‘ಕೆಂಡೋನಿಯನ್ಸ್’ ಒಂದು ಹೊಸ ಬಗೆಯ ರಂಗಪ್ರಯೋ

Update: 2019-11-17 10:45 GMT

‘ಕೆಂಡೋನಿಯನ್ಸ್’ ಬಹುಜನರಿಗೆ ಪರಿಚಿತವಲ್ಲದ ಅಪರಿಚತ ಪದಪುಂಜ. ಕೆಂಡೋನಿಯನ್ಸ್ ಹೆಸರಿನ ನಾಟಕವೊಂದು ಪ್ರಯೋಗವಾಗಲಿದೆ ಎಂದ ಕೂಡಲೇ ಬಹಳಷ್ಟು ನಾಟಕಾಸಕ್ತರಿಂದ ಬಂದ ಪ್ರಶ್ನೆ- ಕೆಂಡೋನಿಯನ್ಸ್ ಅಂದರೇನು? ಅದರ ಅರ್ಥವಾದರೂ ಏನು? ಹೆಸರೇ ಅರ್ಥವಾಗದ್ದು, ಇನ್ನು ನಾಟಕವಾದರೂ ಅರ್ಥವಾದೀತೇ? ಇತ್ಯಾದಿ.....

ಪಾದುವಾ ಕಾಲೇಜ್‌ನ ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ನಡುವೆ ಪ್ರಯೋಗಗೊಂಡ ಮೊದಲ ಪ್ರದರ್ಶನದಲ್ಲಿ ಬಂದವರೆಲ್ಲರಿಗೂ ಅರ್ಥವಾದದ್ದು, ಇದೊಂದು ಅರ್ಥ ಶಾಸ್ತ್ರಕ್ಕೆ ಸಂಬಂಧಿಸಿದ ನಾಟಕ ಮಾತ್ರವಲ್ಲ. ಶುದ್ಧ ರಾಜಕೀಯ ನಾಟಕವೂ ಎಂಬುದಾಗಿ.

ಪಾದುವಾ ಕಾಲೇಜ್‌ನ ರಂಗ ಅಧ್ಯಯನ ಕೇಂದ್ರ ‘ಟೀಂ ಮಸ್ಕರೇಡ್’ ಹೆಸರಿಲ್ಲಿ 130 ದಿನಗಳ ರಂಗ ಶಿಕ್ಷಣ ಶಿಬಿರವೊಂದನ್ನು ನಡೆಸಿ ಅದರ ಕಲಿಕೆಯ ಭಾಗವಾಗಿ ಪ್ರದರ್ಶನಗೊಂಡ ನಾಟಕ ‘ಕೆಂಡೋನಿಯನ್ಸ್’. ಈ ನಾಟಕವನ್ನು ರಚಿಸಿ ನಿರ್ದೇಶಿಸಿದವರು ಕೇರಳದ ಬಹು ಪ್ರತಿಭಾನ್ವಿತ ರಂಗ ನಿರ್ದೇಶಕ ‘ಅರುಣ್‌ಲಾಲ್’. ಮೊದಲ ಬಾರಿಗೆ ಕನ್ನಡದ ನಾಟಕವೊಂದನ್ನು ಕಟ್ಟಿಕೊಟ್ಟಿದ್ದಾರೆ. ಮಸ್ಕರೇಡ್ ತಂಡದ ನಟ ನಟಿಯರು ಅದನ್ನು ಅತ್ಯಂತ ಸಮರ್ಪಕವಾಗಿ ರಂಗದಲ್ಲಿ ಅಭಿನಯಿಸುವುದರೊಂದಿಗೆ ಪ್ರೇಕ್ಷಕರಲ್ಲಿ ಹೊಸ ಬಗೆಯ ರಂಗ ಸಂಚಲನವನ್ನು ಉಂಟು ಮಾಡಿದ್ದಾರೆ. ಹಾಸ್ಯ, ವ್ಯಂಗ್ಯ, ವಿಡಂಬನೆಯನ್ನು ಸಂವಹನದ ದಾರಿಯನ್ನಾಗಿಸಿಕೊಂಡ ತಂಡ ಅದನ್ನು ಮೀರಿದ ನಿಜ ವಾಸ್ತವವನ್ನು ರಂಗಭೂಮಿಯ ಮೇಲೆ ಪರಿಣಾಮಕಾರಿಯಾಗಿ ನಿರೂಪಿಸಿದೆ. ನಾಟಕದಲ್ಲಿ ನೇರವಾಗಿ ನಿರೂಪಣೆಗೊಳ್ಳುವ ಕಥಾ ಸಂವಿಧಾನವಿಲ್ಲ. ಆದರೆ ನಮ್ಮ ಸುತ್ತ ಮುತ್ತಲ ಸಾಮಾಜಿಕ ನಡೆ ನುಡಿಯ ನೂರಾರು ಕಥನಗಳು ಅಡಕವಾಗಿವೆ ಮತ್ತು ಮಾತನಾಡುತ್ತವೆ. ಈ ಕಲಾತ್ಮಕ ನಾಟಕದ ಪ್ರಯೋಗಶಕ್ತಿ ಇರುವುದೇ ‘ಇಲ್ಲ’ ಮತ್ತು ‘ಇದೆ’ಗಳನ್ನು ನಿರೂಪಿಸಿದ ರೀತಿಯಲ್ಲಿ.

ಭಾಷಾ ಪ್ರಯೋಗ:

ಭಾಷಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟವಾದ ಸ್ವರೂಪವಿಲ್ಲ. ದಕ್ಷಿಣ ಕನ್ನಡದ ಕನ್ನಡಿಗರು ಆಡುವ ಮನೆಕನ್ನಡ, ತುಳು, ಕೊಂಕಣಿ, ಮಲಯಾಳಂ, ಇಂಗ್ಲಿಷ್, ಹಿಂದಿ...... ಹೀಗೆ ಬಹುಭಾಷೆಗಳು ಒಂದರ ಮೇಲೊಂದು ಅಪ್ಪಳಿಸುವಂತೆ ಸಂಭಾಷಿಸುತ್ತಾ ಹೋಗುತ್ತವೆ. ಇದು ಯಾವ ಭಾಷೆಯ ನಾಟಕವಪ್ಪಾಎಂಬ ಪ್ರಶ್ನೆ ಕೇಳುವಂತೆ ಮಾಡುತ್ತದೆ. ಆದರೆ ಆ ಭಾಷೆಗಳನ್ನು ಬಳಸಿದ ಬಗೆ, ಅದರೊಳಗಿನ ಭಾಷಾ ಬನಿ, ಧ್ವನಿಯಾಗಿ ಪ್ರೇಕ್ಷಕರನ್ನು ತಟ್ಟಿ-ಮುಟ್ಟಿ ಮಾತನಾಡಿಸುತ್ತಾ ಪ್ರೇಕ್ಷಕರ ಭಾಷೆಯಾಗಿ ಬದಲಾವಣೆಯಾಗುವುದು ನಿಜಕ್ಕೂ ಕುತೂಹಲಕಾರಿ. ‘ಕೆಂಡೋನಿಯನ್ಸ್’ ಅಂದರೇನು? ಎನ್ನುವ ಪ್ರಶ್ನೆಯೇ ನಾಟಕ ನೋಡುವ ಪ್ರತಿಯೊಬ್ಬ ಪ್ರೇಕ್ಷಕನಿಗೂ ಅಚ್ಚರಿ ಪಡುವಂತಹುದೇ ಆಗಿತ್ತು. ನಾಟಕ ನೋಡಿದ ಬಳಿಕ ನಿಮಗೇನು ತಿಳಿಯುತ್ತದೆಯೋ? ಅದನ್ನು ನಮಗೂ ಹೇಳಿ ಎಂದು ಸಂಘಟಕರು ಹಾರಿಕೆ ಉತ್ತರವನ್ನೇ ಕೊಟ್ಟಿದ್ದರು. ನಾನೂ ಅವರಂತೆ ‘ಕೆಂಡೋನಿಯನ್ಸ್’ ಅಂದರೇನು? ಎನ್ನುವ ಉತ್ತರ ಹುಡುಕುವುದಕ್ಕೆ ಹೋಗುವುದಿಲ್ಲ. ನೀವು ನಾಟಕ ನೋಡಲೇ ಬೇಕು ಎನ್ನುವ ಕುತೂಹಲಕ್ಕಾಗಿ ನನಗೆ ತಿಳಿದಿರುವ ಸಂಗತಿಯನ್ನೂ ಮರೆ ಮಾಚಿದ್ದೇನೆ.

ರಂಗ ಪರಿಕರಗಳು:

ನಾಟಕದಲ್ಲಿ ನಲುವತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಗಾತ್ರದ ರಟ್ಟಿನ ಪೆಟ್ಟಿಗೆಗಳು ಪರಿಕರಗಳಾಗಿ ಬಳಕೆಯಾಗಿವೆ. ಆ ಪೆಟ್ಟಿಗೆಗಳ ಒಳಗೇನಿದೆ? ಖಾಲಿಯೋ ಅಥವಾ ತುಂಬಿದೆಯೋ, ಪೂರ್ತಿ ತುಂಬಿದೆಯೋ? ಇತ್ಯಾದಿ ಪ್ರಶ್ನೆಗಳು ಮೂಡುತ್ತಿರುವ ಸಂದರ್ಭದಲ್ಲಿಯೇ ಬೇರೆ ಬೇರೆ ಕೋನಗಳಿಂದ ಹಾದು ಬರುವ ಬೇರೆ ಬೇರೆ ಬಣ್ಣದ ಬೆಳಕು ರಟ್ಟಿನ ಪೆಟ್ಟಿಗೆಗಳನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತದೆ. ರಟ್ಟಿನ ಗುಟ್ಟು ರಟ್ಟಾಗುವುದು ಆಗಲೇ. ತ್ಯಾಜ್ಯ ಎಂದು ಪರಿಗಣಿಸುವ ರಟ್ಟು ಬೇರೆ ಬೇರೆ ಆಕಾರದಿಂದ ಮನೆಗಳಾಗಿ, ಬಹುಮಹಡಿ ಕಟ್ಟಡಗಳಾಗಿ, ಮಾರ್ಗ, ಬಾವಿ, ಗೂಡಂಗಡಿ, ಆಫೀಸು ಕಚೇರಿಗಳಾಗಿ, ಕಾರು, ಟ್ರಾಲಿ, ವಿಮಾನ ಇಳಿಗಟ್ಟೆಯಾಗಿ, ಭ್ರಮಾಲೋಕ ಸೃಷ್ಟಿಸುವ ಮಾಯಾ ಸರ್ಕಸ್ ಆಗಿ, ಒಟ್ಟಿನಲ್ಲಿ ಏನೇನೆಲ್ಲಾ ಆಗಬಾರದೋ ಅದು ಆಗಿ, ಪ್ರೇಕ್ಷಕರ ಮೆದುಳನ್ನು ಸ್ಪರ್ಷಿಸುತ್ತ, ತಿವಿಯುತ್ತ, ರಟ್ಟು-ರಟ್ಟಾಗದೆ ಬೇರೇನೋ ಆಗುವ ರಂಗ ಕ್ರಿಯೆಯಾಗಿ ಬದಲಾವಣೆಯಾಗುತ್ತದೆ. ನಾಟಕದಲ್ಲಿನ ದಾಮು ಪಾತ್ರಧಾರಿ ಬಳಕೆ ಮಾಡುವ ‘ತಂಗೀಸ್ ಚೀಲ’ ನಾಟಕದ ಬೇರೆ ಬೇರೆ ಸಂದರ್ಭದಲ್ಲಿ ‘ಪ್ರತಿಮೆ’ಯಾಗಿ ಕಾಣಿಸಿಕೊಳ್ಳುತ್ತದೆ. ತಂಗೀಸ್ ಚೀಲವನ್ನು ಬಿಟ್ಟಿರಲು ಸಾಧ್ಯವೇ ಇಲ್ಲದ ಸಹೋದರಿಯ ವಾತ್ಸಲ್ಯದ ನಂಟು ನಾಟಕಕ್ಕೆ ಬೇರೆಯೇ ಆಯಾಮವನ್ನು ನೀಡುತ್ತದೆ.

ವಸ್ತು:

ವಸ್ತುವಿನ ದೃಷ್ಟಿಯಿಂದ ಇದೊಂದು ಶುದ್ಧ ರಾಜಕೀಯ ನಾಟಕ. ಅದರೆ ಇದರಲ್ಲಿ ನಾವು ದಿನವೂ ನೋಡುತ್ತಿರುವ ರಾಜಕೀಯ ಪಕ್ಷಗಳ ಪಾತ್ರವಾಗಲೀ, ನೇತಾರರ ಪಾಲಿಟಿಕ್ಸ್ ಆಗಲೀ ದೃಶ್ಯವಾಗುವುದೇ ಇಲ್ಲ. ಇಲ್ಲಿ ಬರುವ ಹಲವು ಬಗೆಯ ವಿದೂಷಕರು ನಮ್ಮೆಲ್ಲರನ್ನೂ ಅಣಕಿಸುತ್ತಲೇ ಹೋಗುತ್ತಾರೆ. ನಮ್ಮನ್ನು ದೂಷಿಸುವ ದೂಷಕರು ಇವರು ಎಂದೆನಿಸುವಂತೆ ನಟಿಸುತ್ತಾರೆ. ಆದರೆ ನಿರ್ದಿಷ್ಟ ವ್ಯಕ್ತಿಯನ್ನು, ಪಕ್ಷವನ್ನು, ಜಾತಿಯನ್ನು, ಭಾಷೆಯನ್ನು, ದೇಶವನ್ನು ದೂಷಿಸುವುದಿಲ್ಲ. ಯಾರು ವಿದೂಷಕರು? ಯಾರು ದೂಷಕರು ಎಂದು ಪ್ರತ್ಯೇಕಿಸದಷ್ಟು ನಾಜೂಕಾಗಿ ರಂಗಕ್ರಿಯೆಗೆ ಒಳಪಡಿಸುತ್ತಾರೆ. ನಾಟಕದ ನಡುವೆ ನಟನೊಬ್ಬ ‘ಮನಿಸರ್ಕ್ಯುಲೇಶನ್ ಸ್ಕೀಮಿನ’ ಲೆಫ್ಟ್ ರೈಟ್ ಡೆಮೋ ಮಾಡಿದ ಬಗೆ ಪ್ರೇಕ್ಷಕರ ಅಂತಕರಣ ಮಿಡಿಯುವಂತೆ ಅಭಿನಯಿಸಿದ ರೀತಿಯನ್ನು ಹೊಗಳಿಕೆಯಲ್ಲದೆ ಬೇರೆ ಬಗೆಯಲ್ಲಿ ಹೇಳಲೂ ಸಾಧ್ಯವಿಲ್ಲ ಎಂಬಂತಿದೆ.

ತಾಂತ್ರಿಕವಾಗಿ ನಾಟಕವನ್ನು ಕಟ್ಟಿದ ಬಗೆ:

ತಾಂತ್ರಿಕವಾಗಿ ನಾಟಕವನ್ನು ಕಟ್ಟಿದ ಬಗೆ ಅತ್ಯುತ್ತಮ ಗುಣಮಟ್ಟದ್ದಾಗಿತ್ತು. ಸಾಮಾನ್ಯವಾಗಿ ತಾಂತ್ರಿಕ ಸಂಗತಿಗಳು ನಟರು ಹೇಳಬೇಕಾದ್ದನ್ನು ಸರಿಯಾಗಿ ದಾಟಿಸುತ್ತಿಲ್ಲ ಎಂದು ಅರಿವಾದಾಗ ಧ್ವನಿ, ಬೆಳಕು, ಬಣ್ಣಗಾರಿಕೆ, ವೇಷಭೂಷಣಗಳಿಂದ ಅದನ್ನು ಸರಿಪಡಿಸುವುದು ಪದ್ಧತಿ. ಆದರೆ ಇಲ್ಲಿ ಈ ಎಲ್ಲಾ ತಾಂತ್ರಿಕ ಸಂಗತಿಗಳು ತಮ್ಮ ಪ್ರತ್ಯೇಕ ಗುಣಮಟ್ಟವನ್ನು ಹೊಂದಿದ್ದು ಅವೂ ಪಾತ್ರಗಳೇನೋ ಎಂಬಷ್ಟು ಸಹಜವಾಗಿ ಅಭಿನಯಿಸಿವೆ.

ನಾಟಕದಲ್ಲಿ ಪದೇ ಪದೇ ನಕಲಿ, ಅಸಲಿ, ಡುಪ್ಲಿಕೇಟ್, ಒರಿಜಿನಲ್‌ಗಳ ಬಗ್ಗೆ ಮಾತನಾಡಲಾಗುತ್ತದೆ. ನಾಟಕದಲ್ಲಿ ಬರುವ ಮಾತುಗಳ ವರಿಜಿನಲ್, ಡುಪ್ಲಿಕೇಟ್‌ಗಳ ನಡುವಣ ‘ತೆಳು ಪದರ’ವನ್ನು ಅತ್ಯಂತ ಸೂಕ್ಷ್ಮವಾಗಿ ವಿಂಗಡಿಸಿ ನಿರೂಪಿಸಲಾಗಿದೆ.

ರಂಗಭೂಮಿಯಲ್ಲಿನ ಹೊಸ ಸಾಧ್ಯತೆಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ ‘ಪಾದುವಾ ಥಿಯೇಟರ್’ ಹಬ್‌ನೊಂದಿಗೆ ಹೊಸ ಕೆಲಸ ಮಾಡಿರುವ ನಿರ್ದೇಶಕ, ನಟ ನಟಿಯರು, ತಂತ್ರಜ್ಞರು ಮತ್ತು ರಂಗಕರ್ಮಿ ಗಳನ್ನು ವಿಶೇಷವಾಗಿ ಅಭಿನಂದಿಸಲೇ ಬೇಕು. ಈ ರಂಗ ಪ್ರಯೋಗ ನಾಡಿನಾದ್ಯಂತ ಪ್ರಯೋಗಗೊಳ್ಳಲಿ ಎಂಬುದು ನನ್ನ ಹಾರೈಕೆ

ಫೋಟೋ: ಅರವಿಂದ ಕುಡ್ಲ

Writer - ಐಕೆ ಬೊಳುವಾರು

contributor

Editor - ಐಕೆ ಬೊಳುವಾರು

contributor

Similar News