ಖಾಮಿನೈ ನಿಕಟವರ್ತಿಗಳ ವಿರುದ್ಧ ಅಮೆರಿಕದ ದಿಗ್ಬಂಧನ
ವಾಶಿಂಗ್ಟನ್, ನ. 5: ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಗೆ ನಿಕಟವಾಗಿರುವ ಒಂಬತ್ತು ಜನರ ಮೇಲೆ ಅಮೆರಿಕ ಸೋಮವಾರ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಖಾಮಿನೈಯ ಭದ್ರತಾ ಸಿಬ್ಬಂದಿ ಮುಖ್ಯಸ್ಥ, ಓರ್ವ ಪುತ್ರ ಮತ್ತು ನ್ಯಾಯಾಂಗದ ಮುಖ್ಯಸ್ಥರು ಅಮೆರಿಕದ ಆರ್ಥಿಕ ದಿಗ್ಬಂಧನಕ್ಕೆ ಒಳಗಾದವರಲ್ಲಿ ಸೇರಿದ್ದಾರೆ.
ಇರಾನ್‌ನ ಸಶಸ್ತ್ರ ಪಡೆಗಳನ್ನೂ ಕಪ್ಪು ಪಟ್ಟಿಗೆ ಸೇರಿಸುತ್ತಿರುವುದಾಗಿ ಅಮೆರಿಕದ ಖಜಾನೆ ಇಲಾಖೆ ಹೇಳಿದೆ.
ಟೆಹರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಒತ್ತೆಯಾಳು ಬಿಕ್ಕಟ್ಟು ಸಂಭವಿಸಿದ 40ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ.
ಇರಾನ್‌ನ ಅಮೆರಿಕ ಬೆಂಬಲಿತ ಆಡಳಿತಗಾರ ಶಾರನ್ನು ಅಧಿಕಾರದಿಂದ ಕೆಳಗಿಳಿಸಿದ ಸುಮಾರು 9 ತಿಂಗಳ ಬಳಿಕ, 1979 ನವೆಂಬರ್ 4ರಂದು ವಿದ್ಯಾರ್ಥಿಗಳು ಟೆಹರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯೊಳಗೆ ನುಗ್ಗಿ ಅಲ್ಲಿನ ಸಿಬ್ಬಂದಿಗಳನ್ನು ಒತ್ತೆಸೆರೆಯಾಳಾಗಿ ಇಟ್ಟುಕೊಂಡಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರನ್ನು ಒಪ್ಪಿಸಬೇಕು ಎಂದು ಅಮೆರಿಕವನ್ನು ಅವರು ಒತ್ತಾಯಿಸುತ್ತಿದ್ದರು.
‘‘ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಯ ಸುತ್ತಲಿರುವ ಚುನಾವಣೆಯಲ್ಲಿ ಆಯ್ಕೆಯಾಗದ ಅಧಿಕಾರಿಗಳನ್ನು ಗುರಿಯಾಗಿಸಿ ಇಂದು ಖಜಾನೆ ಇಲಾಖೆ ಈ ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೇಳಿಕೆಯೊಂದರಲ್ಲಿ ತಿಳಿಸಿದರು.