ಹಾಂಕಾಂಗ್ ಆಡಳಿತಕ್ಕೆ ಎದುರಾಗುವ ಸವಾಲನ್ನು ಸಹಿಸುವುದಿಲ್ಲ: ಚೀನಾ

Update: 2019-11-01 17:14 GMT

ಬೀಜಿಂಗ್, ನ. 1: ಹಾಂಕಾಂಗ್‌ನ ಆಡಳಿತ ವ್ಯವಸ್ಥೆಗೆ ಎದುರಾಗುವ ಯಾವುದೇ ಸವಾಲನ್ನು ತಾನು ಸಹಿಸುವುದಿಲ್ಲ ಎಂದು ಚೀನಾ ಶುಕ್ರವಾರ ಎಚ್ಚರಿಕೆ ನೀಡಿದೆ.

ಈ ವಾರ ಬೀಜಿಂಗ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ಮಹತ್ವದ ನಾಲ್ಕು ದಿನಗಳ ಸಭೆಯಲ್ಲಿ ಹಾಂಕಾಂಗ್ ಪರಿಸ್ಥಿತಿಯ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಹಾಂಕಾಂಗ್, ಮಕಾವು ಮತ್ತು ಬೇಸಿಕ್ ಲಾ ಕಮಿಶನ್ ನಿರ್ದೇಶಕ ಶೆನ್ ಚುನ್‌ಯಾವೊ ಹೇಳಿದರು.

 ದಿನೇ ದಿನೇ ಹಿಂಸಾತ್ಮಕವಾಗಿ ಸಾಗುತ್ತಿರುವ ಪ್ರತಿಭಟನೆಗಳನ್ನು ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರೀ ಲ್ಯಾಮ್ ಮತ್ತು ನಗರ ಪೊಲೀಸರು ಕೊನೆಗೊಳಿಸುತ್ತಾರೆ ಎಂಬ ಭರವಸೆಯನ್ನು ಈವರೆಗೆ ಚೀನಾದ ಕೇಂದ್ರೀಯ ನಾಯಕತ್ವವು ಹೊಂದಿದೆ.

ಆದರೆ, ಪ್ರತಿಭಟನೆಗಳು ನಿಯಂತ್ರಣ ಮೀರಿ ಸಾಗಿದರೆ, ಪರಿಸ್ಥಿತಿಯನ್ನು ನಿಭಾಯಿಸಲು ಕಮ್ಯುನಿಸ್ಟ್ ಪಕ್ಷದ ನಾಯಕತ್ವವು ಆಡಳಿತದಲ್ಲಿ ಹೆಚ್ಚಿನ ನಿಯಂತ್ರಣವನ್ನು ಹೊಂದುವುದೇ ಎನ್ನುವುದನ್ನು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ.

ಬ್ರಿಟಿಶರ ಮಾಜಿ ವಸಾಹತು ಆಗಿರುವ ಹಾಂಕಾಂಗ್‌ನಲ್ಲಿ ಹಲವು ತಿಂಗಳುಗಳಿಂದ ಬೃಹತ್ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ನಡೆಯುತ್ತಿವೆ. ನಗರದಲ್ಲಿ ಮೂಲಭೂತ ಹಕ್ಕುಗಳು ಕಡಿತಗೊಳ್ಳುತ್ತಿರುವುದನ್ನು ಅವರು ವಿರೋಧಿಸುತ್ತಿದ್ದಾರೆ.

‘‘ ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು’ ನೀತಿಯನ್ನು ಪ್ರಶ್ನಿಸುವ ಯಾವುದೇ ಕೃತ್ಯವನ್ನು ಚೀನಾ ಯಾವತ್ತೂ ಸಹಿಸುವುದಿಲ್ಲ. ದೇಶವನ್ನು ವಿಭಜಿಸುವ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸುವ ಯಾವುದೇ ಕೃತ್ಯವನ್ನು ಚೀನಾ ಸಹಿಸುವುದಿಲ್ಲ’’ ಎಂದು ಶೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News