ ಹೆಚ್ಚು ಜನರು ಗೋಧಿಯಿಂದ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವ ಹಿನ್ನೆಲೆಯಲ್ಲಿ 2 ವರ್ಷಗಳ ನಂತರ ಮತ್ತೆ ಗೋಧಿ ವಿತರಿಸಲು ಇಲಾಖೆ ನಿರ್ಧರಿಸಿದೆ. ಕೇಂದ್ರ ಸರಕಾರದ ಸಹಕಾರದೊಂದಿಗೆ ರಾಜ್ಯ ಸರಕಾರ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು, ಕೇಂದ್ರವು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಅಕ್ಕಿಗೆ 30 ರೂ.ನಂತೆ ಖರೀದಿಸಿ ರಾಜ್ಯಕ್ಕೆ 3 ರೂ.ಗೆ ಅಕ್ಕಿ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡುತ್ತಿದೆ.

ಕೋಟ್ಯಂತರ ರೂ.ಉಳಿತಾಯ?: ಕೇಂದ್ರ ಸರಕಾರ ನೀಡುವ 5 ಕೆಜಿ ಅಕ್ಕಿಗೆ ರಾಜ್ಯ ಸರಕಾರ ಹೆಚ್ಚುವರಿ 2 ಕೆಜಿ ಸೇರಿಸಿ ಒಟ್ಟು 7 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಬಿಪಿಎಲ್ ಚೀಟಿದಾರರಿಗೆ ನೀಡುತ್ತಿದೆ. ಹೆಚ್ಚುವರಿ 2 ಕೆಜಿ ಅಕ್ಕಿ ನೀಡಲು ರಾಜ್ಯ ಸರಕಾರ ಮುಕ್ತ ಮಾರುಕಟ್ಟೆಯಲ್ಲಿ ತಿಂಗಳಿಗೆ ಪ್ರತಿ ಕೆಜಿ ಅಕ್ಕಿಗೆ 29 ರೂ.ನಂತೆ 214 ಕೋಟಿ ರೂ. ಮೊತ್ತದ 74 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿಸುತ್ತಿದೆ.

2 ಕೆಜಿ ಅಕ್ಕಿ ಬದಲು 2 ಕೆಜಿ ಗೋಧಿಯನ್ನು ವಿತರಿಸಲು ತಿಂಗಳಿಗೆ ಪ್ರತಿ ಕೆಜಿಗೆ 24 ರೂ.ನಂತೆ 185 ಕೋಟಿ ರೂ.ಮೊತ್ತದ 74 ಸಾವಿರ ಮೆಟ್ರಿಕ್ ಟನ್ ಖರೀದಿಸಬೇಕಾಗುತ್ತದೆ. ಇದರಿಂದ ತಿಂಗಳಿಗೆ 34 ಕೋಟಿ ರೂ.ನಂತೆ ವರ್ಷಕ್ಕೆ 408 ಕೋಟಿ ರೂ. ಸರಕಾರಕ್ಕೆ ಉಳಿತಾಯ ಮಾಡಬಹುದು ಎಂಬುದು ಆಹಾರ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ. 

ಪ್ರಸ್ತಾವನೆಗೆ ಒಪ್ಪಿಗೆ ಸಾಧ್ಯತೆ?
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಬಿಜೆಪಿ ಸರಕಾರಗಳು ಆಡಳಿತದಲ್ಲಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ, ಯಥೇಚ್ಛವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಗೋಧಿ ಖರೀದಿಸಿ ಆಹಾರ ಗೋದಾಮಿನಲ್ಲಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News