ಸಿಎಎ,ಎನ್‌ಆರ್‌ಸಿ ವಿರುದ್ಧ ಯಶವಂತ ಸಿನ್ಹಾ ಯಾತ್ರೆಯಲ್ಲಿ ಭಾಗಿಯಾಗಲಿರುವ ಪವಾರ್
Update: 2020-01-08 14:34 GMT
ಮುಂಬೈ,ಜ.8: ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರ ರಾಷ್ಟ್ರಮಂಚ್ ಸಿಎಎ,ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಹಮ್ಮಿಕೊಂಡಿರುವ ‘ ಗಾಂಧಿ ಶಾಂತಿ ಯಾತ್ರೆ’ಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಚಾಲನೆ ನೀಡಲಿದ್ದಾರೆ. ಅವರು ಯಾತ್ರೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ಹಾಗೂ ಮುಂಬೈ ಎನ್‌ಸಿಪಿ ಘಟಕದ ಅಧ್ಯಕ್ಷ ನವಾಬ್ ಮಲಿಕ್ ಅವರು ಬುಧವಾರ ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಜ.9ರಂದು ಬೆಳಿಗ್ಗೆ ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿಯಿಂದ ಆರಂಭಗೊಳ್ಳುವ ಯಾತ್ರೆಯು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾದ ಜ.30ರಂದು ದಿಲ್ಲಿಯ ರಾಜಘಾಟ್‌ನಲ್ಲಿ ಸಮಾರೋಪಗೊಳ್ಳಲಿದೆ. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಹರ್ಯಾಣ ಮೂಲಕ ದಿಲ್ಲಿ ತಲುಪಲಿರುವ ಯಾತ್ರೆಯು 3,000 ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಲಿದೆ.