ಟ್ಯಾಗೋರ್ ಮತ್ತು ಚಲನಚಿತ್ರರಂಗ ಸಂಬಂಧಗಳು
ಟ್ಯಾಗೋರ್ ಅವರ ಕೃತಿಗಳನ್ನು ಆಧರಿಸಿ ನಾಲ್ಕು ಮೂಕಿ ಚಿತ್ರಗಳೂ ಸೇರಿದಂತೆ ಸುಮಾರು 70 ಚಿತ್ರಗಳು ಭಾರತದಲ್ಲಿ ತಯಾರಾಗಿರಬಹುದೆಂದು ಒಂದು ಅಂದಾಜಿದೆ. ಚಲನಚಿತ್ರ ನಿರ್ದೇಶಕರು ರವೀಂದ್ರನಾಥ್ ಟ್ಯಾಗೋರ್ ಅವರನ್ನು ಅತ್ಯಂತ ಭಕ್ತಿಭಾವದಿಂದ ಕಂಡಿದ್ದಾರೆ. ಈಗಲೂ ಸಹ ಅವರ ಕೃತಿಯನ್ನು ಚಲನಚಿತ್ರ ಮಾಧ್ಯಮಕ್ಕೆ ಅಳವಡಿಸಲು ಅತ್ಯಂತ ಪ್ರೀತಿ ಮತ್ತು ಆತಂಕ ತೋರಿಸುತ್ತಾರೆ. ಅವರ ಕೃತಿಗಳ ಆಕರ್ಷಣೆ ಇಂದಿಗೂ ಕುಂದದ ಕಾರಣ ಅವುಗಳನ್ನು ತೆರೆಯ ಮೇಲೆ ತರುವ ಕಾರ್ಯ ಈವರೆಗೂ ಅಬಾಧಿತವಾಗಿ ನಡೆಯುತ್ತಾ ಬಂದಿದೆ. ಅವರ ಅನೇಕ ಚಲನಚಿತ್ರಗಳು ಭಾರತದಲ್ಲಷ್ಟೇ ಅಲ್ಲ ವಿಶ್ವಮಟ್ಟದಲ್ಲಿ ಅಮರ ಚಿತ್ರಗಳಾಗಿ ಉಳಿದಿವೆ. ಅಂತಹ ಅಪೂರ್ವ ಟ್ಯಾಗೋರ್ ಮತ್ತು ಸಿನೆಮಾ ಸಂಬಂಧ ಕುರಿತ ಲೇಖನಮಾಲೆ..
ಚಲನಚಿತ್ರ ನಿರ್ದೇಶಕರು ರವೀಂದ್ರನಾಥ ಟ್ಯಾಗೋರ್ ಅವರನ್ನು ಅತ್ಯಂತ ಭಕ್ತಿಭಾವದಿಂದ ಕಂಡಿದ್ದಾರೆ. ಈಗಲೂ ಸಹ ಅವರ ಕೃತಿಯನ್ನು ಚಲನಚಿತ್ರ ಮಾಧ್ಯಮಕ್ಕೆ ಅಳವಡಿಸಲು ಅತ್ಯಂತ ಪ್ರೀತಿ ಮತ್ತು ಆತಂಕ ತೋರಿಸುತ್ತಾರೆ. ಪ್ರೀತಿ ಏಕೆಂದರೆ ಗುರುದೇವ ಎನಿಸಿಕೊಂಡ ಮತ್ತು ಭಾರತದ ಸಾಂಸ್ಕೃತಿಕ ನಾಯಕರಾಗಿ ಅಂಗೀಕರಿಸಲಾದ ಅವರ ಸಾಹಿತ್ಯ ಕೃತಿಗಳು ಜನಮನ್ನಣೆ ಪಡೆದಿವೆ. ಅವುಗಳನ್ನು ಅಳವಡಿಸುವುದು ಕ್ರಿಯಾಶೀಲ ನಿರ್ದೇಶಕನಿಗೆ ಪ್ರಿಯವಾದ ಕಸುಬು. ಜೊತೆಗೆ ಅವರ ಕೃತಿಗಳನ್ನು ಚಿತ್ರಗಳನ್ನಾಗಿ ರೂಪಾಂತರಿಸಲು ಚಿತ್ರಮಾಧ್ಯಮದ ಬಗೆಗಿನ ಅಪಾರವಾದ ಅರಿವು ಮತ್ತು ಅವರ ಕೃತಿಗಳನ್ನು ಆಶಯಗಳನ್ನು ಅರ್ಥಮಾಡಿಕೊಳ್ಳಬಲ್ಲ ಸೂಕ್ಷ್ಮತೆಯನ್ನು ಅವರ ಕೃತಿಗಳು ಬಯಸುವುದರಿಂದ ನಿರ್ದೇಶಕರ ಪಾಲಿಗೆ ಅದೊಂದು ಸವಾಲಿನ ಕೆಲಸ. ಆತಂಕ ಏಕೆಂದರೆ ಅವರ ಕೃತಿಯ ಆಶಯಗಳು ಸಮರ್ಪಕವಾಗಿ ತೆರೆಯ ಮೇಲೆ ರೂಪಾಂತರಗೊಳ್ಳದಿದ್ದರೆ, ಅದನ್ನು ದೈವನಿಂದನೆ ಎಂದು ಬಗೆಯುವ ಅಭಿಮಾನಿಗಳಿದ್ದಾರೆ. ಆದರೂ ಅವರ ಕೃತಿಗಳ ಆಕರ್ಷಣೆ ಇಂದಿಗೂ ಕುಂದದ ಕಾರಣ ಅವುಗಳನ್ನು ತೆರೆಯ ಮೇಲೆ ತರುವ ಕಾರ್ಯ ಈವರೆಗೂ ಅಬಾಧಿತವಾಗಿ ನಡೆಯುತ್ತಾ ಬಂದಿದೆ. ಅನೇಕ ಚಲನಚಿತ್ರಗಳು ಭಾರತದಲ್ಲಷ್ಟೇ ಅಲ್ಲ ವಿಶ್ವಮಟ್ಟದಲ್ಲಿ ಅಮರ ಚಿತ್ರಗಳಾಗಿ ಉಳಿದಿವೆ.
ಚಲನಚಿತ್ರ ಮಾಧ್ಯಮದ ಬಗೆಗೂ ಟ್ಯಾಗೋರ್ ಅವರಿಗೆ ಸಾಕಷ್ಟು ಆಸಕ್ತಿಯಿತ್ತು. ಭಾರತದ ನವೋದಯದ ಯುಗಕ್ಕೆ ನಾಂದಿ ಹಾಡಿದವರೆಂಬ ಖ್ಯಾತಿ ಪಡೆದ ಅವರಿಗೆ ಸಾಹಿತ್ಯ, ಚಿತ್ರಕಲೆ ಮತ್ತು ಸಂಗೀತದಲ್ಲಿ ಪರಿಶ್ರಮವಿತ್ತು. ಆದ ಕಾರಣ ಟ್ಯಾಗೋರ್ ಅವರಿಗೆ ಇಪ್ಪತ್ತರ ಶತಮಾನದ ಹೊಸ ಮಾಧ್ಯಮವಾದ ಚಲನಚಿತ್ರದ ಬಗ್ಗೆ ಆಸಕ್ತಿ ಹುಟ್ಟಿದ್ದು ಸಹಜವೇ ಆಗಿತ್ತು. ಮೂಕಿಯ ಕಾಲದಲ್ಲೆ ಅವರು ಚಿತ್ರವೊಂದನ್ನು ನಿರ್ದೇಶಿಸಿದ್ದರು. ಅಷ್ಟೇ ಅಲ್ಲ ಆ ಚಿತ್ರದ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಟ್ಯಾಗೋರ್ ಅವರು ಬುದ್ಧ ಪ್ರತಿನಿಧಿಸುವ, ಕರುಣೆ, ತ್ಯಾಗ ಮತ್ತು ಸಮಾನತೆಯ ತಾತ್ವಿಕತೆಯನ್ನು ಪ್ರತಿಪಾದಿಸುವ ಪೂಜಾರಿಣಿ ಎಂಬ ನೀಳಕವನ ರಚಿಸಿದ್ದರು. ಅಬದಾನ್ ಶತಕದಿಂದ ಆಯ್ದ ಬೌದ್ಧ ಕತೆಯೊಂದನ್ನು ಆಧರಿಸಿ ರಚನೆಗೊಂಡ ಕವನ. ತನ್ನ ಸೊಸೆ ಪ್ರತಿಮಾ ದೇವಿಯು ಅದರ ನೃತ್ಯ-ನಾಟಕರೂಪವನ್ನು ಪ್ರದರ್ಶಿಸಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದ ಮೇರೆಗೆ ಅದನ್ನು ನಟಿರ್ ಪೂಜಾ ಎಂಬ ಹೆಸರಿನಲ್ಲಿ ನೃತ್ಯ ನಾಟಕರೂಪಕ್ಕೆ ಅಳವಡಿಸಿದ್ದರು. ನಟಿರ್ ಪೂಜಾ ನಾಟಕವು ರಂಗದ ಮೇಲೆ ಜನಪ್ರಿಯವಾಯಿತು. ಅದನ್ನು ವೀಕ್ಷಿಸಿದ ಚಿತ್ರನಿರ್ಮಾಪಕ ಬಿ.ಎನ್. ಸರ್ಕಾರ್ ಅವರು ತಾವು ಮಾಲಕರಾಗಿದ್ದ ನ್ಯೂ ಥಿಯೇಟರ್ಸ್‌ಸಂಸ್ಥೆಯಿಂದ ಅದನ್ನಾಧರಿಸಿ ಚಲನಚಿತ್ರ ಮಾಡುವ ಬಯಕೆ ತೋರಿದರು. ಅದರ ನಿರ್ದೇಶನಕ್ಕೆ ಗುರುದೇವರನ್ನೇ ಆಹ್ವಾನಿಸಿದರು. ಅವರ ಅನುಕೂಲಕ್ಕಾಗಿ ಸ್ಟುಡಿಯೋ ಸ್ವರೂಪವನ್ನೇ ಬದಲಿಸಿದರು. ಟ್ಯಾಗೋರ್ ಅವರು ನ್ಯೂ ಥಿಯೇಟರ್‌ನ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಿಸಿದರು. ಕವಿವರ್ಯರ ದರ್ಶನಕ್ಕಾಗಿ ಜನ ಸ್ಟುಡಿಯೋಗೆ ಮುಗಿಬಿದ್ದರು. ಟ್ಯಾಗೋರ್ ಅವರು ಶಾಂತಿನಿಕೇತನದಲ್ಲಿದ್ದ ವ್ಯಕ್ತಿಗಳನ್ನೇ ನಟನೆಗಾಗಿ ಆರಿಸಿದ್ದರು. ಸ್ವತಃ ಅವರೂ ಪಾತ್ರ ವಹಿಸಿದ್ದರು. ನಿತಿನ್ ಬೋಸ್ ಅವರು ಛಾಯಾಗ್ರಾಹಕರು. ಸುಬೋಧ್ ಮಿತ್ರ ಸಂಕಲಿಸಿದರು.
ಸಿನೆಮಾ ನಿರ್ಮಾಣ ಮತ್ತು ಚಿತ್ರೀಕರಣ ಶೈಲಿ ಆ ವೇಳೆಗೆ ಸುಧಾರಣೆಯಾಗಿತ್ತು. ಆದರೆ ಟ್ಯಾಗೋರ್ ಅಂಥ ಪ್ರಯೋಗಗಳನ್ನು ಮಾಡಲು ಹೋಗಲಿಲ್ಲ. ಅಂದಿನ ಚಿತ್ರೀಕರಣ ವಿಧಾನಗಳನ್ನು ಧಿಕ್ಕರಿಸಿ ನಾಲ್ಕೇ ದಿನದಲ್ಲಿ ಚಿತ್ರಿಕೆಯನ್ನು ಪೂರ್ಣಗೊಳಿಸಿದರು. ವೇದಿಕೆಯೊಂದರ ಮೇಲೆ ಕಲಾವಿದರನ್ನು ಆಡಿಸಿ ಚಿತ್ರೀಕರಣ ಮುಗಿಸಿದರು. ಅದು ಸೆಲ್ಲುಲಾಯ್ಡಿ ಮೇಲೆ ತಂದ ರಂಗರೂಪದ ಸಿನೆಮಾ. ಈ ಚಿತ್ರ ಸಂಕಲನಗೊಂಡ ನಂತರ 10,500 ಅಡಿ ಉದ್ದವಿತ್ತು. 1932ರ ಮಾರ್ಚ್ 22ರಂದು ಕೋಲ್ಕತಾದ ಚಿತ್ರಾ ಮಂದಿರದಲ್ಲ್ಲಿ ಬಿಡುಗಡೆಯಾಯಿತು. ಟ್ಯಾಗೋರ್ ಅವರು ಚಿತ್ರನಿರ್ದೇಶನದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ಅದು ಭಾರೀ ಯಶಸ್ಸು ಕಾಣಬಹುದೆಂದು ನಿರ್ಮಾಪಕರಿಗೆ ಭರವಸೆಯಿತ್ತು. ನಿರ್ಮಾಪಕರು ಬಂದ ಲಾಭದಲ್ಲಿ ಶೇ. 50ರಷ್ಟು ಮೊತ್ತವನ್ನು ಶಾಂತಿನಿಕೇತನ ಯೋಜನೆಗೆ ನೀಡುವುದಾಗಿ ಘೋಷಿಸಿದ್ದರು. ಆದರೆ ಅವರ ಭರವಸೆಗಳನ್ನು ಹುಸಿಗೊಳಿಸಿದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಪವಾಡ ಮಾಡದೆ ಸೋತಿತು. ಪ್ರೇಕ್ಷಕರನ್ನು ತಬ್ಬಿಬ್ಬುಗೊಳಿಸುವ ಮೂಕಿ ಚಿತ್ರಗಳ ಶೈಲಿಗಿಂತ ಭಿನ್ನವಾದ ತೆರೆಯ ಮೇಲಿನ ನಾಟಕವನ್ನು ನೋಡಲು ಜನ ಇಚ್ಛಿಸಲಿಲ್ಲ. ಬಂಗಾಳದ ಹಲವು ವಿಮರ್ಶಕರು ಚಿತ್ರದ ವಸ್ತು ಮತ್ತು ಸೌಂದರ್ಯಾತ್ಮಕ ಅಂಶಗಳನ್ನು ಮೆಚ್ಚಿ ಬರೆದರೂ ಚಿತ್ರದ ಯಶಸ್ಸಿಗೆ ನೆರವಾಗಲಿಲ್ಲ. ಈ ಚಿತ್ರದ ಪ್ರತಿಗಳಿಗೆ ಚಾರಿತ್ರಿಕ ಮಹತ್ವವಿದ್ದರೂ ಈಗ ಲಭ್ಯವಿಲ್ಲ. ನ್ಯೂ ಥಿಯೇಟರ್ಸ್‌ನಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಆ ಚಿತ್ರ ಸುಟ್ಟುಹೋಯಿತೆಂದು ಹೇಳುತ್ತಾರೆ. ಅದು ಗುರುದೇವರು ಚಲನಚಿತ್ರ ಕ್ಷೇತ್ರದಲ್ಲಿ ಮಾಡಿದ ಮೊದಲ ಹಾಗೂ ಕೊನೆಯ ಪ್ರಯತ್ನ.
ಬಂಗಾಳಿ ಕಾದಂಬರಿಗಳು ಚಲನಚಿತ್ರಕ್ಕೆ ರೂಪಾಂತರಿಸಲು ಚಿತ್ರ ನಿರ್ಮಾಪಕ-ನಿರ್ದೇಶಕರನ್ನು ಹೇರಳವಾಗಿ ಸೆಳೆದಿದ್ದವು. ಶರತ್‌ಚಂದ್ರ ಚಟರ್ಜಿ, ತಾರಾಶಂಕರ ಬ್ಯಾನರ್ಜಿ, ಬಿಬೂತಿಭೂಷಣ ಬಂಡೋಪಾಧ್ಯಾಯ, ಬಿಮಲ್ ದತ್ತ, ಮಣಿಶಂಕರ್ ಬ್ಯಾನರ್ಜಿ ಇತ್ಯಾದಿಯವರ ಕೃತಿಗಳು ಮೆಲೋಡ್ರಾಮಾ ಕೇಂದ್ರಿತ ವಾಣಿಜ್ಯ ಸಾಮಾಜಿಕ ಚಿತ್ರಗಳಿಗೆ ಹೇಳಿ ಮಾಡಿಸಿದಂಥವಾಗಿದ್ದವು. ಶರತ್‌ಚಂದ್ರರವರ ದೇವದಾಸು ಬಂಗಾಳಿಯಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಯಲ್ಲೂ ತಯಾರಾಯಿತು. ಇದುವರೆವಿಗೂ 8 ಬಾರಿ ಆವೃತ್ತಿಯಲ್ಲಿ ಅದು ತಯಾರಾಗಿದೆ. ಅತಿಯಾದ ನಾಟಕೀಯತೆ, ಭಾವುಕ ಸನ್ನಿವೇಶಗಳ ಶರತ್‌ಬಾಬು ಅವರ ಕೃತಿಗಳಿಗೆ ಸಹಜವಾಗಿಯೇ ಹೆಚ್ಚಿನ ಬೇಡಿಕೆಯಿತ್ತು. ಹಾಗಾಗಿ ಮನುಷ್ಯನ ಅಂತರಂಗದ ಸೂಕ್ಷ್ಮ ಪದರಗಳು ಮತ್ತು ಮಾನವತೆಯ ಸೆಲೆಗಳನ್ನು ಪರಿಶೋಧಿಸುವ, ಸಾಮಾಜಿಕ ಹಿನ್ನೆಲೆಯಲ್ಲಿ ಪಲ್ಲಟಗೊಳ್ಳುವ ಮನುಷ್ಯ ಸಂಬಂಧಗಳು ಹಾಗೂ ಮನುಷ್ಯ ಸಂಬಂಧಗಳಲ್ಲಿನ ಬಿರುಕುಗಳು, ಸಾಮಾಜಿಕ ಮೌಢ್ಯ ಮತ್ತು ಮಹಿಳಾ ವಿಮೋಚನೆಯ ಆಶಯಗಳುಳ್ಳ ಟ್ಯಾಗೋರ್‌ರವರ ಕತೆಗಳನ್ನು ನಿರ್ಮಿಸಿ ಯಶಸ್ವಿಯಾಗುವ ಬಗ್ಗೆ ಸಾಮಾನ್ಯ ನಿರ್ದೇಶಕರಿಗೆ ಸಾಧ್ಯವಿರಲಿಲ್ಲ. ಅತ್ಯಂತ ಸೂಕ್ಷ್ಮಗ್ರಾಹಿ ನಿರ್ದೇಶಕ ಮಾತ್ರ ಟ್ಯಾಗೋರ್ ಅವರ ಕೃತಿಗಳನ್ನು ಆಧರಿಸಿ ಚಿತ್ರಗಳನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದರು.
ಆದರೂ ಗುರುದೇವ ಅವರ ಸಿದ್ಧಿಯಿಂದಾಗಿ ಚಿತ್ರ ನಿರ್ದೇಶಕರು ಅವರ ಕೃತಿಗಳನ್ನು ತೆರೆಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಟ್ಯಾಗೋರ್ ಅವರ ಕೃತಿಗಳನ್ನು ಆಧರಿಸಿ ನಾಲ್ಕು ಮೂಕಿ ಚಿತ್ರಗಳೂ ಸೇರಿದಂತೆ ಸುಮಾರು 70 ಚಿತ್ರಗಳು ಭಾರತದಲ್ಲಿ ತಯಾರಾಗಿರಬಹುದೆಂದು ಒಂದು ಅಂದಾಜಿದೆ. ಬಹುತೇಕ ಚಿತ್ರಗಳು ಸಹಜವಾಗಿಯೇ ಬಾಂಗ್ಲಾ ಭಾಷೆಯಲ್ಲೇ ತಯಾರಾಗಿರುವಂಥವು. ಅಲ್ಲದೆ ಹಿಂದಿ, ಪಂಜಾಬಿ, ಉರ್ದು, ದಕ್ಷಿಣ ಭಾರತದ ಭಾಷೆಗಳಲ್ಲೂ ತಯಾರಾಗಿವೆ. ಚಾರುಲತಾ ಚಿತ್ರದ ಕತೆಯನ್ನೇ ಆಧರಿಸಿ ಪೋರ್ಚುಗೀಸ್ ಭಾಷೆಯಲ್ಲೂ ಒಂದು ಚಿತ್ರ ನಿರ್ಮಾಣವಾಗಿದೆಯೆಂಬ ಮಾಹಿತಿಯಿದೆ. ಬಿಮಲ್‌ರಾಯ್ ಅವರ ಪ್ರಸಿದ್ಧ ಚಿತ್ರ ದೋ ಬಿಘಾ ಜಮೀನ್ (1953) ಸಹ ಟ್ಯಾಗೋರ್ ಅವರ ಕವನ ದುಯಿ ಬಿಘಾ ಜೋಮಿಯಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳುತ್ತಾರೆ. ಅವರ ಪ್ರಖ್ಯಾತ ಕಾದಂಬರಿ ನೌಕಾದುಭಿ (ಮುರಿದ ದೋಣಿ) ಹಿಂದಿಭಾಷೆಯಲ್ಲಿ ಮೂರು ಆವೃತ್ತಿಯಲ್ಲಿ ತೆರೆಗೆ ಬರುವ ಜೊತೆಗೆ ತೆಲುಗಿನಲ್ಲಿ ಎರಡುಬಾರಿ (ಚರಣದಾಸಿ, ಒಕ ಚಿನ್ನ ಮಾಟ) ಮತ್ತು ಬಂಗಾಳಿ, ತಮಿಳು(ಮಾತೃ ಕುಲ ಮಾಣಿಕ್ಕಂ) ಭಾಷೆಯಲ್ಲೂ ತಯಾರಾಯಿತು. ಹೀಗೆ ಚಲನಚಿತ್ರರಂಗವು ಆರಂಭದಿಂದಲೂ ಟ್ಯಾಗೋರ್ ಅವರ ಕೃತಿಗಳ ಬಗ್ಗೆ ಆಸಕ್ತಿ ತಾಳಿರುವುದು ವ್ಯಕ್ತವಾಗುತ್ತದೆ.
ಟ್ಯಾಗೋರ್‌ರವರ ಸಣ್ಣ ಕತೆ, ಕಾದಂಬರಿ, ನಾಟಕಗಳನ್ನು ಆಧರಿಸಿದ ಚಲನಚಿತ್ರಗಳನ್ನು-ಮೂಕಿಯುಗದಿಂದ ಇಲ್ಲಿಯವರೆಗೆ-ಪರಿಶೀಲಿಸಿದರೆ ಬಹುತೇಕ ನಿರ್ದೇಶಕರು ಟ್ಯಾಗೋರ್ ಅವರ ಕೃತಿಗಳನ್ನು ಮೇಲ್ಮಟ್ಟದಲ್ಲಿ ಅರ್ಥ ಮಾಡಿಕೊಂಡಿರುವುದು ಗೋಚರಿಸುತ್ತದೆ.
ಅವರ ಕೃತಿಯನ್ನಾಧರಿಸಿದ ಮನ್‌ಭಂಜನ್ 1923ರಲ್ಲಿ ತಯಾರಾದ ಮೊದಲ ಮೂಕಿ ಚಿತ್ರ. ಆನಂತರ ಇಲ್ಲಿಯವರೆಗೂ ಪ್ರಖ್ಯಾತ ನಿರ್ದೇಶಕರಾದ ತಪನ್‌ಸಿನ್ಹ, ಸತ್ಯಜಿತ್ ರೇ, ಮೃಣಾಲ್ ಸೇನ್, ಕುಮಾರ್ ಸಾಹ್ನಿ, ಪುರೊಂದು ಪತ್ರಿ ಸೇರಿದಂತೆ ಅನೇಕರು ಚಿತ್ರಗಳನ್ನು ರೂಪಿಸಿದ್ದಾರೆ. ಬಹುತೇಕ ನಿರ್ದೇಶಕರಿಗೆ ಟ್ಯಾಗೋರ್ ದೊಡ್ಡ ಸವಾಲಾಗಿದ್ದಾರೆ.. ತಪನ್‌ಸಿನ್ಹ ಅವರು ಟ್ಯಾಗೋರ್ ಕೃತಿಗಳನ್ನು ಆಧರಿಸಿ ಮೂರು ಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಬಂಗಾಳಿ ಕಾಬೂಲಿವಾಲ (1956) ಮಾತ್ರ ಅತ್ಯಂತ ಜನಪ್ರಿಯ ಚಿತ್ರವಾಯಿತು. ಉಳಿದ ಖುದಿತೋ ಪಾಷಾಣ್ (1960) ಮತ್ತು ಅತಿಥಿ (1965) ಸಾಧಾರಣ ಮಟ್ಟಕ್ಕಿಂತ ಮೇಲೇರಲಿಲ್ಲ.
ಅಂತರ್‌ರಾಷ್ಟ್ರೀಯ ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರು ತೆರೆಗೆ ಅಳವಡಿಸಿದ ಇಚ್ಛಾ ಪೂರಣ್ ಸಹ ಶ್ರೇಷ್ಠ ಚಿತ್ರವೆಂದು ಪರಿಗಣಿಸಲಾಗದು. ಟ್ಯಾಗೋರ್ ಅವರ ಮೂಲ ಕತೆಯನ್ನೇ ಮಾರ್ಪಾಡು ಮಾಡಿದ ಆರೋಪಕ್ಕೆ ಅವರು ಗುರಿಯಾದರು. ಟ್ಯಾಗೋರ್ ಅಭಿಮಾನಿಗಳು ಸೇನ್ ಮೇಲೆ ಮುಗಿಬಿದ್ದರು. ಮೃಣಾಲ್ ಸೇನ್ ಮುಂದೆ ಕೃತಿಗಳನ್ನಾಧರಿಸಿ ಚಿತ್ರಗಳನ್ನು ರೂಪಿಸುವ ವಿಧಾನವನ್ನೇ ಕೈಬಿಡಲು ನಿರ್ಧರಿಸಿದರು.
ಪೂರ್ಣೇವಂದು ಪೂರಿ ಅವರ ಸ್ತ್ರೀರ್ ಪೋತ್ರೊ (1973) ಮತ್ತು ಮೊಲೊಂಕೋ (1979) ಸಹ ವಿಮರ್ಶಕರ ಟೀಕೆಗೊಳಗಾದವು.
ಕುಮಾರ್ ಸಾಹ್ನಿ ಅವರ ಚಾರ್ ಅಧ್ಯಾಯ್ ಚಿತ್ರವು ಟ್ಯಾಗೋರ್ ಅವರ ಮೂಲ ಆಶಯಗಳನ್ನು ಬಿಂಬಿಸುವಂತಿದೆ. ಮೂಲಕತೆಯಿಂದ ಭಿನ್ನವಾದರೂ ಅದರ ಆಶಯಕ್ಕೇನೂ ಧಕ್ಕೆ ಬಂದಿಲ್ಲ. ಭಾರತದ ಸ್ವಾತಂತ್ರ ಚಳವಳಿಯ ಆದರ್ಶದಿಂದ ಪ್ರೇರಣೆಗೊಂಡ ಉಗ್ರಗಾಮಿ ಧೋರಣೆಯ ಯುವಕ ಯುವತಿಯರ ಹೋರಾಟದ ಕತೆಯಿದು. ಟ್ಯಾಗೋರ್ ಅವರು ತಮ್ಮ ಕೊನೆಯ ಕಾದಂಬರಿ ಚಾರ್ ಅಧ್ಯಾಯ್ ಅನ್ನು ರಚಿಸಿದ್ದು ಶ್ರೀಲಂಕಾದಲ್ಲಿ ತಂಗಿದ್ದಾಗ. 1934ರಲ್ಲಿ. ಆಗ ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾಷ್ಟ್ರೀಯತೆಯ ಬಗ್ಗೆ ಇದ್ದ ಅವರ ವಿರೋಧ ಈ ಕಾದಂಬರಿಯಲ್ಲಿ ಅಭಿವ್ಯಕ್ತಿ ಪಡೆಯಿತು. ಪ್ರೇಮಿಗಳಿಬ್ಬರು ಕ್ರಾಂತಿಯ ಹಿಂಸೆಯಲ್ಲಿ ಬಂಧಿತರಾಗಿ, ಬಿಡುಗಡೆಗೊಳ್ಳಲು ವಿಫಲರಾಗುವ ಕತೆ. ಟ್ಯಾಗೋರ್ ಅವರು ಸಾಮ್ರಾಜ್ಯಶಾಹಿಯು ಹರಿಯಬಿಡುವ ಭಯ ಮತ್ತು ಪ್ರಭುತ್ವ ವಿರೋಧಿ ಶಸ್ತ್ರಸಜ್ಜಿತಹೋರಾಟದ ರಾಜಕೀಯವನ್ನು ಅತ್ಯಂತ ಘನತೆಯಿಂದ ಬಿಡಿಸಿಟ್ಟರು. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ ಅವರ ಕಾದಂಬರಿ ಇದೊಂದೆ. ಈ ಕೃತಿಗೆ ಅವರು ಬ್ರಿಟಿಷ್ ಸರಕಾರ ಮತ್ತು ಕ್ರಾಂತಿಯ ಹೋರಾಟಗಾರರ ಕಡೆಯಿಂದ ವಿರೋಧವನ್ನು ನಿರೀಕ್ಷಿಸಿದ್ದರು. ಅಂತೆಯೇ ಸರಕಾರ ನಿಷೇಧಿಸಬಹುದೆಂಬ ಕಾತರವೂ ಇತ್ತು. ಕ್ರಾಂತಿಯ ಗುರಿ ಹೊಂದಿದ ಗೆರಿಲ್ಲಾ ನಾಯಕತ್ವವು ಕೈಗೊಳ್ಳುವ ಎಲ್ಲ ಬಗೆಯ ಪ್ರಯತ್ನಗಳು, ಹುನ್ನಾರಗಳನ್ನು ಈ ಕಾದಂಬರಿಯು ವಿವರವಾಗಿ ಚಿತ್ರಿಸಿತ್ತು. ಆದುದರಿಂದ ಸ್ವಾತಂತ್ರ ಹೋರಾಟದಲ್ಲಿರುವ ಎಲ್ಲ ಪಕ್ಷಗಳ ಟೀಕೆಗೂ ಇದು ಒಳಗಾಗಬಹುದೆಂಬ ಆತಂಕವಿತ್ತು. ವಿದೇಶಿ ಓದುಗರಿಗಾಗಿ ಅನುವಾದಗೊಂಡು ಕಾದಂಬರಿ ಹೆಚ್ಚಿನ ಓದುಗರನ್ನು ತಲುಪಿತು. ರಾಷ್ಟ್ರದ ಬಿಡುಗಡೆಗಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ಖಂಡಿಸುವ ಈ ಕೃತಿಯನ್ನು ಸಮಾಜದ ಒಂದು ವರ್ಗ ಕಟುವಾಗಿ ಟೀಕಿಸಿತು. ವಿಚಿತ್ರವೆಂದರೆ ಟ್ಯಾಗೋರ್ ಅವರ ಉಗ್ರಗಾಮಿ ವಿರೋಧಿ ನೀತಿಯನ್ನು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಬಳಸಲು ಬ್ರಿಟಿಷರು ಯತ್ನಿಸಿದರು. ಇದರಿಂದ ಕುಪಿತರಾದ ಟ್ಯಾಗೋರ್ ತಮ್ಮ ನೈಟ್‌ಹುಡ್ ಪದವಿಯನ್ನು ಬಿಟ್ಟುಕೊಟ್ಟರು.
ಮೂಲಕತೆಯ ಅವಧಿಯನ್ನು ಬದಲಿಸಿಕೊಂಡ ಕುಮಾರ ಸಾಹ್ನಿಯವರು ಟ್ಯಾಗೋರ್ ಅವರ ಮಾನವೀಯತೆ ಪರವಾದ ಮತ್ತು ಹಿಂಸಾವಿರೋಧಿ ಆಶಯಗಳನ್ನು ಚಿತ್ರದಲ್ಲಿ ಸೆರೆ ಹಿಡಿದಿದ್ದಾರೆ. 1997ರಲ್ಲಿ ಬಿಡುಗಡೆಯಾದ ಎರಡೇ ವಾರಕ್ಕೆ ಈ ಚಿತ್ರದ ಪ್ರದರ್ಶನ ಸ್ಥಗಿತಕೊಂಡಿತು. ಟ್ಯಾಗೋರ್ ಅವರ ಕೃತಿಸ್ವಾಮ್ಯ ಪಡೆದಿದ್ದ ವಿಶ್ವಭಾರತಿ ವಿಶ್ವವಿದ್ಯಾನಿಲಯವು ಕಾಪಿರೈಟ್ ಉಲ್ಲಂಘನೆಗಾಗಿ ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆ ತಂದಿತು. ಆದರೆ ಅದರ ಉದ್ದೇಶವೇ ಬೇರೆಯಿತ್ತು. ಟ್ಯಾಗೋರ್ ಅವರ ಮೂಲಕತೆಯನ್ನು ಮರುವ್ಯಾಖ್ಯೆಗೊಳಪಡಿಸಿದ ರೀತಿ ವಿಶ್ವಭಾರತಿ ವಿವಿಗೆ ರುಚಿಸಲಿಲ್ಲ. ಟ್ಯಾಗೋರ್ ಅವರನ್ನು ನಿಜವಾದ ದೇಶಭಕ್ತಿ, ಸಂಸ್ಕೃತಿ ಚಿಂತಕ ಎಂದು ಪ್ರಚಾರಪಡಿಸುತ್ತಿದ್ದ ವಿಶ್ವಭಾರತಿಗೆ ಟ್ಯಾಗೋರ್ ಅವರು ಎಂದೋ ಒಮ್ಮೆ ಹಿಂಸಾ ಹೋರಾಟದ ವಿರುದ್ಧ ನಿಲುವು ತಳೆದು ಸ್ವಾತಂತ್ರ ಹೋರಾಟಗಾರರನ್ನು ಟೀಕಿಸಿದ್ದನ್ನು ಕೆದಕುವುದು ಬೇಕಿರಲಿಲ್ಲ. ಸೆನ್ಸಾರ್ ಹಂತದಲ್ಲಿಯೇ ಈ ಚಿತ್ರವನ್ನು ಮಾರ್ಪಡಿಸಬೇಕೆಂಬ ಪ್ರಯತ್ನ ಫಲಿಸಿದ ಕಾರಣ, ವಿಶ್ವಭಾರತಿ ಕಾಪಿರೈಟ್ ಉಲ್ಲಂಘನೆಯನ್ನು ತನ್ನ ಗುರಿ ಸಾಧನೆಗೆ ಬಳಸಿಕೊಂಡಿತು.
ತಪನ್‌ಸಿನ್ಹಾ ಅವರು ಟ್ಯಾಗೋರರ ಕಾಬೂಲಿವಾಲ, ಖುದಿತ್ ಪೋಷಾನ್, ಅತಿಥಿ ಮತ್ತು ಕಾದಂಬಿನಿ ಕೃತಿಗಳನ್ನು ತೆರೆಗೆ ಅಳವಡಿಸಿದರೂ ಅವರ ಅತ್ಯಂತ ಮನೋಜ್ಞ ಚಿತ್ರವೆಂದರೆ ಕಾಬೂಲಿವಾಲ. ಬಂಗಾಳಿ ಭಾಷೆಯಲ್ಲಿ ಮೊದಲ ಆವೃತ್ತಿ ಜನಪ್ರಿಯತೆ ಗಳಿಸಿದ ನಂತರ ಹಿಂದೀ ಭಾಷೆಯಲ್ಲಿ ಮತ್ತೊಂದು ಬಾರಿ ತಯಾರಾಯಿತು. ಇದನ್ನು ನಿರ್ದೇಶಿಸಿದವರು ಹೇಮನ್ ಗುಪ್ತಾ.
ತಪನ್‌ಸಿನ್ಹಾ ಅವರ ಬಂಗಾಳಿ ಮತ್ತು ಹೇಮೇನ್ ಗುಪ್ತಾ ಅವರ ಹಿಂದಿ ಕಾಬೂಲಿವಾಲ ಟ್ಯಾಗೋರ್ ಅವರ ಮೂಲ ಕತೆಗೆ ನಿಷ್ಠವಾದ ಕೃತಿ. ಹೇಮೇನ್ ಗುಪ್ತಾ ಅವರ ಆವೃತ್ತಿಯು ಅಪರಿಚಿತ ನಾಡಿನಲ್ಲಿ ಅರಳುವ ಮನುಷ್ಯ ಸಂಬಂಧಗಳ ನವಿರು ನಿರೂಪಣೆ ಮತ್ತು ಸನ್ನಿವೇಶಕ್ಕೆ ಪೂರಕವಾದ ಸಂಗೀತದಿಂದಾಗಿ ಇದೊಂದು ಮೇರು ಕೃತಿಯಾಗಿ ಉಳಿದಿದೆ. ಕೆಲವೇ ಪಾತ್ರಗಳ ಮೂಲಕ ದಟ್ಟವಾದ ಅನುಭವವೊಂದನ್ನು ಇದು ಹೆಣೆಯುತ್ತದೆ. ಮುಖ್ಯವಾಗಿ ಅಬ್ದುರ್ ರೆಹಮಾನ್ ಖಾನ್ (ಕಾಬೂಲಿವಾಲ) ಪಾತ್ರದಲ್ಲಿ ಬಾಲರಾಜ್ ಸಾಹ್ನಿ ಅವರದು ಮೇರು ಅಭಿನಯ.
ಟ್ಯಾಗೋರ್ ಅವರ ಕೃತಿಗಳನ್ನು ಆಧರಿಸಿದ ಬಹುತೇಕ ಚಿತ್ರಗಳು ವಾಣಿಜ್ಯ ಮತ್ತು ವಿಮರ್ಶಾತ್ಮಕ ಯಶಸ್ಸನ್ನು ಕಾಣದಿರುವುದಕ್ಕೆ ಹಲವು ಕಾರಣಗಳಿರಬಹುದೆನಿಸುತ್ತದೆ. ಮತ್ತೆ ನಾವು ಸಾಹಿತ್ಯ ಮತ್ತು ಸಿನೆಮಾ ನಡುವಿನ ಸಂಬಂಧಗಳನ್ನು ಹೊಸದಾಗಿ ನೋಡುವ ಅಗತ್ಯವಿದೆಯೆನಿಸುತ್ತದೆ. ಸಾಹಿತ್ಯ ಕೃತಿಗಳನ್ನು ಚಲನಚಿತ್ರಗಳಿಗೆ ಅಳವಡಿಸುವ ಮಾದರಿಗಳ ಬಗ್ಗೆ ಚಿಂತಿಸುವಾಗ, ಆ ಚಿಂತನೆ ಸಾಹಿತ್ಯ ಅಥವಾ ಸಿನೆಮಾ ಬಗೆಗೆ ಇರುವ ಸಾಂಪ್ರದಾಯಿಕ ವಿವರಣೆಗಳ ಸುತ್ತ ಗಿರಿಕಿ ಹೊಡೆಯುತ್ತಿರುವುದು ಸಾಮಾನ್ಯವಾಗಿದೆ. ಒಂದು ಮಾಧ್ಯಮವನ್ನು ಮತ್ತೊಂದು ಮಾಧ್ಯಮಕ್ಕೆ ಅಳವಡಿಸುವಾಗ ಅದರ ವಿಧಾನ ಮತ್ತು ಮಿತಿಗಳನ್ನು ಅರಿಯುವುದು ಸಹ ಅನಿವಾರ್ಯ. ಒಂದು ಸಾಹಿತ್ಯ ಕೃತಿಯನ್ನು ಸಿನೆಮಾ ಅಥವಾ ರಂಗಭೂಮಿಗೆ ಅಳವಡಿಸುವಾಗ, ಅಳವಡಿಕೆಗೆ ಒಳಗಾಗುವ ಕೃತಿಯು ಮತ್ತೊಂದು ಮಾಧ್ಯಮದ ಸೀಮೆಗೆ ಎಷ್ಟು ಒಪ್ಪುತ್ತದೆ. ಅದರ ಗಡಿಯನ್ನು ಎಷ್ಟು ದಾಟುತ್ತದೆ ಅಥವಾ ಹೊಸ ಮಾಧ್ಯಮದ ಯಾವ ಅಂಶಗಳು ಅದನ್ನು ಪರಿವರ್ತನೆ ಮಾಡುತ್ತವೆ. ಅದರ ಅರ್ಥಸಾಧ್ಯತೆಯನ್ನು ವಿಸ್ತರಿಸುತ್ತವೆ ಎಂಬುದು ಮುಖ್ಯವಾಗುತ್ತದೆ. ಯಾಕೆಂದರೆ, Adoptation ಅಥವಾ ಅಳವಡಿಕೆ ಕೇವಲ ಒಂದು ಸಹಜವಾದ ಅಥವಾ ನೇರವಾದ ಮಕ್ಕಿಕಾಮಕ್ಕಿ ಕ್ರಿಯೆಯಲ್ಲ. ಕೃತಿ ರಚನೆಯಾದ ನಂತರ ಅದರ ಸಾರ್ವತ್ರಿಕ ಅಂಶಗಳ ಜೊತೆಗೆ ಐತಿಹಾಸಿಕ ಪಲ್ಲಟಗಳ ಸಂದರ್ಭದಲ್ಲಿಟ್ಟು ಕೃತಿಯನ್ನು ಅಳವಡಿಸಬೇಕಾಗುತ್ತದೆ. ಹೊಸ ಮಾಧ್ಯಮದ ವ್ಯಾಕರಣಕ್ಕೆ ಅದರ ಸಾಧ್ಯತೆಗಳಿಗೆ ಒಗ್ಗಿಸಬೇಕಾಗುತ್ತದೆ. ಇಲ್ಲದಿದ್ದರೆ ಹೊಸ ಮಾಧ್ಯಮದಲ್ಲಿ ಕೃತಿ ಕೇವಲ ಒಂದು illustration ಆಗುತ್ತದೆಯೇ ಹೊರತು ಒಂದು ಕ್ರಿಯಾಶೀಲ ಕೃತಿಯಾಗಿ ರೂಪುಗೊಳ್ಳುವುದಿಲ್ಲ. ಹೊಸ ಮಾಧ್ಯಮದ ಸಾಧ್ಯತೆಗಳನ್ನು ಅರಗಿಸಿಕೊಳ್ಳದೆ, ಕೇವಲ ಒಂದು ಶುಷ್ಕ ರೂಪಾಂತರವಾಗಿ ನಿಲ್ಲುತ್ತದೆ. ಟ್ಯಾಗೋರರ ಕೃತಿಗಳ ಅಳವಡಿಕೆಯ ಬಹುತೇಕ ಪ್ರಕರಣಗಳಲ್ಲಿ ಆಗಿರುವುದು ಇದೇ!