ಕಾಶ್ಮೀರವನ್ನು ಸಾಮಾನ್ಯ ಸ್ಥಿತಿಗೆ ಮರಳಿಸುವ ಮಾರ್ಗನಕ್ಷೆ ನೀಡಿ: ಭಾರತಕ್ಕೆ ಅಮೆರಿಕ ಒತ್ತಾಯ

Update: 2019-10-25 17:22 GMT

ವಾಶಿಂಗ್ಟನ್, ಅ. 25: ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರಳಿಸಲು ರೂಪಿಸಲಾಗಿರುವ ಮಾರ್ಗನಕ್ಷೆಯನ್ನು ನೀಡುವಂತೆ ಅಮೆರಿಕ ಗುರುವಾರ ಭಾರತವನ್ನು ಕೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್‌ನಲ್ಲಿ ರದ್ದುಪಡಿಸಿದ ಬಳಿಕ, ಭಾರತ ಸರಕಾರವು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮುಂತಾದ ಮುಖ್ಯವಾಹಿನಿಯ ಕಾಶ್ಮೀರಿ ರಾಜಕಾರಣಿಗಳನ್ನು ಗೃಹಬಂಧನದಲ್ಲಿರಿಸಿದೆ. ಪ್ರತ್ಯೇಕತಾವಾದಿ ನಾಯಕರನ್ನೂ ಬಂಧಿಸಲಾಗಿದೆ.

‘‘ಬಂಧಿತರನ್ನು ಬಿಡುಗಡೆ ಮಾಡುವಂತೆ ಹಾಗೂ ದೈನಂದಿನ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಮರಳಿ ಜಾರಿಗೆ ತರುವಂತೆ ಭಾರತ ಸರಕಾರವನ್ನು ಒತ್ತಾಯಿಸುವುದನ್ನು ನಾವು ಮುಂದುವರಿಸುತ್ತೇವೆ. ಆದರೆ, ಅದರಲ್ಲೂ ಮುಖ್ಯವಾಗಿ ರಾಜಕೀಯ ಮತ್ತು ಆರ್ಥಿಕ ಸಾಮಾನ್ಯ ಸ್ಥಿತಿಯನ್ನು ಮರಳಿ ಜಾರಿಗೆ ತರುವುದಕ್ಕೆ ಸಂಬಂಧಿಸಿದ ಮಾರ್ಗನಕ್ಷೆಯನ್ನು ನೀಡುವಂತೆ ನಾವು ಒತ್ತಾಯಿಸುತ್ತೇವೆ’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಉಸ್ತುವಾರಿ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಆ್ಯಲಿಸ್ ಜಿ. ವೆಲ್ಸ್ ಹೇಳಿದರು.

ಅವರು ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

 ‘80 ಲಕ್ಷ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ’

ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಯ ಬಗ್ಗೆ ಅಮೆರಿಕ ‘ಗಾಢ ಕಳವಳ’ ಹೊಂದಿದೆ ಎಂದು ಆ್ಯಲಿಸ್ ವೆಲ್ಸ್ ಹೇಳಿದರು. ಅಲ್ಲಿ 80 ಲಕ್ಷ ಜನರ ಬದುಕಿನ ಮೇಲೆ ‘ಗಂಭೀರ ಪರಿಣಾಮ’ಗಳಾಗಿವೆ ಎಂದು ಆ್ಯಲಿಸ್ ಜಿ. ವೆಲ್ಸ್ ಅಭಿಪ್ರಾಯಪಟ್ಟರು.

 40 ಲಕ್ಷ ಬಳಕೆದಾರರ ಮೊಬೈಲ್ ಫೋನ್‌ಗಳಿಗೆ ಚಾಲನೆ ನೀಡಲಾಗಿದೆಯಾದರೂ, ಇಂಟರ್‌ನೆಟ್ ಮತ್ತು ಎಸ್‌ಎಮ್‌ಎಸ್ ಸೇವೆಗಳನ್ನು ಇನ್ನೂ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಭದ್ರತಾ ನಿರ್ಬಂಧಗಳಿಂದಾಗಿ ಪತ್ರಕರ್ತರು ಈಗಲೂ ಕಾಶ್ಮೀರದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿ ನುಡಿದರು.

ಉಗ್ರರ ವಿರುದ್ಧ ಪಾಕ್ ಗಂಭೀರ ಕ್ರಮ ತೆಗೆದುಕೊಳ್ಳಲಿ: ಅಮೆರಿಕ

ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಲು ಮಧ್ಯಪ್ರವೇಶಿಸುವಂತೆ ಭಾರತ ಮತ್ತು ಪಾಕಿಸ್ತಾನಗಳೆರಡೂ ಕೇಳಿದರೆ ಮಾತ್ರ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗುತ್ತಾರೆ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ಅದೇ ವೇಳೆ, ಭಯೋತ್ಪಾದಕ ಗುಂಪುಗಳ ವಿರುದ್ಧ ನಿರಂತರ ಮತ್ತು ಹಿಂಪಡೆಯಲು ಸಾಧ್ಯವಾಗದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಶಾಂತಿ ಮಾತುಕತೆಗಳಿಗೆ ವೇದಿಕೆ ಸಿದ್ಧಪಡಿಸುವ ಹೊಣೆ ಪಾಕಿಸ್ತಾನದ ಮೇಲಿದೆ ಎಂದು ಗುರುತು ಬಹಿರಂಗ ಪಡಿಸಲು ಇಚ್ಛಿಸದ ವಿದೇಶಾಂಗ ಇಲಾಖೆಯ ಅಧಿಕಾರಿ ಅಭಿಪ್ರಾಯಪಟ್ಟರು.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಏರ್ಪಟ್ಟಿರುವ ಉದ್ವಿಗ್ನತೆಯ ಮಟ್ಟದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಈ ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್‌ರನ್ನು ಭೇಟಿಯಾದ ವೇಳೆ ಕಾಶ್ಮೀರ ವಿಷಯವನ್ನು ಅವರೊಂದಿಗೆ ನೇರವಾಗಿ ಚರ್ಚಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News