ದೆಹಲಿ ರಸ್ತೆ ಅಪಘಾತಗಳ ರಾಜಧಾನಿ !

Update: 2019-11-04 04:29 GMT

ಹೊಸದಿಲ್ಲಿ: ರಾಜಧಾನಿಯಲ್ಲಿ ರಸ್ತೆ ಅಪಘಾತಗಳಿಂದಾದ ಸಾವಿನ ಸಂಖ್ಯೆ 2018ರಲ್ಲೂ ಏರಿಕೆಯಾಗಿದ್ದು, ಹೊಸದಿಲ್ಲಿ ರಸ್ತೆ ಅಪಘಾತ ದಿಂದಾಗುವ ಸಾವಿನ ರಾಜಧಾನಿ ಎನಿಸಿಕೊಂಡಿದೆ.

2017ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 106ರಷ್ಟು ಹೆಚ್ಚಿದೆ. ಉಳಿದಂತೆ ಕೊಲ್ಕತ್ತಾ, ಚೆನ್ನೈ ಮತ್ತು ಮುಂಬೈನಲ್ಲಿ ರಸ್ತೆ ಅಪಘಾತದಿಂದಾಗುವ ಸಾವಿನ ಪ್ರಮಾಣ ಅಲ್ಪ ಇಳಿಕೆಯಾಗಿದೆ.

2017ರಲ್ಲಿ ಚೆನ್ನೈನಲ್ಲಿ 1299 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, 2018 ರಲ್ಲಿ ಈ ಪ್ರಮಾಣ 1260ಕ್ಕೆ ಇಳಿದಿದೆ. ಕೊಲ್ಕತ್ತಾದಲ್ಲಿ 2017ರಲ್ಲಿ 329 ಮತ್ತು 2018ರಲ್ಲಿ 294 ರಸ್ತೆ ಅಪಘಾತ ಸಾವುಗಳು ಸಂಭವಿಸಿದೆ. ಮುಂಬೈನಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ 15 ಕಡಿಮೆ ಸಾವು ಸಂಭವಿಸಿದ್ದು, ಒಟ್ಟು 475 ಮಂದಿ ಮೃತಪಟ್ಟಿದ್ದಾರೆ.

ಸಣ್ಣ ನಗರಗಳಾದ ಪಾಟ್ನಾ, ಆಗ್ರಾ, ಸೂರತ್, ಅಲಹಾಬಾದ್, ಜೋಧ್‌ಪುರ, ನಾಸಿಕ್, ರಾಜ್‌ಕೋಟ್, ಭೋಪಾಲ್ ಮತ್ತು ತ್ರಿಶ್ಶೂರ್‌ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಈ ನಗರಗಳಲ್ಲಿ 2017ರಲ್ಲಿ 17 ಸಾವಿರ ಜನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದರೆ, 2018ರಲ್ಲಿ 17,700 ಮಂದಿ ಅಪಘಾತಗಳಲ್ಲಿ ಮಡಿದಿದ್ದಾರೆ.

ಸಣ್ಣ ನಗರಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಕಟ್ಟುನಿಟ್ಟಾಗಿ ಕಾನೂನು ಜಾರಿಯಾಗಬೇಕಿದೆ ಹಾಗೂ ಪಾದಚಾರಿಗಳು, ಸೈಕಲ್ ಸವಾರರು ಮತ್ತು ದ್ವಿಚಕ್ರ ವಾಹನ ಸವಾರರು ಸೇರಿದಂತೆ ರಸ್ತೆ ಬಳಕೆದಾರರ ಸುರಕ್ಷಾ ಕ್ರಮಗಳನ್ನು ಸುಧಾರಿಸಬೇಕಿದೆ ಎಂದು ತಜ್ಞರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News