ನೆರೆಭೀತಿಯ ದ್ವೀಪದಲ್ಲಿ ನೆಲೆಸಲು ರೊಹಿಂಗ್ಯಾ ನಿರಾಶ್ರಿತರ ಸಮ್ಮತಿ: ಬಾಂಗ್ಲಾ
ಕಾಕ್ಸ್ ಬಝಾರ್ (ಬಾಂಗ್ಲಾ),ಜೂ.20: ಬಾಂಗ್ಲಾ ದೇಶದಲ್ಲಿ ನೆಲೆಸಿರುವ ಸಾವಿರಾರು ರೊಹಿಂಗ್ಯಾಗಳು, ನೆರೆಹಾವಳಿಗೆ ತುತ್ತಾಗುವ ಭೀತಿ ಇರುವ ಹೊರತಾಗಿಯೂ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿನ ದ್ವೀಪವೊಂದಕ್ಕೆ ಸಾಮೂಹಿಕವಾಗಿ ವಲಸೆ ಹೋಗಲು ಒಪ್ಪಿಕೊಂಡಿದ್ದಾರೆಂದು ಬಾಂಗ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ನೆಲದಲ್ಲಿ ಆಶ್ರಯ ಪಡೆದಿರುವ ಮ್ಯಾನ್ಮಾರ್‌ನ 1 ಲಕ್ಷಕ್ಕೂ ಅಧಿಕ ರೊಹಿಂಗ್ಯಾಗಳು ಕೆಸರುಮಣ್ಣಿನಿಂದ ತುಂಬಿರುವ ದ್ವೀಪಕ್ಕೆ ತೆರಳಬೇಕೆಂದು ಢಾಕಾ ಬಹಳ ಸಮಯದಿಂದ ರೋಹಿಂಗ್ಯಗಳ ಮೇಲೆ ಒತ್ತಡ ಹೇರುತ್ತಾ ಬಂದಿದೆ. ಇದರಿಂದಾಗಿ 10 ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳು ನೆಲೆಸಿರುವ ಗಡಿಪ್ರದೇಶದ ನಿರಾಶ್ರಿತ ಶಿಬಿರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆಯೆಂದು ಅದು ತಿಳಿಸಿದೆ.
2017ರಲ್ಲಿ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಸೇನಾಪಡೆಯು, ರೋಹಿಂಗ್ಯ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸುವ ನೆಪದಲ್ಲಿ ಸಾವಿರಾರು ಅಮಾಯಕ ರೊಹಿಂಗ್ಯಾಗಳನ್ನು ಹತ್ಯೆಗೈದಿತ್ತು. ಈ ಸಂದರ್ಭದಲ್ಲಿ 7.40 ಲಕ್ಷ ರೋಹಿಂಗ್ಯಾಗಳು ಬಾಂಗ್ಲಾಗೆ ಪಲಾಯನಗೈದಿದ್ದು, ಇದಕ್ಕೂ ಮುನ್ನ 2 ಲಕ್ಷಕ್ಕೂ ಅಧಿಕ ನಿರಾಶ್ರಿರೊಂದಿಗೆ ಕಾಕ್ಸ್ ಬಝಾರ್‌ನಲ್ಲಿರುವ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಪಡೆದುಕೊಂಡಿದ್ದರು.
ಮುಂದಿನ ಕೆಲವೇ ದಿನಗಳಲ್ಲಿ ರೊಹಿಂಗ್ಯಾ ನಿರಾಶ್ರಿತರನ್ನು ಭಾಷನ್ ಚಾರ್ ದ್ವೀಪದಲ್ಲಿ ಪುನರ್ವಸತಿಗೊಳಿಸಲಾಗುವುದೆಂದು, ಬಾಂಗ್ಲಾ ದೇಶದ ನಿರಾಶ್ರಿತರ ಆಯುಕ್ತರಾದ ಮೆಹಬೂಬ್ ಆಲಂ ತಿಳಿಸಿದ್ದಾರೆ. ‘‘ಅಂದಾಜು 6-7 ಲಕ್ಷ ನಿರಾಶ್ರಿತರು ಈಗಾಗಲೇ ಬಾಷಣ್ ಚಾರ್ ದ್ವೀಪದಲ್ಲಿ ನೆಲೆಸುವುದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆಯೆಂದು ಅವರು ಹೇಳಿದರು. ಆದರೆ ನಿರಾಶ್ರಿತರನ್ನು ಯಾವಾಗ ಸ್ಥಳಾಂತರಗೊಳಿಸಲಾಗುವುದೆಂಬ ಬಗ್ಗೆ ಅವರು ಮಾಹಿತಿಯನ್ನು ನೀಡಲಿಲ್ಲ. ಆದರೆ ದ್ವೀಪದಲ್ಲಿ ನಿರಾಶ್ರಿತರಿಗಾಗಿ ಕಟ್ಟಡಗಳನ್ನು ನಿರ್ಮಿಸುವ ಹೊಣೆ ಹೊತ್ತಿರುವ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು, ಡಿಸೆಂಬರ್ ಬಳಿಕ ಪುನರ್ವಸತಿ ಕಾರ್ಯ ಆರಂಭಗೊಳ್ಳಲಿದ್ದು, ಪ್ರತಿ ದಿನ 500 ನಿರಾಶ್ರಿತರನ್ನು ಕಳುಹಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಮ್ಯಾನ್ಮಾರ್ ಸೈನಿಕರು ನಡೆಸಿದ ರೊಹಿಂಗ್ಯಾಗಳ ಹತ್ಯಾಕಾಂಡಕ್ಕೆ ಎರಡು ವರ್ಷಗಳು ತುಂದಿದ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ರೊಹಿಂಗ್ಯಾಗಳು ರವಿವಾರ ಬಾಂಗ್ಲಾದೇಶದ ನಿರಾಶ್ರಿತ ಶಿಬಿರದಲ್ಲಿ ರ್ಯಾಲಿ ನಡೆಸಿದರು.