ಪ್ರಸಿದ್ಧ ಸೆಲೆಬ್ರಿಟಿಗಳ ಕೋಟ್ಯಾಂತರ ರೂ. ಮೌಲ್ಯದ ಮನೆಗಳನ್ನು ಸುಟ್ಟು ಹಾಕಿದ ಕಾಡ್ಗಿಚ್ಚು
Update: 2019-10-29 17:04 GMT
ಲಾಸ್ ಏಂಜಲಿಸ್ (ಅಮೆರಿಕ), ಅ. 29: ಲಾಸ್ ಏಂಜಲಿಸ್‌ನಲ್ಲಿ ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚು ಸೋಮವಾರ ಕನಿಷ್ಠ ಐದು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಮನೆಗಳನ್ನು ಸುಟ್ಟು ಹಾಕಿದೆ ಹಾಗೂ ಅಲ್ಲಿ ವಾಸಿಸುತ್ತಿದ್ದ ಖ್ಯಾತನಾಮರು ರಾತೋರಾತ್ರಿ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ.
ಲಾಸ್ ಏಂಜಲಿಸ್ ನಗರದ ಶ್ರೀಮಂತ ಉಪನಗರ ಬ್ರೆಂಟ್‌ವುಡ್‌ನ ನಿವಾಸಿಗಳಿಗೆ ಮನೆಯಿಂದ ಹೊರಹೋಗುವಂತೆ ಸೂಚನೆ ನೀಡಲಾಗಿದೆ.
ಬ್ರೆಂಟ್‌ವುಡ್‌ನಲ್ಲಿ ಈಗ ಬಾಸ್ಕೆಟ್‌ಬಾಲ್ ಸೂಪರ್‌ಸ್ಟಾರ್ ಲೆಬ್ರಾನ್ ಜೇಮ್ಸ್, ಎ-ದರ್ಜೆಯ ಹಾಲಿವುಡ್ ನಟರು, ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಮಾಧ್ಯಮ ಕಂಪೆನಿಗಳ ಮುಖ್ಯಾಧಿಕಾರಿಗಳು ವಾಸಿಸುತ್ತಿದ್ದಾರೆ.
ದಟ್ಟ ಹೊಗೆ ಮತ್ತು ಬೂದಿ ಈ ಪ್ರದೇಶವನ್ನು ಆವರಿಸಿದೆ. ನೀರಿನ ಟ್ಯಾಂಕರ್‌ಗಳನ್ನು ಹೊತ್ತ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಬೆಂಕಿ ನಂದಿಸಲು ಶ್ರಮಿಸುತ್ತಿವೆ.