ಬಾಂಗ್ಲಾ: ಜಮಾಅತ್ ನಾಯಕನ ಮರಣ ದಂಡನೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

Update: 2019-10-31 15:07 GMT

ಢಾಕಾ (ಬಾಂಗ್ಲಾದೇಶ), ಅ. 31: 1971ರ ವಿಮೋಚನಾ ಯುದ್ಧದ ಅವಧಿಯಲ್ಲಿ ಮಾಡಿದ ಯುದ್ಧಾಪರಾಧಗಳಿಗಾಗಿ ಉನ್ನತ ಜಮಾಅತೆ ಇಸ್ಲಾಮಿ ನಾಯಕ ಎ.ಟಿ.ಎಮ್. ಅಝರುಲ್ ಇಸ್ಲಾಮ್‌ಗೆ ನೀಡಲಾದ ಮರಣ ದಂಡನೆಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಪಾಕಿಸ್ತಾನಿ ಪಡೆಗಳ ಪಕ್ಷ ವಹಿಸಿ ಯುದ್ಧಾಪರಾಧಗಳನ್ನು ಮಾಡಿದ ಆರೋಪ ಅಝರುಲ್ ಇಸ್ಲಾಮ್ ವಿರುದ್ಧ ಇದೆ.

ಉನ್ನತಾಧಿಕಾರದ ನ್ಯಾಯಮಂಡಳಿಯೊಂದು ನೀಡಿದ ಮರಣ ದಂಡನೆಯ ವಿರುದಧ ಅಝರುಲ್ ಇಸ್ಲಾಮ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನ ನಾಲ್ವರು ಸದಸ್ಯರ ನ್ಯಾಯಪೀಠವು ತಿರಸ್ಕರಿಸಿತು. ಅಂತರ್‌ರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ನೀಡಿದ ಮರಣ ದಂಡನೆಯನ್ನು ಪ್ರಶ್ನಿಸಿ ಇಸ್ಲಾಮ್ 2015 ಜನವರಿ 28ರಂದು ಮನವಿ ಸಲ್ಲಿಸಿದ್ದರು.

1971ರಲ್ಲಿ ಬಾಂಗ್ಲಾದೇಶಕ್ಕೆ ಲಭಿಸಿದ ಸ್ವಾತಂತ್ರವನ್ನು ಜಮಾಅತ್ ವಿರೋಧಿಸಿತ್ತು ಎಂದು ಆರೋಪಿಸಲಾಗಿದೆ. ಈಗಾಗಲೇ 1971ರ ಯುದ್ಧಾಪರಾಧ ಪ್ರಕರಣದಲ್ಲಿ ಆರು ಮಂದಿಯನ್ನು ಗಲ್ಲಿಗೇರಿಸಲಾಗಿದ್ದು, ಅವರ ಪೈಕಿ ಐವರು ಜಮಾಅತ್ ನಾಯಕರಾಗಿದ್ದಾರೆ. ಆರನೇ ವ್ಯಕ್ತಿ ಮಾಜಿ ಪ್ರಧಾನಿ ಖಾಲಿದಾ ಝಿಯಾರ ಪಕ್ಷ ಬಿಎನ್‌ಪಿಯ ನಾಯಕರಾಗಿದ್ದರು.

1971ರಲ್ಲಿ ಪಾಕಿಸ್ತಾನಿ ಪಡೆಗಳೊಂದಿಗೆ ಕೈಜೋಡಿಸಿ 1,400ಕ್ಕೂ ಅಧಿಕ ಜನರನ್ನು ಕೊಂದ, ಹಲವು ಮಹಿಳೆಯರನ್ನು ಅತ್ಯಾಚಾರಗೈದ, ಹಲವರನ್ನು ಅಪಹರಿಸಿ ಹಿಂಸಿಸಿದ ಆರೋಪವನ್ನು ಅಝರುಲ್ ಇಸ್ಲಾಮ್ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News