ರಣಜಿ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಜಾರ್ಖಂಡ್
ಅಗರ್ತಲ, ಡಿ.13: ರಣಜಿ ಟ್ರೋಫಿ ಋತು ಆರಂಭವಾಗಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಹಲವು ರೋಚಕ ಪಂದ್ಯಗಳು ಆಡಲ್ಪಟ್ಟಿವೆ. ಅಗರ್ತಲದಲ್ಲಿ ಗುರುವಾರ ಜಾರ್ಖಂಡ್ ಹಾಗೂ ತ್ರಿಪುರಾ ಮಧ್ಯೆ ನಡೆದ ‘ಸಿ’ ಗುಂಪಿನ ಪಂದ್ಯ ಕೂಡ ರೋಮಾಂಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ತ್ರಿಪುರಾ 289 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಜಾರ್ಖಂಡ್ 136 ರನ್ ಗಳಿಸಿ ಆಲೌಟಾಯಿತು. ಹೀಗಾಗಿ ತ್ರಿಪುರಾ ತಂಡ ಜಾರ್ಖಂಡ್‌ಗೆ ಫಾಲೋ-ಆನ್ ವಿಧಿಸಿತು.
ಜಾರ್ಖಂಡ್ ಎರಡನೇ ಇನಿಂಗ್ಸ್‌ನಲ್ಲಿ 138 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. ಆಗ ತಂಡಕ್ಕೆ ಆಸರೆಯಾದ ಇಶಾಂಕ್ ಜಗ್ಗಿ (ಔಟಾಗದೆ 107, 207 ಎಸೆತ, 9 ಬೌಂಡರಿ, 2 ಸಿಕ್ಸರ್)ಹಾಗೂ ಸೌರಭ್ ತಿವಾರಿ(ಔಟಾಗದೆ 122, 190 ಎಸೆತ, 8 ಬೌಂಡರಿ) ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದರು. ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 418 ರನ್‌ಗೆ ತಲುಪಿಸಲು ಯಶಸ್ವಿಯಾದರು.
ಗೆಲ್ಲಲು 266 ರನ್ ಗುರಿ ಪಡೆದ ತ್ರಿಪುರಾ ತಂಡ ಭೋಜನ ವಿರಾಮದ ವೇಳೆಗೆ 48 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆತಿಥೇಯ ತಂಡದಿಂದ ಕೆಳ ಕ್ರಮಾಂಕದಲ್ಲಿ ಒಂದಷ್ಟು ಪ್ರತಿರೋಧ ವ್ಯಕ್ತವಾದರೂ 64.4 ಓವರ್‌ಗಳಲ್ಲಿ 211ರ ನ್‌ಗೆ ಆಲೌಟಾಯಿತು. ನಾಟಕೀಯ ಸನ್ನಿವೇಶದಲ್ಲಿ ಜಾರ್ಖಂಡ್ 54 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ರಣಜಿ ಟ್ರೋಫಿ ಇತಿಹಾಸದಲ್ಲಿ ಫಾಲೋ-ಆನ್ ಸಿಲುಕಿದ ತಂಡವೊಂದು ಪಂದ್ಯ ಗೆದ್ದಿರುವ ಮೊದಲ ನಿದರ್ಶನ ಇದಾಗಿದೆ.
ತ್ರಿಪುರಾದ ಪರ ಕೆಳ ಕ್ರಮಾಂಕದಲ್ಲಿ ಮುರಸಿಂಗ್(103, 145 ಎಸೆತ, 12 ಬೌಂಡರಿ,1 ಸಿಕ್ಸರ್)ಒಂದಷ್ಟು ಹೋರಾಟ ನೀಡಿದರು. ಆದರೆ, ಅವರಿಗೆ ಮತ್ತೊಂದು ತುದಿಯಿಂದ ಯಾವುದೇ ಬೆಂಬಲ ಸಿಗಲಿಲ್ಲ. ಆಶೀಷ್ ಕುಮಾರ್(5-67), ವಿ. ತಿವಾರಿ(3-60) ಹಾಗೂ ಎ.ಆರ್. ಯಾದವ್(2-31) ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿ ಜಾರ್ಖಂಡ್‌ಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು.